Tel: 7676775624 | Mail: info@yellowandred.in

Language: EN KAN

    Follow us :


ಅಂದು ಶಾಲೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಅಪ್ಪಗೆರೆ ತಿಮ್ಮರಾಜು

Posted date: 03 Feb, 2024

Powered by:     Yellow and Red

ಅಂದು ಶಾಲೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಅಪ್ಪಗೆರೆ ತಿಮ್ಮರಾಜು

ಚನ್ನಪಟ್ಟಣ: ನಾವು ನಮ್ಮ ಕಾಲದಲ್ಲಿ ಶಾಲೆಗೆ ಹೋಗಿ ವಿದ್ಯೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಹಲವಾರು ಸಮಸ್ಯೆಗಳು ನಮ್ಮ ಎದುರಿಗಿದ್ದವು. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ. ತಂತಮ್ಮ ಮನೆ ಬಾಗಿಲಿಗೆ ಬರುವ ವಾಹನಗಳ ಜೊತೆಗೆ, ಮಗ್ಗುಲಲ್ಲೇ ಪೈಪೋಟಿಗಿಳಿದಂತೆ ಹಲವಾರು ಶಾಲೆಗಳಿವೆ. ವಿದ್ಯಾರ್ಥಿಗಳು ತಮಗೆ ಇರುವ ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ತೋರಬೇಕು, ಹೆತ್ತವರಿಗೆ ಮತ್ತು ದೇಶಕ್ಕೆ ಕೀರ್ತಿ ತರಬೇಕು ಎಂದು ಹೆಸರಾಂತ ಜಾನಪದ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ಕರೆನೀಡಿದರು.


ಅವರು ನಗರದ ಜೆ.ಸಿ‌.ರಸ್ತೆಯಲ್ಲಿರುವ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಶಾಲಾ ಸಂಭ್ರಮ - ೨೦೨೪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಈ ಹಿಂದೆ ಶಾಲೆಯ ಮೆಟ್ಟಿಲು ಹತ್ತಲು ಸಾಕಷ್ಟು ಕಷ್ಟಪಡಬೇಕಿತ್ತು. ಬಡವರ ಮಕ್ಕಳು ಶಿಕ್ಷಣ ಪಡೆಯಲು ಸಾಕಷ್ಟು ತಾಪತ್ರಯಗಳಿದ್ದವು. ಬಟ್ಟೆ, ಸ್ಲೇಟು ಬಳಪಗಳಿಗೂ ತಾಪತ್ರಯವಿತ್ತು. ಕುಟುಂಬದ ಕಷ್ಟವೇ ಹೆಚ್ಚಾಗಿದ್ದ ಸಂದರ್ಭದಲ್ಲಿ ವಿದ್ಯಾಭ್ಯಾಸ ಎಂಬುದು ಮರಿಚೀಕೆಯಾಗಿತ್ತು. ನಿಮಗೆ ಅಂತಹ ಕಷ್ಟಗಳಿಲ್ಲ. ಈ ಕಾರಣದಿಂದ ಉತ್ತಮ ಅಭ್ಯಾಸ ನಡೆಸಿ, ಜೀವನದಲ್ಲಿ ಮಹತ್ತರವಾದ ಸಾಧನೆ ಮಾಡಿ. ಮಾವಿನ ಮರಕ್ಕೆ ಕಲ್ಲು ಹೊಡೆಯುತ್ತಾರೆಯೇ ವಿನಾ, ಜಾಲಿಮರಕ್ಕೆ ಯಾರು ಸಹ ಕಲ್ಲು ಹೊಡೆಯುವುದಿಲ್ಲ ಎಂಬುದನ್ನು ಅರಿತುಕೊಳ್ಳಿ ಎಂದರು‌.


ಜೀವನದಲ್ಲಿ ಸಾಧಿಸುವ ಕನಸು ಕಾಣಿ, ಬದುಕಿನಲ್ಲಿ ಆದರ್ಶಗಳನ್ನು ಇಟ್ಟುಕೊಳ್ಳಿ. ಜಮೀನು ಇದ್ದರೆ ಮಳೆ ಬೇಕು, ಓದು ಇದ್ದರೆ ಯಾವ ಮಳೆಯೂ ಬೇಡ. ನಿಮ್ಮ ವಿನಯ‌ ನಿಮ್ಮನ್ನು ಬಹು ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ. ತಾಲೂಕಿನಲ್ಲಿ ಈ ಶಿಕ್ಷಣ ಸಂಸ್ಥೆಗೆ ಸಾಕಷ್ಟು ಇತಿಹಾಸವಿದೆ. ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದ ಕೀರ್ತಿ ಈ ಸಂಸ್ಥೆಗಿದೆ. ಉತ್ತಮ ಫಲಿತಾಂಶ ತರುವ ಮೂಲಕ ಸಂಸ್ಥೆಯ ಗೌರವ ಕಾಪಾಡಿ ಎಂದು ಕರೆನೀಡಿದರು.


ಇದೇ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಬಸವರಾಜೇಗೌಡ ಮಾತನಾಡಿ, ಮಕ್ಕಳು ಓದುವ ಜೊತೆಜೊತೆಗೆ, ಕ್ರಿಯಾಶೀಲ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿ ಸಾಧನೆ ಮಾಡಿರುವ ಬಹುತೇಕರು ಬಹಳಷ್ಟು ಕಷ್ಟದ ಹಿನ್ನೆಲೆಯಿಂದ ಬಂದಿರುವವರೇ. ಈಗ ಕಷ್ಟಪಟ್ಟು ಅಭ್ಯಾಸ ನಡೆಸಿದರೆ, ನೀವು ಸಹ ಭವಿಷ್ಯದಲ್ಲಿ ಉತ್ತಮ ಬದುಕು ಸಾಗಿಸಬಹುದು. ಈ ಹಿನ್ನೆಲೆಯಲ್ಲಿ ಅಭ್ಯಾಸದ ಕಡೆಗೆ ಹೆಚ್ಚಿನ ಒತ್ತು ನೀಡಿ ಎಂದರು.


ಸಂಸ್ಥೆಯ ಅಧ್ಯಕ್ಷ ಟಿ.ಕೆ.ಯೋಗೀಶ್ (ಪಾಪು) ಮಾತನಾಡಿ, ತಾಲೂಕಿನ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶದಿಂದ ಹಲವಾರು ಮಹನೀಯರು ನಮ್ಮ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಆಶಯಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ನಮ್ಮ ಆಡಳಿತ ಮಂಡಳಿ ಸಂಸ್ಥೆಯನ್ನು ನಡೆಸಿಕೊಂಡು ಹೋಗುತ್ತಿದೆ. ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವ ಮೂಲಕ ಸಂಸ್ಥೆಯ ಜೊತೆಗೆ, ನಿಮ್ಮ ಪಾಲಕರು ಹಾಗೂ ಶಿಕ್ಷಕರಿಗೆ ಕೀರ್ತಿ ತರಬೇಕು ಎಂದರು.


ಕಾರ್ಯಕ್ರಮದಲ್ಲಿ ಬಿಇಓ ಮರೀಗೌಡ, ನಿವೃತ್ತ ಪ್ರಾಂಶುಪಾಲ ಎಂ.ಕೆ.ರಾಮಸ್ವಾಮಿ, ಸಂಸ್ಥೆಯ ಕಾರ್ಯದರ್ಶಿ ಸಿ.ಚನ್ನಪ್ಪ (ಸಿಸಿ), ಖಜಾಂಚಿ ಎಸ್.ಟಿ.ನಾರಾಯಣಗೌಡ, ನಿರ್ದೇಶಕರಾದ ವಿ.ಬಿ.ಚಂದ್ರಯ್ಯ, ನಾಗವಾರ ಶಂಭೂಗೌಡ, ಮಹೇಶ್ವರ, ಅನಂತಮೂರ್ತಿ, ಎಂ.ಎ.ಮಾಲಿನಿ, ಉಪ ಪ್ರಾಂಶುಪಾಲ ಸಿ.ಬಿ.ಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಶಿಕ್ಷಣ ಸಂಯೋಜಕ ಚಕ್ಕೆರೆ ಯೋಗೀಶ್, ಪ್ರಾಂಶುಪಾಲ ಅಶ್ವಥ್, ನಾಗವಾರ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಯರಾಮ್, ಶಿಕ್ಷಕ ಹರಿದಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಾಲೆಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑