Tel: 7676775624 | Mail: info@yellowandred.in

Language: EN KAN

    Follow us :


ಉಪನ್ಯಾಸಕರ ಧರಣಿ, ಕಲಿಕೆಗೆ ತೊಂದರೆ, ಎಬಿವಿಪಿ ಯಿಂದ ಪ್ರತಿಭಟನೆ

Posted date: 01 Dec, 2023

Powered by:     Yellow and Red

ಉಪನ್ಯಾಸಕರ ಧರಣಿ, ಕಲಿಕೆಗೆ ತೊಂದರೆ, ಎಬಿವಿಪಿ ಯಿಂದ ಪ್ರತಿಭಟನೆ

ಚನ್ನಪಟ್ಟಣ: ಸರ್ಕಾರಿ ಕಾಲೇಜುಗಳ ಉಪನ್ಯಾಸಕರು ಧರಣಿ ನಿರತರಾಗಿರುವುದರಿಂದ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿದೆ. ಇದರಿಂದ ಶೈಕ್ಷಣಿಕ ವರ್ಷದ ಕಲಿಕೆಗೆ ತೊಂದರೆಯಾಗಿದ್ದು, ಇದನ್ನು ಪರಿಹರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನಗರದ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಪನಗರದ ತಾಲೂಕು ಕಚೇರಿ ಆವರಣದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಈ ಕೂಡಲೇ ಕಾಲೇಜುಗಳಿಗೆ ಉಪನ್ಯಾಸಕರ ನೇಮಿಸುವಂತೆ ಆಗ್ರಹಿಸಿದರು.


ರಾಜ್ಯದ ಬಹುತೇಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲದೇ 2023-24ನೇ ಸಾಲಿನ ಶೈಕ್ಷಣಿಕ ತರಗತಿಗಳು ಸ್ಥಗಿತಗೊಂಡಿವೆ. ತರಗತಿಗಳು ನಡೆಯದ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕಳಿಗೆ ತೊಂದರೆಯಾಗಿದೆ. ಈ ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.


ಬಹುತೇಕ ರೈತರ ಮಕ್ಕಳು, ಕೂಲಿಕಾರ್ಮಿಕರ ಮಕ್ಕಳು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವ್ಯಾಸಂಗ ಮಾಡುವುದೇ ಸರ್ಕಾರಿ ಕಾಲೇಜುಗಳಲ್ಲಿ. ಉನ್ನತ ಶಿಕ್ಷಣದ ಕನಸು ನನಸು ಮಾಡಿಕೊಳ್ಳಲು ಇವರು ಕಾಲೇಜುಗಳಿಗೆ ದೂರದಿಂದ ಬಂದ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ಉಪನ್ಯಾಸಕ ಕೊರತೆಯಿಂದ ಇವರ ಪಾಠ ಪ್ರವಚನಗಳಿಗೆ ತೊಂದರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಮುಂದಿನ ಸೆಮಿಸ್ಟರ್ ಪರೀಕ್ಷೆಗಳು ಹತ್ತಿರದಲ್ಲಿವೆ. ಆದರೆ, ಇನ್ನು ಈ ಶೈಕ್ಷಣಿಕ ವರ್ಷದ ಪಾಠಗಳನ್ನು ಹೇಳಿಕೊಡಲಾಗಿಲ್ಲ. ವಿದ್ಯಾರ್ಥಿಗಳು ತರಗತಿಗೆ ಬಂದು ಬೋಧಕರಿಲ್ಲದ ಕಾರಣ ಹಾಗೆ ಕುಳಿತಿದ್ದು, ಮನೆಗೆ ಮರಳುವಂತಾಗಿದೆ. ಹೀಗಾದರೆ, ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದು ಹೇಗೆ ಎಂದು ಪ್ರಶ್ನಿಸಿದರು.


ಈ ಕೂಡಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಉಪನ್ಯಾಸಕರನ್ನು ನೇಮಿಸಬೇಕು. ವಿದ್ಯಾರ್ಥಿಗಳಲ್ಲಿ ಮೂಡಿರುವ ಗೊಂದಲ ಪರಿಹರಿಸಬೇಕು. ಜನವರಿ ಒಳಗೆ ಈ ಶೈಕ್ಷಣಿಕ ವರ್ಷದ ಪಠ್ಯವನ್ನು ಪೂರ್ಣಗೊಳಿಸಿ, ವಿದ್ಯಾರ್ಥಿಗಳು ಸುಲಲಿತವಾಗಿ ಪರೀಕ್ಷೆ ಎದುರಿಸುವಂತ ವಾತಾವರಣ ನಿರ್ಮಿಸಬೇಕು ಎಂದು ಆಗ್ರಹಿಸಿದರು.


ಉಪನ್ಯಾಸಕರ ಕೊರತೆಯನ್ನು ನೀಗಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮಹೇಂದ್ರ ಅವರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.


ಮನವಿ ಸ್ವೀಕರಿಸಿ ಮಾತನಾಡಿದ ತಹಶಿಲ್ದಾರ್ ಮಹೇಂದ್ರ ರವರು, ವಿದ್ಯಾರ್ಥಿಗಳ ಭವಿಷ್ಯ ಉಪನ್ಯಾಸಕರ ಮೇಲೆ ನಿಂತಿದೆ. ಶೀಘ್ರವಾಗಿ ಪರಿಹರಿಸುವಂತೆ ಕ್ರಮ ಕೈಗೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.


ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಜ್ಞಾನೇಶ್, ಪದಾಧಿಕಾರಿಗಳಾದ ಸುಹಾಸ್, ಭುವನ್, ಮಯೂರ್, ಹೃತಿಕ್, ಹರ್ಷಿತ್ ಹಾಗೂ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑