Tel: 7676775624 | Mail: info@yellowandred.in

Language: EN KAN

    Follow us :


ವಿಎ ಆತ್ಮಹತ್ಯೆ ಯತ್ನ ಪ್ರಕರಣ: ತಹಶಿಲ್ದಾರ್ ವಿರುದ್ಧ ಪ್ರತಿಭಟನೆ ನಡೆಸಿದ ಕಂದಾಯ ಇಲಾಖೆಯ ಸಿಬ್ಬಂದಿಗಳು.

Posted date: 16 Sep, 2020

Powered by:     Yellow and Red

ವಿಎ ಆತ್ಮಹತ್ಯೆ ಯತ್ನ ಪ್ರಕರಣ: ತಹಶಿಲ್ದಾರ್ ವಿರುದ್ಧ ಪ್ರತಿಭಟನೆ ನಡೆಸಿದ ಕಂದಾಯ ಇಲಾಖೆಯ ಸಿಬ್ಬಂದಿಗಳು.

ಚನ್ನಪಟ್ಟಣ:ಸೆ/16/20/ಬುಧವಾರ.ಸೆಕ್ರೇಟಿಯೇಟ್ ತಹಶಿಲ್ದಾರ್ ನಮಗೆ ಬೇಡ, ಕೆಎಎಸ್ ಮಾಡಿರುವ ಅಧಿಕಾರಿಗಳಿಗೆ ಕಂದಾಯ ಇಲಾಖೆಯ ಆಗುಹೋಗುಗಳ ಅರಿವು ಇರುತ್ತದೆ. ಇವರಿಗೆ ಅಧಿಕಾರ ಬಿಟ್ಟರೆ ಏನೂ ಗೊತ್ತಿರುವುದಿಲ್ಲ. ಪಹಣಿ, ಮ್ಯುಟೇಷನ್, ಸರ್ವೇ ಬಗ್ಗೆ ಕಿಂಚಿತ್ತೂ ಜ್ಞಾನ ಇರುವುದಿಲ್ಲ. ಇಂತಹವರಿಂದಲೇ ಅಧೀನ ಸಿಬ್ಬಂದಿಗಳು ಕಿರುಕುಳ ಅನುಭವಿಸಿ ಆತ್ಮಹತ್ಯೆ ಗೆ ಪ್ರಯತ್ನ ಮಾಡುತ್ತಾರೆ. ಈ ಅಧಿಕಾರಿಯನ್ನು ಈ ಕೂಡಲೇ ಅಮಾನತ್ತು ಮಾಡಬೇಕು. ವಿಧಾನಸೌಧದ ಸಚಿವಾಲಯಕ್ಕೆ ವಾಪಸು ಕರೆಸಿಕೊಳ್ಳಬೇಕು ಎಂದು ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಆಗ್ರಹಿಸಿದರು.


ಅವರು ನಿನ್ನೆ ತಗಚಗೆರೆ ಗ್ರಾಮ ಪಂಚಾಯತಿ ಗ್ರಾಮ ಲೆಕ್ಕಾಧಿಕಾರಿ ಕವಿತಾ ಎಂಬುವವರು ತಹಶಿಲ್ದಾರ್ ರವರ ನಿಂದನೆ ನುಡಿಗಳಿಂದ ಬೇಸತ್ತು ಆತ್ಮಹತ್ಯೆ ಗೆ ಪ್ರಯತ್ನಿಸಿದ ಹಿನ್ನೆಲೆಯಲ್ಲಿ, ಇಂದು ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.


*ಡ್ರೈವರ್ ಹೇಳಿದಂತೆ ಕೇಳುತ್ತಾರೆ*

ತಹಶಿಲ್ದಾರ್ ರವರು ಅವರ ಜೀಪ್ ಚಾಲಕ ನಾಗರಾಜು ಹೇಳಿದಂತೆ ಕೇಳುತ್ತಾರೆ. ನಾಗರಾಜು ರವರು ನಮ್ಮ ವಿರುದ್ದ ತಹಶಿಲ್ದಾರ್ ರವರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದು ಡಬಲ್ ಗೇಮ್ ಮಾಡುತ್ತಾರೆ ಎಂದು ಪದಾಧಿಕಾರಿಯೊಬ್ಬರು ಆರೋಪಿಸಿದರು.


ತಾಲ್ಲೂಕು ಸರ್ಕಾರಿ ನೌಕರರ ಅಧ್ಯಕ್ಷ ಚಂದ್ರಶೇಖರ ಮಾತನಾಡಿ ಕೆಳ ಹಂತದ ಸರ್ಕಾರಿ ನೌಕರರನ್ನು ಹಿರಿಯ ಅಧಿಕಾರಿಗಳು ಕೀಳಾಗಿ ನಡೆಸಿಕೊಳ್ಳುತ್ತಿದ್ದು, ಇದು ಹೀಗೆ ಮುಂದುವರೆದರೆ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ವಿಎ ಗೆ ಅವಮಾನ ಮಾಡಿರುವ ತಹಶಿಲ್ದಾರ್ ರವರ ನಡೆಯನ್ನು ಖಂಡಿಸುತ್ತೇವೆ ಎಂದರು.


*ನನ್ನ ಪತ್ನಿಗೆ ಆರೋಗ್ಯ ಹದಗೆಟ್ಟರೆ ತಹಶಿಲ್ದಾರರೇ ಹೊಣೆ ಪತಿ*

ಆತ್ಮಹತ್ಯೆ ಗೆ ಪ್ರಯತ್ನಿಸಿದ ಕವಿತಾ ರವರ ಪತಿ ಲಿಂಗರಾಜು ಮಾತನಾಡಿ ಕಳೆದ ಒಂದು ತಿಂಗಳಿನಿಂದಲೂ ತಹಶಿಲ್ದಾರ್ ರವರು ನನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದು, ಮಾನಸಿಕವಾಗಿ ನೊಂದಿದ್ದರು. ಮೊನ್ನೆ ದಿನ ಸಾರ್ವಜನಿಕವಾಗಿ ನಿಂದಿಸಿದ್ದರಿಂದ ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಆಕೆ ಗರ್ಭಿಣಿಯಾಗಿದ್ದು, ಮಗುವಿನ ಮೇಲೆ ಪರಿಣಾಮ ಬೀರಲಿದೆ. ಇದಕ್ಕೆ ತಹಶಿಲ್ದಾರ್ ರವರೇ ನೇರ ಹೊಣೆ ಎಂದು ಆರೋಪಿಸಿದರು.


*ವಿಎ ಗಳ ವಿರುದ್ಧ ತಿರುಗಿ ಬಿದ್ದ ಪಬ್ಲಿಕ್*


ವಿಎ ಗಳು ನೇಮಿಸಿದ ಜಾಗದಲ್ಲಿ ಇರುವುದಿಲ್ಲ. ಒಂದು ಸಹಿಗಾಗಿ ಮೂರ್ನಾಲ್ಕು ದಿನಗಳು ಸತಾಯಿಸುತ್ತಾರೆ. ಹಣ ತೆಗೆದುಕೊಳ್ಳದೆ ಯಾವ ಕೆಲಸವನ್ನು ಇವರು ಮಾಡಿಕೊಡುವುದಿಲ್ಲ ಎಂದು ಮಾಧ್ಯಮದವರೆದುರೇ ತಹಶಿಲ್ದಾರ್ ಗೆ ಮನವಿ ಸಲ್ಲಿಸುವ ಮೂಲಕ, ವಿಎಗಳಿಗೆ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡರು.


*ಪಬ್ಲಿಕ್ ಸಿಡಿದ ಕಾರಣ ಕಛೇರಿಯಲ್ಲಿ ಮಾತನಾಡೋಣಾ ಎಂದ ಪದಾಧಿಕಾರಿಗಳು*

ವಿಎ ಗಳ ವಿರುದ್ಧ ಅವಾಚ್ಯ ಶಬ್ದಗಳಿಂದ ಸಾರ್ವಜನಿಕರು ಮಾತನಾಡಲಾರಂಭಿಸಿದ ನಂತರ ಎಚ್ಚೆತ್ತ ಕಂದಾಯ ಇಲಾಖೆಯ ಪದಾಧಿಕಾರಿಗಳು ತಹಶಿಲ್ದಾರ್ ರವರನ್ನು ನಾಲ್ಕೈದು ಮಂದಿ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದು ಹಾಸ್ಯಾಸ್ಪದ ಮತ್ತು ಅನುಮಾನಸ್ಪಾದಕ್ಕೆ ಎಡೆಮಾಡಿಕೊಟ್ಟಿತು.


*ಸ್ಪಷ್ಟ ಪಡಿಸಿದ ತಹಶಿಲ್ದಾರ್*

ನಂತರ ಮಾತನಾಡಿದ ತಹಶಿಲ್ದಾರ್ ನಾಗೇಶ್ ರವರು ಸರ್ಕಾರದ ಆದೇಶವನ್ನು ಪಾಲಿಸುವುದು ನನ್ನ ಕರ್ತವ್ಯ. ಸಂಬಂಧಿಸಿದ ಇಲಾಖೆಯ ಮಂತ್ರಿಗಳು ಆದೇಶ ಹೊರಡಿಸಿರುವಂತೆ ನಡೆಯಬೇಕಾಗಿದೆ. ಎಲ್ಲಿ ತಪ್ಪಿದೆಯೋ ಅದನ್ನು ಹೇಳಿ ಮಾಡಿಸುವುದಕ್ಕಾಗಿಯೇ ನಾನು ಇರುವುದು. ನಾನು ಯಾರ ಒತ್ತಡಕ್ಕೂ ಮಣಿಯದೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಾನು ಆಕೆಗೆ ಯಾವುದೇ ಕಿರುಕುಳ ನೀಡಿಲ್ಲ. ನಾನು ಪ್ರತಿಯೊಬ್ಬರಿಗೂ ಗೌರವ ಕೊಡುವ ವ್ಯಕ್ತಿ ಎಂದರು. ಯಾರದೋ ಒತ್ತಡಕ್ಕಾಗಲಿ, ಬೆದರಿಕೆಗಾಗಲಿ ಬಗ್ಗಿ ನಡೆಯುವುದಿಲ್ಲ. ಎಲ್ಲಿ ಸಮಸ್ಯೆ ಇದೆಯೋ ಆ ಜಾಗಕ್ಕೆ ಹೋಗಿ ಸಮಸ್ಯೆ ಬಗೆಹರಿಸುತ್ತೇನೆ. ಕಛೇರಿಯಲ್ಲಿ ಕುಳಿತು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.


*ಆತ್ಮಹತ್ಯೆ ಮತ್ತು ಪ್ರತಿಭಟನೆ ಅಪರಾಧವಲ್ಲವೆ*

ನಮ್ಮ ಕಾನೂನು ಪ್ರಕಾರ ಆತ್ಮಹತ್ಯೆ ಅಪರಾಧ, ಆಕೆ ಆತ್ಮಹತ್ಯೆ ಗೆ ಬಳಸಿರುವುದು ನಿಷೇಧವಿರುವ ನೋವಿನ ಮಾತ್ರೆ, ಮೂಲಗಳ ಪ್ರಕಾರ ಆಕೆ  ನೋವಿಗಾಗಿ ಪ್ರತಿದಿನ ಸೇವಿಸುತ್ತಿದ್ದುದಾಗಿ ತಿಳಿದುಬಂದಿದೆ.

ಸರ್ಕಾರಿ ನೌಕರರು ಸಹ ಅವರ ಮೇಲಾಧಿಕಾರಿಗಳಿಗೆ ಮನವಿ ನೀಡಬಹುದೇ ವಿನಹ ಪ್ರತಿಭಟನೆ ನಡೆಸುವ ಹಾಗಿಲ್ಲ. ಆದರೂ ಕಂದಾಯ ಇಲಾಖೆಯ ಎಲ್ಲಾ ನೌಕರರು ಕೆಲಸಕ್ಕೆ ಗೈರು ಹಾಜರಾಗಿ ಪ್ರತಿಭಟನೆ ನಡೆಸಿದ್ದು ಯಾಕೆ ?

ಇವರೆಲ್ಲರೂ ತಿಳುವಳಿಕೆ ನೀಡುವ ಮಂದಿ ಕೊರೊನಾ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವ ವೇಳೆ ಬೆರಳೆಣಿಕೆ ಮಂದಿ ಬಿಟ್ಟರೆ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವನ್ನಂತೂ ಓದುಗರೇ ಪೋಟೋವನ್ನು ಗಮನಿಸಬಹುದು.


ನಂತರ ಕಂದಾಯ ಇಲಾಖೆಯ ನೌಕರರ ಸಂಘದ ಪದಾಧಿಕಾರಿಗಳು ರಾಮನಗರದ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ತಹಶಿಲ್ದಾರ್ ವಿರುದ್ಧ ದೂರು ನೀಡಿದ್ದಾಗಿ ತಿಳಿದುಬಂದಿದೆ.


ಪ್ರತಿಭಟನೆಯಲ್ಲಿ 

ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಹರ್ಷ, ತಾಲ್ಲೂಕು ಸಂಘದ ಮೋಹನ್, ತಂಗರಾಜು,ವೆಂಕಟೇಶ್, ರಾಜಶೇಖರ, ಗಿರೀಶ್ ಶಿವು ಹಾಗೂ ಕಂದಾಯ ಇಲಾಖೆಯ ನೌಕರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑