Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಜಿಲ್ಲೆ: ಸತತ ಮಳೆಯಿಂದ 178 ಮನೆಗಳಿಗೆ ಹಾನಿ, 1.14 ಕೋಟಿ ರೂ. ಪರಿಹಾರ ವಿತರಣೆ

Posted date: 09 Aug, 2022

Powered by:     Yellow and Red

ರಾಮನಗರ ಜಿಲ್ಲೆ: ಸತತ ಮಳೆಯಿಂದ 178 ಮನೆಗಳಿಗೆ ಹಾನಿ, 1.14 ಕೋಟಿ ರೂ. ಪರಿಹಾರ ವಿತರಣೆ

ರಾಮನಗರ: ಸತತ ಮಳೆಯಿಂದ ಜಿಲ್ಲೆಯಲ್ಲಿ 178 ಮನೆಗಳಿಗೆ ಹಾನಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 1.14 ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ. ಜೊತೆಗೆ ಜಿಲ್ಲೆಯ 70 ಸಂತ್ರಸ್ತರಿಗೆ 15 ಲಕ್ಷ ರೂ. ಒದಗಿಸಲಾಗಿದೆ ಎಂದು ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.


ಸೋಮವಾರವಿಡೀ ಜಿಲ್ಲೆಯ ಹಲವು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಬಳಿಕ ಅಧಿಕಾರಿಗಳ ಜತೆ ಇಲ್ಲಿ ಸಭೆ ನಡೆಸಿದರು.


ನೆರೆಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 16 ಕೋಟಿ ರೂ. ಮತ್ತು ತಹಸೀಲ್ದಾರರ ಖಾತೆಯಲ್ಲಿ 2.50 ಕೋಟಿ ರೂ. ಹಣ ಇದೆ ಎಂದು ಅವರು ಸ್ಪಷ್ಟಪಡಿಸಿದರು.


ನೆರೆ ಸಂಬಂಧದ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇವಕ್ಕೆಲ್ಲ ಕೇಂದ್ರ ಸರ್ಕಾರದ ಸಹಾಯವೂ ಇದೆ. ಸಂತ್ರಸ್ತರಿಗೆ ತ್ವರಿತವಾಗಿ ಸೂಕ್ತ ಪರಿಹಾರ ವಿತರಿಸಲಾಗುವುದು ಎಂದು ಅವರು ಹೇಳಿದರು.


*ಬಾಧಿತ ಗ್ರಾಮಗಳಿಗೆ ಭೇಟಿ*

ಇದಕ್ಕೂ ಮೊದಲು, ಬೆಳಗ್ಗೆ ಅವರು ಕುದೂರಿನಲ್ಲಿ ಕೆರೆ ನೀರು ನುಗ್ಗಿ ಮನೆ ಕಳೆದುಕೊಂಡಿರುವ 36 ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಮಾಗಡಿ ಶಾಸಕ ಮಂಜುನಾಥ್ ಇದ್ದರು.


ನಂತರ, ತುಂಬಿ ತುಳುಕುತ್ತಿರುವ ಮಾಯಸಂದ್ರ ಕೆರೆಗೆ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಅವರು ಮನೆ ಕಳೆದುಕೊಂಡಿರುವ ಯಲ್ಲಾಪುರ, ಮುತ್ತುಗದಹಳ್ಳಿ, ಕೆಂಚನಪಾಳ್ಯಗಳ ಒಟ್ಟು 7 ಮಂದಿಗೆ ಒಟ್ಟು 5 ಲಕ್ಷ ರೂ. ಪರಿಹಾರ ವಿತರಿಸಿದರು. ಈ ಪೈಕಿ ಮನೆ ವಿಪರೀತ ಹಾನಿಗೊಳಗಾಗಿರುವ

ಮೂವರಿಗೆ ತಲಾ 95 ಸಾವಿರ ರೂ. ನೀಡಲಾಯಿತು.


ಬಳಿಕ, ಈಡಿಗರ ಪಾಳ್ಯಕ್ಕೆ ಸಚಿವರು ತೆರಳಿ, ಉಕ್ಕಿ ಹರಿಯುತ್ತಿರುವ ಕಾಲುವೆಯನ್ನು ವೀಕ್ಷಿಸಿದರು. 


ಆಗ ಊರಿನ ಜನರು, ಸರಿಯಾದ ಸೇತುವೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಆದಷ್ಟು ಬೇಗ ಸೇತುವೆ ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದರು.


ಹುಳ್ಳೇನಹಳ್ಳಿಗೆ ಭೇಟಿ ಕೊಟ್ಟ ಅವರು, ಹಾನಿಗೀಡಾಗಿರುವ ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡ ವೀಕ್ಷಿಸಿ, ತುರ್ತು ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಇಲ್ಲಿಂದ ಸಂಕೀಘಟ್ಟಕ್ಕೆ ತೆರಳಿದ ಸಚಿವರು, ಕೆರೆ ಕೋಡಿಯನ್ನು ವೀಕ್ಷಿಸಿ, ಬಾಗಿನ ಸಮರ್ಪಿಸಿದರು.


ತಿಪ್ಪಸಂದ್ರ ಹೋಬಳಿಯಲ್ಲಿ ಅಪಾರ ಮಳೆಯಿಂದ ಹಾನಿಗೀಡಾಗಿರುವ ಮನೆಗಳಿಗೆ ತೆರಳಿ, ಆಗಿರುವ ನಷ್ಟದ ಚಿತ್ರಣವನ್ನು ಕಣ್ಣಾರೆ ಕಂಡರು.


*ಕೆರೆ ಕೋಡಿ ದುರಸ್ತಿಗೆ ಸೂಚನೆ*

ಮಾಡಬಾಳು ಹೋಬಳಿಯ ಅಂಚಿಕುಪ್ಪೆಗೆ ಭೇಟಿ ನೀಡಿದ ಸಚಿವರು ಮತ್ತು ಅಧಿಕಾರಿಗಳು, ಅಲ್ಲಿ ಕೆರೆಕೋಡಿ ಒಡೆದು, ಜಮೀನಿಗೆಲ್ಲ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ, ಆಗಿರುವ ನಷ್ಟವನ್ನು ಕಣ್ಣಾರೆ ಕಂಡರು.


ಅಲ್ಲೇ ಇದ್ದ ಅಧಿಕಾರಿಗಳಿಗೆ ಅವರು, ಕೂಡಲೇ ದುರಸ್ತಿಗೆ ಕ್ರಮ ವಹಿಸಬೇಕಲ್ಲದೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದನ್ನು ತಡೆಯಲು ಮುಂದಡಿ ಇಡಲು ನಿರ್ದೇಶಿಸಿದರು. ರಾಮನಗರ ತಾ.ನ ಮೇಳಹಳ್ಳಿಯಲ್ಲೂ ಅವರು ಸೇತುವೆ ರಿಪೇರಿಗೆ ಇದೇ ಸೂಚನೆಗಳನ್ನು ನೀಡಿದರು.


*ವಾರದಲ್ಲಿ ಟೆಂಡರ್ ಮುಗಿಸಿ*

ರಾಮನಗರ ತಾ. ಜೋಗಿದೊಡ್ಡಿ ಹಾದಿಯಲ್ಲಿ

ತಿಮ್ಮಸಂದ್ರ ಗೇಟ್ ಬಳಿ ಸೇತುವೆ ಕೊಚ್ಚಿ ಹೋಗಿರುವುದನ್ನು ಅವರು ಗಮನಿಸಿದರು. 


ಈ ಸೇತುವೆ ನಿರ್ಮಾಣಕ್ಕೆ ಇನ್ನು ಒಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ, ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಎಂಜಿನಿಯರುಗಳಿಗೆ ಹೇಳಿದರು.


*ನೇಪಾಳಿ ಕುಟುಂಬಕ್ಕೆ ಭೇಟಿ, ಪರಿಹಾರಕ್ಕೆ ವ್ಯವಸ್ಥೆ*

ಬೆಳಿಗ್ಗೆ ಮೊದಲಿಗೆ ಸೋಲೂರು ಹೋಬಳಿಯ ಕೂಡ್ಲೂರು ಗೇಟ್ ಗೆ ಭೇಟಿ ನೀಡಿದ ಅವರು, ಗೋಡೆ ಕುಸಿದು ಇಬ್ಬರು ಮಕ್ಕಳು ಬಲಿಯಾದ ನೇಪಾಳಿ ಕುಟುಂಬವನ್ನು ಭೇಟಿಯಾದರು. 


ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, 'ಈ ಮಕ್ಕಳು ನೇಪಾಳಿ ಕುಟುಂಬಕ್ಕೆ ಸೇರಿದವರಾದ್ದರಿಂದ ಪರಿಹಾರ ಕೊಡಲು ತಾಂತ್ರಿಕ ಅಡಚಣೆಗಳಿವೆ. ಆದರೂ ಪರಿಹಾರದ ಚೆಕ್ ಸಿದ್ಧಪಡಿಸಿ ಇಡಲಾಗಿದೆ. ಇರುವ ತೊಡಕುಗಳನ್ನು ನಿವಾರಿಸಿ 2-3 ದಿನಗಳಲ್ಲಿ ಚೆಕ್ ಕೊಡಲಾಗುವುದು' ಎಂದು ಭರವಸೆ ನೀಡಿದರು.


*ಟಿಪ್ಪು ನಗರಕ್ಕೆ ಭೇಟಿ*

ಮಾಗಡಿ ತಾ.ನಿಂದ ಜಿಲ್ಲಾ ಕೇಂದ್ರ ರಾಮನಗರಕ್ಕೆ ಬಂದ ಸಚಿವರು, ಸತತ ಮಳೆಯಿಂದ ಹಾನಿಗೊಳಗಾಗಿರುವ ಟಿಪ್ಪು ನಗರಕ್ಕೆ ಭೇಟಿ ನೀಡಿ, ಸಂತ್ರಸ್ತರಿಗೆ ಒಟ್ಟು 15 ಲಕ್ಷ ರೂ. ಪರಿಹಾರ ವಿತರಣೆ ಮಾಡಿದರು. ಜೊತೆಯಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಇದ್ದರು.


ಬಳಿಕ ಚನ್ನಪಟ್ಟಣ ತಾಲ್ಲೂಕಿಗೆ ತೆರಳಿ, ಕಣ್ವ ಜಲಾಶಯಕ್ಕೆ ಬಾಗಿನ ಕೊಟ್ಟರು. ಅಲ್ಲಿಂದ ಕೊಂಡಾಪುರ- ಬಾಣಗಹಳ್ಳಿಗೆ ತೆರಳಿದ ಸಚಿವರ ನೇತೃತ್ವದ ತಂಡವು ಅಲ್ಲಿ ಕಣ್ವ ನದಿಗೆ ಅಡ್ಡಲಾಗಿ ಕಟ್ಟಿರುವ ಬೃಹತ್ ಸೇತುವೆಗೆ ಆಗಿರುವ ಹಾನಿಯನ್ನು ಪರಿಶೀಲಿಸಿತು. ಇದಾದಮೇಲೆ, ಪ್ರವಾಹಪೀಡಿತ ಮೈಲನಾಯ್ಕನಹಳ್ಳಿಗೆ ಅವರು ತೆರಳಿ, ಸಂತ್ರಸ್ತರ ದುಃಖದುಮ್ಮಾನಗಳಿಗೆ ಕಿವಿಯಾದರು.


ಸಚಿವರ ಭೇಟಿಯ ಸಂದರ್ಭದಲ್ಲಿ ಜಿಲ್ಲೆಯ ಅಧಿಕಾರಿಗಳು ಜೊತೆಯಲ್ಲಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑