Tel: 7676775624 | Mail: info@yellowandred.in

Language: EN KAN

    Follow us :


ಬಲಾಢ್ಯರಿಂದ ಖುದ್ದು ನಿಂತು ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್ ನಾಗೇಶ್

Posted date: 01 Oct, 2020

Powered by:     Yellow and Red

ಬಲಾಢ್ಯರಿಂದ ಖುದ್ದು ನಿಂತು ಒತ್ತುವರಿ ತೆರವುಗೊಳಿಸಿದ ತಹಶಿಲ್ದಾರ್ ನಾಗೇಶ್

ಚನ್ನಪಟ್ಟಣ:ಅ/01/20/ಗುರುವಾರ. ಮೈಲನಾಯಕನಹೊಸಹಳ್ಳಿ ಗ್ರಾಮದಲ್ಲಿ ಕೆಲವು ಬಲಾಢ್ಯರು ಕಾಲುವೆ ಒತ್ತುವರಿ ಮಾಡಿಕೊಂಡು, ಹಿಂದಿನ ಜಮೀನಿಗೆ ಹೋಗಲು ಉಳಿದ ಜಮೀನು ಮಾಲೀಕರಿಗೆ ದಾರಿ ನೀಡದಿರುವುದರ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ತಹಶಿಲ್ದಾರ್ ನಾಗೇಶ್ ರವರು ಖುದ್ದು ನಿಂತು ಜೆಸಿಬಿಗಳ ಮೂಲಕ, ಸಾರ್ವಜನಿಕರ ಸಮ್ಮುಖದಲ್ಲಿ ಒತ್ತುವರಿ ತೆರವುಗೊಳಿಸಿದರು.


ಮೈಲನಾಯಕನಹೊಸಹಳ್ಳಿ ಗ್ರಾಮದ ರೈತ ಮಹಿಳೆಯರು ನಿನ್ನೆ ತಾಲ್ಲೂಕು ಕಛೇರಿಯ ಮುಂದೆ ಪ್ರತಿಭಟಿಸಿ, ತಹಶಿಲ್ದಾರ್ ರವರಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ತಹಶಿಲ್ದಾರ್ ರವರು ಈ ಕ್ರಮ ಕೈಗೊಂಡರು.


ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಎಂ ಎ ಆನಂದ್ ಸೇರಿದಂತೆ ಹಲವಾರು ಮಂದಿ ಹರೂರು ಕೆರೆಯಿಂದ ಮಳೂರು ಕೆರೆಗೆ ನೀರು ಹರಿದು ಹೋಗುವ ಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದರಿಂದ ಹಿಂದಿನ ತಹಶಿಲ್ದಾರ್ ಸುದರ್ಶನ್ ರವರಿಗೆ ಮನವಿ ಸಲ್ಲಿಸಿದರು. ಮನವಿಯ ನಂತರ ಅವರು ಸರ್ವೇ ಮಾಡಿಸಿ ಕಲ್ಲು ಹಾಕಿದ್ದು ಗ್ರಾಮ ಪಂಚಾಯತಿ ಯವರು ತೆರವಿಗೆ ಹೋದ ಸಂದರ್ಭದಲ್ಲಿ ಮತ್ತೆ ತಕರಾರು ತೆಗೆದಿದ್ದನ್ನು ಇಂದಿನ ತಹಶಿಲ್ದಾರ್ ರವರಿಗೆ ಮನವರಿಕೆ ಮಾಡಿಕೊಟ್ಟಿದ್ದರು.


ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾದಿಕಾರಿ, ರೆವಿನ್ಯೂ ಇನ್ಸ್‌ಪೆಕ್ಟರ್, ಗ್ರಾಮ ಲೆಕ್ಕಾಧಿಕಾರಿ, ಸರ್ವೇಯರ್ ಹಾಗೂ ಮೂರು ಜೆಸಿಬಿಗಳ ಸಮೇತ ಒತ್ತುವರಿ ಜಾಗಕ್ಕೆ ತೆರಳಿದ ಅವರು ನಕ್ಷೆ ಹಿಡಿದು ಬೆಳಿಗ್ಗೆ ಹತ್ತು ಗಂಟೆಗೆ ತೆರಳಿ ಸಂಜೆ ಆರು ಗಂಟೆಯ ವರೆಗೂ ಒತ್ತುವರಿ ತೆರವುಗೊಳಿಸಿದರು.

ಈ ನಡುವೆ ಕೆಲವರು ಗಲಾಟೆಯನ್ನು ಮಾಡಿದ್ದು ಇದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು ಸರ್ಕಾರದ ಆದೇಶದನ್ವಯ ಕಾಲುವೆ ಒತ್ತುವರಿಯನ್ನು ತೆರವುಗೊಳಿಸಿ ಮೈಲನಾಯಕನಹೊಸಹಳ್ಳಿ ಗ್ರಾಮಸ್ಥರಿಂದ ಪ್ರಶಂಸೆಗೊಳಪಟ್ಟರು.


ನಾನು ಯಾರ ಮುಲಾಜಿಗೂ ಒಳಗಾಗುವುದಿಲ್ಲ. ಸಾರ್ವಜನಿಕರ ಕೆಲಸಮಾಡಲು ನನ್ನನ್ನು ಸರ್ಕಾರ ನಿಯೋಜಿಸಿದೆ. ಅದರಲ್ಲೂ ಸರ್ಕಾರದ ಯಾವುದೇ ಜಾಗವನ್ನು ಯಾರೇ ಒತ್ತುವರಿ ಮಾಡಿಕೊಂಡ ದೂರು ಬಂದರೂ ಸಹ ಶೀಘ್ರ ಕ್ರಮಕೈಗೊಳ್ಳುತ್ತೇನೆ ಎಂದು *ತಹಶಿಲ್ದಾರ್ ನಾಗೇಶ್* ರವರು ತಿಳಿಸಿದರು.


ಇದು ನಮಗೆ ಬಹಳ ವರ್ಷಗಳಿಂದ ಕಗ್ಗಂಟಾಗಿದ್ದು ಗ್ರಾಮಸ್ಥರ ಮನವಿಗೆ ಸ್ಪಂದಿಸಿ, ಒತ್ತುವರಿ ತೆರವುಗೊಳಿಸುತ್ತಿರುವುದು ಸಂತಸದ ವಿಷಯ. ರಸ್ತೆಯ ಹಿಂದಿನ ಜಮೀನಿಗೆ ಹೋಗಲು ‌ದಾರಿಯಿಲ್ಲದೆ ಎಷ್ಟೋ ಮಂದಿ ತಮ್ಮ ಜಮೀನು ಮಾರಿಕೊಂಡ ಉದಾಹರಣೆಗಳಿವೆ. ಇಂದಿನಿಂದ ಜಮೀನು ಮಾಲೀಕರು ವ್ಯವಸಾಯ ಮಾಡಲಡ್ಡಿಯಾಗದು ಎಂದು *ಗ್ರಾಮ ಪಂಚಾಯತಿ ಮಾಜಿ ಸದಸ್ಯ ಅಂಕೇಗೌಡ* ತಿಳಿಸಿದರು.


ಅದು ನನಗೆ ಒತ್ತುವರಿ ಎಂದು ಗೊತ್ತಿಲ್ಲ. ನನ್ನ ಜಮೀನಿಗೆ ಹೋಗಲು ನಾನು ದಾರಿ ಮಾಡಿಕೊಂಡಿದ್ದೆ. ಅದು ಕಾಲುವೆಯ ಜಾಗ ಎಂದು ತಹಶಿಲ್ದಾರ್ ರವರು ದಾಖಲೆ ತೋರಿಸಿ ಗೇಟು ಮತ್ತು ಫೆನ್ಸಿಂಗ್ ಅನ್ನು ತೆರವುಗೊಳಿಸಿದ್ದಾರೆ. ಹದ್ದುಬಸ್ತಿನ ನಂತರ ಸತ್ಯಾಸತ್ಯತೆ ತಿಳಿಯಲಿದೆ ಎಂದು *ಒತ್ತುವರಿದಾರ ಎಂ ಎ ಆನಂದ್* ಹೇಳಿಕೆ ನೀಡಿದರು.


ನಮ್ಮ ಭೂಮಿಯು ರಸ್ತೆಯಿಂದ ದೂರವಿದ್ದು, ಅಲ್ಲಿಗೆ ಹೋಗಿ ಇದುವರೆಗೂ ವ್ಯವಸಾಯ ಮಾಡಲಾಗುತ್ತಿರಲಿಲ್ಲ. ಕನಿಷ್ಠ ಪಕ್ಷ ಜಾನುವಾರುಗಳಿಗೆ ಮೇವು ತರಲಾಗುತ್ತಿರಲಿಲ್ಲ. ನಮ್ಮ ಮನವಿಗೆ ಸ್ಪಂದಿಸಿ ಶೀಘ್ರ ಕ್ರಮಕೈಗೊಂಡ ತಹಶಿಲ್ದಾರ್ ರವರಿಗೆ ನಾವು ಅಭಿನಂದನೆಗಳನ್ನು ತಿಳಿಸುತ್ತೇವೆ.

*ಜ್ಯೋತಿ ಕರಿಗೌಡ. ಗ್ರಾಮಸ್ಥರು.


ಒತ್ತುವರಿ ತೆರವು ವೇಳೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಚಂದ್ರು, ಆರ್ ಐ ಕಾಂತರಾಜು, ವಿಎ ರವಿಕುಮಾರ್, ಸರ್ವೇಯರ್ ಹಾಗೂ ಗ್ರಾಮಸ್ಥರಾದ ರಾಜಶೇಖರ, ಕಾರು ಉಮೇಶ್, ಗಂಗಮ್ಮ ಸೇರಿದಂತೆ ಹಲವರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑