Tel: 7676775624 | Mail: info@yellowandred.in

Language: EN KAN

    Follow us :


ಸೆ.19 ರ ಮೆಗಾ ಇ-ಲೋಕ ಅದಲಾತ್ ಲಾಭ ಪಡೆದುಕೊಳ್ಳಿ : ನ್ಯಾಯಾಧೀಶೆ ಬಿ. ಜಿ. ರಮಾ ಕರೆ

Posted date: 08 Sep, 2020

Powered by:     Yellow and Red

ಸೆ.19 ರ ಮೆಗಾ ಇ-ಲೋಕ ಅದಲಾತ್ ಲಾಭ ಪಡೆದುಕೊಳ್ಳಿ : ನ್ಯಾಯಾಧೀಶೆ ಬಿ. ಜಿ. ರಮಾ ಕರೆ

ರಾಮನಗರ:ಸೆ/07/20/ಸೋಮವಾರ. ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇತ್ಯರ್ಥವಾಗದ ಲೋಕ ಅದಾಲತ್ ಪ್ರಕರಣಗಳನ್ನು ಸೆಪ್ಟೆಂಬರ್ 19 ರಂದು ನಡೆಯುವ ಮೆಗಾ ಇ-ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ. ಜಿ. ರಮಾ ಅವರು ತಿಳಿಸಿದರು.


ಜಿಲ್ಲೆಯಲ್ಲಿ ಇ-ಲೋಕ ಅದಾಲತ್ ಅನುಷ್ಠಾನ ಕುರಿತು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿ.ಜಿ. ರಮಾ ಅವರು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ಹೈಕೋರ್ಟ ಲೀಗಲ್ ಸರ್ವಿಸಸ್ ಕಮಿಟಿಯ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲೂ ಇ-ಲೋಕ ಅದಾಲತ್ ಅನ್ನು ಆಯೋಜಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ 6 ತಿಂಗಳುಗಳ ಕಾಲ ನ್ಯಾಯಾಲಯದಲ್ಲಿ ಲೋಕ ಅದಾಲತ್ ಮೂಲಕ ಯಾವುದೇ ರೀತಿಯ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಕಕ್ಷಿದಾರರು ನ್ಯಾಯಾಲಯಕ್ಕೆ ಬರದೇ ಮನೆಯಲ್ಲಿಯೇ ಕುಳಿತು ಇಲ್ಲವೇ ವಕೀಲರ ಕಚೇರಿಯಲ್ಲಿ ಕುಳಿತು ರಾಜಿ ಸಂದಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಸತ್ರ ನ್ಯಾಯಾಧೀಶರು ತಿಳಿಸಿದರು.


ಸೆಪ್ಟೆಂಬರ್ 19 ರಂದು ದೇಶದಲ್ಲಿಯೇ ಪ್ರಥಮ ಬಾರಿಗೆ ಇ-ಲೋಕ ಅದಾಲತ್ ಮೂಲಕ ಪ್ರಕರಣಗಳ ಇತ್ಯರ್ಥಕ್ಕೆ ಚಾಲನೆ ನೀಡಲಾಗುತ್ತಿದೆ. ಸರ್ವರಿಗೂ ನ್ಯಾಯ ದೊರಕಿಸಿ ಕೊಡುವುದೇ ಇದರ ಉದ್ದೇಶ ಮತ್ತು ಧ್ಯೇಯವಾಗಿದೆ. ವಿಮಾ ಕಂಪನಿಗಳಿಂದ ಬರಬೇಕಾದ ಪರಿಹಾರ, ಅಪಘಾತ, ಕಂತು ಕಟ್ಟದಿರುವುದು ಸೇರಿದಂತೆ ಇನ್ನಿತರ ಸಣ್ಣಪುಟ್ಟ ಪ್ರಕರಣಗಳನ್ನು ರಾಜಿ ಇಲ್ಲವೆ ಸಂಧಾನದ ಮೂಲಕ ಬಗೆಹರಿಸಲು ಒತ್ತು ನೀಡಲಾಗುತ್ತಿದೆ. ಹೀಗಾಗಿ ಕಕ್ಷಿದಾರರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.


ಸಣ್ಣ ಪುಟ್ಟ ಪ್ರಕರಣಗಳಿದ್ದಲ್ಲಿ ಇನ್ನು ಮುಂದೇ ಕೋರ್ಟ್ ಗಳಿಗೆ ಅಲೆದಾಡುವ ಅಗತ್ಯವಿಲ್ಲ. ವಕೀಲರ ಕಚೇರಿ ಇಲ್ಲವೇ ಮನೆಯಲ್ಲಿಯೇ ಇದ್ದು, ಮೊಬೈಲ್ ಆಪ್ ಇಲ್ಲವೆ ಆನ್ ಲೈನ್ ಮೂಲಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿದರೆ ಅವರಿಗೆ ನ್ಯಾಯವನ್ನು ದೊರಕಿಸುವ ಕೆಲಸ ಮಾಡಲಾಗುತ್ತಿದೆ. ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ಇ-ಅದಾಲತ್ ಆಯೋಜಿಸಲಾಗುತ್ತಿದೆ. ತಾಲೂಕವಾರು ಈ ಕಾರ್ಯಕ್ರಮ ಮಾಡಲಾಗುತ್ತಿದೆ .  ಅಲ್ಲದೇ ವಕೀಲರು ಹಾಗೂ ಬಾರ್ ಕೌನ್ಸಲಿಂಗ್ ಜೊತೆ ಸಮಾಲೋಚನೆ ಮಾಡಲಾಗಿದೆ ಎಂದು ಸತ್ರ ನ್ಯಾಯಾಧೀಶರು ತಿಳಿಸಿದರು.


ಇ-ಲೋಕ ಅದಾಲತ್ ಗೆ ಸೆಪ್ಟೆಂಬರ್ 18 ವರೆಗೆ ನೊಂದಣಿ ಮಾಡಿಕೊಳ್ಳಲಾಗುತ್ತದೆ. ಸೆಪ್ಟೆಂಬರ್ 19 ರಂದು ಏಕ ಕಾಲಕ್ಕೆ ಇ-ಲೋಕ ಅದಾಲತ್ ನಡೆಸಲಾಗುವುದು. ರಾಮನಗರ ಜಿಲ್ಲೆ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಕಕ್ಷಿದಾರರನ್ನು ಹೊರತು ಪಡಿಸಿದರೆ, ವಕೀಲರು ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಬಹುದು ಇಲ್ಲವೆ ಆನ್ ಲೈನ್ ಮೂಲಕವೂ ಭಾಗವಹಿಸಬಹುದು. ಅವಶ್ಯಕತೆ ಕಂಡು ಬಂದಲ್ಲಿ ಕಕ್ಷಿದಾರರನ್ನು  ಆನ್ ಲೈನ್ ಮೂಲಕ ಸಂಪರ್ಕಿಸಲಾಗುವುದು ಎಂದು ತಿಳಿಸಿದರು.


ಜಿಲ್ಲೆಯಲ್ಲಿ ಒಟ್ಟು 39,680 ಪ್ರಕರಣಗಳಿದ್ದು, ಇವುಗಳ ಪೈಕಿ 4,624 ಪ್ರಕರಣಗಳನ್ನು ಮೆಗಾ ಲೋಕ ಅದಾಲತ್ ನಲ್ಲಿ ರಾಜಿ ಪ್ರಕರಣಗಳನ್ನಾಗಿ ಪರಿಗಣಿಸಿ ಇತ್ಯರ್ಥ ಪಡಿಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ ಅವರು ತಿಳಿಸಿದರು.


ನ್ಯಾಯಾಲಯದಲ್ಲಿ ಬಾಕಿ ಇರುವ ಹಾಗೂ ರಾಜಿ ಆಗಬಹುದಾದ ಪ್ರಕರಣಗಳಾದ ಅಪಘಾತ, ಪರಿಹಾರ ವ್ಯಾಜ್ಯ, ಆಸ್ತಿ ಸಂಬಂಧಿತ, ಕೌಟುಂಬಿಕ  ಪ್ರಕರಣ, ವಿಮೆ, ಹಣಕಾಸು ವ್ಯಾಜ್ಯ, ಸಣ್ಣ ಪುಟ್ಟ ಸಿವಿಲ್ ವ್ಯಾಜ್ಯ, ಲೇವಾದೇವಿ, ಬಾಡಿಗೆ, ಅಪಘಾತ ಪರಿಹಾರ, ವಾಹನ ವಿಮಾ ಕಂತು ಬಾಕಿ, ಭೂಮಿ ಖರೀದಿ ಸಂಬಂಧಿತ ಪ್ರಕರಣಗಳನ್ನು ರಾಜಿಗಾಗಿ ನಿಗದಿಪಡಿಸಲಾಗಿದೆ. ನ್ಯಾಯಾಲಯಕ್ಕೆ ಬರದೇ ಒಂದೇ ಒಂದು ಬಾರಿಗೆ ನ್ಯಾಯಸಮ್ಮತವಾಗಿ ರಾಜಿ ಇಲ್ಲವೆ ಸಂಧಾನದ ಮೂಲಕ ಇವುಗಳನ್ನು ಹೆಚ್ಚಿನ ಶುಲ್ಕವಿಲ್ಲದೆ ಎರಡೂ ಕಡೆಯವರು ಪರಿಹರಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ನ್ಯಾಯಾಧೀಶರು ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑