Tel: 7676775624 | Mail: info@yellowandred.in

Language: EN KAN

    Follow us :


ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿಗೆ ಉಪಮುಖ್ಯಮಂತ್ರಿಗಳಿಂದ ಎಚ್ಚರಿಕೆ

Posted date: 10 Jul, 2020

Powered by:     Yellow and Red

ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿಗೆ ಉಪಮುಖ್ಯಮಂತ್ರಿಗಳಿಂದ ಎಚ್ಚರಿಕೆ

ಬೆಂಗಳೂರು/ರಾಮನಗರ:ಜು/೧೦/೨೦/ಶುಕ್ರವಾರ. ರಾಮನಗರ ಜಿಲ್ಲೆಯ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಳಂಬ ಮಾಡುತ್ತಿರುವ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಅವರು ತಕ್ಷಣವೇ ಸ್ಪಂದಿಸುವಂತೆ ಆಸ್ಪತ್ರೆಯ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು.


ರಾಮನಗರದಿಂದ ಆಂಬುಲೆನ್ಸ್ ನಲ್ಲಿ ಬರುವ ರೋಗಿಗಳನ್ನು ತಕ್ಷಣವೇ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು. ವಿಳಂಬ ಧೋರಣೆ ಸಹಿಸಲು ಅಸಾಧ್ಯ. ತಪ್ಪಿದಲ್ಲಿ ಕ್ರಮಕ್ಕೆ ಮುಂದಾಗುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಆಸ್ಪತ್ರೆಗೆ ಎಚ್ಚರಿಕೆ ನೀಡಿದ್ದಾರೆ.


ರಾಮನಗರ ಜಿಲ್ಲೆಯ ಕೋವಿಡ್-೧೯ ಪರಿಸ್ಥಿತಿ ಕುರಿತಂತೆ ಜಿಲ್ಲಾಡಳಿತದೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದುಕೊಂಡ ಉಪಮುಖ್ಯಮಂತ್ರಿಗಳು ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.


ಜಿಲ್ಲಾಡಳಿತದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬೆಂಗಳೂರಿನ ಕೆಂಗೇರಿ ಸಮೀಪದಲ್ಲಿರುವ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ರಾಮನಗರದ ರೋಗಿಗಳಿಗೆ ೩೦೦ ಹಾಸಿಗೆಗಳನ್ನು ಒದಗಿಸುವುದಾಗಿ ತಿಳಿಸಿತ್ತು. ಈ ಬಗ್ಗೆ ಖುದ್ದಾಗಿ ಮುತುವರ್ಜಿ ವಹಿಸಿದ್ದ ಉಪಮುಖ್ಯಮಂತ್ರಿಗಳು ಆಸ್ಪತ್ರೆಯ ಮುಖ್ಯಸ್ಥ ನವೀನ್ ಅವರೊಂದಿಗೆ ಮಾತುಕತೆ ನಡೆಸಿದ್ದರು.


*ಖುದ್ದು ಮಾತುಕತೆ:* ಆಸ್ಪತ್ರೆಯ ಮುಖ್ಯಸ್ಥ ನವೀನ್ ಅವರೊಂದಿಗೆ ಈ ಬಗ್ಗೆ ಖುದ್ದಾಗಿ ಮಾತನಾಡಿ ಗಮನ ಸೆಳೆಯುವುದಾಗಿ ತಿಳಿಸಿದ ಉಪಮುಖ್ಯಮಂತ್ರಿಗಳು ಜಿಲ್ಲಾಡಳಿತವು ಸಹ ಈ ಬಗ್ಗೆ ವಿವರವಾದ ಪತ್ರವನ್ನು ಬರೆದು ಆಸ್ಪತ್ರೆಗೆ ಎಚ್ಚರಿಕೆ ನೀಡುವಂತೆಯೂ ಸೂಚಿಸಿದರು.


*ತಪಾಸಿಸಲು ನಿರ್ದೇಶನ:* ಪ್ರಸಕ್ತ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ೫೧ ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ರೋಗಿಗಳನ್ನು ರಾಮನಗರದ ವೈದ್ಯಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ವೈಯಕ್ತಿಕವಾಗಿ ಅವರಿಂದ ಮಾಹಿತಿ ಪಡೆದುಕೊಂಡು ಅಲ್ಲಿರುವ ಸೌಲಭ್ಯ ಮತ್ತು ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ವರದಿ ನೀಡುವಂತೆ ಉಸ್ತುವಾರಿ ಸಚಿವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.


ಜಿಲ್ಲಾಡಳಿತದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ವೈದ್ಯಕೀಯ ಕಾಲೇಜು ೧೫ ವೆಂಟಿಲೇಟರ್ ಮತ್ತು ೩೦ ಐಸಿಯು ವಾರ್ಡ್ ಗಳನ್ನು ನೀಡಬೇಕಾಗಿರುತ್ತದೆ. ಇವುಗಳ ಬಗ್ಗೆಯೂ ಪರೀಕ್ಷಿಸಿ ವರದಿ ನೀಡುವಂತೆ ಅವರು ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑