Tel: 7676775624 | Mail: info@yellowandred.in

Language: EN KAN

    Follow us :


ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

Posted date: 16 Feb, 2024

Powered by:     Yellow and Red

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿಂದ ಅವುಗಳನ್ನು ಯಾರೂ ಕಸಿಯುವಂತೆಯೂ ಇಲ್ಲ. ಇತರ ವ್ಯಕ್ತಿ, ಸಮೂಹ, ಸಂಸ್ಥೆ ಅಥವಾ ಸರಕಾರಗಳಿಂದ ವ್ಯಕ್ತಿಗಳ ಹಕ್ಕುಗಳ ಮೇಲೆ ಆಕ್ರಮಣವಾಗದಂತೆ ರಕ್ಷಿಸಬೇಕಾಗುತ್ತದೆ. ಆ ಕಾರಣಕ್ಕಾಗಿ ಭಾರತ ಸಂವಿಧಾನದಲ್ಲಿ, ‘ಭಾರತದ ಜನತೆಯಾದ ನಾವು...’ ನಮಗೆ ನಾವೇ ಕೆಲವು ಮೂಲಭೂತ ಹಕ್ಕುಗಳನ್ನು ಸುನಿಶ್ಚಿತಗೊಳಿಸಿಕೊಂಡಿದ್ದೇವೆ.

ಸಂವಿಧಾನದ ಮೂರನೇ ಭಾಗದಲ್ಲಿ ಅನುಚ್ಛೇದ 12ರಿಂದ 35ರ ವರೆಗೆ ಭಾರತದ ಎಲ್ಲಾ ನಾಗರಿಕರಿಗೆ ಆರು ಬಗೆಯ ಮೂಲಭೂತ ಹಕ್ಕುಗಳ ರಕ್ಷಣೆಯನ್ನು ನೀಡಲಾಗಿದೆ. ಇಡೀ ಸಂವಿಧಾನವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ಇಡೀ ದೇಶದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳು, ಮತ್ತು ಅವುಗಳ ಮೂಲಕ ಸೃಷ್ಟಿಯಾಗುವ ಎಲ್ಲಾ ಸಂಪತ್ತು, ಸೌಕರ್ಯ, ಸೇವೆ ಇತ್ಯಾದಿಗಳು ಅಂತಿಮವಾಗಿ ಒಬ್ಬೊಬ್ಬ ನಾಗರಿಕರ ಅಭ್ಯುದಯಕ್ಕಾಗಿ ದುಡಿಯುತ್ತವೆ. ಅದಕ್ಕೇ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್, ‘ಸಂವಿಧಾನದ ಮೂಲ ಘಟಕ ಒಬ್ಬ ವ್ಯಕ್ತಿ ಎಂಬುದು ಮನವರಿಕೆಯಾದಾಗ ನನಗೆ ಸಂತೋಷವಾಗುತ್ತದೆ’ ಎಂದಿದ್ದರು.

ಅದಕ್ಕೆ ಸಂವಾದಿಯೆನ್ನುವಂತೆ ಮಹಾತ್ಮ ಗಾಂಧಿಯವರು, “ಹಕ್ಕುಗಳ ನಿಜವಾದ ಮೂಲ, ಕರ್ತವ್ಯ. ನಾವೆಲ್ಲರೂ ನಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ, ಹಕ್ಕುಗಳನ್ನು ಪಡೆಯುವುದು ಕಷ್ಟವಾಗುವುದಿಲ್ಲ.” ಎಂದರು. ಕೇವಲ ಹಕ್ಕುಗಳನ್ನು ಬೇಡುವವರ ಕುರಿತು ಹೀಗೆ ಹೇಳಿದ ಅವರು ನಾವು ಕರ್ತವ್ಯಗಳನ್ನು ಪಾಲಿಸಿದೇ ಬರೀ ಹಕ್ಕುಗಳ ಬೆನ್ನು ಹತ್ತಿ ಓಡಿದರೆ ಅವು ನಮ್ಮಿಂದ ಇನ್ನಷ್ಟು ದೂರ ಹೋಗುತ್ತವೆ ಎಂದರು.


ನಮ್ಮ ಸಂಸ್ಕೃತಿಯಲ್ಲಿ ಕರ್ತವ್ಯವೇ ಧರ್ಮ ಎನ್ನುತ್ತಾರೆ. ಹಕ್ಕುಗಳನ್ನು ಮೂಲಭೂತ ಎಂದು ಭಾವಿಸಲಾದ ಸಮಾಜದಲ್ಲಿ ವಾಸ್ತವವಾಗಿ ಕರ್ತವ್ಯಗಳು ಆ ವೈಯಕ್ತಿಕ ಹಕ್ಕುಗಳನ್ನು ಕಾಪಾಡುವ ಮತ್ತು ಎತ್ತಿ ಹಿಡಿಯುವ ಪಾತ್ರವನ್ನು ವಹಿಸುತ್ತವೆ. ಹೀಗಾಗಿ, ಕರ್ತವ್ಯವು ಹಕ್ಕಿನ ಅವಿಭಾಜ್ಯ ಅಂಗ. ಎಲ್ಲರೂ ಕರ್ತವ್ಯಗಳನ್ನು ಪಾಲಿಸಿದರೆ ಎಲ್ಲರ ಹಕ್ಕುಗಳು ತಾನಾಗಿಯೇ ರಕ್ಷಿಸಲ್ಪಡುತ್ತವೆ. ಮೂಲಭೂತ ಹಕ್ಕುಗಳು ವೈಯಕ್ತಿಕ ಘನತೆ ಮತ್ತು ಪ್ರಗತಿಯನ್ನು ಉತ್ತೇಜಿಸಿದರೆ ಮೂಲಭೂತ ಕರ್ತವ್ಯಗಳು ಪರಿಣಾಮತಃ ಸಾಮಾಜಿಕ ಐಕ್ಯ, ದೇಶಪ್ರೇಮ ಮತ್ತು ರಾಷ್ಟ್ರೀಯ ಅಖಂಡತೆಯನ್ನು ಸುನಿಶ್ಚಿತಗೊಳಿಸುತ್ತವೆ.

ಭಾರತ ಸಂವಿಧಾನದ ಮೂರನೇ ಭಾಗದಲ್ಲಿ ನಮ್ಮ ಮೂಲಭೂತ ಹಕ್ಕುಗಳ ವಿವರಣೆ ಇದ್ದರೆ, ನಾಲ್ಕನೆಯ ಭಾಗದಲ್ಲಿ ನಮ್ಮ ಮೂಲಭೂತ ಕರ್ತವ್ಯಗಳ ಪಟ್ಟಿಯಿದೆ. ವಾಸ್ತವವಾಗಿ ಮೂರನೇ ಭಾಗದಲ್ಲಿ ಪ್ರಮುಖವಾಗಿ ಇರುವುದು ರಾಜ್ಯನೀತಿಯ ನಿರ್ದೇಶಕ ತತ್ವಗಳು. ಅದರ ನಂತರ ಸಂವಿಧಾನದ ಭಾಗ 4 ಎ, ಅನುಚ್ಛೇದ 51 ಎ-ಭಾಗದಲ್ಲಿ, ಎ-ಯಿಂದ ಕೆ ವರೆಗೆ 11 ಮೂಲಭೂತ ಕರ್ತವ್ಯಗಳನ್ನು ನಮಗೆ ನಾವು ವಿಧಿಸಿಕೊಂಡಿದ್ದೇವೆ.

51 ಎ. ಮೂಲಭೂತ ಕರ್ತವ್ಯಗಳು:  

(ಎ) ಸಂವಿಧಾನಕ್ಕೆ ಬದ್ಧವಾಗಿರುವುದು ಹಾಗೂ ಅದರ ಆದರ್ಶಗಳನ್ನು ಮತ್ತು ಸಂಸ್ಥೆಗಳನ್ನು, ರಾಷ್ಟ್ರೀಯ ಧ್ವಜವನ್ನು ಹಾಗೂ ರಾಷ್ಟ್ರ ಗೀತೆಯನ್ನು ಗೌರವಿಸುವುದು;

(ಬಿ) ನಮ್ಮ ರಾಷ್ಟ್ರೀಯ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಸ್ಫೂರ್ತಿದಾಯಕವಾಗಿದ್ದ ಉದಾತ್ತ ಆದರ್ಶಗಳನ್ನು ಗೌರವಿಸುವುದು ಮತ್ತು ಅನುಸರಿಸುವುದು;


*ಸುದ್ದಿ ಮತ್ತು ಜಾಹಿರಾತಿಗಾಗಿ  ಸಂಪರ್ಕಿಸಿ:ಮೊ. ನಂ: 9742424949*


(ಸಿ) ಭಾರತದ ಸಾರ್ವಭೌಮತ್ವವನ್ನು, ಐಕ್ಯತೆ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದು ಹಾಗೂ ಸಂರಕ್ಷಿಸುವುದು;

(ಡಿ) ದೇಶವನ್ನು ರಕ್ಷಿಸುವುದು ಮತ್ತು ಕರೆಬಂದಾಗ ರಾಷ್ಟ್ರೀಯ ಸೇವೆ ಸಲ್ಲಿಸುವುದು;

(ಇ) ಧಾರ್ಮಿಕ, ಭಾಷಾ ಮತ್ತು ಪ್ರಾದೇಶಿಕ ಅಥವಾ ಜಾತಿ ಪಂಗಡಗಳ ಭೇದಭಾವಗಳನ್ನು ಮೀರಿ ಭಾರತದ ಎಲ್ಲಾ ಜನರಲ್ಲಿ ಸಾಮರಸ್ಯವನ್ನು ಮತ್ತು ಸಮಾನ ಭ್ರಾತೃತ್ವದ ಭಾವನೆಯನ್ನು ಬೆಳೆಸುವುದು ಮತ್ತು ಸ್ತ್ರೀಯರ ಗೌರವಕ್ಕೆ ಕುಂದುಂಟು ಮಾಡುವ ಆಚರಣೆಗಳನ್ನು ಬಿಟ್ಟುಬಿಡುವುದು;

(ಎಫ್) ನಮ್ಮ ಸಮ್ಮಿಶ್ರ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಗೌರವಿಸುವುದು ಹಾಗೂ ಕಾಪಾಡುವುದು;

(ಜಿ) ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಹಾಗೂ ಅಭಿವೃದ್ಧಿಗೊಳಿಸುವುದು ಮತ್ತು ಪ್ರಾಣಿಗಳಿಗೆ ಅನುಕಂಪ ತೋರಿಸುವುದು;

(ಹೆಚ್) ವೈಜ್ಞಾನಿಕ ಮನೋವೃತ್ತಿ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣೆಯ ಮನೋಭಾವವನ್ನು ಬೆಳೆಸುವುದು;

(ಐ) ಸಾರ್ವಜನಿಕ ಸ್ವತ್ತನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು;

(ಜೆ) ರಾಷ್ಟ್ರವು ನಿರಂತರವಾಗಿ ಸಾಧನೆಯ ಮತ್ತು ಸಿದ್ಧಿಯ ಉನ್ನತ ಮಟ್ಟಗಳನ್ನು ತಲುಪಲು ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಯ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಉನ್ನತಿಗಾಗಿ ಶ್ರಮಿಸುವುದು.

(ಕೆ) ತಂದೆ- ತಾಯಿ ಅಥವಾ ಪೋಷಕರು, ಆರರಿಂದ ಹದಿನಾಲ್ಕು ವಯಸ್ಸಿನ ತಮ್ಮ ಮಕ್ಕಳಿಗೆ ಶಿಕ್ಷಣ ಪಡೆಯಲು ಅವಕಾಶಗಳನ್ನು ಒದಗಿಸುವುದು/.

ಇವುಗಳಲ್ಲಿ ನನ್ನ ಮಟ್ಟಿಗೆ ಅನುಚ್ಛೇದ 51 ಎ (ಎಚ್) ನಲ್ಲಿರುವ, ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವುದು ಎಂಬುದು ಹೆಚ್ಚು ಮಹತ್ವದ ಕರ್ತವ್ಯವಾಗಿ ತೋರುತ್ತದೆ. ಏಕೆಂದರೆ ಜನತಂತ್ರದ ಭದ್ರ ಬುನಾದಿಯೇ ಪ್ರಜ್ಞಾವಂತ, ಸ್ವತಂತ್ರ ಮನೋಭಾವದ ನಾಗರಿಕರು. ಈ ಪ್ರಶ್ನೆ ಕೇಳುವ, ಗಟ್ಟಿ ಪುರಾವೆಗಳಿರುವುದನ್ನಷ್ಟನ್ನೇ ಒಪ್ಪುವ, ಮತ ಧರ್ಮ, ಅಲೌಕಿಕ ನಂಬಿಕೆ, ಅಂಧ ಶ್ರದ್ಧೆಗಳನ್ನು ದೇಶದ ರಾಜಕೀಯ, ಆರ್ಥಿಕ ಚೌಕಟ್ಟಿನಲ್ಲಿ ಅಡ್ಡಿಬಾರದಂತೆ ಎಚ್ಚರಿಕೆ ವಹಿಸುವ ತಯಾರಿ ವೈಜ್ಞಾನಿಕ ಮನೋವೃತ್ತಿ ಉಳ್ಳವರಿಗೆ ಮಾತ್ರ ಇರುತ್ತದೆ. ವೈಜ್ಞಾನಿಕ ಮನೋವೃತ್ತಿ ಉಳ್ಳವರಿಗೆ ಅದರ ಮುಂದಿನ ಭಾಗವಾದ. ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣೆಯ ಮನೋಭಾವವನ್ನು ಸಹಜವಾಗಿಯೇ ಮೈಗೂಡಿರುತ್ತವೆ. ಉಳಿದ ಹತ್ತು ಕರ್ತ್ಯವ್ಯಗಳ ಪಾಲನೆಯೂ ಅವರಿಗೆ ವಿಶೇಷವಾಗಿ ತೋರುವುದಿಲ್ಲ. ಆದ್ದರಿಂದ ಜವಾಬ್ದಾರಿಯುತವಾದ ನಾಗರಿಕರಾಗಲು ಸ್ವತಃ ನಾವು ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳಬೇಕು, ಮತ್ತು ಇತರರಲ್ಲಿಯೂ ಅದನ್ನು ಪ್ರೇರೇಪಿಸುವುದಕ್ಕೆ ಶ್ರಮಿಸಬೇಕು.

ಇನ್ನು ಇಂತಹ ಸಂವಿಧಾನದ ಆಶಯಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದು ಅವರಿಗೆ ನನ್ನ ಅಭಿನಂದನೆಗಳನ್ನು ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑