Tel: 7676775624 | Mail: info@yellowandred.in

Language: EN KAN

    Follow us :


ಕನ್ನಡ ಭಾಷೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸಬೇಕು: ಡಾ: ಸಿ.ಎನ್. ಅಶ್ವತ್ಥನಾರಾಯಣ

Posted date: 01 Nov, 2020

Powered by:     Yellow and Red

ಕನ್ನಡ ಭಾಷೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸಬೇಕು: ಡಾ: ಸಿ.ಎನ್. ಅಶ್ವತ್ಥನಾರಾಯಣ

ಕನ್ನಡ ಭಾಷೆಯ ಏಕೀಕರಣಕ್ಕಾಗಿ ಹಲವಾರು ಮಹಾನ್ ಲೇಖಕರು, ಸಂಘ, ಸಂಸ್ಥೆಗಳು, ಪತ್ರಿಕೋದ್ಯಮದವರು ಹಾಗೂ ಹೋರಾಟಗಾರರು ಶ್ರಮಿಸಿದ್ದಾರೆ. ಕನ್ನಡ ನಾಡು, ನುಡಿ, ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು‌ ಉಪಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ: ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದರು.


ಅವರು ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ 65 ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.


ಭಾರತೀಯ ಭಾಷೆ ಮತ್ತು ಸಾಹಿತ್ಯಗಳಲ್ಲಿ ಉನ್ನತ ಶ್ರೇಣಿಯಲ್ಲಿ ಇರುವ ಚೆಲುವ ಕನ್ನಡ ನಾಡಿಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ನಾಡು-ನುಡಿಯ ಐಸಿರಿಗೆ ನಾಡ ಕವಿಗಳ ಕೊಡುಗೆ ಮಹೋನ್ನತವಾದದ್ದು. ಕನ್ನಡ ಭಾಷೆಯ ಹಾಗೂ ನಾಡಿನ ವೈಭವವನ್ನು ಅನೇಕ ಕವಿಗಳು ತಮ್ಮ ಪದಪುಂಜಗಳಲ್ಲಿ ಬಹುಸುಂದರವಾಗಿ ವರ್ಣಿಸಿದ್ದಾರೆ. ಇದಕ್ಕಾಗಿ ಹೋರಾಡಿದ ಆಲೂರು ವೆಂಕಟರಾಯರು, ಆಚಾರ್ಯ ಬಿ.ಎಂ. ಶ್ರೀಕಂಠಯ್ಯ, ಅ.ನ. ಕೃಷ್ಣರಾಯರು, ಮಂಗಳವೇಡೆ ಶ್ರೀನಿವಾಸರಾಯರು,               ಎಸ್. ನಿಜಲಿಂಗಪ್ಪ, ಕೆ.ಎಫ್. ಪಾಟೀಲ, ಗೋರೂರು ರಾಮಸ್ವಾಮಿ ಅಯ್ಯಂಗಾರ, ಕಡಿದಾಳ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಎಚ್.ಎಸ್. ದೊರೆಸ್ವಾಮಿ, ಪಾಟೀಲ ಪುಟ್ಟಪ್ಪ ಸೇರಿದಂತೆ ಹಲವು ಮಹನೀಯರನ್ನು ನೆನೆಯಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.


 ರಾಜ್ಯದ ಸರ್ವಾಂಗೀಣ ಪ್ರಗತಿಗೆ ಬುನಾದಿ ಹಾಕಿದ ದಿವಂಗತ ಡಿ.ದೇವರಾಜ ಅರಸು ರವರು 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು. ಕರ್ನಾಟಕವೆಂಬುದು ಕೇವಲ ಒಂದು ಭೂ ಪ್ರದೇಶಕ್ಕಷ್ಟೇ ಸೀಮಿತವಾಗಿಲ್ಲ. ಕರ್ನಾಟಕವೆಂದರೆ ಒಂದು ಸಂಸ್ಕೃತಿ, ಒಂದು ಜನ ಸಮುದಾಯ, ಒಂದು ಜೀವನ ಪದ್ದತಿ ಎಂಬ ವಿಶಾಲಾರ್ಥ ಹೊಂದಿದೆ. ಇದೊಂದು ಪರಂಪರೆಯನ್ನು ಪ್ರತಿನಿಧಿಸುವ ಪ್ರಾಚೀನ ಪದವಾಗಿದೆ. ಕರ್ನಾಟಕದ ಇತಿಹಾಸ ಅಪಾರ ವಿಶಾಲವಾದುದು. ತನ್ನ ಭೌಗೋಳಿಕ ನೆಲೆ ಮತ್ತು ಶ್ರೀಮಂತ ಪರಂಪರೆಯಿಂದಾಗಿ ಭಾರತದ ರಾಜ್ಯಗಳಲ್ಲಿ ಹೆಮ್ಮೆಯ ಸ್ಥಾನವನ್ನು ಹೊಂದಿದೆ. ಈ ರಾಜ್ಯದ ಇತಿಹಾಸ ಶ್ರೀಮಂತ ಮತ್ತು ವೈವಿಧ್ಯವಾದುದು. ಬಹಳಷ್ಟು ರಾಜರ, ವೀರರ, ಕೊಡುಗೈದಾನಿಗಳ ವೀರ ಪರಂಪರೆಯನ್ನು ಹೊಂದಿದ ನಾಡು ಕನ್ನಡ ನಾಡು ಎಂದು ತಿಳಿಸಿದರು.


ರಾಮನಗರ ಜಿಲ್ಲೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ.  ರಾಮನಗರ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸಕ್ರಿಯವಾಗಿರುವುದು ಸಂತಸದ ಸಂಗತಿ.  ಹಾಗೆಯೇ ಕನ್ನಡ ನಾಡು, ನುಡಿ, ನೆಲ ಜಲದ ವಿಷಯಕ್ಕೆ ಧಕ್ಕೆ ಬಂದಾಗಲೆಲ್ಲಾ ಕನ್ನಡ ಪರ ಸಂಘಟನೆಗಳು ಬೆಂಬಲಕ್ಕೆ ನಿಲ್ಲುತ್ತಿರುವುದು ಸಹ ಖುಷಿಯ ವಿಚಾರ ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

 


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑