ಜಿಲ್ಲೆಯ ಕಲಾವಿದರಿಗೆ ಹಣ ನೀಡದೆ ವಾಪಸ್ಸು ಕಳುಹಿಸಿದ ಕಸಂ ಇಲಾಖೆ. ಕಲಾವಿದರ ನೋವಿನ ನುಡಿ

ರಾಮನಗರ:ಏ/೨೫/೨೦/ಶನಿವಾರ. ಕೊರೊನಾ (ಕೋವಿಡ್-೧೯) ವೈರಸ್ ದೇಶಕ್ಕೆ ಕಾಲಿಟ್ಟ ನಂತರ ದೇಶ ಮತ್ತು ರಾಜ್ಯದ ಆರ್ಥಿಕತೆಗೆ ಪೆಟ್ಟು ಬಿದ್ದಿರುವಂತೆಯೇ, ಪ್ರತಿಯೊಬ್ಬ ನಾಗರೀಕರಿಗೂ ಆರ್ಥಿಕವಾಗಿ ಹೊಡೆತ ಬಿದ್ದಿರುವುದು ಸತ್ಯ.
ಹಾಗೆಯೇ ಸಾಂಸ್ಕೃತಿಕ ಕಲೆಗಳನ್ನು ಶ್ರೀಮಂತಗೊಳಿಸಲು ತಮ್ಮ ಬದುಕನ್ನೇ ಮುಡಿಪಾಗಿಟ್ಟಿರುವ ಕಲಾವಿದರ ಬದುಕು ಸಹ ಇದರಿಂದ ಹೊರತಾಗಿಲ್ಲ.
೨೦೧೯/೨೦ ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬಂದ ರೀತಿಯಲ್ಲಿಯೇ ರಾಮನಗರ ಜಿಲ್ಲೆಗೂ ವಿಶೇಷ ಘಟಕದ ಯೋಜನೆಯಡಿಯಲ್ಲಿ ಹದಿನೈದು ಲಕ್ಷ ರೂಪಾಯಿಗಳ ಅನುದಾನ ಬಂದಿದ್ದು, ಅದನ್ನು ಕಲಾವಿದರಿಗೆ ಹಂಚಬೇಕಾಗಿತ್ತು. ಇಲ್ಲಸಲ್ಲದ ಹಾಗೂ ಅಪಥ್ಯ ಕಾರಣಗಳನ್ನು ನೀಡಿ ಅನುದಾನವು ಇಲಾಖೆಯಿಂದ ಸರ್ಕಾರಕ್ಕೆ ವಾಪಸ್ಸು ಹೋಗಿದ್ದು, ಕಲಾವಿದರ ಬದುಕು ಅತಂತ್ರ ಸ್ಥಿತಿಯಲ್ಲಿದೆ ಎಂಬುದು ಜಿಲ್ಲಾ ಕಲಾವಿದರ ಅಳಲಾಗಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅನುದಾನ ಬಳಕೆಯಾಗಿದ್ದು, ನಮ್ಮ ಜಿಲ್ಲೆಯ ಅನುದಾನ ವಾಪಸ್ಸು ಹೋಗಲು ಕಾರಣವೇನೆಂದು ಇಲಾಖೆಯ ನಿರ್ದೇಶಕರು ಮಾಧ್ಯಮದ ಮೂಲಕ ಕಲಾವಿದರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ವಾಪಸ್ಸು ಹೋಗಿರುವ ಹಣವನ್ನು ತರಿಸಿಕೊಂಡು ಸಂಕಷ್ಟದಲ್ಲಿರುವ, ಅದರಲ್ಲೂ ಕರೋನಾ ವೈರಸ್ ನಿಂದ ದುಡಿಮೆಯೇ ಇಲ್ಲದೆ ಮನೆಯಲ್ಲಿರುವ ಕಲಾವಿದರಿಗೆ ನೀಡಬೇಕೆಂಬುದು ಕಲಾವಿದರ ಒಕ್ಕೊರಲ ದನಿಯಾಗಿದೆ.
ಎಲ್ಲಾ ಟ್ರಸ್ಟ್ ಗಳು ನಿಯಮಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿದ್ದರಿಂದ ಸಮಿತಿಯು ಹಣವನ್ನು ವಾಪಸ್ಸು ಕಳುಹಿಸಿದ್ದು ಇದರಲ್ಲಿ ಇಲಾಖೆಯ ಹಸ್ತಕ್ಷೇಪವೇನು ಇಲ್ಲ. ಎಲ್ಲಾ ಕಲಾವಿದರೂ ಬಿಪಿಎಲ್ ಆಹಾರ ಪಡಿತರ ಹೊಂದಿದ್ದು ಸರ್ಕಾರ ಅವರಿಗೆ ಪಡಿತರ ನೀಡುತ್ತಿದೆ.
ಸದ್ಯದಲ್ಲೇ ಸರ್ಕಾರದ ವತಿಯಿಂದ ಎರಡು ಸಾವಿರ ರೂಪಾಯಿ ಪರಿಹಾರ ನೀಡುವುದಾಗಿಯೂ ಘೋಷಿಸಲಾಗಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವಿನಯಕುಮಾರ್ ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು ಎಸ್ ಸಿ ಪಿ ಮತ್ತು ಟಿ ಎಸ್ ಪಿ ಯೋಜನೆ ಅಡಿಯಲ್ಲಿ, ಸಂಘಸಂಸ್ಥೆಗಳ ಚಟುವಟಿಕೆಗಳಿಗೆ, ಚಿತ್ರಕಲೆ, ಶಿಲ್ಪಕಲೆಗಳ ಪ್ರದರ್ಶನಕ್ಕೆ ಮತ್ತು ವಾದ್ಯ ಪರಿಕರಗಳುು ಹಾಗೂ ವೇಷಭೂಷಣಗಳ ಖರೀದಿಗೆ, ಎಂದು ಹದಿನಾರು ಲಕ್ಷ ರೂಪಾಯಿಗಳನ್ನು, ಪ್ರಾಯೋಜಿತ ಕಾರ್ಯಕ್ರಮಗಳಿಗೆ ಗೌರವ ಸಂಭಾವನೆ ನೀಡಲು ಎಪ್ಪತ್ತು ಲಕ್ಷ ರೂಪಾಯಿಗಳನ್ನು ಪರಿಷ್ಕರಿಸಿ ನೀಡಲು ಜಿಲ್ಲಾಧಿಕಾರಿಯವರ ಮೂಲಕ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು