Tel: 7676775624 | Mail: info@yellowandred.in

Language: EN KAN

    Follow us :


ದೇಶದ ಸಾರ್ವಭೌಮತೆಗೆ ಧಕ್ಕೆ ಬಾರದಂತೆ ಅಭಿವೃದ್ಧಿಯೆಡೆಗೆ ಸಾಗುತ್ತಿರುವ ರಾಜ್ಯ ರಾಮಲಿಂಗಾರೆಡ್ಡಿ

Posted date: 26 Jan, 2024

Powered by:     Yellow and Red

ದೇಶದ ಸಾರ್ವಭೌಮತೆಗೆ ಧಕ್ಕೆ ಬಾರದಂತೆ ಅಭಿವೃದ್ಧಿಯೆಡೆಗೆ ಸಾಗುತ್ತಿರುವ ರಾಜ್ಯ ರಾಮಲಿಂಗಾರೆಡ್ಡಿ

ರಾಮನಗರ, ಜ. 26:  ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜ. 26ರ ಶುಕ್ರವಾರ ಆಯೋಜಿಸಲಾಗಿದ್ದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸಾರಿಗೆ, ಮುಜರಾಯಿ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು.


ಭಾರತವು ಸ್ವಾತಂತ್ರ್ಯ ನಂತರ 1950 ರ ಜನವರಿ 26 ರಂದು ತನ್ನದೇ ಸಂವಿಧಾನ ಜಾರಿಗೊಳಿಸಿ ಸ್ವತಂತ್ರ ಗಣತಂತ್ರ ರಾಷ್ಟ್ರವಾಯಿತು. ಇದರಿಂದಾಗಿ ಜನವರಿ 26, ಭಾರತೀಯರಿಗೆ ಮಹತ್ವದ ದಿನ. ಈ ಸಂದರ್ಭದಲ್ಲಿ ಸಂವಿಧಾನದ ಆಶಯದಂತೆ ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಲಭ್ಯವಾಗುವ ಸಮ ಸಮಾಜ ನಿರ್ಮಾಣದ ದಾರಿಗಳನ್ನು ಬಲಪಡಿಸಲು ಚಿಂತಿಸಬೇಕು. ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಮಹಾತ್ಮ ಗಾಂಧೀಜಿ ಮತ್ತು ಇತರ ದೇಶ ಪ್ರೇಮಿಗಳು ಹಾಗೂ ನಾಯಕರ ತ್ಯಾಗ ಬಲಿದಾನಗಳನ್ನು ನಾವು ಸ್ಮರಿಸಲೇಬೇಕು.


ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ 562 ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ದೇಶವನ್ನು ಒಂದುಗೂಡಿಸಿ ದೇಶದ ಏಕತೆ, ಅಖಂಡತೆಯನ್ನು ಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾ ಬಾಯಿ ಪಟೇಲ್ ಅವರನ್ನು ಹಾಗೂ ಅವರ ಸಾಧನೆಗಳನ್ನು ಸ್ಮರಿಸಲೇಬೇಕು.


ಅನಕ್ಷರತೆ, ಅನಾರೋಗ್ಯ, ಹಸಿವು ಮತ್ತು ಬಡತನದಲ್ಲಿದ್ದ ದೇಶವನ್ನು ಮುನ್ನಡೆಸಿದ ನಾಯಕರನ್ನು ನಾವು ಸ್ಮರಿಸಿ ಗೌರವಿಸೋಣ, ಜೊತೆಗೆ ಇಂದಿನ ಮತ್ತು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಪ್ರಮುಖ ಜವಾಬ್ದಾರಿಯನ್ನು ಎಲ್ಲರೂ ಅರಿತು ಕೊಳ್ಳೋಣ.


ಜಗತ್ತಿಗೆ ಮಾತೃಪ್ರೇಮ, ಪ್ರಜ್ಞೆ, ಸಮತೆ ಮತ್ತು ಮಮತೆಯನ್ನು ಬೋಧಿಸಿದ ಪರಂಪರೆ ನಮ್ಮದು. ರಾಜಪ್ರಭುತ್ವ ಮತ್ತು ಊಳಿಗಮಾನ್ಯ ವ್ಯವಸ್ಥೆಯನ್ನು ಧಿಕ್ಕರಿಸಿ ಸರ್ವತೋಮುಖ ಬೆಳವಣಿಗೆಯತ್ತ ದಾಪುಗಾಲಿಟ್ಟಿದೆ.


1)ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ದೇಶ.

2)ಪ್ರಜೆಗಳೇ ಪ್ರಭುಗಳು ಎಂದು ಭಾವಿಸಿರುವ ದೇಶ:

3)ಹಲವು ಧರ್ಮಗಳು ಮತ್ತು ಆಚರಣೆಗಳನ್ನು ಒಂದೇ ಮಣ್ಣಿನಲ್ಲಿ ಪೋಷಿಸುತ್ತಿರುವ ದೇಶ ನಮ್ಮದು.

4)ಇಂತಹ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಜನಪರಂಪರೆಯನ್ನು ಧೀರ್ಘಕಾಲ ಉಳಿಸಿ ಬೆಳಸಿಕೊಂಡು ಬಾಳಲು ನಮ್ಮ ಭಾರತೀಯ ಸಂವಿಧಾನ ದಾರಿ ದೀಪವಾಗಿದೆ.


ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ದೇಶಕ್ಕೆ ಅತ್ಯಂತ ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟು ದೇಶದ ಮುನ್ನಡೆಗೆ ದಾರಿದೀಪ ನೀಡಿರುವ ಡಾ|| ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೃತಜ್ಞತಭಾವದಿಂದ ಸ್ಮರಿಸೋಣ ಎಂದು ಕರೆ ನೀಡಿದರು.


ಡಾ. ಬಿ.ಆರ್. ಅಂಬೇಡ್ಕರ್ ರವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಮಿತಿಯ ಸದಸ್ಯರುಗಳಾದ 1) ಶ್ರೀ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, 2) ಶ್ರೀ ಎನ್. ಗೋಪಾಲಸ್ವಾಮಿ, 

3) ಶ್ರೀ ಮಾಧವರಾವ್, 4) ಶ್ರೀ ಕೆ.ಎಂ ಮುನ್ಷಿ, 5) ಶ್ರೀ ಮಹಮದ್ ಸಾದುಲ್ಲ, 6) ಶ್ರೀ ಬಿ.ಎಲ್. ಮಿತ್ತರ್, 7) ಶ್ರೀ ಡಿ.ಪಿ. ಖೇತಾನ್ ಅವರು 1946 ಡಿಸೆಂಬರ್ 9ರಿಂದ ಸತತವಾಗಿ ಸಭೆ ಸೇರಿ, ಪ್ರಪಂಚದ 60 ದೇಶಗಳ ಸಂವಿಧಾನವನ್ನು ಗಣನೆಗೆ ತೆಗೆದುಕೊಂಡು ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ಆಚರಣೆಗೆ ತಂದ ಕಾಯ್ದೆ, ಕಾನೂನುಗಳು, ಪರಿಗಣಿಸಿ ಸುಧೀರ್ಘವಾಗಿ ಎಲ್ಲಾ ಅಂಶಗಳನ್ನು ಪರಿಗಣಿಸಿ ಭಾರತಕ್ಕೆ ಅನ್ವಯವಾಗುವ ಅತ್ಯುತ್ತಮವಾದ ಸಂವಿಧಾನವನ್ನು ರಚಿಸಿ, 1949ರ ನವೆಂಬರ್ 26 ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಮುಂದೆ ಅಧಿಕೃತವಾಗಿ 1950ರ ಜನವರಿ 26 ರಿಂದ ಸಂವಿಧಾನ ಜಾರಿಗೊಂಡು ಭಾರತ ಗಣತಂತ್ರವಾಯಿತು.


1930ರ ಜನವರಿ 26ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್‌ನ ಲಾಹೋರ್ ಅಧಿವೇಶನದಲ್ಲಿ “ಪೂರ್ಣ ಸ್ವರಾಜ್” ನಿರ್ಣಯವನ್ನು ಅಂಗೀಕರಿಸಲಾಯಿತು. ಈ ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಜನವರಿ 26ರಂದೇ ಸಂವಿಧಾನ ಪ್ರಾರಂಭದ ದಿನಾಂಕವೆಂದು ನಿರ್ದಿಷ್ಟವಾಗಿ ಆಯ್ಕೆ ಮಾಡಿಕೊಂಡಿತು.


ಅಂದಿನಿಂದ ಜಾರಿಗೊಂಡ ಸಂವಿಧಾನವು ಇಂದಿನವರೆಗೆ ಹಲವಾರು ತಿದ್ದುಪಡಿಗಳನ್ನು ಪ್ರಸ್ತುತ ಪರಿಸ್ಥಿತಿಗಳಿಗೆ ಅನುಗುಣವಾಗಿ ಸಂಸತ್ತು ಅಂಗೀಕಾರ ಮಾಡಿ ಆಚರಣೆಗೆ ತಂದಿದೆ.


ಡಾ. ಬಿ.ಆರ್. ಅಂಬೇಡ್ಕರ್ ದೂರದೃಷ್ಠಿಯ ಫಲವಾಗಿ, ಮೂಲಭೂತ ಹಕ್ಕುಗಳಾದ 1) ಸಮಾನತೆಯ ಹಕ್ಕು, 2) ಸ್ವಾತಂತ್ರ್ಯದ ಹಕ್ಕು, 3) ಶೋಷಣೆಯ ವಿರುದ್ಧ ಹಕ್ಕು, 4) ಧಾರ್ಮಿಕ 5) ಸ್ವಾತಂತ್ರ್ಯದ ಹಕ್ಕು, 6) ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕು, 7) ಸಂವಿಧಾನಾತ್ಮಕ ಪರಿಹಾರ ಹಕ್ಕುಗಳು ಸಂವಿಧಾನ ಒಳಗೊಂಡಿದೆ.


ಸಂವಿಧಾನ ರಚನೆಗೂ ಮುನ್ನ ಶತಶತಮಾನಗಳಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಸರ್ವರೀತಿಯಲ್ಲಿ ತುಳಿತಕ್ಕೊಳಗಾದ ಜನರನ್ನು ಸಂವಿಧಾನದ ಆಶಯದಂತೆ ಮೇಲೆಕೆತ್ತುವ ನಿಟ್ಟಿನಲ್ಲಿ ಸ್ವಾತಂತ್ರ್ಯ ಬಂದ ನಂತರ ಎಲ್ಲರನ್ನು ಸಮಾನ ರೀತಿಯಿಂದ ಕಂಡು ಎಲ್ಲರಿಗೂ ಸಮಾನ ಅವಕಾಶಗಳು ದೊರಕಿಸುವ ನಿಟ್ಟಿನಲ್ಲಿ ಎಲ್ಲಾ ಸರ್ಕಾರಗಳು ಕಾರ್ಯನಿರ್ವಹಿಸಿರುವುದನ್ನು ನಾವು ಗಮನಿಸಬಹುದಾಗಿದೆ.


ದೇಶದ ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ

1) ಪಂಚವಾರ್ಷಿಕ ಯೋಜನೆಗಳು,

2)ಭೂಸುಧಾರಣಾ ಕಾಯ್ದೆ

3)ಬ್ಯಾಂಕುಗಳ ರಾಷ್ಟ್ರೀಕರಣ

4)ಇನ್ನು ಹಲವಾರು ಜನಪರ ಕಾರ್ಯಕ್ರಮಗಳನ್ನು ಕೈಗೊಂಡು ಅವಕಾಶ ವಂಚಿತರಿಗೆ ಸಕಲವು ದೊರಕುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮವಹಿಸುತ್ತವೆ.


ಭಾರತ ಸಂವಿಧಾನ ರಚನೆ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ರವರು ಅನಾರೋಗ್ಯದಿಂದ ಬಳಲುತ್ತಿದ್ದರೂ ತಮ್ಮ 65 ನೇ ವರ್ಷದಲ್ಲಿ ಸಹಪಾಠಿಗಳೊಂದಿಗೆ,

“There is still so much to be done.. so much to be done” ಎಂದು ಹೇಳುತ್ತಾ 6ನೇ ಡಿಸೆಂಬರ್ 1956ರಲ್ಲಿ ದೆಹಲಿಯಲ್ಲಿ ನಿಧನರಾದರು. ಇವರು ಶಿಕ್ಷಣ, ಸಂಘಟನೆ ಮತ್ತು ಸಂಘರ್ಷ ಧ್ಯೇಯಗಳನ್ನಿಟ್ಟುಕೊಂಡು ಸಂಸದೀಯ ಪಟುವಾಗಿ ಅರ್ಥಶಾಸ್ತ್ರಜ್ಞರಾಗಿ, ಇವರ ಸಾಧನೆ ಮಾಡಿದರು. ಕೃತಜ್ಞಾಪೂರ್ವಕವಾಗಿ ಭಾರತ ಸರ್ಕಾರ ಮರಣೊತ್ತರವಾಗಿ ಭಾರತ ರತ್ನ ಪ್ರಶಸ್ತಿಯನ್ನು 1990ರಲ್ಲಿ ನೀಡಿ ಗೌರವಿಸಿದೆ.


 ಸ್ವಾತಂತ್ರ್ಯ ನಂತರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಜವಹರಲಾಲ್ ನೆಹರು ರವರಿಂದ ಇಲ್ಲಿಯವರೆಗೆ ಎಲ್ಲಾ ಪ್ರಧಾನ ಮಂತ್ರಿಗಳು ಸಂವಿಧಾನದಲ್ಲಿನ ಮುಖ್ಯ ಅಂಶಗಳನ್ನು ಈಡೇರಿಸುತ್ತಾ, ತಮ್ಮದೇ ಆದ ಕೊಡುಗೆ ನೀಡಿದ್ದಾರೆ.


ಸಂವಿಧಾನ ರೂಪಿಸಿಕೊಟ್ಟ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡು ಭಾರತದ ಸಾರ್ವಭೌಮತೆಗೆ ಧಕ್ಕೆ ಬಾರದಂತೆ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಅಭಿವೃದ್ಧಿಯೆಡೆಗೆ ಸಾಗುತ್ತಿರುವ ರಾಜ್ಯ ನಮ್ಮ ಕರ್ನಾಟಕ ಎಂದು  ಸಂತಸದಿಂದ ಹೇಳಿದರು.


 ಇಂದು ಕರ್ನಾಟಕದ ಸಾಧನೆ ಅನೇಕ ರಾಜ್ಯಗಳಿಗೆ ಮಾದರಿಯಾಗಿದೆ. ಜ್ಞಾನಾಧಾರಿತ ಮಾನವ ಸಂಪನ್ಮೂಲ, ಪ್ರಾಕೃತಿಕ ಸಂಪತ್ತು, ವೈಶಿಷ್ಟ ಪೂರ್ಣ ಸಾಮಾಜಿಕ ಚಿಂತನೆ, ಪ್ರಯೋಗಶೀಲ ಆಡಳಿತ ಕರ್ನಾಟಕದ ಹೆಗ್ಗುರುತಾಗಿದೆ.


 ರಾಜ್ಯವನ್ನಾಳಿದ ಮುಖ್ಯಮಂತ್ರಿಗಳಾದ ಶ್ರೀ ಕೆ.ಸಿ. ರೆಡ್ಡಿ, ಶ್ರೀ ಕೆಂಗಲ್ ಹನುಮಂತಯ್ಯ, ಕಡಿದಾಳ್ ರವರಿಂದ ಇಂದಿನ ಮುಖ್ಯಮಂತ್ರಿ ಸನ್ಮಾನ್ಯ  ಸಿದ್ದರಾಮಯ್ಯ ರವರೆಗೂ  ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸಿರುವುದನ್ನು ಕಾಣಬಹುದು.


 ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ  ಡಿ.ಕೆ. ಶಿವಕುಮಾರ್‌ ರವರ ನೇತೃತ್ವದ ನಮ್ಮ ಸರ್ಕಾರವು ಅಬಲರನ್ನು ಸಬಲರನ್ನಾಗಿ ಮಾಡಲು, ದೇಶದಲ್ಲಿ ಮಾದರಿಯಾಗಿ, 1) ಗೃಹಜ್ಯೋತಿ, 2) ಗೃಹಲಕ್ಷ್ಮಿ, 3) ಶಕ್ತಿ, 4) ಅನ್ನಭಾಗ್ಯ ಹಾಗೂ 5) ಯುವನಿಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದು ಪ್ರತಿ ಕುಟುಂಬಕ್ಕೆ ಕನಿಷ್ಠ ವರ್ಷಕ್ಕೆ 40,000 ರೂ.ಗಳ ಆದಾಯಗಳಿಸುವ ಅವಕಾಶಗಳನ್ನು ಕರ್ನಾಟಕದ ಜನರಿಗೆ ನಮ್ಮ ಸರ್ಕಾರ ಕಲ್ಪಿಸಿಕೊಟ್ಟಿದೆ.


ಚುನಾವಣೆ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿ ಭರವಸೆಗಳನ್ನು 100 ಕ್ಕೆ 100 ಈಡೇರಿಸಿದ್ದು, “ನುಡಿದಂತೆ ನಡೆದಿದ್ದೇವೆ”. ಅಭಿವೃದ್ಧಿ ದೃಷ್ಠಿಯಿಂದ ನಾವು ಜೊತೆಯಾಗಿ ಹೋಗೋಣ ಎಲ್ಲಾ ರೀತಿಯಲ್ಲಿಯೂ ಸಹಕಾರ ನೀಡಿ ಜಿಲ್ಲೆಯ ಅಭಿವೃದ್ಧಿ ಜೊತೆಗೆ ರಾಜ್ಯ ಮತ್ತು ದೇಶದ ಯಶಸ್ಸಿಗೂ ಶ್ರಮಿಸೋಣವೆಂದು ಆಶಿಸಿದರು.


ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು.


ಶಾಸಕರಾದ ಇಕ್ಬಾಲ್ ಹುಸೇನ್, ನಗರಸಭೆ ಅಧ್ಯಕ್ಷರಾದ ವಿಜಯಕುಮಾರಿ, ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑