ತಾಲ್ಲೂಕಿನಲ್ಲಿ ನಿಲ್ಲದ ಮಳೆ: ಗ್ರಾಮಗಳಲ್ಲಿ ಹರಿದ ನೀರಿನ ಹೊಳೆ

ಚನ್ನಪಟ್ಟಣ: ಕಳೆದ ಏಪ್ರಿಲ್ ತಿಂಗಳಿನಲ್ಲೇ ಮಳೆ ಆರಂಭವಾದರು ಜುಲೈ ಕೊನೆಯ ದಿನ ಮತ್ತು ಆಗಸ್ಟ್ ಮೊದಲ ವಾರದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಕೆಲ ದಿನಗಳಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯು ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಕೆಲವು ಕಡೆ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದ್ದರೆ, ಇನ್ನು ಕೆಲವು ಕಡೆ ಜಮೀನುಗಳಲ್ಲಿ ನೀರು ನಿಂತು ರೈತರ ಬೆಳೆಗಳನ್ನು ನಾಶಮಾಡಿದೆ.
ಕಳೆದ 20 ವರ್ಷಗಳಲ್ಲಿ ಎಂದೂ ಆಗದಂತ ದಾಖಲೆಯ ಮಳೆ ಈ ಬಾರಿ ಆಗಿದ್ದು, ಮುಂದಿನ ಐದು ವರ್ಷಗಳ ಕಾಲ ಏಪ್ರಿಲ್ ತಿಂಗಳಿಂದ ಆಗಸ್ಟ್ ವರೆಗೂ ನಿರಂತರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಹೇಳಿತ್ತು. ಈ ಮಳೆಯಿಂದಾಗಿ ಕೆಲವು ಕಡೆ ಕೆರೆಕಟ್ಟೆಗಳು ತುಂಬಿ ಕೋಡಿ ಒಡೆದ ಪರಿಣಾಮ ರೈತರ ಜಮೀನು ಮತ್ತು ಮನೆಗಳಿಗೆ ನೀರು ನುಗ್ಗಿದ್ದು, ನೆರೆ ಭೀತಿ ಎದುರಾಗಿದೆ.
*ಧುಮ್ಮುಕ್ಕಿ ಹರಿಯುತ್ತಿರುವ ಕಣ್ವ:*
ತಾಲೂಕಿನ ಜೀವನಾಡಿಯಾದ ಕಣ್ವ ನದಿ ಭಾಗಶಃ ಭರ್ತಿಯಾಗಿದ್ದು, ಕಳೆದ ಎರಡು ದಿನಗಳಿಂದ ಕಣ್ವದಿಂದ 3,500 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ. ಇದರೊಂದಿಗೆ ಕೆಲ ಗ್ರಾಮಗಳಲ್ಲಿ ಕೆರೆಗಳ ಕೋಡಿ ಒಡೆದ ಪರಿಣಾಮ ಜಮೀನುಗಳಿಗೆ ನೀರು ನುಗ್ಗಿದೆ. ಈಗಾಗಲೇ ಮೈಲನಾಯ್ಕನಹಳ್ಳಿ, ಅಬ್ಬೂರು, ತೊರೆ ಹೊಸೂರು ಸೇರಿದಂತೆ ಕೆಲ ಗ್ರಾಮಗಳಲ್ಲಿ ತಗ್ಗು ಪ್ರದೇಶಕ್ಕೆ ಮಳೆ ನೀರು ನುಗ್ಗಿದ್ದು, ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಕಣ್ವ ನದಿಯಿಂದ ಅಪಾರ ಪ್ರಮಾಣದ ನೀರನ್ನು ಹೊರಬಿಟ್ಟ ಪರಿಣಾಮ ನದಿಯ ನೀರು ತಾಲೂಕಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಅಬ್ಬೂರು ಗ್ರಾಮದ ಕುಂದಾಪುರ ವ್ಯಾಸರಾಜ ಮಠದ ಅಂಗಳಕ್ಕೆ ನುಗ್ಗಿದೆ. ಮಾಧ್ವ ಸಂಪ್ರದಾಯದ ಪ್ರಸಿದ್ದ ಯತಿಗಳಾದ ಬ್ರಹ್ಮಣ್ಯ ತೀರ್ಥರ ವೃಂದಾವನ ಈ ಮಠದಲ್ಲಿ ಇದ್ದು, ಮಾಧ್ವ ಸಂಪ್ರದಾಯದವರ ಪವಿತ್ರ ಯಾತ್ರಾಕ್ಷೇತ್ರವಾಗಿದೆ. ಶ್ರೀಮಠದ ಆವರಣಕ್ಕೆ ನೀರು ನುಗ್ಗಿದ್ದ ಪರಿಣಾಮ ಸದ್ಯಕ್ಕೆ ಮಠಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದ್ದು, ಮಠದ ಶ್ರೀಗಳು ಮತ್ತು ಅರ್ಚಕರು ದೈನಂದಿನ ಪೂಜಾ ಕಾರ್ಯವನ್ನು ನೆರವೇರಿಸುತ್ತಿದ್ದಾರೆ.
*ಮಾಕಳಿ ರಸ್ತೆ ಬಂದ್:*
ಅಬ್ಬೂರು ಗ್ರಾಮದ ವ್ಯಾಸರಾಜ ಮಠದ ಸಮೀಪ ರಸ್ತೆಯಲ್ಲಿ 2 ಅಡಿಗಳಷ್ಟು ನೀರು ನಿಂತಿರುವ ಪರಿಣಾಮ ಅಬ್ಬೂರು ಮೂಲಕ ಮಾಕಳಿ ಮತ್ತು ನಾಗವಾರಕ್ಕೆ ತೆರಳುವ ಸಂಪರ್ಕ ರಸ್ತೆ ಬಂದ್ ಆಗಿದ್ದು, ಈ ಭಾಗದ ಜನತೆ ಬದಲಿ ರಸ್ತೆಯಲ್ಲಿ ತಿರುಗಾಡುವಂತಾಗಿದೆ.
*ಮನೆಗಳಿಗೆ ನುಗ್ಗಿದ ನೀರು:*
ತಾಲೂಕಿನ ಕೋಲೂರು ಗಾಂಧಿ ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಗಿದೆ. ನೀರು ನುಗ್ಗಿದ ಪರಿಣಾಮ ಜನ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ತಾಲೂಕು ಆಡಳಿತ ಗಮನಹರಿಸಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ. ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
*ಅಧಿಕಾರಿಗಳ ಭೇಟಿ:*
ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಭಾರಿ ಮಳೇ ಸುರಿದಿದ್ದು, ಮಳೆಯಿಂದ ಸಮಸ್ಯೆ ಉಂಟಾದ ಗ್ರಾಮಗಳಿಗೆ ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್, ಶಾಸಕ ಹೆಚ್ ಡಿ ಕುಮಾರಸ್ವಾಮಿ, ತಹಸೀಲ್ದಾರ್ ಸುದರ್ಶನ್ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜಕಾಲುವೆಗಳು ಮತ್ತು ಕಣ್ವ ನದಿ ಪಾತ್ರದಲ್ಲಿ ನೀರಿನ ಹರಿವನ್ನು ವೀಕ್ಷಿಸಿದ ಅಧಿಕಾರಿಗಳು ಜನವಸತಿ ಪ್ರದೇಶಕ್ಕೆ ನೀರು ನುಗ್ಗುವುದನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ.
*ಮೈಲನಾಯ್ಕನಹಳ್ಳಿಯಲ್ಲಿ ನಿಲ್ಲದ ಪರಿಹಾರ*
*ಕಣ್ವ ನದಿಯಲ್ಲಿ ನೀರು ಹರಿದು ಹೋಗಲು ಸ್ಥಳಾವಕಾಶ ಇಲ್ಲದೆ ಹೆಚ್ಚುವರಿ ನೀರು ಮೈಲನಾಯ್ಕನಹಳ್ಳಿ ಗ್ರಾಮಕ್ಕೆ ನುಗ್ಗಿದ್ದು, ಮೈಲನಾಯ್ಕನಹಳ್ಳಿ ಗ್ರಾಮದ ಹಲವಾರು ಮನೆಗಳು ಜಲಾವೃತಗೊಂಡಿದೆ. ಇನ್ನು ಬೇವೂರು ಮಾರ್ಗದ ರಸ್ತೆಯಲ್ಲಿ ಸಹ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ.*
*ಕಣ್ವ ಜಲಾಶಯದಿಂದ ಸದ್ಯಕ್ಕೆ 3,500 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರೊಂದಿಗೆ ಬೇಬಿ ಸೈಫನ್ನಿಂದಲೂ 1,500 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಇಷ್ಟು ನೀರು ಹರಿಯುತ್ತಿರುವ ಕಾರಣ ನದಿಯಲ್ಲಿ ಜಾಗ ಇಲ್ಲದೆ ಗ್ರಾಮಕ್ಕೆ ನೀರು ನುಗ್ಗಿದೆ. ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರ ಬಿಟ್ಟರೆ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು