Tel: 7676775624 | Mail: info@yellowandred.in

Language: EN KAN

    Follow us :


ನನ್ನ ಮೌಢ್ಯ ವಿರೋಧಿ ಮದುವೆಗೆ ತಂದೆ ಬರಲಿಲ್ಲ. ಹತ್ತಾರು ಸಾವಿರ ಮಂದಿ ಬಂದಿದ್ದರು ಕಾಳೇಗೌಡ ನಾಗವಾರ

Posted date: 11 Jun, 2022

Powered by:     Yellow and Red

ನನ್ನ ಮೌಢ್ಯ ವಿರೋಧಿ ಮದುವೆಗೆ ತಂದೆ ಬರಲಿಲ್ಲ. ಹತ್ತಾರು ಸಾವಿರ ಮಂದಿ ಬಂದಿದ್ದರು ಕಾಳೇಗೌಡ ನಾಗವಾರ

ರಾಮನಗರ: ನನ್ನ ಸರಳ ಹಾಗೂ ಮೌಢ್ಯ ವಿರೋಧಿ ಮದುವೆಗೆ ನನ್ನ ತಂದೆಯೇ ಬರಲಿಲ್ಲಾ, ಆದರೆ ಹತ್ತಾರು ಸಾವಿರ ಮಂದಿ ಬಂದು ಸರಳ ವಿವಾಹ ಮತ್ತು ಮೌಢ್ಯ ವಿರೋಧಿ ಮದುವೆ ಎಂದರೇನು ! ಹೇಗೆ ಮಾಡುತ್ತಾರೆ ಎಂದು ತಿಳಿಯಲೇ ಬಂದವರೇನಕರಿದ್ದರು ಎಂದು ಖ್ಯಾತ ಸಾಹಿತಿ ಡಾ ಕಾಳೇಗೌಡ-ನಾಗವಾರ ರವರು ಐವತ್ತು ವರ್ಷಗಳ ಹಿಂದೆ ನಡೆದ ತಮ್ಮ ಮದುವೆಯ ನೆನಪು ಮಾಡಿಕೊಂಡರು.

ಅವರು ಶನಿವಾರ ಜಾನಪದ ಲೋಕದ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕೆಂಪಮ್ಮ-ಕಾಳೇಗೌಡ ನಾಗವಾರ ರ ಸರಳ ಮದುವೆಗೆ ಐವತ್ತು ವರ್ಷ ಎಂಬ ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಭಾಗವಹಿಸಿ ತಮ್ಮ ನೆನಪಿನ ಬುತ್ತಿಯನ್ನು ತೆರೆದಿಟ್ಟರು.


ವೈಭವೋಪೇತ ಮದುವೆಗಳಿಗೆ ಮಾಡುವ ಖರ್ಚುಗಳು ಕುಟುಂಬಕ್ಕೆ ಹೊರೆಯಾಗುತ್ತದೆ. ಯಾರೋ ಹಣವಂತರು ದುಬಾರಿ ಮದುವೆಗಳನ್ನು ಮಾಡಿದರು ಎಂಬ ಕಾರಣಕ್ಕೆ ಮಧ್ಯಮ ವರ್ಗದವರು, ಬಡವರು ಸಾಲ ಮಾಡಿ, ಆಸ್ತಿ ಮಾರಾಟ ಮಾಡಿ ವಿವಾಹ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.

ಕೇವಲ ಸರಳ ವಿವಾಹವಾಗುವುದು ಮಾತ್ರವಲ್ಲ, ಅಂತರ್ಜಾತಿ ವಿವಾಹವಾಗುವುದೂ ಇಂದಿನ ಪರಿಸ್ಥಿತಿಗೆ ಅತಿ ಮುಖ್ಯವಾಗಿದೆ. ಬಸವಣ್ಣನವರು ಅಂದೇ ಇಂತಹದ್ದೊಂದು ವಿವಾಹ ನೆರವೇರಿಸುವ ಮೂಲಕ ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ, ಅದರಂತೆ ಅಂತರ್ಜಾತಿ ವಿವಾಹಗಳಾದರೆ ಸಮಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ನನ್ನ ಮೇಲೆ ಬುದ್ದ, ಬಸವಣ್ಣ, ಅಂಬೇಡ್ಕರ್, ಕುವೆಂಪು, ಲೋಹಿಯಾ, ಶಿವರಾಮಕಾರಂತ, ಅಕ್ಕಮಹಾದೇವಿ, ನಂಜುಂಡಸ್ವಾಮಿ ಮತ್ತಿತರ ಚಿಂತನೆಗಳು ತುಂಬಾ ಪ್ರಭಾವ ಬೀರಿದವು. ಅಂಬೇಡ್ಕರ್ ಅವರು ಮಹಿಳೆಯರಿಗೆ ಸಮಾನ ಹಕ್ಕು ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ. ಲೋಹಿಯಾ ಅವರ ಚಿಂತನೆಗಳನ್ನು ಈಗಿನ ಪರಿಸ್ಥಿತಿಗೆ ಅವಶ್ಯಕವಾಗಿವೆ ಎಂದು ತಿಳಿಸಿದರು.


*ಇಬ್ಬರೂ ಸಮಾನರು ಅಗ್ರಹಾರ ಕೃಷ್ಣಮೂರ್ತಿ*

ಹೆಣ್ಣು ಗಂಡು ಇಬ್ಬರು ಸಮಾನರು, ಯಾರೂ ಯಾವುದರಲ್ಲೂ ಕಡಿಮೆ ಇಲ್ಲ. ಪರಸ್ಪರ ಪ್ರೀತಿ, ಹೊಂದಾಣಿಕೆ, ಆಗುಹೋಗು ಎಲ್ಲದರಲ್ಲೂ ಸಮಭಾಗಿಗಳಾಗಿ ಜೀವನ ನಡೆಸಿದರೆ ಮಾತ್ರ ಕೆಂಪಮ್ಮ-ಕಾಳೇಗೌಡ ನಾಗವಾರ ರಂತೆ ಹಸನ್ಮುಖಿಯಾಗಿ ಐವತ್ತಲ್ಲಾ ನೂರು ವರ್ಷಗಳ ಕಾಲ ಸಹಬಾಳ್ವೆ ನಡೆಸಬಹುದು. ಮಹಾತ್ಮ ಗಾಂಧೀಜಿಗೂ ಸಹ ಮೊದಮೊದಲು ಅಂತರ್ಜಾತಿ ವಿವಾಹ ಒಪ್ಪಿತವಿರಲಿಲ್ಲ. ಕ್ರಮೇಣ ಅದನ್ನೇ ಬೆಂಬಲಿಸುತ್ತಾ ಬಂದರು. ಮುಂದಿನ ಪೀಳಿಗೆಯೂ ಸಹ ಈ ನಿಟ್ಟಿನಲ್ಲಿ ಸರಳ ವಿವಾಹ ಮಾಡಿಕೊಳ್ಳುವ ಮೂಲಕ ಸಮಾಜಕ್ಕೆ ಮುನ್ನುಡಿ ಬರೆಯಬೇಕು ಎಂದರು.


*ಮದುವೆಗೆಂದೇ ಎಕಾನಮಿ ಸೃಷ್ಟಿ ರಾಜೇಂದ್ರಪ್ರಸಾದ್*

ಮದುವೆಗೆಂದೆ ಎಕಾನಮಿ ಸೃಷ್ಟಿಯಾಗುತ್ತಿದೆ. ಹಸಿರು ಬಣ್ಣದಲ್ಲಿ ಬರುತ್ತಿದ್ದ  ಸರಳ ವಿವಾಹದ ಆಹ್ವಾನ ಪತ್ರಿಕೆಗಳು ಬಹುತೇಕ ಕಡಿಮೆಯಾಗಿವೆ. ಅಕ್ಕಪಕ್ಕದ, ಸ್ನೇಹಸಂಬಂಧಗಳನ್ನು ನೋಡಿ ವೈದಿಕ ಮದುವೆಯಾಗುವವರೇ ಹೆಚ್ಚಾಗಿದ್ದಾರೆ. ಸರಳ ವಿವಾಹ ಮಾಡಿಕೊಂಡರೆ ನಮ್ಮ ಸ್ಟೇಟಸ್ ಕಡಿಮೆಯಾಗುತ್ತದೆ ಎಂಬ ಭಾವನೆ ಹೆಚ್ಚಾಗುತ್ತಿದೆ. ವಿಲಾಸಿ ಜೀವನಕ್ಕೆ ಹಲವಾರು ತೆರೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ಕೆಲವರು ವಚನ ಮಾಂಗಲ್ಯ, ಸಂವಿಧಾನದಾತ್ಮಕ ಮದುವೆ ಹಾಗೂ ಸಾಮೂಹಿಕ ಮದುವೆ ಎಂದು ಬದಲಾಯಿಸಿಿ ಕೊಂಡಿದ್ದಾರೆ ಎಂದು ಅಭಿಪ್ರಾಯ ಪಟ್ಟರು.


*ಕಾಲ ನಿರ್ಗುಣ ಅನುಸೂಯಮ್ಮ*

ಕಾಲ ನಿರ್ಗುಣವಾಗಿರುವುದರಿಂದ ಯಾವುದೇ ರೀತಿಯ ಕೆಟ್ಟ ಕಾಲ ಬರುವುದಿಲ್ಲ. ನಾವು ಮಾನಸಿಕವಾಗಿ ಸಿದ್ದವಾಗಿರಬೇಕು ಅಷ್ಟೇ. ನಾವಿಬ್ಬರು ಸಮಾನರು ಎಂಬ ಆಶಯವಿರಬೇಕು ಆಡಂಬರದ ಮದುವೆಯಿಂದ ದೂರವಿರಬೇಕು, ವರದಕ್ಷಿಣೆ ಪಿಡುಗಿನಿಂದ ಹೊರಬರಬೇಕು. ಮೂಢನಂಬಿಕೆ ಮತ್ತು ಪೌರೋಹಿತಶಾಹಿಯನ್ನು ದೂರವಿಡಬೇಕು. ಲಿಂಗ ತಾರತಮ್ಯ ಹೊಡೆದೋಡಿಸಬೇಕು. ಅಂತರ್ಜಾತಿ ವಿವಾಹಕ್ಕೆ ಒತ್ತು ನೀಡಿದರೆ ಮಾತ್ರ ಸರ್ವರೂ ಸಮಾನರಾಗಿರಲು ಸಾಧ್ಯವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರೈತಸಂಘ ಮುನ್ನುಡಿ ಬರೆದಿತ್ತು ಎಂದರು.*ಮಹನೀಯರೇ ಮಾರ್ಗದರ್ಶಿಗಳು ಜಗದೀಶ್ ಕೊಪ್ಪ*

ಕುವೆಂಪು, ಲೋಹಿಯಾ, ಲಂಕೇಶ್, ಬೆಸಗರಹಳ್ಳಿ ರಾಮಣ್ಣ, ಕೇಶವಮೂರ್ತಿ ಸೇರಿದಂತೆ ಹಲವಾರು ಮಂದಿ ನಮಗೆ ಪ್ರಭಾವಿತರಾಗಿದ್ದೆವು. ಅಂದಿನ ಕಾಲಕ್ಕೆ ಮರ್ಯಾದಾ ಹತ್ಯಾ ಹೆಚ್ಚಾಗಿದ್ದವು. ನನ್ನ ಕುಟುಂಬದಲ್ಲೂ ಸಹ ಮರ್ಯಾದಾ ಹತ್ಯೆ ಆಗಿತ್ತು. ಇಂದಿಗೂ ನಾನು ಯಾವುದೇ ದೊಡ್ಡ ಕಲ್ಯಾಣ ಮಂಟಪದಲ್ಲಿ ಆಗುವ ಮದುವೆ ಹೋಗುವುದಿಲ್ಲಾ. ನನ್ನ ಸರಳ ವಿವಾಹವನ್ನು ವಿರೋಧಿಸಿದ ಅನೇಕರು ನಂತರ ಒಪ್ಪಿ ತಮ್ಮ ಕುಟುಂಬದ ಅನೇಕ ಮದುವೆಗಳನ್ನು ಸರಳವಾಗಿ ನೆರವೇರಿಸಿದ್ದಾರೆ. ಆಯ್ಕೆ ಮಾಡಿಕೊಳ್ಳುವ ಸಂಗಾತಿ ಮತ್ತು ಬದುಕು ಉತ್ತಮವಾಗಿದ್ದರೆ ಅವರ ಬದುಕು ಸರಳ ಸುಂದರವಾಗಿರುತ್ತದೆ.


*ಬಹುತೇಕ ವಿಚಾರವಾದಿಗಳು ಕಳ್ಳರು ಮಂಗಳಾ ಅಪ್ಪಾಜಿಗೌಡ*

ಬಹುತೇಕ ವಿಚಾರವಾದಿಗಳು, ಮೌಢ್ಯ ವಿರೋಧಿಗಳು ಕಳ್ಳರು, ಆಷಾಢಭೂತಿಗಳು, ಹೇಳುವುದೊಂದು ಮಾಡುವುದೊಂದು, ವೇದಿಕೆ ಮೇಲೆ ಮಾತನಾಡುವವರು ಮನೆಯಲ್ಲಿ ಬೇಡವೆನ್ನುವರು. ಇಂತಹವರಿಂದಲೆ ವೈಚಾರಿಕತೆ ಎಂಬುದು ಢಾಳಾಗಿದೆ ಎಂದು ಮಂಗಳಾ ಅಪ್ಪಾಜಿಗೌಡ ಕೆಲವರ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದರು.

ನಾನು ಹರಿಜನ, ಅಪ್ಪಾಜಿಗೌಡ ಮಂಡ್ಯದ ಗೌಡರು ಮದುವೆಗೆ ಎಷ್ಟು ವಿರೋಧ ಇತ್ತೆಂದರೆ ಜಾತಿಯಿಂದನೇ ಬಹಿಷ್ಕಾರ ಹಾಕುವಷ್ಟು ವಿರೋಧವಿತ್ತು. ದೀಪಾವಳಿ ಅಮಾವಾಸ್ಯೆ ಯಂದು ಡಾ ಸಂಜೀವಯ್ಯರವರ ಮನೆಯಲ್ಲಿ ಸರಳವಾಗಿ ಮದುವೆ ಮಾಡಿಕೊಂಡೆವು. ಮದುವೆಯಾದ ನಂತರ ಜಾತಿ ವಿಷಯ ಕಟ್ಟಿಕೊಂಡು ಬಾಡಿಗೆ ಮನೆಯನ್ನು ಹುಡುಕಲು ಅಸಾಧ್ಯವಾಗಿತ್ತು. ನನ್ನ ಮಗಳ ಮದುವೆಗೂ ಅಪ್ಪ ಅಮ್ಮನ ಜಾತಿ ಅಡ್ಡ ಬಂದಿದ್ದು, ರೈತನಾಯಕಿ ಹಾಗೂ ವಿಚಾರ ತುಂಬಿಕೊಂಡಂತಹ ಹಲವಾರು ಖಳನಾಯಕರು ಸಹ ನಮ್ಮಲ್ಲಿರುವುದು ನನ್ನ ಮಗಳ ವಿಷಯದಲ್ಲಿ ವೇದ್ಯವಾಯಿತು.


*ಪ್ರೀತಿ ಮತ್ತು ಸತ್ಯ ಇರಬೇಕು ಕೇಶವರೆಡ್ಡಿ ಹಂದ್ರಾಳ*

ಸರಳ ವಿವಾಹಗಳಲ್ಲಿ ಪ್ರೀತಿ ಮತ್ತು ಸತ್ಯ ಇರಬೇಕು. ಸಂಪ್ರದಾಯ ಮದುವೆಗಳಲ್ಲಿ ಆಡಂಬರದ ಹಾಗೂ ಶ್ರೀಮಂತ ಜನರಿಗೆ ಒಂದು ರೀತಿ, ಬಡಬಗ್ಗರಿಗೆ ಒಂದು ರೀತಿಯಲ್ಲಿ ನೋಡುವ ಮನಸ್ಥಿತಿ ಇದೆ. ಪ್ರೀತಿಸಿ ಮದುವೆಯಾದವರೇ ಹೆಚ್ಚು ಸರಳವಾಗಿ ಮದುವೆ ಮಾಡಿಕೊಂಡಿದ್ದಾರೆ. ಅಂತರ್ಜಾತಿ ವಿವಾಹಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿ ಒಗ್ಗೂಡಿಸುವ ಮೂಲಕ ಜಾತಿ ಸಂಕೋಲೆಯಿಂದ ಹೊರಬರಬೇಕು.


*ಆಷಾಢ ಭೂತಿ ಮನಸ್ಥಿತಿಯವರಿದ್ದಾರೆ ಮಂಜುನಾಥ ಅದ್ದೆ*

ಹಲವಾರು ವಿಚಾರವಂತರೂ ಸಹ ಆಷಾಢ ಭೂತಿ ಮನಸ್ಥಿತಿಯ ಮಂದಿ ಹೆಚ್ಚಾಗಿದ್ದಾರೆ. ವೈದಿಕ ಮನಸ್ಥಿತಿಯಿಂದ ಹೊರಬರಲಾಗದೆ ತಿಣುಕಾಡುತ್ತಿದ್ದಾರೆ. ವೈದಿಕರು ಅಂದು ಅನಕ್ಷರಸ್ಥರನ್ನು ಬದಲಾಯಿಸಿದ್ದರು. ಇಂದು ವಿದ್ಯಾವಂತರನ್ನು ಸಹ ಅದೇ ಮನಸ್ಥಿತಿಯನ್ನು ಹುಟ್ಟು ಹಾಕುತ್ತಿದ್ದಾರೆ. ಇಂತಹ ಹೀನ ಮನಸ್ಥಿತಿಯನ್ನು ಉಳ್ಳವರಿಂದ ವಿಚಾರವಂತರೆನಿಸಿಕೊಂಡವರು ದೂರವಿರಬೇಕು.


*ವಿಚಾರ ಮಂಥನವಾಗಬೇಕು ಸಾದಿಕ್ ಪಾಷಾ* ನಾನು ವಿದ್ಯಾವಂತನಾಗಿದ್ದೆ ತಪ್ಪು ಎನಿಸುವಂತಾಗಿಬಿಟ್ಟಿತ್ತು. ನಾನು ನನ್ನ ಕುಟುಂಬ ಸಲಹಲು ಹಲವಾರು ಕಟ್ಟುಪಾಡುಗಳನ್ನು ಮೀರಿಬರಬೇಕಾಗಿತ್ತು. ಇಂತಹ ಸಂದರ್ಭಗಳಲ್ಲಿಯೂ ನನಗೆ ಡಾ ಕಾಳೇಗೌಡ ನಾಗವಾರ ರವರು ಸ್ಪೂರ್ತಿಯಾಗಿದ್ದರು.


*ಆರ್ಥಿಕತೆ ಕುಗ್ಗಿಸಿಬಿಡುತ್ತದೆ ರೇಣುಕಾರಾಧ್ಯ*

ಅಂತರ್ಜಾತಿ ಅದರಲ್ಲೂ ಪ್ರೇಮ ವಿವಾಹ ಆಗುವಂತಹವರು ಆರ್ಥಿಕವಾಗಿ ವೈಯುಕ್ತಿಕವಾಗಿ ಸದೃಢವಾಗಿರಬೇಕು. ಬೇರೆಯವರ ಹಂಗಿನಲ್ಲೂ ಬದುಕಲು ಆಗದು. ಇಂದು ಬಹುತೇಕ ಅನೇಕ ಅಂತರ್ಜಾತಿ ವಿವಾಹಗಳು ಮುರಿದು ಬಿದ್ದಿರುವುದು ಆರ್ಥಿಕ ಪರಿಸ್ಥಿತಿಯಿಂದಲೇ ಎನ್ನುವುದು ಸತ್ಯ.


*ಕಾಳೇಗೌಡರ ಮದುವೆ ಒಂದು ಮಹಾಕಾವ್ಯ ಅಗ್ನಿ ಶ್ರೀಧರ್*

ಕಾಳೇಗೌಡ ನಾಗವಾರ ರವರು ನನ್ನ ನೆಂಟರು, ಅವರು ಒಬ್ಬ ಕಥೆಗಾರ ಎಂಬುದು ಗೊತ್ತಾಗಿದ್ದೆ ನಾನು ಹತ್ತನೆ ತರಗತಿಯಲ್ಲಿದ್ದಾಗ. ಕಾಡು, ಗೆಳೆಯ ಎಂಬ ಅನೇಕ ಕಥೆ ಹಾಡು ಓದಿ ಬೆಳೆದವನು ನಾನು. ಅವರ ಮದುವೆ ಸರಳವಿವಾಹ ಅಲ್ಲಾ ಮೂಢನಂಬಿಕೆಯ ವಿರುದ್ಧದ ಸಮ್ಮೇಳನವೂ ಆಗಿತ್ತು. ಅವರ ಮದುವೆ ವೈಯುಕ್ತಿಕ ನೆಲೆಗಟ್ಟಿಗೆ ಸೀಮಿತಗೊಳಿಸದೆ ಹಲವಾರು ಮಂದಿಗೆ ತೆರೆದುಕೊಳ್ಳುವಂತೆ ಮಾಡಿದರು. ಈ ಹಿಂದೆಯೂ ಸಹ ಹಲವಾರು ಸಾಹಿತಿಗಳು, ಸಮಾಜವಾದಿ ನಾಯಕರು ಅಂತರ್ಜಾತಿ ಮತ್ತು ಸರಳ ವಿವಾಹ ಆಗಿದ್ದರೂ ಸಹ ಅವು ಜನರಿಗೆ ತಲುಪಿರಲಿಲ್ಲ. ಇವರ ಮದುವೆ ಸಾರ್ವಜನಿಕರಿಗೆ ತೆರೆದುಕೊಂಡಿತ್ತು. ಅವರ ಮದುವೆ ಒಂದು ಮಾಹಾಕಾವ್ಯ ಆಗಿತ್ತು.


ಸ್ವಾಮಿಆನಂದ್ ದಂಪತಿಗಳ ನೇತೃತ್ವದಲ್ಲಿ ಕೆಂಪಮ್ಮ-ಕಾಳೇಗೌಡ ರ ಸಂವಾದ ಕಾರ್ಯಕ್ರಮವೂ ನಡೆಯಿತು. ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಭಾಗಗಳಿಂದ ಸಾಹಿತಿಗಳು, ಪತ್ರಕರ್ತರು, ನಿವತ್ತ ಅಧಿಕಾರಿಗಳು, ರೈತಮುಖಂಡರು, ಅವರ ಹಳೆಯ ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಬಂಧುಗಳು ಆಗಮಿಸಿ ದಂಪತಿಗಳಿಗೆ ಶುಭಕೋರಿದರು. ಅವರ ಐವತ್ತು ವರ್ಷಗಳ ಹಿಂದೆ ಸರಳವಾಗಿ ನಡೆದ ಮದುವೆಯಂತೆಯೇ ಇಂದಿನ ಕಾರ್ಯಕ್ರಮವೂ ಸಹ ಅತ್ಯಂತ ಸರಳವಾಗಿ ನಡೆದದ್ದೂ ಸಹ ವಿಶೇಷವಾಗಿತ್ತು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑