Tel: 7676775624 | Mail: info@yellowandred.in

Language: EN KAN

    Follow us :


ನಗರದ ಇಎಸ್ಐ ಆಸ್ಪತ್ರೆಯ ಬಿಲ್ಡಿಂಗ್ ಮೇಲೆ ಬೆಳೆಯುತ್ತಿದೆ ಹುಲ್ಲುಗಾವಲು. ಗಬ್ಬು ನಾರುತ್ತಿದೆ ಹೊರಾಂಗಣ

Posted date: 21 Sep, 2021

Powered by:     Yellow and Red

ನಗರದ ಇಎಸ್ಐ ಆಸ್ಪತ್ರೆಯ ಬಿಲ್ಡಿಂಗ್ ಮೇಲೆ ಬೆಳೆಯುತ್ತಿದೆ ಹುಲ್ಲುಗಾವಲು. ಗಬ್ಬು ನಾರುತ್ತಿದೆ ಹೊರಾಂಗಣ

ಚನ್ನಪಟ್ಟಣ: ನಗರದ ಹೊರಭಾಗದಲ್ಲಿರುವ ವಿಮಾ ಚಿಕಿತ್ಸಾಲಯವು ಸರಿಯಾದ ಚಿಕಿತ್ಸೆ ಇಲ್ಲದೆ ಗೂರಲು ರೋಗದ ರೋಗಿಯಂತೆ ನರಳುತ್ತಿದೆ. ರೋಗಿಗೆ ಸ್ವಚ್ಚತೆಯೇ ಮೊದಲ ಚಿಕಿತ್ಸೆ ಎಂಬ ಮಾತನ್ನು ತಿರುಚಿರುವ ಅಧಿಕಾರಿಗಳು ಇಡೀ ಆಸ್ಪತ್ರೆಯನ್ನು ಹಾಳುಕೊಂಪೆಯಂತೆ ಮಾಡಿಟ್ಟಿದ್ದಾರೆ.


ಆಸ್ಪತ್ರೆಯ ಒಳಾಂಗಣ ಮಾತ್ರ ಸ್ವಲ್ಪ ಸ್ವಚ್ಚತೆಯಿಂದಿರುವುದು ಹೊರತುಪಡಿಸಿದರೆ, ಹೊರಾಂಗಣದಲ್ಲಿ ಕಾಲಿಡುವುದಕ್ಕೂ ಭಯ ಪಡುವಂತಹ ದುಸ್ಥಿತಿ ಇದೆ. ಎಲ್ಲರೂ ಓಡಾಡುವ ಮುಂಭಾಗದ ಬಾಗಿಲ ಬಳಿ ಬಿಟ್ಟರೆ, ಆಸ್ಪತ್ರೆಯ ಗೋಡೆಗಳಿಗೆ ಹೊಂದಿಕೊಂಡಂತೆಯೇ ಬೇಕುಬೇಡವಾದ ಗಿಡಮರಗಳು ಬೆಳೆದು ನಿಂತಿವೆ. ರೋಗಿಗಳಿರಲಿ ಸಿಬ್ಬಂದಿಗಳೇ ಹಾವುಗಳಿವೆ ಎಂಬ ಕಾರಣಕ್ಕೆ ತಿರುಗಿಯೂ ನೋಡುವುದಿಲ್ಲವಂತೆ !?.


ಆಸ್ಪತ್ರೆಯ ಆವರಣಕ್ಕಿಂತ ಹೆಚ್ಚಾಗಿ ಮುಂಭಾಗದ ಪೋರ್ಟಿಕೋದ ಮೇಲೆ ಹುಲ್ಲುಗಾವಲೇ ಬೆಳೆದು ನಿಂತಿದೆ. ಹಲವು ಸಜ್ಜಾಗಳ ಮೇಲೆ ಸಸ್ಯಗಳು ಬೆಳೆದು ಬೇರುಬಿಟ್ಟಿವೆ. ಮೆಟ್ಟಿಲುಗಳ ಮೇಲೆ ಆಲದ ಸಸಿಗಳು ಬೆಳೆದಿದ್ದು ಮರಗಳಾಗುವ ತವಕದಲ್ಲಿವೆ. ಇದರಿಂದ ಇಡೀ ಕಟ್ಟಡ ಶಿಥಿಲವಾಗುತ್ತಿದ್ದು, ಗುಣಮುಖರಾಗಲು ಆಸ್ಪತ್ರೆಗೆ ಬರುವ ರೋಗಿಗಳು ಭಯಭೀತರಾಗುವಂತಾಗಿದೆ. ವಿಮಾ ಆಸ್ಪತ್ರೆಯಲ್ಲಿ ಎಲ್ಲಾ ರೋಗಿಗಳಿಗೂ ಅವಕಾಶ ಇಲ್ಲದಿದ್ದು, ವಿಮಾ ಸೌಲಭ್ಯ ಹೊಂದಿರುವ ಸಣ್ಣಪುಟ್ಟ ಅದರಲ್ಲೂ ಗುತ್ತಿಗೆ ಕಾರ್ಮಿಕರು ಮತ್ತು ಗೊಂಬೆಗಳ ತಯಾರಿಕಾ ಘಟಕದಲ್ಲಿ ಕೆಲಸ ನಿರ್ವಹಿಸುವ ಬಡ ಕಾರ್ಮಿಕರೇ ಹೋಗುವುದರಿಂದ ದಿನನಿತ್ಯವೂ ಕೆಲವೇ ಕೆಲವು ರೋಗಿಗಳು ಮಾತ್ರ ಚಿಕಿತ್ಸೆ ಪಡೆಯುತ್ತಾರೆ.


ಬಹುಶಃ ಕಟ್ಟಡ ಉದ್ಘಾಟನೆಯಾದ ಸಂದರ್ಭದಲ್ಲಿ ಗೋಡೆಗಳಿಗೆ ಬಣ್ಣ ಬಳಿದಿದ್ದು ಇದುವರೆಗೂ ಗೋಡೆಗಳು ಸುಣ್ಣಬಣ್ಣವನ್ನೇ ಕಂಡಿಲ್ಲದೆ, ಮಾಸಲುಮಾಸಲಾಗಿವೆ. ಒಳಾಂಗಣದಲ್ಲಿ ಟೈಲ್ಸ್ ಗಳು ಹೊಡೆದುಹೋಗಿ, ಗೋಡೆ ವಿಕಾರವಾಗಿ ಕಾಣಿಸುತ್ತಿದ್ದು ಮಹಿಳೆಯರ ಟಾಯ್ಲೆಟ್ ಬಾಗಿಲು ಮತ್ತು ಸ್ವಚ್ಚತೆಯಲ್ಲಿ ಹಿಂದುಳಿದಿವೆ. ಒಳಗೆ ಬರುತ್ತಿದ್ದಂತೆಯೇ ಬಲಭಾಗದಲ್ಲಿ ಹಳೆಯ ಸಾಮಾನುಗಳನ್ನು ತುಂಬಿದ್ದು, ಕೊಳೆತು ನಾರುತ್ತಿವೆ. ಕೆಲ ವಸ್ತುಗಳು ತುಕ್ಕು ಹಿಡಿಯುತ್ತಿವೆ. ಪ್ರಯೋಗಾಲಯವು ಬೀಗ ಜಡಿದು ನಿಂತಿದೆ. ವಾರ್ಡ್ ಗಳಲ್ಲಿ ಸಂಬಂಧ ಪಡದವರು ಕುಳಿತು ಹೋಗುವುದು ಸಾಮಾನ್ಯವಾಗಿದೆ.


ಎಲ್ಲಾ ಇಲಾಖೆಯಂತೆ ಇಲ್ಲೂ ಸಹ ಸಿಬ್ಬಂದಿಗಳ ಕೊರತೆಯಿದ್ದು, ಒಂದು ಮೆಡಿಕಲ್ ಆಫೀಸರ್, ಒಂದು ನರ್ಸ್ ಮತ್ತು ಒಂದು ಔಷಧ ವಿತರಕರ ಕೊರತೆ ಇದೆ. ಈ ಆಸ್ಪತ್ರೆಯು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡಕ್ಕೂ ಸೇರುವುದರಿಂದ ಒಬ್ಬರ ಮೇಲೊಬ್ಬರು ಬೆರಳು ತೋರಿಸುತ್ತಿದ್ದು, ಒಟ್ಟಾರೆ ಇಡೀ ಆಸ್ಪತ್ರೆ ಹಾಳು ಕೊಂಪೆಯಾಗಲು ಬಿಡದೆ, ಬಡ ರೋಗಿಗಳಿಗೆ ಉನ್ನತ, ಉತ್ತಮ ವಾತಾವರಣದ ಜೊತೆಗೆ ಚಿಕಿತ್ಸೆ ದೊರೆಯುವಂತೆ ಮಾಡಬೇಕಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑