Tel: 7676775624 | Mail: info@yellowandred.in

Language: EN KAN

    Follow us :


ಕಾಂಗ್ರೆಸ್ ನಾಯಕರ ನಡವಳಿಕೆಯಿಂದ ಬೇಸತ್ತು ಜೆಡಿಎಸ್ ಪಕ್ಷ ಸೇರಿದೆ ಪ್ರಸನ್ನ ಪಿ ಗೌಡ

Posted date: 29 Mar, 2023

Powered by:     Yellow and Red

ಕಾಂಗ್ರೆಸ್ ನಾಯಕರ ನಡವಳಿಕೆಯಿಂದ ಬೇಸತ್ತು ಜೆಡಿಎಸ್ ಪಕ್ಷ ಸೇರಿದೆ ಪ್ರಸನ್ನ ಪಿ ಗೌಡ

ಚನ್ನಪಟ್ಟಣ: ಕಾಂಗ್ರೆಸ್ ನ ನಾಯಕರಾದ ಡಿ ಕೆ ಸಹೋದರರ ಮೇಲೆ ನನಗೆ ವಿಶ್ವಾಸವಿತ್ತು, ಈಗಲೂ ಇದೆ. ಸ್ಥಳೀಯ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ನನ್ನ ವಿರುದ್ಧ ಸಹೋದರರಿಗೆ ಇಲ್ಲಸಲ್ಲದ ಚಾಡಿ ಹೇಳುವುದು, ಎಲ್ಲೋ ಇರುವ ಅವರು ಅದನ್ನು ನಂಬಿ ನನ್ನನ್ನು ದುರಹಂಕಾರಿ ಎಂಬಂತೆ ನೋಡುವುದು, ಎಷ್ಟು ಬಾರಿ ಕರೆ ಮಾಡಿದರೂ ರಿಸೀವ್ ಮಾಡದಿರುವುದು, ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಘೋಷಿಸದಿರುವುದು ಸೇರಿದಂತೆ  ಯಾವ ಹಂತದಲ್ಲೂ ಕಾಂಗ್ರೆಸ್‍ನಲ್ಲಿ ನನಗೆ ಸಹಕಾರ ನೀಡಲಿಲ್ಲ. ಇದರಿಂದ ಬೇಸತ್ತು ಪಕ್ಷ ತ್ಯಜಿಸಿ, ಕುಮಾರಸ್ವಾಮಿ ಯವರ ನಾಯಕತ್ವ ಒಪ್ಪಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದೇನೆ ಎಂದು ಇತ್ತೀಚಿಗಷ್ಟೇ ಜೆಡಿಎಸ್ ಪಕ್ಷ ಸೇರ್ಪಡೆಯಾದ ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗಿದ್ದ ಪ್ರಸನ್ನ ಪಿ.ಗೌಡ ಸ್ಪಷ್ಟಪಡಿಸಿದರು.


ಅವರು ನಗರದ ಹೊರವಲಯದಲ್ಲಿರುವ ಪೋಲಿಸ್ ತರಬೇತಿ ಕೇಂದ್ರ ದ ಬಳಿ ಇರುವ ತಮ್ಮ ಪಂಚಮಿ ಬ್ರೇವರೇಜಸ್ ಪ್ರೈವೇಟ್ ಲಿಮಿಟೆಡ್ ನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು,


ರಾಜ್ಯದಾದ್ಯಂತ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಘೋಷಣೆಯಾಗುವುದಿಲ್ಲ ಎಂಬ ಮುನ್ಸೂಚನೆ ಸಿಕ್ಕಿತ್ತು. ಇದರಿಂದ ಎಚ್ಚೆತ್ತ ನಾನು ತಕ್ಷಣ ಸಂಸದ ಡಿ.ಕೆ.ಸುರೇಶ್, ಕ್ಷೇತ್ರದ ಉಸ್ತುವಾರಿ ದುಂತೂರು ವಿಶ್ವನಾಥ್ ಹಾಗೂ ಜಿಲ್ಲಾಧ್ಯಕ್ಷ ಗಂಗಾಧರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಘೋಷಿಸಬೇಕೆಂದು ಮನವಿ ಮಾಡಿದೆ‌. ಹಾಗೊಂದು ವೇಳೆ ಚನ್ನಪಟ್ಟಣಕ್ಕೆ ಘೋಷಿಸದೆ ಇದ್ದಲ್ಲಿ ಕನಕಪುರ ಹೊರತುಪಡಿಸಿ, ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ತಡೆಹಿಡಿದು ಎರಡನೇ ಪಟ್ಟಿಯಲ್ಲಿ ಘೋಷಿಸಿ ಎಂದಾಗ ಸಂಸದರು ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಘೋಷಣೆಯಾಗುತ್ತದೆ ಎಂದು ಭರವಸೆ ನೀಡಿದರು. ಆದರೆ ಪಟ್ಟಿಯಲ್ಲಿ ನನ್ನ ಹೆಸರು ಘೋಷಣೆಯಾಗಲಿಲ್ಲ. ಆಶ್ಚರ್ಯ ಎಂದರೆ ಜಿಲ್ಲೆಯ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿತ್ತು. ಇದರಿಂದ ನನಗೆ ತೀವ್ರ ಬೇಸರದ ಜೊತೆಗೆ ಮುಖಭಂಗವಾಯಿತು ಎಂದರು.


ಈ ಹಿಂದಿನಿಂದಲೂ ಸಿ ಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಯಾವಾಗ ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಘೋಷಣೆಯಾಗಲಿಲ್ಲವೋ, ಅದರ ಬೆನ್ನಲ್ಲೆ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೆಸರು ಮತ್ತಷ್ಟು ಮುನ್ನೆಲೆಗೆ ಬಂತು. ಸಖೇದಾಶ್ಚರ್ಯವೆಂದರೆ ಡಿ.ಕೆ. ಚಾರಿಟಬಲ್ ಟ್ರಸ್ಟ್ ನವರು ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರು. ಇದೆಲ್ಲದರಿಂದ ಗೊಂದಲಗೊಂಡ ನಾನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್‍ಗೆ ಕರೆ ಮಾಡಿದರೆ ಅವರು ನನ್ನ ಕರೆಯನ್ನೇ ಸ್ವೀಕರಿಸಲಿಲ್ಲ ಎಂದು ಆರೋಪಿಸಿದರು.


ವರದೇಗೌಡರು ಜೆಡಿಎಸ್ ಪಕ್ಷ ಸಂಘಟಿಸಿದ ನಂತರ ಚನ್ನಪಟ್ಟಣದಲ್ಲಿ ನೆಲಕಚ್ಚಿದ್ದ ಕಾಂಗ್ರೆಸ್ ಪಕ್ಷವನ್ನು ಮೇಲೆತ್ತಲು ನಾನು ಶಕ್ತಿ ಮೀರಿ ಶ್ರಮಿಸಿದ್ದೇನೆ. ಭಾರತ್ ಜೋಡೋ ಯಾತ್ರೆ ಮಂಡ್ಯಕ್ಕೆ ಆಗಮಿಸಿದ್ದಾಗ ಇಲ್ಲಿನ ಕೆಲ ಮುಖಂಡರು ಅಪಸ್ವರ ಎತ್ತಿದ್ದಾಗ, ಎಲ್ಲರ ಮುಂದೆಯೇ ಡಿ.ಕೆ.ಶಿವಕುಮಾರ್ ಅನುಸರಿಸಿಕೊಂಡು ಹೋಗುವಂತೆ ನನಗೆ ತಿಳಿಸಿದರು. ಇದರಿಂದ ಬೇಸರಗೊಂಡು ಪಕ್ಷದಿಂದ ಕೆಲ ಕಾಲ ದೂರವಿದ್ದವನನ್ನು ಮನವೊಲಿಸಿ ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಸಹೋದರರು ಪ್ರೇರೇಪಿಸಿದರು. ಎಲ್ಲಾ ನೋವನ್ನು ನುಂಗಿಕೊಂಡು ಕಾಂಗ್ರೆಸ್ ನಡಿಗೆ ಹಳ್ಳಿ ಕಡೆಗೆ ಎಂಬ ಘೋಷ ವಾಕ್ಯದಂತೆ ಕಾರ್ಯಕ್ರಮ ರೂಪಿಸಿ, ನೊಂದವರಿಗೆಲ್ಲಾ ಕೈಲಾದ ಸಹಾಯ ಮಾಡುವ ಮೂಲಕ ಪಕ್ಷವನ್ನು ಸಂಘಟಿಸಿದೆ ಎಂದು ನಿಟ್ಟುಸಿರು ಬಿಟ್ಟರು.


*ಬೇಕಂತಲೇ ಏಳು ಮಂದಿಯಿಂದ ಅರ್ಜಿ:*

ನನ್ನನ್ನು ಪಕ್ಷಕ್ಕೆ ಕರೆತಂದಾಗಲೇ ಬಿ ಫಾರಂ ನೀಡುವ ಭರವಸೆ ನೀಡಿದ್ದರೂ ಸಹ ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿ ಸಲ್ಲಿಸುವ ವೇಳೆ ಇನ್ನು 6,7 ಮಂದಿ ಅರ್ಜಿ ಸಲ್ಲಿಸುವಂತೆ ಡಿ.ಕೆ.ಸಹೋದರರು ನೋಡಿಕೊಂಡರು. ಕ್ಷೇತ್ರದಲ್ಲಿ ಗೆಲ್ಲುವ ಉತ್ಸಾಹದೊಂದಿಗೆ ಬಂದ ನನಗೆ ವರಿಷ್ಠರು ಮತ್ತು ಸ್ಥಳೀಯ ಕೆಲ ನಾಯಕರು ಯಾವುದೇ ಸಹಕಾರ ನೀಡಲಿಲ್ಲ. ನನ್ನೊಬ್ಬನಿಗೆ ಸಹಕಾರ ನೀಡದೆ ಹಲವರಿಂದ ಅರ್ಜಿ ಹಾಕಿಸಿ, ನಮ್ಮವರೇ ನನ್ನನ್ನು ಸೋಲಿಸುತ್ತಾರೆ ಎಂಬ ಭೀತಿ ಉಂಟುಮಾಡಿದರು. ಪಕ್ಷದಲ್ಲಿ ಒಳ ಏಟಿನ ಸೂಚನೆ ಸಿಗತೊಡಗಿದ್ದು, ಇದೆಲ್ಲದರಿಂದ ಬೇಸತ್ತು ನಾನು ಪಕ್ಷ ತ್ಯಜಿಸಿದೆ ಎಂದು ತಿಳಿಸಿದರು.


ಕ್ಷೇತ್ರದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಪದಾಧಿಕಾರಿಗಳ ಆಯ್ಕೆ ಮಾಡಲು ಸೂಚನೆ ನೀಡಲಾಯಿತು. ಈ ಸಂಬಂಧ ನಾನು ಸೂಚಿಸಿದ ಅಭ್ಯರ್ಥಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ತಮಗೆ ಬೇಕಾದವರಿಗೆ ಹುದ್ದೆಗಳನ್ನು ನೀಡುವ ಕೆಲಸವನ್ನು ಜಿಲ್ಲಾಧ್ಯಕ್ಷರು ಮಾಡಿದರು. ಸಭೆ ಸಮಾರಂಭಗಳಲ್ಲಿ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರಿಗೆ ನನ್ನನ್ನು ಪರಿಚಯಿಸಬೇಕಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೇ ಕಾರ್ಯಕ್ರಮಗಳಿಗೆ ತಡವಾಗಿ ಬರುತ್ತಿದ್ದರು. ನನಗೆ ಸ್ನೇಹಿರಾಗಿದ್ದ ಅವರನ್ನು ವಿಶ್ವಾಸದಿಂದಲೇ ನನಗಿಂತ ಮುಂಚೆ ಬಂದು ನನ್ನನ್ನು ಪರಿಚಯಿಸುವ ಕೆಲಸ ಮಾಡಬೇಕಲ್ಲವೇ ಎಂದು ಕೇಳಿದ್ದೆ. ಅದನ್ನೇ ದೊಡ್ಡದು ಎಂಬಂತೆ ಬಿಂಬಿಸಿ, ಶಾಸಕನೇ ಆಗಿಲ್ಲಾ, ಈಗಲೇ ಆರ್ಡರ್ ಮಾಡುತ್ತಾರೆಂದು ಡಿ.ಕೆ.ಸಹೋದರರ ಬಳಿ ಬೇರೆ ಅರ್ಥದಲ್ಲಿ ಹೇಳಿದರು. ತಾಲೂಕು ಕಾಂಗ್ರೆಸ್‍ನಲ್ಲಿ ಬಣ ರಾಜಕೀಯವಿದ್ದು, ಇದನ್ನು ಡಿ.ಕೆ.ಸಹೋದರರಿಗೆ ಹೇಳಿದರೆ ಅವರು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.


ನನ್ನ ಆತ್ಮೀಯರು ಹಾಗೂ ಕಾಂಗ್ರೆಸ್ ಪಕ್ಷದ ಯಾರೊಂದಿಗೂ ಜೆಡಿಎಸ್ ಪಕ್ಷ ಸೇರುವ ಕುರಿತು  ಇದಕ್ಕೂ ಮೊದಲು ಯಾರೊಂದಿಗೂ ಚರ್ಚಿಸಿರಲಿಲ್ಲ. ಕಾಂಗ್ರೆಸ್‍ನಲ್ಲಿ ಆದ ಬೇಸರದಿಂದ ಏಕಾಏಕಿ ಪಕ್ಷ ಬಿಡುವ ತೀರ್ಮಾನ ಮಾಡಿದೆನೆ ಹೊರತು ಮೊದಲು ಈ ಕುರಿತು ಆಲೋಚಿಸಿರಲಿಲ್ಲ. ಜೆಡಿಎಸ್ ಪಕ್ಷದಿಂದ ಯಾವುದೇ ಹುದ್ದೆಯ ಆಸೆ ಇಟ್ಟುಕೊಂಡು ನಾನು ಜೆಡಿಎಸ್‍ಗೆ ಸೇರ್ಪಡೆಯಾಗಿಲ್ಲ. ಕುಮಾರಸ್ವಾಮಿಯವರನ್ನು ಮತ್ತೊಮ್ಮೆ ಸಿಎಂ ಮಾಡಬೇಕೆಂಬ ಹಂಬಲದಿಂದ, ಅವರ ನಾಯಕತ್ವ ಮೆಚ್ಚಿ ಜೆಡಿಎಸ್‍ಗೆ ಸೇರಿದ್ದೇನೆ. ಇನ್ನು ಸಾಯುವವರೆಗೆ ಯಾವುದೇ ಕಾರಣಕ್ಕೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಒಂದು ಬಾರಿ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡುವುದಿಲ್ಲ ಎಂದು ಆಶಾಭಾವನೆಯಿಂದ ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಜೆಡಿಎಸ್ ನಗರಾಧ್ಯಕ್ಷ ಅಜಯ್, ಮುಖಂಡರಾದ ಎಂ.ಸಿ.ಕರಿಯಪ್ಪ, ಬೈ ಶ್ರೀನಿವಾಸ್, ನಂದಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.


 ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑