Tel: 7676775624 | Mail: info@yellowandred.in

Language: EN KAN

    Follow us :


ಮುಂಜಾಗ್ರತಾ ಕ್ರಮದೊಂದಿಗೆ ಶೃಂಗಾರಗೊಂಡ ಶಾಲೆಗಳು: ಶಿಸ್ತಿನಿಂದ ಹಾಜರಾದ ವಿದ್ಯಾರ್ಥಿಗಳು

Posted date: 02 Jan, 2021

Powered by:     Yellow and Red

ಮುಂಜಾಗ್ರತಾ ಕ್ರಮದೊಂದಿಗೆ ಶೃಂಗಾರಗೊಂಡ ಶಾಲೆಗಳು: ಶಿಸ್ತಿನಿಂದ ಹಾಜರಾದ ವಿದ್ಯಾರ್ಥಿಗಳು

ಚನ್ನಪಟ್ಟಣ:ಜ/01/21/ಶುಕ್ರವಾರ. ಕೋವಿಡ್-,19 ಭೀತಿಯ ನಡುವೆಯೂ ಇಂದಿನಿಂದ ಶಾಲಾ, ಕಾಲೇಜುಗಳು ಆರಂಭವಾಗಿದ್ದು ರಾಜ್ಯದಾದ್ಯಂತ ಮಕ್ಕಳು ಕೊರೊನಾ ವೈರಸ್ ದುಗುಡದೊಂದಿಗೆ ಶಾಲೆ, ಕಾಲೇಜುಗಳತ್ತ ಮುಖಮಾಡಿದ್ದಾರೆ. ಒಂಬತ್ತು ತಿಂಗಳಿಂದ ಸ್ಮಶಾನ ಮೌನಕ್ಕೆ ಜಾರಿದ್ದ ಶಾಲೆಗಳ ಆವರಣಗಳಲ್ಲಿ ಇಂದು ಮಕ್ಕಳ ಚಿಲಿಪಿಲಿ ನಾದ ಮೇಳೈಸಿದೆ.

ಇಂದಿನಿಂದ ಪ್ರಾರಂಭವಾಗಿರುವ ಶಾಲೆಗಳಿಗೆ ಮಕ್ಕಳನ್ನು ಸ್ವಾಗತಿಸಲು ಖಾಸಗಿ ಹಾಗೂ ಸರ್ಕಾರಿ ಶಾಲೆಗಳು ಸಜ್ಜಾಗಿದ್ದವು. ಮಕ್ಕಳು ಮಾಸ್ಕ್ ಧರಿಸಿ ಹಾಜರಾದರು. ಇಂದು ಶೇಕಡಾ ಹತ್ತರಷ್ಟು ಮಕ್ಕಳು ಮಾತ್ರ ಶಾಲೆಗೆ ಬಂದಿದ್ದಾರೆ. ತರಗತಿಯಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಶಾಲೆ ಪ್ರವೇಶ ದ್ವಾರದಲ್ಲಿ ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಒಳಕ್ಕೆ ಬಿಡಲಾಯಿತು.


ಶಾಲೆಗೆ ಹಾಜರಾಗದ ಮಕ್ಕಳ ಮನೆಮನೆಗೆ ತೆರಳಿ ಮಕ್ಕಳನ್ನು ಕಳುಹಿಸುವಂತೆ ಕೋರುತ್ತಿರುವ ದೃಶ್ಯ ಲಾಳಾಘಟ್ಟ, ತಿಮ್ಮಸಂದ್ರ ಮತ್ತು ತಗಚಗೆರೆ ಶಾಲೆಯ ಶಿಕ್ಷಕರಿಂದ ನಡೆಯಿತು.

ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ಮನವಿ ಮೇರೆಗೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಭೇಟಿ ನೀಡಿ ಕೋವಿಡ್ ಟೆಸ್ಟ್ ನಡೆಸುತ್ತಿದ್ದಾರೆ. ಕೆಲವು ಪೋಷಕರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳಿಗೆ ಟೆಸ್ಟ್ ಮಾಡಿಸುತ್ತಿದ್ದಾರೆ. ಬಾಲು ಶಾಲೆಯಲ್ಲಿ ಮೊದಲನೇ ದಿನವೇ ಎಂಭತ್ತು ಮಕ್ಕಳು ಹಾಜರಾಗಿದ್ದಾರೆ.


ಇಂದು ಮೊದಲನೇ ದಿನವಾದ್ದರಿಂದ ಕಡಿಮೆ ಮಕ್ಕಳು ಬಂದಿದ್ದಾರೆ. ನಾಳೆಯಿಂದ ಹೆಚ್ಚು ಮಕ್ಕಳು ಬರುವ ಸಾಧ್ಯತೆ ಇದೆ. ಮಕ್ಕಳಿಗೆ ಯಾವುದೇ ತೊಂದರೆಗಳಾಗದಂತೆ ಎಲ್ಲಾ ಶಾಲೆಗಳಲ್ಲೂ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು ಪತ್ರಿಕೆಗೆ ಮಾಹಿತಿ ನೀಡಿದರು.


ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಎಲ್ಲಾ ಶಾಲೆಗಳು ತೆರೆದಿದ್ದು, ಅಕ್ಷಯ ಪಬ್ಲಿಕ್ ಸ್ಕೂಲ್ ಮಾತ್ರ ತೆರೆದಿಲ್ಲ. ಸದ್ಯ ಅವರು ಆನ್ಲೈನ್ ಪಾಠ ಮಾಡುತ್ತಿರುವುದಾಗಿ ಹೇಳಿಕೆ ನೀಡಿರುವುದಾಗಿ ಬಿಇಓ ತಿಳಿಸಿದರು.


ಪರಿಸ್ಥಿತಿಯನ್ನು ನೋಡಿ ಕೊಂಡು ನಾಳೆಯಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸೂಚನೆ ಇದೆ. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಆಸಕ್ತಿ ಪೋಷಕರಲ್ಲಿಯೂ ಇದೆ ಎಂದು ಗೊತ್ತಾಗಿದೆ.


ಶಿಕ್ಷಣ ಇಲಾಖೆ ಈಗಾಗಲೇ ಹಲವು ಸುತ್ತಿನ ಸಿದ್ಧತೆ ಗಳನ್ನು ಮಾಡಿಕೊಂಡಿದೆ.  ಮಕ್ಕಳಿಗೆ ಅಪಾಯವಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑