Tel: 7676775624 | Mail: info@yellowandred.in

Language: EN KAN

    Follow us :


ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

Posted date: 15 Feb, 2024

Powered by:     Yellow and Red

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸಿಬ್ಬಂದಿಗಳು ಕಾರ್ಯನಿರ್ವಹಿಸುವ ಮತಗಟ್ಟೆಗಳ ಕೇಂದ್ರಕ್ಕೆ ತೆರಳಿದರು. ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ನಡೆಯಲಿರುವ ಚುನಾವಣೆಯ ಮತದಾನ ಫೆ.೧೬ರ ಶುಕ್ರವಾರ ಬೆಳಿಗ್ಗೆ ೮ ರಿಂದ ಆರಂಭಗೊಳ್ಳಲಿದ್ದು, ಈ ಪ್ರಕ್ರಿಯೆಯಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಮತ ಪೆಟ್ಟಿಗೆಗಳು ಹಾಗೂ ಚುನಾವಣಾ ಸಾಮಾಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ಫೆ.೧೫ರ ಗುರುವಾರದಂದು ಅಚ್ಚುಕಟ್ಟಾಗಿ ನೆರವೇರಿದ್ದು, ಮತದಾನ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗಳು  ಮತಗಟ್ಟೆಗಳತ್ತ ತೆರಳಿದರು.


ರಾಮನಗರ ತಾಲ್ಲೂಕು ಆಡಳಿತ ಸೌಧದಲ್ಲಿ ನಡೆದ ಮಸ್ಟರಿಂಗ್ ಕಾರ್ಯದಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಸ್ಥಳದಲ್ಲಿಯೇ ಉಪಸ್ಥಿತರಿದ್ದು, ಮಸ್ಟರಿಂಗ್ ಕಾರ್ಯ ಸುಗಮವಾಗಿ ನಡೆಯಲು ವ್ಯವಸ್ಥೆಗೊಳಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ ಮಸ್ಟರಿಂಗ್ ಕಾರ್ಯದಲ್ಲಿ ಭಾಗವಹಿಸಿ ಚುನಾವಣೆಯು ಯಶಸ್ವಿಯಾಗಿ ನಡೆಸಲು ನಿರ್ದೇಶನಗಳನ್ನು ನೀಡಿದರು.


*ಸುದ್ದಿ ಮತ್ತು ಜಾಹಿರಾತಿಗಾಗಿ  ಸಂಪರ್ಕಿಸಿ:ಮೊ. ನಂ. 9742424949*


ಮತಗಟ್ಟೆಗಳಿಗೆ ನೇಮಕಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೆಳಿಗ್ಗೆ ೯ ಗಂಟೆಯ ಹೊತ್ತಿಗೆ ಮಸ್ಟರಿಂಗ್ ಕಾರ್ಯ ಜರುಗಿದ ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಸೇರತೊಡಗಿದರು. ಇದರ ಜೊತೆಗೆ ಚುನಾವಣೆ ಕಾರ್ಯ ಹಾಗೂ ಮತಗಟ್ಟೆಯ ಬಂದೋಬಸ್ತಿಗಾಗಿ ನಿಯೋಜಿತಗೊಂಡಿರುವ ಪೊಲೀಸರು ಕೂಡ ಆಗಮಿಸಿದ್ದರು. ಮತದಾನ ಪ್ರಕ್ರಿಯೆಗೆ ತೆರಳುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಪೊಲೀಸರನ್ನು ಕರೆದುಕೊಂಡು ಹೋಗಲು ೭ ಜೀಪ್‌ಗಳು ಮಿನಿ ವಿಧಾನಸೌಧದ ಆವರಣದಲ್ಲಿದ್ದವು.


 ಜಿಲ್ಲಾಧಿಕಾರಿ ಹಾಗೂ ಮತ್ತಿತರ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಸ್ಟರಿಂಗ್ ಕಾರ್ಯ ಜರುಗಿದ ಮಿನಿ ವಿಧಾನಸೌಧದ ಎರಡನೇ ಮಹಡಿಗೆ ಬೆಳಿಗ್ಗೆಯೇ ಆಗಮಿಸಿದ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು, ಮಸ್ಟರಿಂಗ್ ಕಾರ್ಯದ ಸಮಗ್ರ ವಿವರವನ್ನು ಪಡೆದುಕೊಂಡರು, ಮತಗಟ್ಟೆ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಯಾವುದೇ ಆತಂಕವಿಲ್ಲದೆ, ಧೈರ್ಯದಿಂದ ಹಾಗೂ ಪ್ರಾಮಾಣಿಕತೆಯಿಂದ ಚುನಾವಣಾ ಕರ್ತವ್ಯ ನಿರ್ವಹಿಸುವಂತೆ ನೈತಿಕ ಸ್ಥೈರ್ಯ ತುಂಬಿದರು.


*ಅಚ್ಚುಕಟ್ಟಾದ ವ್ಯವಸ್ಥೆ:*

ತಾಲ್ಲೂಕು ಆಡಳಿತ ಸೌಧದಲ್ಲಿ ಏರ್ಪಡಿಸಲಾಗಿದ್ದ ಮಸ್ಟರಿಂಗ್ ಕಾರ್ಯ ಯಶಸ್ವಿಯಾಗಿ, ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ನೆರವೇರಿಸಲು ಪೂರ್ವಭಾವಿಯಾಗಿ ಯೋಜನೆ ರೂಪಿಸಿ, ಅದರಂತೆಯೇ ಕಾರ್ಯಗತಗೊಳಿಸಲಾಯಿತು.  ಚುನಾವಣಾ ಸಾಮಗ್ರಿ ವಿತರಣೆ, ಮತ ಪೆಟ್ಟಿಗೆಗಳ ವಿತರಣೆ, ಚುನಾವಣೆ ಮತಗಟ್ಟೆಗಳಿಗೆ ನಿಯೋಜನೆ, ಚುನಾವಣಾ ಕರ್ತವ್ಯಕ್ಕೆ ತೆರಳಲು ಆಗಮಿಸಿದ್ದ ಅಧಿಕಾರಿ, ಸಿಬ್ಬಂದಿಗಳಿಗೆ ಕುಡಿಯುವ ನೀರು ಹಾಗೂ ಉಟೋಪಚಾರ ವ್ಯವಸ್ಥೆ ಕೈಗೊಳ್ಳಲಾಯಿತು. ಮತಗಟ್ಟೆಗಳತ್ತ ತೆರಳುವ ಮುನ್ನ ಮಧ್ಯಾಹ್ನದ ಊಟ ಪೂರೈಸಿಕೊಂಡು ಹೋಗುವ ರೀತಿ ವ್ಯವಸ್ಥೆ ಮಾಡಲಾಯಿತು.  ಮತದಾನ ಕಾರ್ಯಕ್ಕೆ ನೇಮಕಗೊಂಡಿರುವ ಹಲವು ಅಧಿಕಾರಿ, ಸಿಬ್ಬಂದಿಗಳೂ ಕೂಡ ಮಸ್ಟರಿಂಗ್ ಕಾರ್ಯಕ್ಕೆ ಕೈಗೊಂಡ ವ್ಯವಸ್ಥೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.  ಮಧ್ಯಾಹ್ನದ ಊಟ ಸವಿದ ಅಧಿಕಾರಿ, ಸಿಬ್ಬಂದಿಗಳು, ತಮಗೆ ನಿಯೋಜಿಸಲಾದ ಮತಗಟ್ಟೆಗಳಿಗೆ ಆಯಾ ಮಾರ್ಗದ ವಾಹನಗಳ ಮೂಲಕ ತೆರಳಿದರು.


*ಮತಗಟ್ಟೆಗಳ ವಿವರ:*

ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು 9 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರ ತಾಲ್ಲೂಕುಗಳಲ್ಲಿ ತಲಾ 2 ಹಾಗೂ ಹಾರೋಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಒಂದು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ರಾಮನಗರ ತಾಲ್ಲೂಕಿನಲ್ಲಿ ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿ ಆವರಣದಲ್ಲಿ 2 ಮತಗಟ್ಟೆಗಳಿದ್ದು, ಇಲ್ಲಿ 654 ಮತದಾರರಿದ್ದಾರೆ.

ಮಾಗಡಿ ತಾಲ್ಲೂಕಿನ ಕುದೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಯಲ್ಲಿ 216 ಮತದಾರರು ಹಾಗೂ ತಹಶೀಲ್ದಾರರ ಕಚೇರಿಯ ಕೋರ್ಟ್ ಆವರಣದಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆ ವ್ಯಾಪ್ತಿಯ 248 ಮತದಾರರು ಸೇರಿದಂತೆ ಒಟ್ಟು 464 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ತಾಲ್ಲೂಕು ಆಡಳಿತ ಸೌಧದ ತಹಶೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ 631 ಜನ ಮತದಾರರಿದ್ದರೆ, ಕೋಡಂಬಳ್ಳಿಯ ನಾಡಕಚೇರಿಯಲ್ಲಿ ರಚಿಸಲಾಗಿರುವ ಮತಗಟ್ಟೆಯಲ್ಲಿ 140 ಜನ ಮತದಾರರಿದ್ದು ಒಟ್ಟು ಚನ್ನಪಟ್ಟಣ ತಾಲ್ಲೂಕಿನ 771 ಮತದಾರರಿದ್ದಾರೆ.

ಹಾರೋಹಳ್ಳಿ ತಾಲೂಕಿನ ಕೆಪಿಎಸ್ ಜಿಎಚ್‌ಪಿಎಸ್ ಮಾಡಲ್ ಹೈಯರ್ ಪ್ರೈಮರಿj ಸ್ಕೂಲ್‌ನಲ್ಲಿ ಸ್ಥಾಪಿಸಲಾಗಿರುವ ಒಂದು ಮತಗಟ್ಟೆಯಲ್ಲಿ 126 ಜನ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಕನಕಪುರ ತಾಲ್ಲೂಕಿನ ತಾಲ್ಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಎರಡು ಮತಗಟ್ಟೆಗಳಲ್ಲಿ 528 ಜನ ಮತದಾರರಿದ್ದಾರೆ. 


*36 ಸಿಬ್ಬಂದಿ ಮತಗಟ್ಟೆ ಕರ್ತವ್ಯಕ್ಕೆ ನೇಮಕ:*

ಜಿಲ್ಲೆಯಲ್ಲಿ ಮತದಾನ ಕಾರ್ಯ ಸಮರ್ಪಕವಾಗಿ ಜರುಗಿಸಲು  ಒಟ್ಟು 36 ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.


*2,543 ಮತದಾರರು:* ಜಿಲ್ಲೆಯಲ್ಲಿ 1,456 ಪುರುಷ ಹಾಗೂ 1,087 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,543 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮತದಾನ ಕಾರ್ಯ ಫೆ. 16 ರಂದು ಬೆಳಿಗ್ಗೆ 08 ಗಂಟೆ¬ಯಿಂದ ಸಂಜೆ 04 ಗಂಟೆಯವರೆಗೆ ನಡೆಯಲಿದ್ದು, ಸುಗಮ ಮತದಾನಕ್ಕೆ ಅಗತ್ಯ ವ್ಯವಸ್ಥೆಯನ್ನು ಜಿಲ್ಲಾಡಳಿತ ಕೈಗೊಂಡಿದೆ. ಅರ್ಹ ಮತದಾರರು ತಪ್ಪದೆ ತಮ್ಮ ಮತದಾನದ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತಾಗಲಿ ಎಂಬುದು ಜಿಲ್ಲಾಡಳಿತದ ಆಶಯವಾಗಿದೆ.


ಗೋ. ರಾ. ಶ್ರೀನಿವಾಸ 

ಮೊ. ನಂ.- 9845856139

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑