Tel: 7676775624 | Mail: info@yellowandred.in

Language: EN KAN

    Follow us :


ನೋಂದಣಿ ಕಛೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ

Posted date: 24 Jan, 2024

Powered by:     Yellow and Red

ನೋಂದಣಿ ಕಛೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ

ಚನ್ನಪಟ್ಟಣ: ಪಟ್ಟಣದ ಉಪನೋಂದಣಾಧಿಕಾರಿಗಳ ಕಚೇರಿಗೆ ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳಾದ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಕಚೇರಿಯಲ್ಲಿ ಕಾವೇರಿ ಇ-ತಂತ್ರಾಂಶದ ಪರಿಶೀಲನೆ ಹಾಗೂ ಕಚೇರಿಯ ಸಿಬ್ಬಂದಿಗಳ ಕಡತಗಳು ಹಾಗೂ ಟೇಬಲ್‌ನ ಡ್ರಾಯರ್‌ಗಳನ್ನು ಪರಿಶೀಲನೆ ಮಾಡಿ ಬಳಿಕ ಕಚೇರಿಗೆ ವಿವಿಧ ಕೆಲಸಗಳಿಗೆ ಬಂದಿದ್ದ ಸಾರ್ವಜನಿಕರಿಂದ ಕಚೇರಿಯಲ್ಲಿನ ಅವ್ಯವಸ್ಥೆ, ಸಮಸ್ಯೆಗಳು ಭ್ರಷ್ಠಾಚಾರದ ಬಗ್ಗೆ ಮಾಹಿತಿ ಪಡೆದು ದಾಖಲೆಗಳ ಕೊಠಡಿಯನ್ನು ಪರಿಶೀಲನೆ ಮಾಡಿದರು.


ಪಟ್ಟಣದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕೆಲವರು ಮಧ್ಯವರ್ತಿಗಳು ಮೂಲಕ ಲಂಚ ಪಡೆಯುತ್ತಿದ್ದಾರೆ, ಹಣ ಇಲ್ಲದೆ ಕೆಲಸ ಆಗುತ್ತಿಲ್ಲ. ಕಚೇರಿ ಚಿಕ್ಕ ಜಾಗದಲ್ಲಿದ್ದು, ಮೂಲಭೂತ ಸೌಲಭ್ಯಗಳು ಇಲ್ಲ ಜೊತೆಗೆ ರಸ್ತೆಯಲ್ಲಿ ಪಾರ್ಕಿಂಗ್ ಸಮಸ್ಯೆ ಇರುವ ನಿಟ್ಟಿನಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಸ್ಥಳಾಂತರ ಮಾಡುವಂತೆ ಸಾರ್ವಜನಿಕರಿಂದ ಕೇಳಿಬಂದಿದ್ದ ಆರೋಪಗಳ ಬಗ್ಗೆ ನಮ್ಮ ಪತ್ರಿಕೆ ಸಹ ವರದಿ ಮಾಡಿತ್ತು. ಅಲ್ಲದೆ ಕಳೆದ ವಾರ ಕಂದಾಯ ಸಚಿವ ಕೃಷ್ಣೇಗೌಡವರು ಮದ್ದೂರು ತಾಲೂಕಿನ ಉಪ ನೋಂದಣಾಧಿಕಾರಿಗಳ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಬಿಸಿ ಮುಟ್ಟಿದ ಬಳಿಕ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೂ ತಾಲೂಕು ವಾರು ಕಚೇರಿಗಳ ಪರಿಶೀಲನೆ ಮಾಡುವಂತೆ ಸೂಚನೆ ನಿಡಿದ್ದಾರೆ ಎನ್ನಲಾಗಿದ್ದು ಈ ನಿಟ್ಟಿನಲ್ಲಿ ಮಂಗಳವಾರ ಮಧ್ಯಾಹ್ನ ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಡೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರ ಭೇಟಿಯಿಂದ ಕಚೇರಿಗೆಯಲ್ಲಿನ ಅಧಿಕಾರಿಗಳಿಗೆ ನಡುಕ ಹುಟ್ಟಿಸಿದರು.


ಉಪ ನೋಂದಣಾಧಿಕಾರಿ ರೇಣುಕಾ ಪ್ರಸಾದ್‌ ಅವರು ರಜೆ ಮೇಲೆ ತೆರಳಿದ್ದರು ಎನ್ನಲಾಗಿದ್ದು ಅವರ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳು ಕಚೇರಿಯಲ್ಲಿನ ಅಧಿಕಾರಿಗಳಿಂದ ಹಲವಾರು ಮಾಹಿತಿ ಪಡೆದರು. ಈ ನಿಟ್ಟಿನಲ್ಲಿ ಸತತ ೧ ಗಂಟೆಗಳ ಕಾಲ ಕಚೇರಿಯಲ್ಲಿ ಸಂಪೂರ್ಣ ಮಾಹಿತಿ ಕಲೆಹಾಕಿದ ಜಿಲ್ಲಾಧಿಕಾರಿಗಳ ನಡೆಯು ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿತ್ತು.


ಕಚೇರಿಗೆ ಭೇಟಿ ನೀಡಿದ ಆರಂಭದಲ್ಲೇ ಉಪನೋಂದಣಿಯ ಕಾವೇರಿ ಇ-ತಂತ್ರಾಂಶದ ವೆಬ್‌ಸೈಟ್ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಗಳು ಹಲವು ಪ್ರಶ್ನೆಗಳನ್ನು ಕೇಳಿದರು. ಕಚೇರಿಯ ಇಸಿ ಮಹೇಂದ್ರ ಅವರು ಕೆಲ ಮಾಹಿತಿಗಳನ್ನು ನೀಡಿದರು.


*ಕ್ಯಾಷ್ ಬಾಕ್ಸ್ ಪರಿಶೀಲನೆ:* ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕೆಲ ಬೆರಳಚ್ಚುಗಾರರಿಂದ ಹಿಡಿದು ಅಧಿಕಾರಿಗಳ ವರೆಗೆ ಅವರೇ ನಿಗದಿತ ಕಮಿಷನ್ ಶುಲ್ಕದ ಪಟ್ಟಿ ಮಾಡಿಕೊಂಡು ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದ ನಿಟ್ಟಿನಲ್ಲಿ ಇ. ತಂತ್ರಾಂಶ ಪರಿಶೀಲನೆ ನಡುವೆ ಏಕಾಏಕಿ ಕಚೇರಿಯಲ್ಲಿನ ಎಲ್ಲಾ ಸಿಬ್ಬಂದಿಗಳ ಟೇಬಲ್‌ಗಳಲ್ಲಿನ ಕ್ಯಾಷ್ ಟ್ರಾಯರ್‌ಗಳನ್ನು ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಗಳು ಕ್ಯಾಸ್ ಡ್ರಾಯರ್‌ನಲ್ಲಿದ್ದ ಕಡತಗಳನ್ನು ಬೇರ್ಪಡಿಸಿ ಅಲ್ಲೇನಾದರೂ ಹಣ ಇದೆಯಾ ಎಂದು ನಯವಾಗಿಯೇ ಪರಿಶೀಲನೆ ಮಾಡಿದ್ದು ವಿಶೇಷವಾಗಿತ್ತು. ಅಲ್ಲದೆ ಕೆಲಸಗಳು ಆದ ಬಳಿಕ ದಾಖಲೆಗಳನ್ನು ಕ್ಯಾಸ್ ಡ್ರಾಯರ್‌ಗಳಲ್ಲಿ ಇಟ್ಟಿರುವುದು ಏಕೆ ಎಂದು ಸಹ ಪ್ರಶ್ನೆ ಮಾಡಿದ ಜಿಲ್ಲಾಧಿಕಾರಿಗಳ ಪ್ರಶ್ನೆಗೆ ಮಹೇಂದ್ರ ಅವರ ಉತ್ತರ ಒಪ್ಪುವಂತಿತ್ತು ಎನ್ನಲಾಗಿದ್ದು ಈ ನಿಟ್ಟಿನಲ್ಲಿ ಮೌನವಾಗಿ ಬೇರೆಡೆ ಪರಿಶೀಲನೆಗೆ ಮುಂದಾದರು.


*ರೆಕಾರ್ಡ್ ರೂಂ ಪರಿಶೀಲನೆ:*

ಇದೇ ವೇಳೆ ಕಚೇರಿಯಲ್ಲಿನ ರೆಕಾರ್ಡ್ ರೂಂಗೆ ತೆರಳಿ ದಾಖಲೆಗಳನ್ನು ಪರಿಶೀಲನೆ ಮಾಡುವ ಜೊತೆಗೆ ದಾಖಲೆಗಳ ಭದ್ರತೆಯನ್ನು ಪರಿಶೀಲನೆ ಮಾಡಿದರು. ಕೆಲ ಕಡತಗಳ ಬಗ್ಗೆ ಸಹ ಮಾಹಿತಿ ಪಡೆದು ಪರಿಶೀಲನೆ ಮಾಡಿದರು.


*ಸಾರ್ವಜನಿಕರಿಂದಲೂ ಮಾಹಿತಿ:*

ಇದೇ ವೇಳೆ ಕಚೇರಿಯಲ್ಲಿ ವಿವಿಧ ನೋಂದಣಿ, ಋಣಭಾರ ದಾಖಲೆ, ವಿವಾಹ ನೋಂದಣಿ ವಿಭಾಗದ ಕೆಲಸಗಳಿಗೆ ಬಂದಿದ್ದ ಸಾರ್ವಜನಿಕರನ್ನು ಮಾತನಾಡಿಸಿದ ಜಿಲ್ಲಾಧಿಕಾರಿಗಳು ಅರ್ಜಿ ಹಾಕಿರುವ ದಿನಾಂಕ ಮತ್ತು ಹಣ ಪಡೆದಿದ್ದಾರಾ ಎಂದು ಪ್ರಶ್ನಿಸಿದರು. ಇದೇ ವೇಳೆ ತಿಟ್ಟಮಾರನಹಳ್ಳಿಯ ವ್ಯಕ್ತಿಯೋರ್ವರ ಪಿತ್ರಾರ್ಜಿತ ಆಸ್ತಿಯನ್ನು ಯಾವುದೇ ದಾಖಲೆ ಇಲ್ಲದೆ ನೋಂದಣಿ ಮಾಡಿಕೊಟ್ಟಿದ್ದು ತಿದ್ದುಪಡಿಗೆ ಅರ್ಜಿ ನೀಡಿ ಮೂರು ತಿಂಗಳ ಸಮಯ ಆಗಿರುವ ಬಗ್ಗೆ ದೂರು ನೀಡಿದರು. ಈ ಬಗ್ಗೆ ದಾಖಲೆಗಳನ್ನು ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಗಳು ಕೋರ್ಟ್‌ನಲ್ಲಿ ಕೇಸ್ ಇರುವ ಬಗ್ಗೆ ಮಾಹಿತಿ ಪಡೆದು ತಹಸೀಲ್ದಾರ್‌ ಅವರಿಗೆ ಈ ಬಗ್ಗೆ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದರು.


*ಸ್ಥಳಾಂತರಕ್ಕೆ ಒತ್ತಾಯ:* ಜಿಲ್ಲಾಧಿಕಾರಿಗಳು ಉಪನೋಂದಣಾಧಿಕಾರಿಗಳ ಕಚೇರಿಯ ಅವ್ಯವಸ್ಥೆ ಬಗ್ಗೆ ಪರಿಶೀಲನೆ ಮಾಡಿದ ವೇಳೆ ಸ್ಥಳದಲ್ಲಿದ್ದ ಜನತೆ ಸಹ ಜಿಲ್ಲಾಧಿಕಾರಿಗಳ ಬಳಿ ಕಚೇರಿಯ ಸಮಸ್ಯೆಗಳನ್ನು ತಿಳಿಸಿ ಕಚೇರಿಯನ್ನು ತಾಲೂಕು ಕಚೇರಿಗೆ ಸ್ಥಳಾಂತರ ಮಾಡುವಂತೆ ಮನವಿ ಮಾಡಿದರು.


*ದೂರು ಬಂದ ಹಿನ್ನಲೆ ಭೇಟಿ:* ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಗಳು ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಬಗ್ಗೆ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ದೂರುಗಳು ಬಂದಿದ್ದರು, ಜೊತೆಗೆ ಪತ್ರಿಕೆಗಳಲ್ಲಿ ಸಹ ವರದಿ ಮಾಡಿದ್ದರಿಂದ ಈ ಬಗ್ಗೆ ಪರಿಶೀಲನೆಗೆ ಬಂದಿದ್ದೇವೆ. ಇಲ್ಲಿನ ಸಮಸ್ಯೆ ಪರಿಶೀಲನೆ ಮಾಡಿದ್ದು ಜಾಗ ಕಿರಿದಾಗಿದ್ದು, ಮೂಲಭೂತ ಸೌಲಭ್ಯಗಳ ಕೊರತೆ ಇದೆ. ರಾಮನಗರದಲ್ಲಿ ಸಹ ಇದೇ ಸಮಸ್ಯೆ ಉಂಟಾಗಿದ್ದು ಅಲ್ಲಿನ ಕಚೇರಿಯನ್ನು ಕಂದಾಯ ಭವನಕ್ಕೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ತಾಲೂಕು ಕಚೇರಿಯಲ್ಲಿ ಮತ್ತೊಂದು ಹಂತದ ಕಟ್ಟಡ ನಿರ್ಮಾಣಕ್ಕೆ ಸರ್ಕಾರಕ್ಕೆ ಈಗಾಗಲೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅಲ್ಲಿವರೆಗೆ ಸೂಕ್ತ ಜಾಗ ಇದ್ದರೆ ತಿಳಿಸಿ ಎಂದು ಪತ್ರಕರ್ತರನ್ನೇ ಕೇಳಿದರು.


ಈ ವೇಳೆ ತಾಲೂಕು ತಹಸೀಲ್ದಾರ್‌ ಅವರ ವಸತಿ ಗೃಹವನ್ನು ಬಳಕೆ ಮಾಡಿಕೊಳ್ಳವ ಬಗ್ಗೆ ಕೆಲವರು ಸಲಹೆ ನೀಡಿದರು. ಆದರೆ ತಹಸೀಲ್ದಾರ್‌ ಅವರ ವಸತಿ ಗೃಹವನ್ನು ನೀಡಲು ಸಾಧ್ಯವಿಲ್ಲ ಎಂದು ಕೇಳಿಬಂದಿರುವ ಬಗ್ಗೆ ಡಿಸಿ ಅವರೆ ತಿಳಿಸಿದ್ದರಿಂದ ಪಟ್ಟಣದ ಸ್ಪನ್‌ಸಿಲ್ಕ್ ಮಿಲ್‌ನ ಹೊಸ ಕಟ್ಟಡಕ್ಕೆ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ ಮಾಡುವ ಬಗ್ಗೆ ಈ ಹಿಂದೆಯೇ ಪ್ರಸ್ತಾಪ ಮಾಡಿ ಕೆಲವು ಪ್ರಕ್ರಿಯೆ ನಡೆದಿದ್ದ ಬಗ್ಗೆ ನಮ್ಮ ಪತ್ರಿಕೆ ಜಿಲ್ಲಾಧಿಕಾರಿಗಳ ಗಮನ ಸೆಳೆದ ನಿಟ್ಟಿನಲ್ಲಿ ಸ್ಥಳ ಪರಿಶೀಲನೆಗೆ ಹೋಗಲು ಸುದ್ದಿಗಾರರನ್ನು ಕರೆದುಕೊಂಡು ಸ್ಪನ್‌ಸಿಲ್ಕ್‌ಮಿಲ್‌ನತ್ತೆ ತೆರಳಿ ವೀಕ್ಷಣೆ ಮಾಡಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑