Tel: 7676775624 | Mail: info@yellowandred.in

Language: EN KAN

    Follow us :


ಸೋಂಕಿತರ ಪತ್ತೆಗೆ ಹೆಚ್ಚು ಪರೀಕ್ಷೆ ನಡೆಸಿ : ಜಗದೀಶ್

Posted date: 29 Aug, 2020

Powered by:     Yellow and Red

ಸೋಂಕಿತರ ಪತ್ತೆಗೆ ಹೆಚ್ಚು ಪರೀಕ್ಷೆ ನಡೆಸಿ : ಜಗದೀಶ್

ರಾಮನಗರ:ಆ/29/20/ಶನಿವಾರ. ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸುವ ಮೂಲಕ ಸೋಂಕಿತರನ್ನು ಅದರಲ್ಲೂ ರೋಗಲಕ್ಷಣ ಉಳ್ಳವರನ್ನು ಪತ್ತೆಹಚ್ಚಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಮರಣ ಪ್ರಮಾಣವನ್ನು ಜಿಲ್ಲೆಯಲ್ಲಿ ಕಡಿಮೆಗೊಳಿಸಬಹುದು. ಈ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಗಮನ ವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಜೆ. ಜಗದೀಶ್ ಅವರು ತಿಳಿಸಿದರು.


ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಕೋವಿಡ್- 19 ನಿಯಂತ್ರಣ ಕ್ರಮಗಳ ಬಗ್ಗೆ ಆಯೋಜಿಸಿದ್ದ ಸಭೆಯಲ್ಲಿ ಮಾಹಿತಿ ಪಡೆದುಕೊಂಡ ಅವರು ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 37 ಸಾವುಗಳು ಸಂಭವಿಸಿವೆ. ಸೋಂಕಿತರಿಗೆ ಎಲ್ಲಾ ರೀತಿಯ ಚಿಕಿತ್ಸೆಯನ್ನು ನೀಡುವ ಮೂಲಕ ಪ್ರಾಣ ಉಳಿಸಲು ಆದ್ಯತೆ ನೀಡಬೇಕೆಂದು ನುಡಿದರು.


*ಆಂಬ್ಯುಲೆನ್ಸ್:* ನಿರ್ಮಿತಿ ಕೇಂದ್ರದಿಂದ ಹೊಸದಾಗಿ ನಾಲ್ಕು ಅಂಬ್ಯುಲೆನ್ಸ್ ಮತ್ತು ಇನ್ನಿತರ ಕಡೆಗಳಿಂದ 8 ಅಂಬ್ಯುಲೆನ್ಸ್ಗಳಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಈಗ ಒಟ್ಟು 16 ಅಂಬ್ಯುಲೆನ್ಸ್ ಗಳು ಲಭ್ಯವಿದೆ. ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿಯಲ್ಲಿ ತಲಾ ಎರಡು ಅಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಿವೆ. ರಾಮನಗರದ ಕೋವಿಡ್ ಕೇರ್ ಸೆಂಟರ್ ನಲ್ಲಿ ಒಂದು ಮತ್ತು ಸಾತನೂರಿನಲ್ಲಿ ಒಂದು ಅಂಬ್ಯುಲೆನ್ಸ್ ಅನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದರು.


*ಆರ್ಥಿಕ ಚಟುವಟಿಕೆ:* ಸರ್ಕಾರ ನಿಗದಿ ಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಅರ್ಥಿಕ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಅನುಮತಿ ನೀಡಲಾಗಿದ್ದು. ಜಿಲ್ಲೆಯಲ್ಲಿ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡಿವೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.


*ಸಂಪರ್ಕ ಪತ್ತೆ:* ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದಿರುವವರ ಪತ್ತೆ ಕಾರ್ಯಕ್ಕೆ ಬೂತ್ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಸಹಾಯಕರು ಹಾಗೂ ಗ್ರಾಮ ಪಂಚಾಯತ್ ಜಾಗೃತ ಸಮಿತಿಗಳೂ ಕೂಡ ಸಹಾಯ ಮಾಡುತ್ತಿವೆ. ಕ್ವಾರಂಟೈನ್ ಗೆ ಒಳಗಾದವರ ನಿಗಾ ವಹಿಸಲು ಆಪ್ ನ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಂಪರ್ಕಕ್ಕೆ ಒಂದಿರುವವರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಗೆ ಒಳಪಡಿಸುವುದನ್ನು ಕಟ್ಟುನಿಟ್ಟಾಗಿ ಜಿಲ್ಲೆಯಲ್ಲಿ ಅನುಸರಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಅವರು ತಿಳಿಸಿದರು.


*ಕೊರತೆ ಇಲ್ಲ:* ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಅನುವಾಗುವಂತೆ ಅಗತ್ಯವಿರುವ ಹಾಸಿಗೆಗಳು ಲಭ್ಯವಿದೆ. ನಾಲ್ಕು ತಾಲ್ಲೂಕುಗಳಲ್ಲಿ ಹೆಚ್ಚುವರಿಯಾಗಿ 880 ಹಾಸಿಗೆಗಳಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಚಿಕಿತ್ಸೆಗೆ ಅಗತ್ಯವಿರುವಷ್ಟು ಔಷಧಿ ಮತ್ತು ಆಕ್ಸಿಜನ್ ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ಅವರು ತಿಳಿಸಿದರು.


*ಸ್ವಾಬ್ ಸಂಗ್ರಹಕ್ಕೆ ವಿದ್ಯಾರ್ಥಿಗಳು:* ಜಿಲ್ಲೆಯ ವಿವಿಧ ಕಡೆಗಳಲ್ಲಿ ಇರುವ ಸ್ವಾಬ್ ಸಂಗ್ರಹಕ್ಕಾಗಿ ಬಿಎಸ್ಸಿ ಮಾಡಿರುವ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇವರುಗಳಿಗೆ ತರಬೇತಿ ನೀಡಿ, ಬಳಸಿಕೊಳ್ಳುತ್ತಿರುವುದರಿಂದ ಆರೋಗ್ಯ ಇಲಾಖೆಯ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಕಮ್ಮಿಯಾಗಿದೆ ಎಂದು ನಿರಂಜನ್ ಅವರು ತಿಳಿಸಿದರು.


ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ ಉಲ್ಲಾ ಷರೀಫ್, ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ ಶೆಟ್ಟಿ ಮತ್ತು ಅಪರ ಜಿಲ್ಲಾಧಿಕಾರಿ ಬಿ,ಪಿ. ವಿಜಯ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್, ಆರೋಗ್ಯ ಇಲಾಖೆಯ ಆರ್.ಸಿ.ಎಚ್. ಅಧಿಕಾರಿ ಡಾ. ಪದ್ಮ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑