ಹಣ ಕೊಟ್ಟರೂ ಸ್ಮಶಾನಕ್ಕೆ ಜಾಗ ಸಿಕ್ಕುತ್ತಿಲ್ಲಾ, ವಿದ್ಯುತ್ ಚಿತಾಗಾರ ಸದುಪಯೋಗಪಡಿಸಿಕೊಳ್ಳಿ, ಸಂಸದ ಡಿ ಕೆ ಸುರೇಶ್
![ಹಣ ಕೊಟ್ಟರೂ ಸ್ಮಶಾನಕ್ಕೆ ಜಾಗ ಸಿಕ್ಕುತ್ತಿಲ್ಲಾ, ವಿದ್ಯುತ್ ಚಿತಾಗಾರ ಸದುಪಯೋಗಪಡಿಸಿಕೊಳ್ಳಿ, ಸಂಸದ ಡಿ ಕೆ ಸುರೇಶ್ ಹಣ ಕೊಟ್ಟರೂ ಸ್ಮಶಾನಕ್ಕೆ ಜಾಗ ಸಿಕ್ಕುತ್ತಿಲ್ಲಾ, ವಿದ್ಯುತ್ ಚಿತಾಗಾರ ಸದುಪಯೋಗಪಡಿಸಿಕೊಳ್ಳಿ, ಸಂಸದ ಡಿ ಕೆ ಸುರೇಶ್](https://sanmitra.co.in//domains/sanmitra/images/3474_yellowandred_a.jpg)
ಚನ್ನಪಟ್ಟಣ: ನಗರ ಪ್ರದೇಶವಿರಲಿ, ಗ್ರಾಮೀಣ ಭಾಗದಲ್ಲೂ ಸ್ಮಶಾನಕ್ಕಾಗಿ ಹಣ ನೀಡಿದರೂ ಜಾಗ ಸಿಕ್ಕುತ್ತಿಲ್ಲ, ಅದಕ್ಕಾಗಿಯೇ ನನ್ನ ಲೋಕಸಭಾ ಕ್ಷೇತ್ರದ ಎಲ್ಲಾ ತಾಲ್ಲೂಕುಗಳಲ್ಲೂ ವಿದ್ಯುತ್ ಚಿತಾಗಾರ ಆರಂಭಿಸಲಾಗುತ್ತಿದೆ, ಇದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಂಸದ ಡಿ ಕೆ ಸುರೇಶ್ ಕರೆ ನೀಡಿದರು. ಅವರು ನಗರದ ರಾಮಮ್ಮನಕೆರೆ ಬಳಿಯ ಹಿಂದೂ ರುದ್ರಭೂಮಿಯಲ್ಲಿ ಸಂಸದರ ಅನುದಾನದಲ್ಲಿ ನಿರ್ಮಾಣಗೊಂಡಿರುವ ಆಧುನಿಕ ವಿದ್ಯುತ್ ಚಿತಾಗಾರವನ್ನು ಸಂಸದ ಡಿ.ಕೆ.ಸುರೇಶ್ ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಈ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಂಟು ಕ್ಷೇತ್ರಗಳಲ್ಲೂ ಆಧುನಿಕ ವಿದ್ಯುತ್ ಚಿತಾಗಾರ ನಿರ್ಮಿಬೇಕೆಂಬ ಉದ್ದೇಶದಿಂದ ಚನ್ನಪಟ್ಟಣ ತಾಲೂಕಿನಲ್ಲಿಯೂ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಮುಂದಾಗಿದ್ದು, ಇಂದು ಲೋಕಾರ್ಪಣೆಗೊಳಿಸಲಾಗಿದೆ. ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಸ್ಮಶಾನ ಜಾಗದ ಸಮಸ್ಯೆ ತಲೆದೋರಿದೆ. ಹಣ ನೀಡಿದರೂ ಸ್ಮಶಾನಕ್ಕೆ ಜಾಗ ಸಿಗದಂತ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸುವ ಪ್ರಯತ್ನ ಮಾಡಿದೆ. ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷ ಸಂಸದರ ಅನುದಾನ ಕಡಿತಗೊಂಡಿತ್ತು. ಇದರಿಂದ ಹಣಕಾಸಿನ ತೊಂದರೆಯಾಗಿ ಚಿತಾಗಾರ ನಿರ್ಮಾಣ ಕಾರ್ಯ ವಿಳಂಬವಾಯಿತು ಎಂದು ತಿಳಿಸಿದರು.
*ಸುಮಾರು ೩ ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ಆಧುನಿಕ ವಿದ್ಯುತ್ ಚಿತಾಗಾರವನ್ನು ನಿರ್ಮಿಸಲಾಗಿದೆ.*
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸ್ಮಶಾನ ಇಲ್ಲದವರು ಇಲ್ಲಿ ಬಂದು ಚಿತಾಗಾರದ ಉಪಯೋಗ ಪಡೆದುಕೊಳ್ಳಬೇಕು. ಎಲ್ಲ ಕಡೆ ಇಂಥ ಚಿತಾಗಾರ ನಿರ್ಮಾಣವಾದರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭಲ್ಲಿ ನಗರಸಭೆ ಆಯುಕ್ತ ಸಿ.ಪುಟ್ಟಸ್ವಾಮಿ, ಸದಸ್ಯರಾದ ವಾಸಿಲ್ ಅಲಿಖಾನ್, ಮತೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್, ಸುನೀಲ್, ರಾಜ್ಯ ಕುಕ್ಕುಟ ಮಂಡಳಿ ಅಧ್ಯಕ್ಷ ಡಿ.ಕೆ.ಕಾಂತರಾಜು, ಮುಖಂಡರಾದ ಚಂದ್ರಸಾಗರ, ಬೋರ್ವೆಲ್ ರಂಗನಾಥ್ ಮುಂತಾದವರು ಉಪಸ್ಥಿತರಿದ್ದರು.
*ಪಕ್ಷದ ಸಿದ್ಧಾಂತ ನಂಬಿ ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ: ಸುರೇಶ್*
ಪಕ್ಷದ ಸಂಘಟನೆ ಕುರಿತು ಕಾಂಗ್ರೆಸ್ ಸದಾ ಗಮನ ಹರಿಸುತ್ತದೆ. ನಮ್ಮ ಪಕ್ಷದ ತತ್ವ ಸಿದ್ಧಾಂತವನ್ನು ನಂಬಿ ಯಾರೇ ಬಂದರೂ ಸ್ವಾಗತಿಸುತ್ತೇವೆ, ಆದರೆ, ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಕಾರ್ಯ ಮಾಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಚುನಾವಣೆ ಬರುತ್ತದೆ ಹೋಗುತ್ತದೆ. ಆದರೆ ಪಕ್ಷ ಸಂಘಟನೆ ಕಾರ್ಯ ಎಂಬುದು ನಿರಂತರವಾಗಿ ನಡೆಯುತ್ತದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡಾ ಸಂಘಟನೆಗೆ ಒತ್ತು ನೀಡುತ್ತಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದೇವೆ. ಮುಂದೆ ಯಾರು ಬರುತ್ತಾರೋ ಕಾದು ನೋಡೋಣ. ಬರುವವರೆಗೆ ಸ್ವಾಗತ ಎಂದು ಮಾರ್ಮಿಕವಾಗಿ ನುಡಿದರು.
ಡಿಸಿಎಂ ಸ್ಥಾನ ಹೆಚ್ಚಳಕ್ಕೆ ಸಚಿವ ರಾಜಣ್ಣ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ರಾಜಣ್ಣ ಅವರನ್ನೇ ಕೇಳಿ, ನನಗೇನು ಗೊತ್ತಿಲ್ಲ. ನಾನು ಒಬ್ಬ ಲೋಕಸಭಾ ಸದಸ್ಯ ಅಷ್ಟೇ ಎಂದರು.
ಸರ್ಕಾರ ನಡೆಸುತ್ತಿರುವವರು ರಾಜ್ಯ ನಾಯಕರು. ನೀವು ಅವರನ್ನೇ ಕೇಳಬೇಕು ಎನ್ನುವ ಮೂಲಕ ಈ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ಹೆಜ್ಜಾಲ-ಚಾಮರಾಜನಗರ ರೈಲ್ವೆ ಮಾರ್ಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ರೈಲ್ವೆ ಮಾರ್ಗಕ್ಕೆ ಭೂಸ್ವಾಧೀನ ಪ್ರಕ್ರಿಯೇ ಆರಂಭವಾಗಬೇಕು. ಅದಕ್ಕೆ ಸಂಬಂಧಿಸಿದಂತೆ ರೈಲ್ವೆ ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ. ಕೇಂದ್ರ ಸರ್ಕಾರ ಯೋಜನೆಯನ್ನು ಮಧ್ಯದಲ್ಲಿ ಕೈಬಿಟ್ಟಿತ್ತು. ಆದರೆ, ಯೋಜನೆಯನ್ನು ಕೈಗೆತ್ತುಕೊಳ್ಳಿ ಎಂದು ಒತ್ತಾಯಿಸಿದ್ದು, ಇದೀಗ ಯೋಜನೆಯನ್ನು ಕೇಂದ್ರ ಸರ್ಕಾರ ಕೈಗೆತ್ತುಕೊಂಡಿದೆ ಎಂದು ತಿಳಿಸಿದರು.
ಈ ಮಾರ್ಗದ ಭೂಸ್ವಾಧೀನಕ್ಕೆ ಸುಮಾರು ೧,೫೦೦ ಕೋಟಿ ರೂ.ನಿಂದ ೨,೦೦೦ ಸಾವಿರ ಕೋಟಿ ರೂ. ಹಣ ಬೇಕಾಗುತ್ತದೆ. ಯೋಜನೆಗೆ ರಾಜ್ಯ ಸರ್ಕಾರ ಸಹ ಶೇ.೫೦ರಷ್ಟು ಹಣ ಭರಿಸಬೇಕಿದೆ. ಆದಷ್ಟು ಬೇಗ ಭೂಸ್ವಾಧೀನ ಪ್ರಕ್ರಿಯೆ ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು.
*ತಪ್ಪಾಗಿ ನಮೂದಾದ ತಾಲ್ಲೂಕು ಮತ್ತು ಜಿಲ್ಲಾಧಿಕಾರಿ ಹೆಸರು!*
ನಿರ್ಮಾಣವಾಗಿರುವ ಆಧುನಿಕ ವಿದ್ಯುತ್ ಚಿತಾಗಾರದ ಕಟ್ಟಡದಲ್ಲಿ ಚನ್ನಪಟ್ಟಣ ಎಂದು ಬರೆಯುವ ಬದಲು ಕೇವಲ (*ಚನ್ನಪಟ್ಟ*) ಎಂದು ಉದ್ಘಾಟನಾ ನಾಮಫಲಕದಲ್ಲಿ ಅಧಿಕಾರಿಗಳ ಯಡವಟ್ಟಿನಿಂದ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರ ಹೆಸರನ್ನು ತಪ್ಪಾಗಿ ನಮೂದಿಸಿರುವುದು ಕಂಡುಬಂದಿತ್ತು.
ನಾಮಫಲಕದಲ್ಲಿ ಜಿಲ್ಲಾಧಿಕಾರಿಗಳ ಹೆಸರನ್ನು ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಎಂಬುದಾಗಿ ನಮೂದಿಸುವ ಬದಲು ‘ ಡಾ. ಅವಿನಾಶ್ ರಾಜೇಂದ್ರ ಮೆನನ್’ ಎಂದು ನಮೂದಿಸಿದ್ದು ಎದ್ದು ಕಾಣುತ್ತಿದ್ದು, ಇದು ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು