Tel: 7676775624 | Mail: info@yellowandred.in

Language: EN KAN

    Follow us :


ವಿಜೃಂಭಣೆಯಿಂದ ಜರುಗಿದ ಕೆಂಗಲ್ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ

Posted date: 19 Jan, 2024

Powered by:     Yellow and Red

ವಿಜೃಂಭಣೆಯಿಂದ ಜರುಗಿದ ಕೆಂಗಲ್ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ

ಚನ್ನಪಟ್ಟಣ: ತಾಲ್ಲೂಕಿನ ಐತಿಹಾಸಿಕ, ಪುರಾಣ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಪ್ರಯುಕ್ತ  ಶುಕ್ರವಾರ ಆಯೋಜಿಸಿದ್ದ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ಬ್ರಹ್ಮ ರಥೋತ್ಸವವು ಧಾರ್ಮಿಕ ವಿಧಾನಗಳು, ಶ್ರದ್ಧಾ ಭಕ್ತಿಯೊಂದಿಗೆ, ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.


ಶುಕ್ರವಾರ ಬೆಳಿಗ್ಗೆ ೧೧.೫೫ ರಿಂದ ೧೨.೫೫ ಗಂಟೆಯೊಳಗೆ ಸಲ್ಲುವ ಶುಭ ಅಭಿಜನ್ ಲಗ್ನದಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರಸ್ವಾಮಿಯವರ ಬ್ರಹ್ಮ ರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಹೂವಿನ ಪಲ್ಲಕ್ಕಿ ಉತ್ಸವ ಯಶಸ್ವಿಯಾಗಿ ನಡೆಯಿತು. ದೇವಸ್ಥಾನದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ವಿ.ಬಿ.ಚಂದ್ರು ಆಡಳಿತ ಮಂಡಳಿ ಸದಸ್ಯರು ಹಾಗೂ ಅರ್ಚಕರು  ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾಧಿಗಳು, ಬ್ರಹ್ಮ ರಥೋತ್ಸವಕ್ಕೆ ಬಾಳೆ ಹಣ್ಣು, ಹೂವು, ಜವನ ಎಸೆದು ಭಕ್ತಿಪೂರ್ವಕವಾಗಿ ಸಂಭ್ರಮಿಸಿದರು.


ಬ್ರಹ್ಮ ರಥೋತ್ಸವದ ಪ್ರಯುಕ್ತ ಆಯೋಜಿಸಿದ್ದ ವೀರಗಾಸೆ ಕುಣಿತ, ತಮಟೆ ಸೇವೆ, ಡೊಳ್ಳುಕುಣಿತ, ಪೂಜಾ ಕುಣಿತ, ಚಿಲಿಪಿಲಿ ಗೊಂಬೆಗಳ ಕುಣಿತ ಮುಂತಾದ ಜನಪದ ಕಲಾತಂಡಗಳ ಪ್ರದರ್ಶನ ಭಕ್ತಾಧಿಗಳನ್ನು ಆಕರ್ಷಿಸಿತು. ದೇವಸ್ಥಾನದಲ್ಲಿನ ಶ್ರೀ ಆಂಜನೇಯಸ್ವಾಮಿ ಮತ್ತು ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವರ ಮೂರ್ತಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಒಳ ಆವರಣದ ಕಂಬ ಮತ್ತು ಮೇಲ್ಭಾಗವನ್ನು ಹೂವು, ವಿವಿಧ ಹಣ್ಣು ಹಾಗೂ ತರಕಾರಿಗಳಿಂದ ಅಲಂಕಾರ ಮಾಡಲಾಗಿತ್ತು. ಹೊರಭಾಗದಲ್ಲೂ ವಿಶೇಷವಾಗಿ ವಿದ್ಯುತ್ ಅಲಂಕಾರ ಮಾಡಲಾಗಿತ್ತು.


ಬ್ರಹ್ಮ ರಥೋತ್ಸವದಲ್ಲಿ ದೇವಸ್ಥಾನ ಪ್ರಧಾನ ಅರ್ಚಕರಾದ ರವೀಂದ್ರ, ಶರತ್ ಹಾಗೂ ಮತ್ತಿತರ ಅರ್ಚಕರು, ದೇವಸ್ಥಾನದ ಮೇಲುಸ್ತುವಾರಿ ಸಮಿತಿ ಸದಸ್ಯರು  ಭಾಗವಹಿಸಿ ರಥೋತ್ಸವದ ಯಶಸ್ಸಿಗೆ ಕೈಜೋಡಿಸಿ ಸಹಕರಿಸಿದರು.  


ದೇವಾಲಯದ ಆಡಳಿತ ಮಂಡಳಿ ಮತ್ತು ಭಕ್ತಾಧಿಗಳು ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದ, ನೀರು ಮಜ್ಜಿಗೆ, ಪಾನಕ ವಿತರಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸೂಕ್ತ ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದರು.


 ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑