Tel: 7676775624 | Mail: info@yellowandred.in

Language: EN KAN

    Follow us :


ರಸ್ತೆ ಅಪಘಾತದಲ್ಲಿ ಮಧುಸೂದನಚಾರ್ಯಜೋಷಿ ದಂಪತಿಗಳು ನಿಧನ

Posted date: 13 Sep, 2020

Powered by:     Yellow and Red

ರಸ್ತೆ ಅಪಘಾತದಲ್ಲಿ ಮಧುಸೂದನಚಾರ್ಯಜೋಷಿ ದಂಪತಿಗಳು ನಿಧನ

ಚನ್ನಪಟ್ಟಣ/ಮಳವಳ್ಳಿ:ಸೆ/13/20/ಭಾನುವಾರ. ಇಂದು ಮುಂಜಾನೆ ಮಳವಳ್ಳಿ ತಾಲ್ಲೂಕಿನ ದಾಸೇಗೌಡನದೊಡ್ಡಿ ಗ್ರಾಮದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಚನ್ನಪಟ್ಟಣ ನಗರದ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ ಮಧುಸೂದನಚಾರ್ಯಜೋಷಿ ಮತ್ತು ಅವರ ಪತ್ನಿ ಗಂಗಾಂಬಿಕೆ ಮೃತಪಟ್ಟಿದ್ದು, ಅವರ ಏಕೈಕ ಪುತ್ರಿ ಅನುಷಾ ರವರು ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು ಮುಂಜಾನೆ ಕುಟುಂಬದ ಸಮೇತ ಗಗನಚುಕ್ಕಿ ಮತ್ತು ಭರಚುಕ್ಕಿ ಗೆ ಪ್ರವಾಸ ಹೊರಟಿದ್ದು, ಬೈಕ್ ಸವಾರೋನೋರ್ವ ಅಡ್ಡ ಬಂದಿದ್ದರಿಂದ ಅವನನ್ನು ಪಾರು ಮಾಡುವ ವೇಳೆ ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಾ ಮಧುಸೂದನಚಾರ್ಯಜೋಷಿ ರವರು ಸಹಸ್ರಾರು ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದ್ದರು. ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ಲೇಖಕರಾಗಿ ಹಲವು ಕೃತಿಗಳನ್ನು ರಚಿಸಿ ಅಕ್ಷರ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದರು. ಚಿಂತಕರು, ವಿಮರ್ಶಕರು ಆಗಿದ್ದು ರಾಮನಗರ ಜಿಲ್ಲಾದ್ಯಂತ ಅನೇಕ ಶಿಷ್ಯ ವೃಂದವನ್ನು ಹೊಂದಿದ್ದರು.

ನಗರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು, ಚನ್ನಪಟ್ಟಣದ ಸಾಂಸ್ಕೃತಿಕ ರಾಯಭಾರಿಗಳು ಆಗಿದ್ದ ಜೋಷಿ ರವರು ಚನ್ನಪಟ್ಟಣ ದ ಇತಿಹಾಸ ಕುರಿತು ಪುಸ್ತಕ ಬರೆದು ಪ್ರಕಟಿಸಿದ್ದರು. ಹಲವಾರು ಕವಿಗೋಷ್ಠಿ, ಚರ್ಚಾ ಸ್ಪರ್ಧೆ, ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮದೇ ಛಾಪು ಮೂಡಿಸಿದ್ದರು. ಆಚಾರದ ವಿಷಯಗಳಲ್ಲಿ ವೈಜ್ಞಾನಿಕತೆಯನ್ನು ತಂದು ಆಚಾರಗಳನ್ನು ಸಮರ್ಥಿಸುವ ಜೊತೆಗೆ ಸ್ಪಷ್ಟೀಕರಣ ನೀಡುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದರು.

ಇವರ ಅಗಲಿಕೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ. ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ. ಶ್ರೀಯುತರಿಗೆ ಸ್ವರ್ಗ ಪ್ರಾಪ್ತಿಯಾಗಲೆಂದು ಶಿಷ್ಯವೃಂದ, ಸಹೋದ್ಯೋಗಿಗಳು, ಕನ್ನಡ ಸಾರಸ್ವತ ಲೋಕದವರೆಲ್ಲರೂ ತಮಗೆ ಹೃದಯಸ್ಪರ್ಶಿ ವಿದಾಯವನ್ನು ಹೇಳಿರುವುದು ಅವರ ದಯಾಮಯಿ ಮಾತೃ ಹೃದಯದ ಬಡಿತವನ್ನು ತೋರಿಸುತ್ತದೆ.

ಮೃತರ ಸ್ವಂತ ಊರು ರಾಯಚೂರು ಜಿಲ್ಲೆಯ ಲಿಂಗಸೂಗೂರು ಆದರೂ ಕಳೆದ ಎರಡು ದಶಕಗಳಿಂದಲೂ ಚನ್ನಪಟ್ಟಣದಲ್ಲಿ ವಾಸವಿದ್ದುದರಿಂದ ಅವರ ಸಂಬಂಧಿಗಳು ಹಾಗೂ ಸ್ನೇಹಿತ ವರ್ಗದವರೂ ಮೃತರ ಅಂತ್ಯಕ್ರಿಯೆಯನ್ನು ನಾಳೆ ಬೆಳಿಗ್ಗೆ 14/09/20/ ರ ಸೋಮವಾರ ಚನ್ನಪಟ್ಟಣ ದಲ್ಲಿಯೇ ನೆರವೇರಿಸಲು ತೀರ್ಮಾನಿಸಿರುವುದಾಗಿ ಬಲ್ಲ ಮೂಲಗಳು ತಿಳಿಸಿವೆ.

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑