Tel: 7676775624 | Mail: info@yellowandred.in

Language: EN KAN

    Follow us :


ಕಾಲುವೆ ರಸ್ತೆ ಒತ್ತುವರಿ ತೆರವುಗೊಳಿಸಿ ನಮ್ಮ ಜಮೀನಿಗೆ ಹೋಗಲು ದಾರಿಬಿಡಿಸಿ ಎಂದು ಮನವಿ ಸಲ್ಲಿಸಿದ ಮೈಲನಾಯಕನಹಳ್ಳಿ ಗ್ರಾಮಸ್ಥರು

Posted date: 30 Sep, 2020

Powered by:     Yellow and Red

ಕಾಲುವೆ ರಸ್ತೆ ಒತ್ತುವರಿ ತೆರವುಗೊಳಿಸಿ ನಮ್ಮ ಜಮೀನಿಗೆ ಹೋಗಲು ದಾರಿಬಿಡಿಸಿ ಎಂದು ಮನವಿ ಸಲ್ಲಿಸಿದ ಮೈಲನಾಯಕನಹಳ್ಳಿ ಗ್ರಾಮಸ್ಥರು

ಚನ್ನಪಟ್ಟಣ:ಸೆ/30/20/ಬುಧವಾರ. ಪುರಾತನ ಕಾಲದಿಂದಲೂ ಅನೋನ್ಯವಾಗಿ ಒಬ್ಬರ ಜಮೀನಿನ ಮೇಲೆ ಮತ್ತೊಬ್ಬರು ಓಡಾಡುವ ಮೂಲಕ ಜೀವನ ಮಾಡುತ್ತಿದ್ದ ನಾವು ಕೆಲವು ಒತ್ತುವರಿದಾರರ ಕಿರುಕುಳದಿಂದ ನಮ್ಮ ಭೂಮಿಗೆ ಹೋಗಿ ವ್ಯವಸಾಯ ಮಾಡಲಾಗದೆ ಪರಿತಪಿಸುವಂತಾಗಿದೆ. ತಾಲ್ಲೂಕಿನ ದಂಡಾಧಿಕಾರಿಗಳಾದ ತಾವು ಒತ್ತುವರಿ ತೆರವು ಮಾಡಿಸಿ ನಕಾಸೆ ರಸ್ತೆಯನ್ನು ಗುರುತಿಸಿ ನಮ್ಮ ಭೂಮಿಯಲ್ಲಿ ವ್ಯವಸಾಯ ಮಾಡಲು ಅನುವು ಮಾಡಿಕೊಡಬೇಕೆಂದು ತಾಲ್ಲೂಕಿನ ಮೈಲನಾಯಕನಹೊಸಹಳ್ಳಿ ಗ್ರಾಮದ ರೈತ ಮಹಿಳೆಯರು ಇಂದು ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಶಿಲ್ದಾರ್ ನಾಗೇಶ್ ರವರಿಗೆ ಮನವಿ ಸಲ್ಲಿಸಿದರು.

ಹರೂರು ಕೆರೆಯಿಂದ ಮಳೂರು ಕೆರೆಗೆ ನೀರು ಹರಿದು ಹೋಗಲು ಕಾಲುವೆ ಇದೆ. ಈ ಕಾಲುವೆಗೆ ರಸ್ತೆಯಿದ್ದು, ಅದನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಹಿಂದೆ ದೂರು ನೀಡಿದ ನಂತರ ಅಂದಿನ ತಹಶಿಲ್ದಾರ್ ಸುದರ್ಶನ್ ರವರು ಸರ್ವೇ ಮಾಡಿಸಿ ಕಲ್ಲು ಹಾಕಿಸಿ ಪಂಚಾಯತಿಯವರಿಗೆ ರಸ್ತೆ ನಿರ್ಮಿಸುವಂತೆ ಸೂಚಿಸಿದ್ದರು. ಅಂದು ಒಪ್ಪಿ ತಲೆಯಾಡಿಸಿದ ಗ್ರಾಮ ಪಂಚಾಯತಿಯವರು ಇಂದು ನಮಗೆ ಆ ಅಧಿಕಾರ ಇಲ್ಲವೆಂಬ ಸಬೂಬು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ಆಸ್ತಿಗಳಲ್ಲಿ ಕಳೆದ ಹತ್ತಾರು ವರ್ಷಗಳಿಂದ ರಸ್ತೆ ಇಲ್ಲದೆ, ವ್ಯವಸಾಯ ಮಾಡಲಾಗದೆ ಭೂಮಿಯನ್ನು ಪಾಳು ಬಿಟ್ಟಿದ್ದೇವೆ. ತಾವು ಶೀಘ್ರವಾಗಿ ನಮ್ಮ ಸಮಸ್ಯೆಯನ್ನು ಬಗೆಹರಿಸಿ, ಒತ್ತುವರಿ ತೆರವುಗೊಳಿಸಿ, ಓಡಾಡಲು ರಸ್ತೆ ನಿರ್ಮಿಸಿಕೊಡಬೇಕೆಂದು ಪ್ರತಿಭಟನಾಕಾರರು ಆಗ್ರಹಪಡಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ದಂಡಾಧಿಕಾರಿ ನಾಗೇಶ್ ರವರು ಇಂದು ಕೋರ್ಟ್ ಇಲ್ಲದಿದ್ದರೆ ಇಂದೇ ಬರುತ್ತಿದ್ದೆ. ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರೈತಸಂಘದ ಮುಖಂಡ ಸುಜೀವನ್ ಕುಮಾರ್, ಸಿಂಲಿಂ ನಾಗರಾಜು, ಮೈಲನಾಯಕನಹಳ್ಳಿ ಗ್ರಾಮದ ಮುಖಂಡರು ಹಾಗೂ ಇಪ್ಪತ್ತಕ್ಕೂ ಹೆಚ್ಚು ರೈತ ಮಹಿಳೆಯರು ಭಾಗವಹಿಸಿದ್ದರು.

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑