Tel: 7676775624 | Mail: info@yellowandred.in

Language: EN KAN

    Follow us :


ಯಶಸ್ವಿಯಾದ ಬಂದ್: ಸಂಪೂರ್ಣ ಸ್ತಬ್ದವಾದ ನಗರ

Posted date: 28 Sep, 2020

Powered by:     Yellow and Red

ಯಶಸ್ವಿಯಾದ ಬಂದ್: ಸಂಪೂರ್ಣ ಸ್ತಬ್ದವಾದ ನಗರ

ಚನ್ನಪಟ್ಟಣ:ಸೆ/28/20/ಸೋಮವಾರ. ರೈತಸಂಘ ಸೇರಿದಂತೆ ಅನೇಕ ಸಂಘಟನೆಗಳು ಇಂದು ಬಂದ್ ಗೆ ಕರೆನೀಡಿದ್ದು ನಗರದಲ್ಲಿ ಯಶಸ್ವಿಗೊಂಡಿತು.

ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ, ಕಾರ್ಮಿಕ ಸಂಘಟನೆ ಹಾಗೂ ದಲಿತ ಪರ ಸಂಘಟನೆ ಸೇರಿದಂತೆ ಇನ್ನಿತರ ಸಂಘಟನೆಗಳು ಎಪಿಎಂಸಿ ಕಾಯ್ದೆ ಮತ್ತು ಭೂ ಮಸೂದೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರ್ನಾಟಕ ಬಂದ್ ಗೆ ಕರೆ ನೀಡಿದರು. ಕಳೆದ ವಾರದಿಂದಲೇ ಬಂದ್ ಬಗ್ಗೆ ಮಾಹಿತಿ ಇದ್ದು, ನಿನ್ನೆ ದಿನ ಆಟೋದಲ್ಲಿ ಪ್ರಚಾರ ಮಾಡಿದ್ದರೂ ಸಹ ಕೆಲ ಅಂಗಡಿಗಳು ಬಾಗಿಲು ತೆಗೆದಿದ್ದನ್ನು ಗಮನಿಸಿದ ರೈತ ಸಂಘದವರು ಬಾಗಿಲು ಮುಚ್ಚಿಸುವ ಮೂಲಕ ನಗರವನ್ನು ಸಂಪೂರ್ಣ ಸ್ತಬ್ದಗೊಳಿಸಿದರು.


*ಬೈಕ್ ಸವಾರಿ ಮೂಲಕ ತೆರಳಿ ಬಂದ್*

ಮೊದಲಿಗೆ ಗಾಂಧಿಭವನದ ಬಳಿ ಜಮಾವಣೆಗೊಂಡ ರೈತರು ಮಾನವ ಸರಪಳಿ ನಿರ್ಮಿಸಿ ಸರ್ಕಾರದ ನಿರ್ಧಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ನಂತರ ಬೈಕ್ ಮೂಲಕ ರೈತರು ಎಂ ಜಿ ರಸ್ತೆ, ಡಿ ಟಿ ರಾಮು ವೃತ್ತ, ಎಂಜಿ ಮತ್ತು ಜೆಸಿ ರಸ್ತೆ ಕೂಡುವ ದಾರಿ ಪಂಚದೀಪ (ಡೂಂಲೈಟ್) ವೃತ್ತ, ಮದಿನಾ ಚೌಕ, ಸಾತನೂರು ವೃತ್ತ, ಸಾತನೂರು ರಸ್ತೆಯ ಗಣೇಶನ ದೇವಾಲಯ, ತರಕಾರಿ ಮಾರುಕಟ್ಟೆ, ಜೆಸಿ ರಸ್ತೆಯ ಪೇಟೆ ಬೀದಿ, ಎಪಿಎಂಸಿ ಮಾರುಕಟ್ಟೆ ಸೇರಿದಂತೆ ಅನೇಕ ಬೀದಿಗಳಲ್ಲಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಿದರು.


*ಭಾಗಿಯಾಗದ ಸಂಘಟನೆಗಳು*

ತಾಲ್ಲೂಕಿನಲ್ಲಿ ನಾಡುನುಡಿ ಪರ, ಕನ್ನಡ ಪರ, ದಲಿತ ಮತ್ತು ಕಾರ್ಮಿಕರು, ರೈತಸಂಘ ದ ಬಣಗಳು ಹಾಗೂ ಇನ್ನಿತರ ಸಂಘಟನೆಗಳು ಭಾಗಿಯಾಗುತ್ತಾರೆ ಎಂಬುದನ್ನು ಈ ಮೊದಲು ರೈತಸಂಘದ ಪದಾಧಿಕಾರಿಗಳು ತಿಳಿಸಿದ್ದರಾದರೂ, ತಾಲ್ಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸಾಗರ್ ಮತ್ತು ನಾಲ್ಕೈದು ಮಂದಿ ಹೊರತುಪಡಿಸಿ ಮಿಕ್ಕ ಸಂಘಸಂಸ್ಥೆಗಳು ಭಾಗಿಯಾಗಿದ್ದು ಕಂಡುಬರಲಿಲ್ಲ.


*ಕೃಷ್ಣಪ್ರಸಾದ್ ಹೋಟೆಲ್ ಮಾಲೀಕರಿಗೆ ತರಾಟೆ*

ಡಿ ಟಿ ರಾಮು ವೃತ್ತದಲ್ಲಿರುವ ಕೃಷ್ಣಪ್ರಸಾದ್ ಹೋಟೆಲ್‌ ತೆಗೆದಿದ್ದನ್ನು ಗಮನಿಸಿದ ರೈತರು ಅದರ ಮಾಲೀಕರಿಗೆ ತರಾಟೆ ತೆಗೆದುಕೊಂಡರು. ಹೆಗಲ ಮೇಲೆ ಹಸಿರು ಟವೆಲ್ ಹಾಕಿಕೊಳ್ಳುವ ನೀವು ಹೋಟೆಲ್ ಬಂದ್ ಮಾಡದೆ ತೆಗೆದಿರುವುದು ಟವೆಲ್ ಗೆ ಮಾಡಿದ ಅಪಮಾನ. ಎಂದು ತರಾಟೆಗೆ ತೆಗೆದುಕೊಂಡ ನಂತರ ಬಾಗಿಲು ಮುಚ್ಚಿದರು.


*ಕೆಲಸ ನಿರ್ವಹಿಸಿದ ಸರ್ಕಾರಿ ಕಛೇರಿಗಳು*

ತಾಲ್ಲೂಕು ಆಡಳಿತದ ಎಲ್ಲಾ ಕಛೇರಿಗಳು, ರೇಷ್ಮೆ ಗೂಡಿನ ಮಾರುಕಟ್ಟೆ ಸೇರಿದಂತೆ ಇನ್ನಿತರ ಸರ್ಕಾರದ ಎಲ್ಲಾ ಕಛೇರಿಗಳು ಬಾಗಿಲು ತೆಗೆದು ಎಂದಿನಂತೆ ಕಾರ್ಯನಿರ್ವಹಿಸಿದವು. ಪತ್ರಿಕೆಯ ಜೊತೆ ಮಾತನಾಡಿದ ದಂಡಾಧಿಕಾರಿ ನಾಗೇಶ್ ರವರು ನಮಗೆ ಸರ್ಕಾರದಿಂದ ಯಾವುದೇ ಸಂದೇಶ ಬಂದಿಲ್ಲ. ಎಂದಿನಂತೆ ಎಲ್ಲಾ ಕಛೇರಿಗಳು ಕೆಲಸ ನಿರ್ವಹಿಸುತ್ತಿವೆ ಎಂದರು.


*ಅಬ್ಬರವಿಲ್ಲದ ವಾಹನಗಳು*

ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಭರಾಟೆ ಬಹಳ ಕಡಿಮೆ ಸಂಖ್ಯೆಯಲ್ಲಿ ಇತ್ತು. ಬಸ್ ಮತ್ತು ಲಾರಿಗಳ ಸಂಖ್ಯೆ ತೀರಾ ವಿರಳವಾಗಿದ್ದು, ಕಾರುಗಳ ಸಂಖ್ಯೆ ಹೆಚ್ಚಾಗಿದ್ದು, ದಿನನಿತ್ಯದಂತೆ ದ್ವಿಚಕ್ರ ವಾಹನಗಳು ಭರದಿಂದ ಸಾಗುತ್ತಿರುವುದು ನೋಡಿದರೆ ಇವರಿಗೆ ಬಂದ್ ನ ಬಿಸಿ ತಟ್ಟಿಲ್ಲ ಎಂಬುದು ವೇದ್ಯವಾಗುತ್ತದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑