ನಗರಸಭೆ ಆವರಣದಲ್ಲಿ ಅನುಪಯುಕ್ತ ವಸ್ತುಗಳ ಹರಾಜು

ಚನ್ನಪಟ್ಟಣ: ಇಲ್ಲಿನ ನಗರಸಭೆ ಆವರಣದಲ್ಲಿ ಮಂಗಳವಾರ 2023-24 ನೇ ಸಾಲಿನ ನಿರುಪಯುಕ್ತ ವಸ್ತುಗಳ ಬಹಿರಂಗ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿದ್ದು, ಹಳೇ ಕಬ್ಬಿಣ ಹಾಗೂ ಗುಜರಿ ವಸ್ತುಗಳ ಖರೀದಿಗಾಗಿ ಬಿಡ್ಡರ್ ಗಳು ಮುಗಿಬಿದ್ದ ಪ್ರಸಂಗ ನಡೆಯಿತು.
ನಗರಸಭೆ ಆವರಣದಲ್ಲಿ ಆರೋಗ್ಯ ಶಾಖೆಯ ನಿರುಪಯುಕ್ತ ವಸ್ತುಗಳಾದ 14 ಆಟೋ ಟಿಪ್ಪರ್ ಹಾಗೂ ಡಂಪರ್ ಪೆಸ್ಲರ್ ವಾಹನ, 38 ವಿವಿಧ ಬಗೆಯ ವಿದ್ಯುತ್ ಉಪಕರಣಗಳು, 62 ಕ್ಕೂ ಹೆಚ್ಚು ಕಬ್ಬಿಣದ ವಸ್ತುಗಳ ಹರಾಜಿಗೆ ಟೆಂಡರ್ ಕರೆಯಲಾಗಿದ್ದು, ಗುಜರಿ ವಸ್ತುಗಳ ಖರೀದಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಕಷ್ಟು ಪೈಪೋಟಿ ಕಂಡುಬಂದಿತ್ತು.
ಕಚೇರಿ ಆರಂಭವಾಗುತ್ತಿದ್ದಂತೆ ಟೆಂಡರ್ ನಲ್ಲಿ ಭಾಗವಹಿಸಲು ಠೇವಣಿ ಕಟ್ಟಲು ಬಿಡ್ದಾರರು ಮುಗಿಬಿದ್ದರು. ತಾಲೂಕು ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಯ ಜನತೆಯೂ ಸಹ ಹರಾಜಿನಲ್ಲಿ ಭಾಗವಹಿಸಲು ಆಗಮಿಸಿದ್ದರು.
*178 ಮಂದಿ ಬಿಡ್ಡರ್ ಗಳು ಭಾಗಿ:*
ನಗರಸಭೆ ಆವರಣದಲ್ಲಿ ನಡೆದ ಪ್ರತ್ಯೇಕ ಮೂರು ಹಂತದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಕಷ್ಟು ಆಸಕ್ತಿ ಕಂಡುಬಂದಿತ್ತು. ಹರಾಜು ಪ್ರಕ್ರಿಯೆಯಲ್ಲಿ 178 ಬಿಡ್ಡರ್ ಗಳು ಭಾಗವಹಿಸಿದ್ದರು.
ಅಂತಿಮವಾಗಿ ಹಳೆಯ ಅನುಪಯುಕ್ತ ವಾಹನಗಳು ರೂ.4.77 ಲಕ್ಷ ರೂ., ಅನುಪಯುಕ್ತ ಬಲ್ಬ್ ಚೌಕ್ ಸೇರಿದಂತೆ ಇನ್ನಿತರ ಎಲೆಕ್ಟ್ರಿಕಲ್ ವಸ್ತುಗಳು 1.41 ಲಕ್ಷ ರೂ., ಹಾಗೂ ಅನುಪಯುಕ್ತ ಗುಜರಿ ವಸ್ತುಗಳು 3.16 ಲಕ್ಷಕ್ಕೆ ಬಿಕರಿಯಾದ್ದವು. ಒಟ್ಟಾರೆ ಎಲ್ಲಾ ವಸ್ತುಗಳು 9.34 ಲಕ್ಷ ರೂ.ಗಳಿಗೆ ಹರಾಜಾದವು.
ಮಂಗಳವಾರ ಹರಾಜಾದ ವಸ್ತುಗಳು ಹಲವಾರು ವರ್ಷಗಳಿಂದ ನಗರಸಭೆ ಆವರಣದಲ್ಲಿ ನಿರುಪಯುಕ್ತವಾಗಿ ಬಿದ್ದಿದ್ದು, ಈ ಗುಜರಿ ವಸ್ತುಗಳನ್ನು ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲಾಯಿತು. ಇದರೊಂದಿಗೆ, ನಗರಸಭೆಗೂ 9.34 ಆದಾಯ ಕ್ರೋಡೀಕರಣವಾಯಿತು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು