Tel: 7676775624 | Mail: info@yellowandred.in

Language: EN KAN

    Follow us :


ನಾನು ಸೋತಿದ್ದೇನೆ, ನನ್ನನ್ನು ಸೋಲಿಸಿದವರು ಪೂರ್ಣ ಸೋತು ಹೋಗಿದ್ದಾರೆ. ಸಿ ಪಿ ಯೋಗೇಶ್ವರ್

Posted date: 18 May, 2023

Powered by:     Yellow and Red

ನಾನು ಸೋತಿದ್ದೇನೆ, ನನ್ನನ್ನು ಸೋಲಿಸಿದವರು ಪೂರ್ಣ ಸೋತು ಹೋಗಿದ್ದಾರೆ. ಸಿ ಪಿ ಯೋಗೇಶ್ವರ್

ಚನ್ನಪಟ್ಟಣ : ನಾನು ಸೋತಿದ್ದೇನೆ, ನನ್ನನ್ನು ಸೋಲಿಸಿದವರೂ ಸಂಪೂರ್ಣವಾಗಿ ಸೋತು ಹೋಗಿದ್ದಾರೆ. ಚುನಾವಣೆಗಳು ಸಾಲುಸಾಲಾಗಿ ಬರುತ್ತವೆ. ಮುಂದಿನ ಸರ್ಕಾರದಲ್ಲೂ ಏನು ಬೇಕಾದರೂ ಘಟಿಸಬಹುದು. ಚುನಾವಣೆಯಲ್ಲಿ ಸೋತರೂ ಸಹ ನಿಮ್ಮ ಮುಂದೆ ಬಂದಿದ್ದೇನೆ. ನಾನು ಗೆಲ್ಲಲೇಬೇಕೆಂದು ಹಗಲಿರುಳು ಶ್ರಮದ ಹೋರಾಟ ರೂಪಿಸಿದವರೆಲ್ಲರಿಗೂ ನನ್ನ ನಮನಗಳನ್ನು ಸಲ್ಲಿಸಲು ತಮ್ಮ ಮುಂದೆ ಬಂದಿದ್ದೇನೆ ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ತಿಳಿಸಿದರು. ಅವರು ನಗರದ ಹೊರವಲಯದಲ್ಲಿ 2023ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಪರಾಭವಗೊಂಡ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ರವರಿಂದ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ವಿಶೇಷವಾಗಿ ಮತದಾರರಿಗೆ ಕೃತಜ್ಞತೆಯ ಸಭೆಯಲ್ಲಿ ಮಾತನಾಡಿದರು.


ಇದು ಕೊನೆಯ ಚುನಾವಣೆ ಅಲ್ಲಾ, ಐದು ಬಾರಿ ಶಾಸಕನಾಗಿದ್ದು, ಒಂದು ಲೋಕಸಭಾ ಚುನಾವಣೆ ಮೂರು ವಿಧಾನಸಭಾ ಚುನಾವಣೆ ಸೇರಿದಂತೆ ನಾಲ್ಕು ಬಾರಿ ಸೋತಿದ್ದೇನೆ. ಈ ಚುನಾವಣೆಯಲ್ಲಿ ಸೋತಿದ್ದರೂ ಸಹ ಅತಿ ಹೆಚ್ಚು ಮತಗಳನ್ನು ಪಡೆದಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಹಲವಾರು ಮಂದಿ ತಮ್ಮದೇ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹೋಗಬೇಕಾಗಿತ್ತು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಬೇಕಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಚುನಾವಣೆ ಮುಗಿದಿದೆ. ಕುಮಾರಸ್ವಾಮಿ ಈ ತಾಲ್ಲೂಕಿಗೆ ಬರಬಾರದಿತ್ತು. ನಾನು ಸೋತಿದ್ದೇನೆ. ಆದರೆ ಅವರು ಗೆದ್ದು ಸೋತಿದ್ದಾರೆ. ಜೊತೆಗೆ ತನ್ನ ಮಗನನ್ನು ಸೋಲಿಸಿದ್ದಾರೆ.


ತಾನೊಂದು ಬಗೆದರೆ ದೈವವೊಂದು ಬಗೆದೀತು ಎಂಬಂತೆ ಕುಮಾರಸ್ವಾಮಿ ಚುನಾವಣೆ ಮುಗಿದ ತಕ್ಷಣ ನಾನು ಕಿಂಗ್ ಮೇಕರ್ ಆಗುತ್ತೇನೆ. ಬಂದು ಕರೆದುಕೊಂಡು ಹೋಗುತ್ತಾರೆ ಎಂಬ ಅಹಂ ನಿಂದ ವಿದೇಶಕ್ಕೆ ಹಾರಿದ್ದರು. ಕರೆಯೋರು ಯಾರೂ ಬರದಿದ್ದರಿಂದ ಅವರೇ ಬರಬೇಕಾಯಿತು. ಅವರ ಕಿಂಗ್ ಮೇಕರ್ ಆಸೆ ಫಲಿಸಲಿಲ್ಲ. ಅದಾಗದೆ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಕೊಟ್ಟಿದ್ದಾರೆ. ಜನ ಓರ್ವ ಅಭ್ಯರ್ಥಿಯನ್ನು ಒಂದು ಬಾರಿ ಸೋಲಿಸುತ್ತಾರೆ. ಆದರೆ ಎರಡು ಬಾರಿ ಸೋಲಿಸುತ್ತಾರೆ ಎಂದರೆ ಅರಗಿಸಿಕೊಳ್ಳಲಾಗುತ್ತಿಲ್ಲಾ ಎಂದು ನೋವಿನಿಂದ ನುಡಿದರು. ನಮ್ಮ ಒಕ್ಕಲಿಗ ಜನಾಂಗದ ವ್ಯಕ್ತಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೆ ಎಂಬ ಅಂಧಾಭಿಮಾನದಿಂದ ಮತ ನೀಡಿದ್ದರಿಂದ ನಾನು ಸೋತಿದ್ದೇನೆ ಎಂದರು.


ನಾನು ಇನ್ನೂ ಮೂರು ವರ್ಷಗಳ ಹೆಚ್ಚಿನ ಕಾಲ ವಿಧಾನ ಪರಿಷತ್ ಸದಸ್ಯನಾಗಿರುತ್ತೇನೆ. ಈ ಕಾಂಗ್ರೆಸ್ ಸರ್ಕಾರ ತೂಕದ ಸರ್ಕಾರವಾಗಿದೆ‌. ಹಿರಿಯರು ಗೆದ್ದಿದ್ದಾರೆ. ಸರಿದೂಗಿಸಿಕೊಂಡು ಹೋಗುವುದು ಕಷ್ಟಸಾಧ್ಯ. ಮುಂದಿನ ಐದು ವರ್ಷಗಳ ಕಾಲ ಈ ಸರ್ಕಾರ ಏನಾಗುತ್ತದೋ ಎಂಬುದನ್ನು ಹೇಳಲು ಬರುವುದಿಲ್ಲ‌. ನಾನು ಮುಂದೆ ಏನಾದರೂ ಆಗಬಹುದು ಎಂಬ ಆಶಾಭಾವನೆ ವ್ಯಕ್ತಪಡಿಸುವ ಮೂಲಕ ಅಭಿಮಾನಿಗಳಿಗೆ ಹರ್ಷದಾಯಕದ ಮಾತನಾಡಿದರು.


ಈ ಹಿಂದೆಯೂ ಕುಮಾರಸ್ವಾಮಿ ಚನ್ನಪಟ್ಟಣ ಕ್ಕೆ ಬಂದಿಲ್ಲ. ಮುಂದೆಯೂ ಬರುವುದಿಲ್ಲ. ನಾನು ಈ ಮಣ್ಣಿನ ಮಗ. ನನ್ನ ಕರ್ಮಭೂಮಿ. ನಾನು ಇಲ್ಲಿಯೇ ಇರುತ್ತೇನೆ. ಯುಜಿಡಿ ಯಂತಹ ಹಲವಾರು ಕೆಲಸಗಳನ್ನು ನಾನೇ ಮಾಡಬೇಕು. ಅಭಿವೃದ್ಧಿ ಮಾಡಿಯೇ ತೀರುತ್ತೇನೆ. ನಾನು ಅಂದುಕೊಂಡಿದ್ದೇನೆ ನಿಮಗೆ ನೋವಾಗಿದೆ ಅಂತ. ನೀವು ಅಂದುಕೊಂಡಿದ್ದೀರಿ ನನಗೆ ನೋವಾಗಿದೆ ಎಂದು, ಹಾಗಾಗಿ ಈ ಮಹದೇಶ್ವರ ದೇವಾಲಯದಲ್ಲೇ  ನಮ್ಮ ನೋವನ್ನು ಮರೆತುಬಿಡೋಣಾ ಎಂದು ಮತದಾರರಿಗೆ ಕರೆ ನೀಡಿದರು.


ಈ ಬಾರಿ ನಾನು ಚನ್ನಪಟ್ಟಣ ಕ್ಷೇತ್ರಕ್ಕೆ ಬರುವುದಿಲ್ಲ ಎಂದು ಹೇಳಿಕೊಂಡಿದ್ದರು. ಡಿ ಕೆ ಶಿವಕುಮಾರ್ ರವರು ನೀವು ಚನ್ನಪಟ್ಟಣ ಉಳಿಸಿಕೊಳ್ಳಬೇಕು ಎಂದಿದ್ದರಿಂದ ಅವರು ಸ್ಪರ್ಧೆ ಮಾಡಿದರು. ನಿಮ್ಮ ವಿರುದ್ಧ ಸ್ಪರ್ಧೆ ಮಾಡಿದ್ದರಿಂದಲೇ ರಾಜ್ಯದಲ್ಲಿ ಸೋಲನ್ನನುಭವಿಸಿದರು ಎಂದು ಜಿಲ್ಲೆಯ ಜೆಡಿಎಸ್ ನಲ್ಲಿ ಪರಾಭವಗೊಂಡ ಮತ್ತೋರ್ವ ಶಾಸಕ ಕರೆ ಮಾಡಿ ತಿಳಿಸಿದರು ಎಂದು ಮಾಗಡಿ ಕ್ಷೇತ್ರದ ಎ ಮಂಜು ರವರ ಹೆಸರೇಳದೆ ಮಾಹಿತಿ ನೀಡಿದರು. ನನಗೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇಬ್ಬರೂ ಸಹ ನನಗೆ ಆತ್ಮೀಯ ಸ್ನೇಹಿತರಾಗಿದ್ದಾರೆ. ನನ್ನ ಕ್ಷೇತ್ರಕ್ಕೆ ಅವರು ಸಹಾಯ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಎಲ್ಲಾ ನೋವನ್ನು ಇಂದಿಗೆ ಮರೆತುಬಿಡೋಣಾ, ನನ್ನ ಸೋಲಿನಿಂದ ಹಲವಾರು ಮದ್ಯವ್ಯಸನಿಗಳಾಗಿದ್ದಾರೆ ದಯವಿಟ್ಟು ಕುಡಿತದ ಚಟದಿಂದ ಆಚೆ ಬನ್ನಿ. ನಾನು ಕ್ಷೇತ್ರ ಮರೆಯಲ್ಲಾ, ನಾವೆಲ್ಲರೂ ಒಗ್ಗೂಡಿ ಶೀಘ್ರವಾಗಿ ಮತದಾರ ಪ್ರಭುಗಳನ್ನು ಮನೆಮನೆಗೆ ಹೋಗಿ ಮಾತನಾಡಿಸೋಣಾ. ಮುಂದೆ ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಜೊತೆಗೆ ಲೋಕಸಭಾ ಚುನಾವಣೆ ಬರುತ್ತಿದೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣಾ. ಈ ಸೋಲಿನಿಂದ ಯಾರೂ ಕಂಗೆಡುವುದು ಬೇಡ ಎಂದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑