Tel: 7676775624 | Mail: info@yellowandred.in

Language: EN KAN

    Follow us :


ವಸ್ತುನಿಷ್ಠ ವರದಿಗಾರರಾಗಿ ಕೆಲಸ ನಿರ್ವಹಿಸಿ. ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್

Posted date: 07 Aug, 2021

Powered by:     Yellow and Red

ವಸ್ತುನಿಷ್ಠ ವರದಿಗಾರರಾಗಿ ಕೆಲಸ ನಿರ್ವಹಿಸಿ. ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್

ಪತ್ರಿಕೋದ್ಯಮ ಎಂಬುದು ದೇಶದ ನಾಲ್ಕನೆಯ ಅಂಗ. ರಾಜಕೀಯ ಮತ್ತು ಆಡಳಿತಗಾರರು ಎಚ್ಚೆತ್ತುಕೊಳ್ಳಲು, ತಿದ್ದಿಕೊಳ್ಳಲು ಮಾಧ್ಯಮ ರಂಗವೇ ಕಾರಣ ಎಂದು ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್ ತಿಳಿಸಿದರು.

ಅವರು ಇಂದು ರಾಮನಗರದ ಎಂ‌ಜಿ ರಸ್ತೆಯಲ್ಲಿರುವ ಕನ್ನಿಕಾ ಮಹಲ್ ನಲ್ಲಿ ರಾಮನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಮಾಧ್ಯಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.


ರಾಮನಗರದಲ್ಲಿ ತಹಶಿಲ್ದಾರರಿಗೆ ಸಂಬಂಧಿಸಿದ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬರುತ್ತದೆ. ನಾಲ್ಕು ದಿನಗಳ ನಂತರ ಅದು ಚಾನೆಲ್ ಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಪ್ರಸಾರವಾಗುತ್ತದೆ. ರಾಜ್ಯ ಮಟ್ಟದ ಸಂಘಟನೆಗಳು ಬಂದು ಪ್ರತಿಭಟನೆ ಕೂರುತ್ತವೆ. ತಹಶಿಲ್ದಾರ್ ವರ್ಗಾವಣೆ ಆಗುತ್ತದೆ ಎಂದು ನೆನಪಸಿಕೊಂಡರು. ಹಾಗಾಗಿ ಮಾಧ್ಯಮ ನಾಲ್ಕನೇ ಅಂಗ, ಸಮಾಜಿಕ ಜಾಲತಾಣ ಐದನೇ ಅಂಗ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ರಾಮನಗರ ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ರವರು ಮಾತನಾಡಿ, ಮಾಧ್ಯಮ ಸೇರಿದಂತೆ ದೇಶಕ್ಕೆ ನಾಲ್ಕು ಅಂಗಗಳಿವೆ. ಈ ನಾಲ್ಕು ಸ್ಥಂಭಗಳಲ್ಲಿ ಒಂದು ಸ್ಥಂಭ ಇಲ್ಲವಾದರೆ ಕಾಲು ಮುರಿದಂತಾಗುತ್ತದೆ. ಇದರಲ್ಲಿ ಈ ಮೂರು ಅಂಗಗಳು ತಪ್ಪು ಮಾಡಿದಾಗ ತಿದ್ದಿ ಹೇಳುವ ಅಂಗವೇ ಮಾಧ್ಯಮ. ಎಡವಿದಾಗ ಬುದ್ದಿ ಹೇಳಿ, ಒಳ್ಳೆಯ ಕೆಲಸ ಮಾಡಿದಾಗ ಪ್ರಶಂಸೆ ನೀಡಿ ಎಂದು ಕಿವಿಮಾತು ಹೇಳಿದರು.


ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಸ್ ಗಿರೀಶ್ ರವರು ಮಾತನಾಡಿ, ನಾವು ಚಿಕ್ಕವರಾಗಿದ್ದಾಗ ಇದ್ದದ್ದು ದೂರದರ್ಶನ ಒಂದೇ, ಕೆಲವೇ ಪತ್ರಿಕೆಗಳು ಮಾತ್ರ. ಆಗ ಸುದ್ದಿಗಳು ಮಾತ್ರ ಬರುತ್ತಿತ್ತು. ಒಂದು ಸಣ್ಣ ಸುದ್ದಿಯನ್ನು ವಿಸ್ತಾರವಾಗಿ ಎಳೆಯುತ್ತಿರಲಿಲ್ಲ. ಈಗ ಒಂದು ಸುದ್ದಿಯನ್ನು ಮೂರ್ನಾಲ್ಕು ದಿನಗಳ ಕಾಲ ಹತ್ತಾರು ಬಾರಿ ಹೇಳುತ್ತಾರೆ. ಇದರಿಂದಲೇ ಇತ್ತೀಚೆಗೆ ಮಾಧ್ಯಮವನ್ನು ಜನ ಕಡಿಮೆ ನೋಡುತ್ತಿದ್ದು, ಪತ್ರಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಪೋಲೀಸರಿಗಿಂತಲೂ ಹೆಚ್ಚಿನ ಜವಾಬ್ದಾರಿ ಪತ್ರಕರ್ತರಿಗಿದೆ ಎಂದರು.


ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ರವರು ಮಾತನಾಡಿ, ಪತ್ರಕರ್ತರು ನ್ಯಾಯಾಧೀಶರ ಸ್ಥಾನದಲ್ಲಿ ನಿಂತು ವರದಿ ಮಾಡಬೇಕು. ಕಾಟಚಾರಕ್ಕೆಂದು ಮಾಧ್ಯಮ ರಂಗಕ್ಕೆ ಬರಬಾರದು. ಅಂತಹವರು ಪತ್ರಿಕೆಯಿಂದ ಹೊರಗಿರುವುದು ಉತ್ತಮ ಎಂದರು.

ಪತ್ರಕರ್ತನನ್ನು ಓದುಗರು‌ ಗೌರವಿಂದ ಕಾಣಬೇಕು. ಅದನ್ನು ಆತ ತನ್ನ ಬರವಣಿಗೆ ಮತ್ತು ನಡವಳಿಕೆಯಿಂದ ಗುರುತಿಸಿಕೊಳ್ಳಬೇಕು ಎಂದು ಪತ್ರಕರ್ತರಿಗೆ ಎಚ್ಚರಿಕೆಯ ನುಡಿಗಳನ್ನಾಡಿದರು.


ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ರವರು ಮಾತನಾಡಿ, ಇಂದು ಘಟನೆ ನಡೆಯುವ ಮುನ್ನವೇ ಸುದ್ದಿಯಾಗುತ್ತಿರುವುದು ಸವಾಲಾಗಿದೆ. 24×7 ಸುದ್ದಿ ಕೊಡುತ್ತೇವೆ ಎಂಬುದು ಸುಳ್ಳು. 24 ಗಂಟೆ ಸುದ್ದಿ ಮಾಡುವುದು, ನೋಡುವುದು ಸುಲಭವಲ್ಲಾ. ಪತ್ರಿಕೆಗಳು ಯಾವುದೇ ಇರಲಿ, ಓದುಗ ಇಷ್ಟಪಟ್ಟ ಪತ್ರಿಕೆಯನ್ನು ಕೊಂಡು ಓದಲಿ. ಹಾಗೆಯೇ ಮುಖ್ಯ ಕೇಂದ್ರಗಳಿಂದ ಜಿಲ್ಲೆ ಮತ್ತು ತಾಲ್ಲೂಕಿಗೆ ಬರುವ ಪತ್ರಿಕೆಗಳನ್ನು ಎಲ್ಲಾ ಪತ್ರಿಕೆಯವರು ಒಂದೇ ವಾಹನದಲ್ಲಿ ಸಾಗಿಸುವಂತೆ ಹಾಗೂ ಒಂದೇ ಕಛೇರಿಯಲ್ಲಿ ಕುಳಿತು ಕೆಲಸ ಮಾಡುವಂತಾದರೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಜಿಲ್ಲಾ ಉಪ ಅರಣ್ಯಾಧಿಕಾರಿ ದೇವರಾಜು ಮಾತನಾಡಿ, ನಮ್ಮ ರಾಜ್ಯವು ಹುಲಿಗಳ ಸಂತತಿ ಮತ್ತು ಆನೆಗಳ ಸಂತತಿಯಲ್ಲಿ ದೇಶದಲ್ಲೇ ಒಂದನೇ ಸ್ಥಾನದಲ್ಲಿವೆ. ಕಾಡಿನಿಂದ‌ ನಾಡಿಗೆ ಬರುವ ಪ್ರಾಣಿಗಳ ಸಂಖ್ಯೆಯು ಹೆಚ್ಚಾಗಿದೆ. ಕಾಡಿನಲ್ಲಿ ಶೇ 90 ಕ್ಕೂ ಹೆಚ್ಚು ಪ್ರಾಣಿಗಳು ಇರುತ್ತವೆ. ಶೇ 5 ಕ್ಕೂ ಹೆಚ್ಚು ಪ್ರಾಣಿಗಳು ನಾಡಿಗೆ ಬರುತ್ತವೆ. ನಾಡಿಗೆ ಬಂದಂತಹ ಪ್ರಾಣಿಗಳಿಗೆ ಆಯಸ್ಸು ಕಡಿಮೆಯಾಗುತ್ತದೆ. ಇದರಿಂದಾಗಿ ರೈತರು ಮತ್ತು ಪ್ರಾಣಿಗಳಿಂದ ಅಧಿಕಾರಿಗಳು ನರಳುವಂತಾಗಿದೆ. ಇದಕ್ಕೆ ಸರ್ಕಾರ ಉತ್ತಮ ನೀತಿಯನ್ನು ರೂಪಿಸಬೇಕಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಕೋವಿಡ್ ನಿಂದ ಮೃತರಾದ ಕುಟುಂಬದವರಿಗೆ ಸಂಘದ ವತಿಯಿಂದ ಚೆಕ್ ಗಳನ್ನು ನೀಡಲಾಯಿತು. ಜಿಲ್ಲಾ ಆರೋಗ್ಯಾಧಿಕಾರಿ ನಿರಂಜನ್, ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಮು, ಪ್ರಧಾನ ಕಾರ್ಯದರ್ಶಿ ಉಮೇಶ್, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ, ವಾರ್ತಾಧಿಕಾರಿ ನಿರ್ಮಲಾ, ಸು ತ ರಾಮೇಗೌಡ, ಸೂರ್ಯಪ್ರಕಾಶ್, ಚಲುವರಾಜು ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑