Tel: 7676775624 | Mail: info@yellowandred.in

Language: EN KAN

    Follow us :


ಚನ್ನಪಟ್ಟಣ ಸರ್ಕಾರಿ ಶಾಲೆ ಮತ್ತು ಸಂಸ್ಥೆಗಳಲ್ಲಿ ಸರಣಿ ಕಳ್ಳತನ. ಪೋಲಿಸ್ ಇಲಾಖೆ ನಿರ್ಲಕ್ಷ್ಯ ಆರೋಪ

Posted date: 07 Jul, 2020

Powered by:     Yellow and Red

ಚನ್ನಪಟ್ಟಣ ಸರ್ಕಾರಿ ಶಾಲೆ ಮತ್ತು ಸಂಸ್ಥೆಗಳಲ್ಲಿ ಸರಣಿ ಕಳ್ಳತನ. ಪೋಲಿಸ್ ಇಲಾಖೆ ನಿರ್ಲಕ್ಷ್ಯ ಆರೋಪ

ಚನ್ನಪಟ್ಟಣ:ಜು/೦೭/೨೦/ಮಂಗಳವಾರ. ಚನ್ನಪಟ್ಟಣ ತಾಲೂಕಿನಲ್ಲಿ ಸರ್ಕಾರಿ ಶಾಲೆಗಳು, ವಸತಿ ಶಾಲೆಗಳು ಹಾಗೂ ಕೃಷಿ ಸಂಪರ್ಕ ಕೇಂದ್ರಗಳಲ್ಲಿ ಸರಣಿ ಕಳ್ಳತನ ಮುಂದುವರೆದಿವೆ. ಸೋಮವಾರ ರಾತ್ರಿ ತಾಲೂಕಿನ ದೊಡ್ಡಮಳೂರು ಮತ್ತು ಮತ್ತೀಕೆರೆ ಗ್ರಾಮದಲ್ಲಿ ಮೂರು ಕಡೆ ಸರಣಿ ಕಳ್ಳತನ ನಡೆದಿದೆ. ಸರ್ಕಾರಿ ಶಾಲೆ ಮತ್ತು ಇಲಾಖೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆದಿರುವುದು ವಿಶೇಷವಾಗಿದ್ದು ಅನುಭವಿ ಹಾಗೂ ಮಾಹಿತಿ ಇರುವ ಕ .


ತಾಲ್ಲೂಕಿನಾದ್ಯಂತ

 ಮೂರು ಕಡೆ ಸರ್ಕಾರಿ ಸಂಸ್ಥೆಗಳಿಗೆ ಖನ್ನ ಹಾಕಿರುವ ಕಳ್ಳರು ಲಕ್ಷಾಂತರ ರೂ. ಬೆಲೆಬಾಳುವ ಕಂಪ್ಯೂಟರ್, ಯುಪಿಎಸ್ ಬ್ಯಾಟರಿ ಮೊದಲಾದ ವಸ್ತುಗಳನ್ನು ಕಳವು ಮಾಡಿದ್ದಾರೆ. ಹೆದ್ದಾರಿ ಬದಿಯಲ್ಲೇ ಕಳ್ಳತನ ನಡೆದಿರುವುದು ಜನತೆಯನ್ನು ಭಯಭೀತ ಗೊಳಿಸಿದೆ.


ದೊಡ್ಡಮಳೂರಿನ ಗ್ರಾಮ ಪಂಚಾಯತಿ ಕಛೇರಿಗೆ ಕನ್ನ ಹಾಕಿರುವ ಖದೀಮರು ಖಾತೆಗೆ ಸಂಬಂಧಿಸಿದ ಕಡತಗಳು, ಮೂರು ಕಂಪ್ಯೂಟರ್ ಯಂತ್ರಗಳು, ಸೋಲಾರ್ ಬ್ಯಾಟರಿ, ಯುಪಿಎಸ್ ಬ್ಯಾಟರಿ, ೧೭ ಟಾರ್ಪಾಲಿನ್, ಬಿತ್ತನೆ ಬೀಜಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತು ಗಳನ್ನು ದೋಚಿದ್ದಾರೆ. ಇದೇ ಗ್ರಾಮದ ಮಳೂರು ಹೋಬಳಿ ರೈತಸಂಪರ್ಕ ಕೇಂದ್ರದ ಬಾಗಿಲು ಒಡೆದು ಒಳಗೆ ನುಗ್ಗಿರುವ ಕಳ್ಳರು ೩೫ ಕೆ.ಜಿ ತೂಕದ ೫ ಚೀಲ ಬಿತ್ತನೆ ಜೋಳ,೩ ಸ್ಪ್ರೇಯರ್, ೧೭ ಟಾರ್ಪಲ್‌ಗಳನ್ನು ಕಳವು ಮಾಡಿದ್ದಾರೆ.


ಮತ್ತೀಕೆರೆ ಗ್ರಾಮದ ಆದರ್ಶ ವಿದ್ಯಾಲಯದ ಕಂಪ್ಯೂಟರ್ ಕೊಠಡಿಗೆ ನುಗ್ಗಿರುವ ಕಳ್ಳರು ಕಂಪ್ಯೂಟರ್ ಹಾಗೂ ಯುಪಿಎಸ್, ಬ್ಯಾಟರಿಗಳನ್ನು ಕಳವು ಮಾಡಿದ್ದಾರೆ. ಮೂರು ಕಡೆಯಿಂದ ಸುಮಾರು ೫ ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವುದಾಗಿ ಅಂದಾಜಿಸಲಾಗಿದೆ.


ಸ್ಥಳಕ್ಕೆ ಎಎಸ್ಪಿ ರಾಮರಾಜನ್, ಗ್ರಾಮಾಂತರ ವೃತ್ತ ನಿರೀಕ್ಷಕ ವಸಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ.


ಕೆಲ ತಿಂಗಳ ಹಿಂದಷ್ಟೆ ತಾಲೂಕಿನ ಮುನಿಯಪ್ಪನದೊಡ್ಡಿ ಮತ್ತು ಬೈರಾಪಟ್ಟಣ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್ ಹಾಗೂ ಯುಪಿಎಸ್‌ಗಳನ್ನು ಕಳವು ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಸರ್ಕಾರಿ ಸಂಸ್ಥೆಗಳಲ್ಲೇ ಕಳ್ಳತನ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.


ಕಳ್ಳರು ಸರ್ಕಾರಿ ಶಾಲೆಗಳು ಮತ್ತು ಸಂಸ್ಥೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಎಸಗುತ್ತಿದ್ದಾರೆ. ಯಾವ ಸಂಸ್ಥೆಗಳಲ್ಲಿ ಕಳ್ಳತನವಾಗಿದೆಯೋ ಆ ಸಂಸ್ಥೆಯ ಮುಖ್ಯಸ್ಥರು ಆ ಕಛೇರಿಗಳಿಗೆ ಬಿಗಿಭದ್ರತೆ ಒದಗಿಸಲಿ. ಪೋಲೀಸರು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಎಎಸ್ಪಿ ರಾಮರಾಜನ್ ರವರಿಗೆ ಆಗ್ರಹ ಪಡಿಸಿದ್ದೇನೆ.
ಹರೂರು ರಾಜಣ್ಣ. ತಾಲ್ಲೂಕು ಪಂಚಾಯತಿ ಅಧ್ಯಕ್ಷರು.


ಈಗಾಗಲೇ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರ ಜೊತೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಪೋಲಿಸ್ ಅಧೀಕ್ಷಕರ ಮಾರ್ಗ ದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿ ಶೀಘ್ರವಾಗಿ ಕಳ್ಳರನ್ನು ಪತ್ತೆಹಚ್ಚುತ್ತೇವೆ.
ರಾಮರಾಜನ್ ಎಎಸ್ಪಿ, ಚನ್ನಪಟ್ಟಣ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑