Tel: 7676775624 | Mail: info@yellowandred.in

Language: EN KAN

    Follow us :


ಭಾಗ-೨: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು

Posted date: 19 Jun, 2020

Powered by:     Yellow and Red

ಭಾಗ-೨: ಭೂ ಹರಣದ ವಿರುದ್ಧ ಅನ್ನ ತಿನ್ನುವವರೆಲ್ಲರೂ ಸಿಡಿದೇಳಬೇಕು

(ರೈತರ ಹಿತದೃಷ್ಟಿ ಮತ್ತು ಮುಂದಿನ ಪೀಳಿಗೆಯನ್ನು ಕಡೆಗಣಿಸಿ, ರಾಜಕಾರಣಿಗಳು ಮತ್ತು ಕಾರ್ಪೋರೆಟ್ ಸಂಸ್ಥೆಗಳ ಅನುಕೂಲಕ್ಕೆ ತಕ್ಕಂತೆ, ಆಗಿಂದಾಗ್ಗೆ ಕೃಷಿ ಭೂಮಿಗೆ ತಿದ್ದುಪಡಿ ತರುತ್ತಿರುವ ಜನಪ್ರತಿನಿಧಿಗಳ ವಿರುದ್ಧ "ಬೆಂಗಳೂರಿನ ಸಹಜ ಸಾಗುವಳಿ" ಎಂಬ ದ್ವೈಮಾಸಿಕ ಪತ್ರಿಕೆಯ ಸಂಪಾದಕಿ ಹಾಗೂ ರೈತ ಹೋರಾಟಗಾರ್ತಿ "ವಿ. ಗಾಯತ್ರಿ" ರವರು ನಮ್ಮ ಪತ್ರಿಕೆಗೆ ಭೂಸುಧಾರಣಾ ಕಾಯ್ದೆಯ ತಿದ್ದುಪಡಿಗೆ ಮುನ್ನುಡಿ ಬರೆದಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಹಾಗೂ ಕೃಷಿ ಭೂಮಿಯ ವರದಾನದ ಬಗ್ಗೆ ತಮ್ಮ ತೀಕ್ಷ್ಣವಾದ ವಿಮರ್ಶೆಯನ್ನು ಕಟ್ಟಿಕೊಟ್ಟಿದ್ದಾರೆ.)


ಇದೀಗ  ಕೋವಿಡ್ ಲಾಕ್ಡೌನ್‌ನಿಂದ ತತ್ತರಿಸಿಹೋಗಿ ಇನ್ನೂ ಬಿತ್ತನೆ ಮಳೆಗಳಿಗೆ ಕಾಯುತ್ತಾ ಸೋತ ಸ್ಥಿತಿಯಲ್ಲಿ ರೈತರಿರುವಾಗ ಅವರಿಗೆ ಸ್ವಾಂತನ ತರುವ ಯಾವುದೇ ಕಾರ್ಯಗಳಿಗೆ ಮುಂದಾಗದೆ ಭೂಮಿ ಮಾರಾಟ ಮಾಡುವ ಈ ಆಮಿಷ! ‘ಕೃಷಿ ಮಾಡಲಾರದ ಅತಂತ್ರ ಸ್ಥಿತಿಯಲ್ಲಿರುವ ರೈತರು, ಕೃಷಿಯನ್ನು ಲಾಭದಾಯಕವಾಗಿ ಮಾಡುವ ಆಕಾಂಕ್ಷೆ ಹೊಂದಿರುವ ಆಸಕ್ತರಿಗೆ ಮಾರಾಟ ಮಾಡುವುದಕ್ಕೆ ಇದು ಅವಕಾಶ. ಕೃಷಿ ಭೂಮಿ ಹಸಿರು ವಲಯದಲ್ಲಿ ಬರುವುದರಿಂದ ಬೇರೆ ಉದ್ಯಮಗಳಿಗೆ ಅದನ್ನು ಬಳಸುವ ಪ್ರಶ್ನೆಯೇ ಇಲ್ಲ, ಕೃಷಿ ಚಟುವಟಿಕೆ ಬಿಟ್ಟರೆ ಬೇರೆ ಏನೂ ಮಾಡಲು ಸಾಧ್ಯವಿಲ್ಲ’ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಸಾರ್ವಜನಿಕವಾಗಿ ಹೇಳಿಕೆ ಕೊಟ್ಟಿದ್ದಾರೆ. ತಮಾಷೆಯೆಂದರೆ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ)ದ ಅಧ್ಯಕ್ಷರು, ‘ನಾವು ಭೂಮಿ ಖರೀದಿಸಲು ಕೆಎಸ್‌ಐಡಿಸಿ, ಕೆಐಎಡಿಬಿಎಗಳಿಗೆ ಅಲದಾಡಬೇಕಾಗುತ್ತಿತ್ತು. ನಾವೇ ಖರೀದಿಸಿ ನಮ್ಮ ಸದಸ್ಯರಿಗೆ ಹಂಚುವುದರಿಂದ ಸಮಯ, ಶ್ರಮ ಉಳಿಯುತ್ತದೆ. ಈ ಬಗ್ಗೆ ನಾವು ಪ್ರಸ್ತಾಪ ಸಲ್ಲಿಸಿದ್ದೆವು. ಸರ್ಕಾರ ಅದಕ್ಕೆ ಸ್ಪಂದಿಸಿದೆ. ಇದರಿಂದ ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲವಾಗುತ್ತದೆ’. ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಈ ಮಟ್ಟಕ್ಕೆ ಸರ್ಕಾರ ತನ್ನ ಜನತೆಯ ಕಣ್ಣಿಗೆ ಮಣ್ಣೆರೆಚುವುದೆಂದರೆ!.


‘ನಿರುದ್ಯೋಗಿ ಕೃಷಿ ಪದವೀಧರರು ಹಳ್ಳಿಗಳಿಗೆ ಹಿಂದಿರುಗಿ ಕೃಷಿ ಆಧಾರಿತ ಉದ್ದಿಮೆ ಸ್ಥಾಪಿಸಲು ಇದು ಅವಕಾಶ ಒದಗಿಸುತ್ತದೆ’ ಎನ್ನುವುದು ಕಂದಾಯ ಸಚಿವರ ಇನ್ನೊಂದು ಕಣ್ಕಟ್ಟಿನ ಹೇಳಿಕೆ. ಉದ್ದಿಮೆಗಳನ್ನು ಸ್ಥಾಪಿಸಲು ಬೇಕಾದ ಭೂಮಿಗಾಗಿಯೇ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ) ಇದೆಯಲ್ಲ. ಇದುವರೆಗೆ ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿರುವ ಜಮೀನಿನ ಬಹುಭಾಗ ಬಳಕೆಯಾಗದೆ ಉಳಿದಿರುವ ಬಗ್ಗೆ ಎಲ್ಲಾ ಸರ್ಕಾರಗಳೂ ಆಗಾಗ್ಗೆ ಹೇಳಿಕೊಂಡೇ ಬಂದಿವೆ. ಆದರೆ ಈ ಭೂಮಿಯನ್ನು ಬಳಸಬೇಕೆಂದರೆ ಅದಕ್ಕೆ ‘ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ನೆಲೆ ಕಾಯಿದೆ-೨೦೧೩ ರ’ ಕಟ್ಟುನಿಟ್ಟಿನ  ಕಟ್ಟಳೆಗಳಿಗೆ ಒಳಗಾಗಬೇಕು. ಕೈಗಾರಿಕೆಯ ಸಾಮಾಜಿಕ ಮತ್ತು ಪಾರಿಸಾರಿಕ ದುಷ್ಪರಿಣಾಮದ ಅಂದಾಜು ಮಾಡಬೇಕು. ಇದರ ಬದಲು ನೇರವಾಗಿ ಭೂಮಿ ಕೊಂಡುಬಿಟ್ಟರೆ ಯಾರ ಮರ್ಜಿಯೂ ಇರುವುದಿಲ್ಲ ಎನ್ನುವುದು ಇಲ್ಲಿನ ಹುನ್ನಾರ.


ಅಷ್ಟಕ್ಕೂ  ಕೃಷಿಯಲ್ಲಿ ಅತೀವ ಆಸಕ್ತಿ ಇರುವವರಿಗೆ, ಈಗಾಗಲೇ ರೈತರು ಪಾಳು ಬಿಟ್ಟಿದ್ದಾರೆ ಎನ್ನಲಾದ ೨೨ ಲಕ್ಷ ಹೆಕ್ಟೇರ್ ಬೇಸಾಯ ಭೂಮಿಯನ್ನು ದೀರ್ಘ ಕಾಲಿಕ ಗುತ್ತಿಗೆಗೆ ಕೊಡುವ ಬಗ್ಗೆ ಯೋಚಿಸಬಹುದಲ್ಲ.

ಇಲ್ಲಿ ಇನ್ನೂ ಒಂದು ಮುಖ್ಯ ವಿಚಾರವಿದೆ. ಭೂಸುಧಾರಣಾ ಕಾಯಿದೆಯಡಿ ರೈತರಲ್ಲದವರು ಭೂಮಿ ಖರೀದಿಸಲು ಅವಕಾಶವಿಲ್ಲದೆ ಹೋಗಿದ್ದರೂ, ಐವತ್ತು ಲಕ್ಷ ಎಕರೆ ಭೂಮಿ ರೈತರ ಕೈತಪ್ಪಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆಯಾಗಿದೆ. ಜಮೀನು ಖರೀದಿಯಲ್ಲಿ ಭೂ ಸುಧಾರಣಾ ಕಾಯ್ದೆ ೭೯ಎ ಮತ್ತು ೭೯ಬಿ ಕಲಂನ ನಿಯಮಾವಳಿ ಉಲ್ಲಂಘನೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಸುಮಾರು ೮೩,೧೭೧ ಪ್ರಕರಣಗಳನ್ನು ದಾಖಲಿಸಿತ್ತು. ಅದರಲ್ಲಿ ಇತ್ಯರ್ಥ ಆಗದಿರುವ ೧೨,೨೩೧ ಪ್ರಕರಣಗಳಿವೆ.  ಬೆಂಗಳೂರಿನ ಸುತ್ತಮುತ್ತಲೇ ‘ಕರ್ನಾಟಕ ರಾಜ್ಯ ವಸತಿ ಮಹಾಮಂಡಲಿ’ ಸೇರಿದಂತೆ ವಿವಿಧ ನೌಕರರ ಗೃಹ ನಿರ್ಮಾಣ ಸಹಕಾರ ಸಂಘಗಳು  ಭೂ ಸುಧಾರಣಾ ಕಾಯ್ದೆಯ ೭೯ಎ ಮತ್ತು ೭೯ ಬಿ ಕಲಂ ಉಲ್ಲಂಘಿಸಿ ಸುಮಾರು ಹತ್ತು ಸಾವಿರ ಕೋಟಿ ರೂ ಬೆಲೆಯ  ೫,೦೨೭ ಎಕರೆ ಕೃಷಿ ಭೂಮಿಯನ್ನು ಮಧ್ಯವರ್ತಿಗಳ ಮೂಲಕ ಎಕರೆಗೆ ಒಂದೂವರೆ-ಎರಡು ಕೋಟಿ ಕೊಟ್ಟು ಖರೀದಿಸಿರುವುದು ಬಹಿರಂಗವಾಗಿದೆ. ಪ್ರತಿ ಹಂತದಲ್ಲೂ ಇವು ಸರ್ಕಾರವನ್ನು ವಂಚಿಸಿವೆ. ಇದಕ್ಕೆ ಹಿಂದಿನ ಯಾವ ಸರ್ಕಾರಗಳು ಕ್ರಮ ಕೈಗೊಂಡಿಲ್ಲ.


ಇಂತಹ ೧೭,೫೭೪ ಪ್ರಕರಣಗಳು ದಾಖಲಾಗಿದ್ದರೆ, ೫,೪೯೦ ಪ್ರಕರಣಗಳಲ್ಲಿ ಕಾಯಿದೆ ಉಲ್ಲಂಘನೆ ಆಗಿರುವುದು ದೃಢಪಟ್ಟಿದೆ. ಈ ಎಲ್ಲಾ ಇತ್ಯರ್ಥವಾಗದ ಪ್ರಕರಣಗಳನ್ನೆಲ್ಲಾ ನ್ಯಾಯ ಸಮ್ಮತಗೊಳಿಸಿಬಿಡುವ ದುರುದ್ದೇಶ ಈ ತಿದ್ದುಪಡಿಗಳ ಹಿಂದೆ ಬಲವಾಗಿ ಕೆಲಸ ಮಾಡಿದೆ.  

ರೈತರಿಗೆ ಭೂಮಿ ಎನ್ನುವುದು ಆಸ್ತಿಗಿಂತ ಹೆಚ್ಚಾಗಿ ಸುರಕ್ಷತಾ ಭಾವ ತಂದುಕೊಡುತ್ತದೆ.  ಜೀವಮಾನವಿಡೀ ದುಡಿದು ನಾಲ್ಕಾರು ಎಕರೆ ಜಮೀನು ಕೊಂಡುಬಿಟ್ಟಾಗ ರೈತರಿಗಾಗುವ ಸಂತೋಷ, ಸಂಭ್ರಮ, ಸುರಕ್ಷತಾ ಭಾವ ವರ್ಣಿಸಲಸಾಧ್ಯ. ಅಂಥದ್ದರಲ್ಲಿ ಏಕಾಏಕಿ ಬಂಡವಾಳಿಗನೊಬ್ಬ ಕಣ್ಣೆದುರೇ ನೂರಾರು ಎಕರೆ ಜಮೀನನ್ನು ಆಕ್ರಮಿಸುತ್ತಾರೆಂದರೆ ಹೇಗಾಗಬೇಡ!


ಹಾಗಾಗಕೂಡದು ಎಂದರೆ, ಪ್ರತಿಯೊಂದು ಗ್ರಾಮದ  ರೈತರೂ, ಈ ಊರಿನ ಜಮೀನು ನಮ್ಮ  ರೈತರಿಗೆ ಸೇರಿದ್ದು, ಅದನ್ನು ಬಂಡವಾಳಿಗರಿಗೆ ಕೊಳ್ಳಲು ಅವಕಾಶ ಕೊಡುವುದಿಲ್ಲ ಎಂದು ಘೋಷಿಸಬೇಕು. ಪ್ರತಿ ಗ್ರಾಮದ ಪ್ರವೇಶದಲ್ಲೇ, ‘ರೈತರ ಭೂಮಿ ಕಬಳಿಸುವವರಿಗೆ ಪ್ರವೇಶವಿಲ್ಲ’ ಎಂದು ಫಲಕ ಹಾಕಿ, ಕಣ್ಗಾವಲಾಗಿದ್ದು, ಅತಿಕ್ರಮಣಕಾರರಿಗೆ ಬಹಿಷ್ಕಾರ ಹಾಕಬೇಕು. ಭೂ ಕಬಳಿಕೆಯ ವಿರುದ್ಧ ಗ್ರಾಮಸ್ಥರ ಕಾರ್ಯಪಡೆ ಸಿದ್ಧವಾಗಬೇಕು. ಅದಕ್ಕಾಗಿ ನಾವು ನೀವೆಲ್ಲಾ ಸನ್ನದ್ಧರಾಗೋಣ.


ವಿ. ಗಾಯತ್ರಿ,

ಸಂಪಾದಕಿ,

‘ಸಹಜ ಸಾಗುವಳಿ’ ದ್ವೈಮಾಸಿಕ ಪತ್ರಿಕೆ


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑