Tel: 7676775624 | Mail: info@yellowandred.in

Language: EN KAN

    Follow us :


ರೇಷ್ಮೆ ಗೂಡಿನ ಬೆಲೆ ಕುಸಿತ, ಎರಡು ಎಕರೆ ಹಿಪ್ಪುನೇರಳೆ ನೆಲಸಮ ಮಾಡಿದ ರೈತ

Posted date: 13 May, 2020

Powered by:     Yellow and Red

ರೇಷ್ಮೆ ಗೂಡಿನ ಬೆಲೆ ಕುಸಿತ, ಎರಡು ಎಕರೆ ಹಿಪ್ಪುನೇರಳೆ ನೆಲಸಮ ಮಾಡಿದ ರೈತ

ಚನ್ನಪಟ್ಟಣ; ಮೇ/೧೨/೨೦/ಮಂಗಳವಾರ. ದಿನೆದಿನೇ ರೈತನ ಬದುಕು ಮೂರಾಬಟ್ಟೆಯಾಗುತ್ತಿದೆ. ರೈತ ಕಷ್ಟಪಟ್ಟು ಏನೇ ಬೆಳೆದರೂ ಅವನಿಗೆ ತಕ್ಕ ಬೆಲೆ ದಕ್ಕದೆ, ತನ್ನ ಕಷ್ಟವನ್ನು ತಾನೇ ಅಳೆದು ತೂಗಿ, ಆ ಎಲ್ಲಾ ಬೆಳೆಯನ್ನು, ರಸ್ತೆಗೆ ಚಲ್ಲಿಯೋ, ಮಾರುಕಟ್ಟೆಯಲ್ಲಿಯೇ ಬಿಟ್ಟೋ ಬಂದು ಬಿಡುತ್ತಾನೆ. ಇನ್ನೂ ಉಳಿದಿದ್ದು ಮಾತ್ರ ಕೊನೆಯ ಪಯಣ. ಅಂತಹ ಒಂದು ಘಟನೆ ತಾಲ್ಲೂಕಿನ ಅಂಕುಶನಹಳ್ಳಿ ರೈತ ಸುರೇಶ್ ರವರಿಂದ ನಡೆದಿದ್ದು ರೈತನ ಗೋಳು ಕೇಳೋರು ಯಾರು ಎಂಬಂತಾಗಿದೆ.


ಸುರೇಶ್ ಮೂಲ ಕೃಷಿಕನಾಗಿದ್ದು ತನ್ನ ಎರಡು ಎಕರೆ ಜಮೀನಿನಲ್ಲಿ ರೇಷ್ಮೆ ಕೃಷಿ ಮಾಡಿದ್ದರು. ಅಧ್ವಾನದ ವಿದ್ಯುತ್, ಸ್ವಲ್ಪ ಸ್ವಲ್ಪವೇ ಜಿನುಗುವ ಬೋರ್ ವೆಲ್ ನೀರಿನಲ್ಲಿಯೂ ಸಹ ಉತ್ತಮ ಬೆಳೆ ಬೆಳೆದಿದ್ದರು. ಅದೇ ಸೊಪ್ಪಿನಲ್ಲಿ, ರೇಷ್ಮೆ ಹುಳುಗಳನ್ನು ಮೇಯಿಸಿ ಗೂಡು ಮಾರಿ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದರು. ಕಳೆದ ದಿನ ತಾನು ಕಷ್ಟಪಟ್ಟು ಬೆಳೆದ ರೇಷ್ಮೆ ಗೂಡನ್ನು ಮಾರುಕಟ್ಟೆಯಲ್ಲಿ ಕೇವಲ ೧೮೦ ರೂಪಾಯಿಗೆ ಹರಾಜು ಕೂಗಿದರು ಎಂಬ ಕಾರಣಕ್ಕೆ ನೊಂದ ರೈತ ತನ್ನ ಹೊಲಕ್ಕೆ ಬಂದು ಆಳೆತ್ತರ ಬೆಳೆಸಿದ್ದ ರೇಷ್ಮೆ ಫಸಲನ್ನು ಟ್ರ್ಯಾಕ್ಟರ್ ಮೂಲಕ ನೆಲಸಮ ಮಾಡಿದ್ದಾರೆ.


ಕೇವಲ ಲಾಕ್ಡೌನ್ ಅಲ್ಲದೇ ಬಹುತೇಕ ಸಮಯದಲ್ಲಿ ಸಹ‌ ರೈತನ ಬೆಳೆಗೆ ಬೆಲೆ ಸಿಗುವುದೇ ಇಲ್ಲ, ಇನ್ನೂ ವೈಜ್ಞಾನಿಕ ಬೆಲೆಯಂತೂ ದೂರದ ಮಾತು. ಇವುಗಳ ನಡುವೆ ಅತಿವೃಷ್ಟಿ, ಅನಾವೃಷ್ಟಿ, ವಿದ್ಯುತ್ ನ ಕಣ್ಣಾಮುಚ್ಚಾಲೆ, ಸಹಸ್ರಾರು ಅಡಿಯಿಂದ ಬೋರ್ ವೆಲ್ ಮೂಲಕ ಜಿನುಗುವ ನೀರು ಇವೆಲ್ಲಾ ಕಷ್ಟಗಳ ನಡುವೆಯೇ ಅವನ ಬದುಕು ಸಾಗಬೇಕಿದೆ. ಒಂದು ಕಿಲೋ ರೇಷ್ಮೆ ಗೂಡು ಬೆಳೆಯಲು ಕನಿಷ್ಠ ೨೫೦ ರೂಪಾಯಿ ಖರ್ಚು ತಗುಲುತ್ತದೆ. ಅದೂ ಸಿಗದಿದ್ದಾಗ ಆತ ಜೀವ ಮತ್ತು ಜೀವನದ ಆಸೆಯನ್ನೇ ತೊರೆಯುತ್ತಾನೆ. ಇಂದು ಇಂದಿನ ರೈತನ ದುಸ್ಥಿತಿಯಾಗಿದೆ.


ತಾಲ್ಲೂಕಿನಲ್ಲಿ ನಾಲ್ಕು ಸಾವಿರ ಮಂದಿ ರೇಷ್ಮೆ ಬೆಳೆಗಾರರುದ್ದಾರೆ, ಲಾಕ್ಡೌನ್ ಸಮಯದಲ್ಲಿ ಬೆಲೆ ಇಳಿಕೆಯಾಗಿದೆ, ಅದು ರೈತನಿಗೆ ಹೊಡೆತವೇ ಸರಿ. ಅದಕ್ಕಾಗಿ ರೇಷ್ಮೆ ಫಸಲನ್ನೇ ಹಾಳುಗೆಡವಿರುವುದು ಸರಿಯಲ್ಲ. ಖುದ್ದು ಭೇಟಿ ನೀಡಿ ಪರಿಶೀಲಿಸುತ್ತೇನೆ.

*ಮಂಜುನಾಥ ರೇಷ್ಮೆ ಇಲಾಖೆಯ ಉಪ ನಿರ್ದೇಶಕರು*


ಇದೊಂದು ಚೈನ್ ಲಿಂಕ್ ಇದ್ದಂತೆ, ಲಾಕ್ಡೌನ್ ಆಗಿರುವುದರಿಂದ ರೀಲರ್ ಗಳು ಉತ್ಪಾದಿಸಿರುವ ರೇಷ್ಮೆ ಎಳೆಯನ್ನು ಖರೀದಿಸುವವರಿಲ್ಲ. ಇಂತಹ ಸಮಯದಲ್ಲಿ ಬೆಲೆ ಕುಸಿತಗೊಂಡಿದೆ. ವೈಜ್ಞಾನಿಕವಾಗಿ ಏನು ಬೆಂಬಲ ನೀಡಲು ಸಾಧ್ಯವಿದೆಯೋ ಅದನ್ನು ನೀಡಲು ತೀರ್ಮಾನಿಸುತ್ತೇವೆ.
ಬಸವರಾಜು ಉಪನಿರ್ದೇಶಕರು ರೇಷ್ಮೆ ಬಿತ್ತನೆ ಕೋಠಿ


ಕಳೆದ ಎಂಟು ತಿಂಗಳುಗಳಿಂದ ರೇಷ್ಮೆ ಬೆಲೆ ಕುಸಿತಗೊಂಡಿದ್ದು, ನಷ್ಟ ಅನುಭವಿಸಿದ್ದೇನೆ. ಎಷ್ಟೋ ಬೆಳೆಗಳಲ್ಲಿ ಕಾರ್ಮಿಕರಿಗೂ ಕೂಲಿ ಕೊಡಲು ಸಾಧ್ಯವಾಗಿಲ್ಲ. ಇಂತಹ ಸಮಯದಲ್ಲಿ ಜೀವನ ಹೇಗೆ ಸಾಗಿಸಬೇಕೆಂಬ ಚಿಂತೆ ಕಾಡತೊಡಗಿದೆ. ಸರ್ಕಾರ ನಮ್ಮ ನೆರವಿಗೆ ಬರಬೇಕಿದೆ.
ಸುರೇಶ್ ಅಂಕುಶನಹಳ್ಳಿ, ನಷ್ಟ ಅನುಭವಿಸಿದ ರೈತ


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑