Tel: 7676775624 | Mail: info@yellowandred.in

Language: EN KAN

    Follow us :


ಇಂದಿನಿಂದ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆ ಪುನರಾರಂಭ ಜಿಲ್ಲಾಧಿಕಾರಿ

Posted date: 03 May, 2020

Powered by:     Yellow and Red

ಇಂದಿನಿಂದ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆ ಪುನರಾರಂಭ ಜಿಲ್ಲಾಧಿಕಾರಿ

ರಾಮನಗರ:ಮೇ/೦೩/೨೦/ಭಾನುವಾರ. ಕಂಟೇನ್ ಮೆಂಟ್ (ನಿರ್ಬಂಧಿತ) ವಲಯ ಹೊರತು ಪಡಿಸಿ ರಾಮನಗರ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗ ಸೂಚಿಯಂತೆ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.


ಕೊರೋನಾ (ಕೋವಿಡ್-೧೯) ನಿಯಂತ್ರಣ ಹಾಗೂ ಲಾಕ್‌ಡೌನ್ ಸಡಿಲಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಳೆದ ಶುಕ್ರವಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ನೀಡಿರುವ ಮಾರ್ಗಸೂಚಿಗಳ ಅನ್ವಯ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


ಬೆಂಗಳೂರು ನಗರ ಜೆ.ಜೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಏಪ್ರಿಲ್ ೧೯ ರಂದು ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲಾ ಕಾರಾಗೃಹದಲ್ಲಿರಿಸಿದ ಆರೋಪಿಗಳಲ್ಲಿ ೦೫ ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ೧೦೦ ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಎಂದು ಪರಿಗಣಿಸಲಾಗಿತ್ತು. ಈ ವ್ಯಾಪ್ತಿಯ ಪ್ರದೇಶವನ್ನು ಹೊರತು ಪಡಿಸಿ ಜಿಲ್ಲೆಯ ಇನ್ನುಳಿದ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದ ಮಾರ್ಗದರ್ಶನದಂತೆ ದಿನಸಿ ಅಂಗಡಿ ಮತ್ತು ಇನ್ನಿತರ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗಿದೆ.


ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾರಾಗೃಹದ ೦೫ ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಬಫರ್ ಜೋನ್ ಎಂದು ಪರಿಗಣಿಸಲಾಗಿತ್ತು. ಇಲ್ಲಿ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ನೀಡಲಾಗಿರಲಿಲ್ಲ. ಈಗ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದ್ದು, ಇಲ್ಲಿ ಸಹ ಆರ್ಥಿಕ ಚಟುವಟಿಕೆ ನಡೆಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅರ್ಚನಾ ಅವರು ತಿಳಿಸಿದ್ದಾರೆ.


ರಾಮನಗರ, ಚನ್ನಪಟ್ಟಣ, ಮಾಗಡಿ ಮತ್ತು ಕನಕಪುರಗಳ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾಲ್‌ಗಳು, ಚಲನಚಿತ್ರ ಮಂದಿರ ಮತ್ತು ಬೃಹತ್ ಅಂಗಡಿ ಮಳಿಗೆಗಳನ್ನು ಹೊರತುಪಡಿಸಿ  ಶಾಪ್ಸ್ ಅಂಡ್ ಎಸ್ಟಾಬ್ಲಿಶ್ ಮೆಂಟ್ ಕಾಯಿದೆ ಅಡಿ ನೋಂದಾಯಿಸಲಾದ ನೆರೆಹೊರೆ ಅಂಗಡಿಗಳು, ಒಂಟಿ ಅಂಗಡಿಗಳನ್ನು ಮತ್ತು ವಸತಿ ಸಮುಚ್ಛಯದಲ್ಲಿರುವ ಅಂಗಡಿಗಳನ್ನು ತೆರೆಯಬಹುದಾಗಿದೆ. 


ಈ ಅಂಗಡಿಗಳಲ್ಲಿ ಶೇ. ೫೦ ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸುವುದು ಮತ್ತು ಸಿಬ್ಬಂದಿ ಹಾಗೂ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು  ವ್ಯವಹರಿಸಬಹುದಾಗಿದೆ ಹಾಗೂ ಗ್ರಾಮೀಣ ಭಾಗದಲ್ಲಿನ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಏಪ್ರಿಲ್ ೨೮ ರ ಸರ್ಕಾರದ ಆದೇಶವನ್ನೇ ಅನುಸರಿಸುವುದು ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಉಳಿದಂತೆ ಈ ಹಿಂದೆ ಸರ್ಕಾರದಿಂದ ಹೊರಡಿಸಲಾದ  ಆದೇಶ/ಸುತ್ತೋಲೆ ಹಾಗೂ ಮಾರ್ಗಸೂಚಿಯು ಮುಂದುವರೆಯುವುದಾಗಿ ಅವರು ತಿಳಿಸಿರುತ್ತಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑