Tel: 7676775624 | Mail: info@yellowandred.in

Language: EN KAN

    Follow us :


೨೦೨೪ರ ಮೊದಲ ತಿಂಗಳಲ್ಲಿ ಕಾಡಾನೆಗಳ ಹಾವಳಿಗೆ ಪೂರ್ಣ ವಿರಾಮ ನೀಡುತ್ತೇವೆ, ರೈತರ ಸಭೆಯಲ್ಲಿ ಅರಣ್ಯಾಧಿಕಾರಿ ಭರವಸೆ

Posted date: 03 Aug, 2023

Powered by:     Yellow and Red

೨೦೨೪ರ ಮೊದಲ ತಿಂಗಳಲ್ಲಿ ಕಾಡಾನೆಗಳ ಹಾವಳಿಗೆ ಪೂರ್ಣ ವಿರಾಮ ನೀಡುತ್ತೇವೆ, ರೈತರ ಸಭೆಯಲ್ಲಿ ಅರಣ್ಯಾಧಿಕಾರಿ ಭರವಸೆ

ರಾಮನಗರ: ೨೦೨೪ ರ ಜನವರಿ ತಿಂಗಳೊಳಗೆ ಕಾಡಾನೆಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಬೆಳೆ ನಾಶ ಪ್ರಾಣಹಾನಿ ಮಾಡುವುದನ್ನು ತಪ್ಪಿಸಲು ಪಣತೊಟ್ಟಿದ್ದು, 4 ತಿಂಗಳೊಳಗೆ ಕಾಡಾನೆ ಹಾವಳಿಗೆ ಸಂಪೂರ್ಣ ವಿರಾಮ ಹಾಕುವುದಲ್ಲದೆ ರೈತರಿಗೆ ಈಗಾಗಲೇ ನಷ್ಟವಾಗಿರುವ ಬೆಳೆಗಳಿಗೆ ಪರಿಹಾರ ನೀಡಲಾಗುವುದು ಎಂದು

ಅರಣ್ಯಾಧಿಕಾರಿಗಳು-ರೈತರ ಸಭೆಯಲ್ಲಿ ಭರವಸೆ ನೀಡಿದರು. ಕಾಡಾನೆ ಹಾವಳಿಗೆ ಕಡಿವಾಣ ಹಾಕದ ಅಧಿಕಾರಿಗಳ ವಿರುದ್ಧ ಇದೇ ಸಂದರ್ಭದಲ್ಲಿ ರೈತರು ಆಕ್ರೋಶಗೊಂಡ ಘಟನೆಯೂ ಜರುಗಿತು.


ಕಾಡಾನೆ ದಾಳಿಗೆ ಇನ್ನು 4 ತಿಂಗಳೊಳಗೆ ಶಾಶ್ವತ ಪರಿಹಾರ ಕಲ್ಪಿಸುವ, ಕಾಡಾನೆ ಹಾವಳಿಗೆ ಸಂಬಂಧಿಸಿದಂತೆ ಮುಂದೆ ಯಾವುದೇ ಸಬೂಬು ಹೇಳದೆ ಪರಿಣಾಮಕಾರಿ ಕ್ರಮ ಕೈಗೊಳ್ಳುವ ನಿರ್ಧಾರವನ್ನು ಬುಧವಾರ ಜಿಲ್ಲಾ ಅರಣ್ಯ ಭವನದಲ್ಲಿ ನಡೆದ ರೈತರು ಮತ್ತು ಅರಣ್ಯಾಧಿಕಾರಿಗಳ ಸಭೆಯಲ್ಲಿ ಕೈಗೊಳ್ಳಲಾಯಿತು.

ಜಿಲ್ಲೆಯಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಾದೇಶಿಕ ಅರಣ್ಯ ಇಲಾಖೆ ಮತ್ತು ಕಾವೇರಿ ಮತ್ತು ಬನ್ನೇರುಘಟ್ಟ ವನ್ಯಜೀವಿ ವಲಯದ ಅಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಭೆಯಲ್ಲಿ, ಬಾಕಿ ಉಳಿದಿರುವ ವನ್ಯಜೀವಿ ವಲಯದಲ್ಲಿ ರೈಲ್ವೆ ಕಂಬಿ ಬಳಸಿ ಬ್ಯಾರಿಕೇಡ್ ನಿರ್ಮಿಸುವುದು, ಅಗತ್ಯವಿರುವ ಕಡೆ ಸೋಲಾರ್ ಫೆನ್ಸಿಂಗ್ ಅಳವಡಿಕೆ ಸೇರಿದಂತೆ ಕಾಡಾನೆಗಳು ನಾಡಿಗೆ ಬರುವುದನ್ನು ತಡೆಯಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು. ಈ ಎಲ್ಲಾ ಕಾರ್ಯಕ್ರಮಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಷರತ್ತು ವಿಧಿಸಿದ ರೈತರು, ಸಮಸ್ಯೆ ಬಗ್ಗೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕು ಎಂಬ ಷರತ್ತಿನೊಂದಿಗೆ ಸಭೆಯನ್ನು ಬರಖಾಸ್ತು ಗೊಳಿಸಿದರು.


*ಇದು ಅರಣ್ಯ- ಇಲಾಖೆ ರೈತರ ನಡುವಿನ ಸಂಘರ್ಷ:*

ಸಭೆಯಲ್ಲಿ ಮಾತನಾಡಿದ ರೈತರು, ಕಳೆದ 12 ವರ್ಷಗಳಿಂದ ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದೆ. ಕಾಡಾನೆ ಹಾವಳಿಯಂತು ಸಹಿಸಲಾಗದ ಮಟ್ಟಕ್ಕೆ ತಲುಪಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವುದು ಕಾಡುಪ್ರಾಣಿಗಳು ಮತ್ತು ಮಾನವ ಸಂಘರ್ಷವಲ್ಲ, ಅರಣ್ಯ ಇಲಾಖೆ ಮತ್ತು ರೈತರ ನಡುವಿನ ಸಂಘರ್ಷ. ಕಾಡಾನೆಗಳನ್ನು ವನ್ಯಜೀವಿ ವಲಯದಲ್ಲಿ ಇಟ್ಟುಕೊಳ್ಳಲಾಗದ ಅರಣ್ಯಾಧಿಕಾರಿಗಳ ವೈಫಲ್ಯದಿಂದ ಜಿಲ್ಲೆಯ ಸಾವಿರಾರು ಕುಟುಂಬಗಳ ಜೀವನ ಬೀದಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


*ಜೀವಿಸುವ ಹಕ್ಕಿಗೆ ದಕ್ಕೆಯಾಗಿದೆ:*

ಸಂವಿಧಾನದತ್ತವಾಗಿ ನಮಗೆ ಸಿಕ್ಕಿರುವ ಜೀವಿಸುವ ಹಕ್ಕುಗಳಿಗೆ ಕಾಡಾನೆ ಹಾವಳಿಯಿಂದ ದಕ್ಕೆಯಾಗಿದೆ. ಇದಕ್ಕೆ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳೇ ನೇರಕಾರಣ. ಕಾಡಾನೆಗಳನ್ನು ಬೇಕೆಂದೇ ನೀವು ಇತ್ತ ಅಟ್ಟತ್ತಿದ್ದೀರಾ, ಪದೇ ಪದೆ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬರುತ್ತಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ರೈತರು, ಕಾಡಾನೆ ದಾಳಿಗೆ ನೀಡುವ ಪರಿಹಾರವೂ ಏನೂ ಸಾಲುತ್ತಿಲ್ಲ. ರೈತರ ಸ್ವಾಭಿಮಾನವನ್ನು ನೀವು ಕೆಣಕುತ್ತಿದ್ದೀರಾ, ನಾವು  ಸಮಾಲೋಚನೆಗೂ ಸಿದ್ದ ಸಂಘರ್ಷಕ್ಕೂ ಸಿದ್ದರಿದ್ದೇವೆ ಎಂದು ಎಚ್ಚರಿಕೆ ನೀಡಿದರು.


*ಕಾರ್ಯಪಡೆ ಏನು ಮಾಡುತ್ತಿದೆ:*

ಜಿಲ್ಲೆಯಲ್ಲಿ ರಚನೆ ಮಾಡಿರುವ ಆನೆ ಕಾರ್ಯಪಡೆ ಏನು ಮಾಡುತ್ತಿದೆ. ಅವರು ಎಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಯಪಡೆ ರಚನೆಯಾದ ಬಳಿಕವೂ ಜಿಲ್ಲೆಯಲ್ಲಿ ಯಾಕಿಷ್ಟು ಸಮಸ್ಯೆ ಎದುರಾಗಿದೆ ಎಂದು ಪ್ರಶ್ನಿಸಿದ ರೈತರು, ಆನೆ ಓಡಿಸಿ ನಾವು ಬದುಕಲು ಅವಕಾಶ ಮಾಡಿಕೊಡಿ. ಇಲ್ಲವಾದಲ್ಲಿ ನಾವು ಅರಣ್ಯ ಇಲಾಖೆ ಮುಂದೆ ನೇಣುಹಾಕಿಕೊಳ್ಳ ಬೇಕಾಗುತ್ತದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ತಿಂಗಳ ಹಿಂದೆ ರೈತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರೂ ಸಹ ಯಾಕೆ ಪರಿಹಾರ ಕಂಡು ಕೊಂಡಿಲ್ಲ. ತಿಂಗಳ ಹಿಂದೆ ರಾಜ್ಯಮಟ್ಟದ ಅಧಿಕಾರಿಗಳು ಬಂದಾಗಲೇ ಪರಿಹಾರ ಸಿಕ್ಕಿಲ್ಲ.  ಕಣ್ಣೊರೆಸುವ ಸಭೆ ನಮಗೆ ಬೇಕಿಲ್ಲ. ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಸಭೆ ನಡೆಸಿ ಈ ಸಭೆ ರೈತರಿಗೆ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು.


*ಸದ್ಯದಲ್ಲೇ ಸಮಸ್ಯೆಗೆ ಪರಿಹಾರ:*

 ಸಭೆಯಲ್ಲಿ ಮಾತನಾಡಿದ  ಅರಣ್ಯ ಇಲಾಖೆ ಅಧಿಕಾರಿಗಳು ಕೆಲವೆಡೆ ಬ್ಯಾರಿಕೇಡ್ ಅಳವಡಿಕೆಯಾದ ಜಾಗಗಳಿಂದ ಕಾಡಾನೆಗಳು ವನ್ಯಜೀವಿ ವಲಯದಿಂದ ಹೊರಗೆ ಬರುತ್ತಿವೆ.  ಚಿಕ್ಕಮುದ್ರೆ ಗ್ರಾಮದ ಬಳಿ  ಒಂದು ಕಿಮೀ ನಷ್ಟು ಬ್ಯಾರಿಕೇಡ್ ಅಳವಡಿಕೆ ಬಾಕಿ ಉಳಿದಿದೆ. ಕೆಲ ಗೊಂದಲಗಳಿಂದಾಗಿ ಈ ಸಮಸ್ಯೆ ಹಾಗೇ ಉಳಿದಿದ್ದು ಇನ್ನು 45 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಬ್ಯಾರಿಕೇಡ್ ಅಳವಡಿಸಲಾಗುವುದು. ಈಗಾಗಲೇ ಹಲಗೂರು ಮತ್ತು ಸಂಗಮ ವಿಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಹ್ಯಾಂಗಿಂಗ್ ಸೋಲಾರ್ ಫೆನ್ಸಿಂಗ್‍ಗಳನ್ನು ಅಳವಡಿಸಲಾಗಿದೆ. ಸಂಗಮ ಭಾಗ 29 ಕಿಮೀ ಅರಣ್ಯ ಪ್ರದೇಶದ ಪೈಕಿ 11.50ಕಿಮೀ ಸೋಲಾರ್ ಫೆನ್ಸಿಂಗ್ ಕೆಲಸ ಮಾಡಲಾಗುತ್ತಿದೆ. 12 ಕಿಮೀ ಬ್ಯಾರಿಕೆಡ್ ನಡೆದಿದ್ದು, 4 ಕಿಮೀ ಕೆಲಸ ಬಾಕಿ ಉಳಿದಿದೆ. ಕೆಲಸ ನಡೆದಿರುವ ಪ್ರದೇಶದಲ್ಲಿ 4 ಕಡೆ ಗ್ಯಾಪ್ ಇದ್ದು ಅದನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಸೋರೆಕಾಯಿ ಹಳ್ಳದ ಬಳಿ ಬ್ಯಾರಿಕೇಡ್ ಗೇಟ್ ಅನ್ನು ಮುರಿದು ಕಾಡಾನೆಗಳು ಹೊರ ಬಂದಿದ್ದವು, ಇದೀಗ ಅದನ್ನು ಮುಚ್ಚಿಸಲಾಗಿದೆ. ಇಲ್ಲಿ ಸ್ಟೋನ್‍ವಾಲ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.


ಸಭೆಯಲ್ಲಿ  ಪ್ರಾದೇಶಿಕ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ, ಎಸಿಎಫ್ ಗಣೇಶ್, ಕಾವೇರಿ ವನ್ಯಜೀವಿ ವಲಯದ ಡಿಎಫ್‍ಓ ಸಂತೋಷ್‍ಕುಮಾರ್, ಎಸಿಎಫ್ ನಾಗೇಂದ್ರ ಪ್ರಸಾದ್,  ಬನ್ನೇರುಘಟ್ಟ ವನ್ಯಜೀವಿ ವಲಯದ ಎಸಿಎಫ್ ವಿಶಾಲ್, ಜಿಲ್ಲಾ ಪ್ರಾದೇಶಿಕ ಅರ್‍ಎಫ್‍ಓಗಳಾದ  ಕಿರಣ್‍ಕುಮಾರ್, ಆಶಾ, ದೇವರಾಜು, ರವಿ, ಪ್ರಶಾಂತ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


 ಈ ಸಂದರ್ಭದಲ್ಲಿ ಹಿರಿಯ ರೈತಹೋರಾಟಗಾರ ಸಿ.ಪುಟ್ಟಸ್ವಾಮಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‍ಗೌಡ, ರೈತ ಮುಖಂಡರಾದ ಧರಣೀಶ್ ರಾಂಪುರ, ಹೊಂಬಾಳೆಗೌಡ, ಬಿ.ವಿ.ಹಳ್ಳಿ ಪಾಪಯ್ಯ, ರಾಜಪ್ಪ ಅರಳಾಳುಸಂದ್ರ, ಮುಳ್ಳಹಳ್ಳಿ ಮಂಜುನಾಥ್, ಉಜ್ಜನಹಳ್ಳಿ ಮಲ್ಲಿಕಾರ್ಜುನ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


*ಕಾಡಾನೆ ಹಾವಳಿ ನಿಯಂತ್ರಿಸಲು ಸಾಧ್ಯವಾಗದೇ ಹೋದಲ್ಲಿ ನಮ್ಮ ಜಮೀನುಗಳನ್ನು ನಿಮ್ಮ ವಶಕ್ಕೆ ಪಡೆದು ನಮಗೆ  ವರ್ಷಕ್ಕಿಷ್ಟು ಪರಿಹಾರ ನೀಡಿ. ಕಾಡಾನೆ ಹಾವಳಿಯಿಂದ ನಾವು ಮನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಜಮೀನಿನಲ್ಲಿ ಬೆಳೆದ ಬೆಳೆಗಳು ಕಾಡಾನೆಗಳಿಂದ ನಾಶವಾಗುತ್ತಿವೆ. ನಾವು ಬದುಕಲು ಸಾಧ್ಯವಾಗುತ್ತಿಲ್ಲ. ಆನೆಗಳ ಹಾವಳಿಯನ್ನು ತಪ್ಪಿಸಲು ಸಾಧ್ಯವಾಗಲಿಲ್ಲ ಎಂದಾದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮ ಜಮೀನನನ್ನು ನಿಮ್ಮ ವಶಕ್ಕೆ ಪಡೆದುಕೊಂಡು ನಮಗೆ ಹಣ ನೀಡಿ. ಸಿ ಪುಟ್ಟಸ್ವಾಮಿ*


ಇಂದು ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ಹೆಚ್ಚಾಗಿರುವುದಕ್ಕೆ  ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳ ವೈಫಲ್ಯ ಕಾರಣ. ಜಿಲ್ಲೆಯ ರೈತರ ಪಾಲಿಗೆ ಅರಣ್ಯಭವನ ಕಣ್ಣುಕಿವಿ ಇಲ್ಲದಂತಾಗಿದೆ. ಹಿರಿಯ ಅರಣ್ಯಾಧಿಕಾರಿಗಳು ಆಗಮಿಸಿ ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕು. ಪರಿಹಾರದ ಪಾಲಿಸಿಗಳು ಬದಲಾಗಬೇಕು.

*-ಹಿರಿಯ ರೈತ ಮುಖಂಡರುಗಳು ಮತ್ತು ಹೋರಾಟಗಾರರ ಒಕ್ಕೊರಲ ಮನವಿ*


ಅರಣ್ಯ ಇಲಾಖೆ ವೈಫಲ್ಯದಿಂದ ಜನರ ಬದುಕು ಹಾಳಾಗಿದೆ. ರೈತರು ತಮ್ಮ ನೋವನ್ನು ಆಕ್ರೋಶದ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಅರಣ್ಯಾಧಿಕಾರಿಗಳು ಇದನ್ನು ಅರ್ಥಮಾಡಿಕೊಂಡು ನಮ್ಮ ಸಮಸ್ಯೆಗೆ ಸ್ಪಂದಿಸಬೇಕು. ರೈತರ ನೋವನ್ನು ಆಲಿಸಿರುವ ಜಿಲ್ಲಾ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮನವಿಮಾಡಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು.

*- ರಮೇಶ್‍ಗೌಡ, ರಾಜ್ಯಾಧ್ಯಕ್ಷ, ಜನಪರ ವೇದಿಕೆ*


ಎರಡು ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆಯನ್ನು ಕರೆಯಲಾಗಿದ್ದು, ಸಭೆಯಲ್ಲಿ ಸಂಗ್ರಹವಾಗಿರುವ ಅಭಿಪ್ರಾಯವನ್ನು ಆದರಿಸಿ ಸಮಸ್ಯೆಗ ಪರಿಹಾರ ಕಲ್ಪಿಸಲಾಗುವುದು. ಜಿಲ್ಲಾ ಅರಣ್ಯ ಇಲಾಖೆ ರೈತರ ಪರವಾಗಿದೆ.

*- ರಾಮಕೃಷ್ಣಪ್ಪ, ಡಿಎಫ್‍ಓ, ರಾಮನಗರ*ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑