ಪಂಪ್ ಸೆಟ್ ಬಾವಿ ನೀರಿಗಾಗಿ ತಾಯಿ, ಪುತ್ರ ಕೊಲೆ

ಪಾಂಡವಪುರ: ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸಲು ಪಂಪ್ ಸೆಟ್ ಬಾವಿ ನೀರಿನ ವಿಚಾರಕ್ಕೆ ಸಂಬಂಧಪಟ್ಟಂತೆ ತಾಯಿ ಹಾಗೂ ಪುತ್ರನನ್ನು ಸ್ವಂತ ಸಂಬಂಧಿ ಮೈದುನ ಕುಡುಗೋಲಿನಿಂದ ಕತ್ತು ಕೊಯ್ದು ಜೋಡಿ ಕೊಲೆ ಮಾಡಿರುವ ಘಟನೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ನಿವಾಸಿ ಶಾಂತಮ್ಮ (47) ಹಾಗೂ ಇವರ ಪುತ್ರ ಯಶ್ವಂತ್ (17) ಕೊಲೆಗೀಡಾದವರು. ಇದೇ ಕುಟುಂಬಕ್ಕೆ ಸೇರಿದ ಶಾಂತಮ್ಮ ಅವರ ಮೈದುನ ಸತೀಶ್ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ಕೊಲೆ ಆರೋಪಿ ಸತೀಶ್ ಗೆ ಶಾಂತಮ್ಮ ಸ್ವಂತ ಅಣ್ಣನ ಹೆಂಡತಿಯಾಗಿದ್ದು, ಯಶವಂತ್ ಅಣ್ಣನ ಮಗನಾಗಿದ್ದಾನೆ.
ಒಂದೇ ಕುಟುಂಬಕ್ಕೆ ಸೇರಿದ ಶಾಂತಮ್ಮ ಹಾಗೂ ಆರೋಪಿ ಸತೀಶ್ ಅವರಿಗೆ ಐದು ಎಕರೆ ಜಮೀನಿದ್ದು, ಒಂದೇ ಪಂಪ್ ಸೆಟ್ ಬಾವಿಯಿಂದ ನೀರು ಹಾಯಿಸಬೇಕಾಗಿತ್ತು.
ಜಮೀನಿಗೆ ನೀರು ಹಾಯಿಸುವ ವಿಚಾರವಾಗಿ ಕುಟುಂಬಸ್ಥರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಆದರೆ ಬುಧವಾರ ಮಧ್ಯಾಹ್ನ ಹೆಗ್ಗಡಹಳ್ಳಿ ಗ್ರಾಮದ ಸಮೀಪ ಜಮೀನಿನಲ್ಲಿ ಪಂಪ್ ಸೆಟ್ ನೀರಿನ ವಿಚಾರವಾಗಿ ಶಾಂತಮ್ಮ, ಇವರ ಪುತ್ರ ಯಶ್ವಂತ್ ಹಾಗೂ ಸತೀಶ್ ನಡುವೆ ಜಗಳ ನಡೆಯುತ್ತಿದ್ದಾಗ, ಸ್ಥಳದಲ್ಲಿದ್ದ ಸತೀಶ್ ಅವರು ಕೊಡಲಿಯಿಂದ ಶಾಂತಮ್ಮ ಹಾಗೂ ಯಶ್ವಂತ್ ಅವರಿಗೆ ಕತ್ತು ಹಾಗೂ ತಲೆಗೆ ತೀವ್ರವಾಗಿ ಹೊಡೆದ ಪರಿಣಾಮ ಸ್ಥಳದಲ್ಲೇ ತಾಯಿ, ಮಗ ಮರಣ ಹೊಂದಿದ್ದಾರೆ. ತಾಯಿಯನ್ನು ಪಂಪ್ ಸೆಟ್ ಮನೆಯಲ್ಲಿ ಹಾಗೂ ಪುತ್ರನನ್ನು ಮುಂಭಾಗದಲ್ಲಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ನಂತರ ಆರೋಪಿ ತನ್ನ ಹೆಂಡತಿಯ ಸಹೋದರನಿಗೆ ಕರೆ ಮಾಡಿ, ತನ್ನ ಪತ್ನಿ ಮತ್ತು ಮಕ್ಕಳನ್ನು ತವರಿಗೆ ಕಳುಹಿಸಿ, ಆತ ನೇರವಾಗಿ ಪೋಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಪೋಲೀಸರು ಗ್ರಾಮಕ್ಕೆ ಬಂದು ವಿಷಯ ತಿಳಿಸುವ ತನಕ ಕುಟುಂಬದವರಿಗಾಗಲಿ, ಗ್ರಾಮಸ್ಥರಿಗೆ ಕೊಲೆಯ ವಿಷಯವೇ ತಿಳಿದಿರಲಿಲ್ಲಾ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ವಿಷಯ ಹಬ್ಬುತ್ತಿದ್ದಂತೆ ತಾಲ್ಲೂಕು ಸೇರಿದಂತೆ ಮಂಡ್ಯ ಜಿಲ್ಲೆಯಾದ್ಯಂತ ಸಹಸ್ರಾರು ಮಂದಿ ನೆರೆದಿದ್ದು, ಜನರನ್ನು ನಿಯಂತ್ರಿಸಲು ಪೋಲೀಸರು ಸಿ ಆರ್ ಪಿ ಎಫ್ ತುಕಡಿಯನ್ನು ಕರೆಸಿಕೊಂಡು ನಿಯಂತ್ರಿಸಿದ್ದಾರೆ.
ವಿಷಯ ತಿಳಿದ ತಕ್ಷಣ ಪಾಂಡವಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಆರೋಪಿ ಸತೀಶ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಜೋಡಿ ಕೊಲೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು