Tel: 7676775624 | Mail: info@yellowandred.in

Language: EN KAN

  Follow us :


ಸರ್ಕಾರಿ ಶಾಲಾ ಮಕ್ಕಳು ಮತ್ತು ರೈತರಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿಗಳಿಗೊಂದು ಪತ್ರ, ಸಿ ಪುಟ್ಟಸ್ವಾಮಿ.

Posted date: 31 Jul, 2018

Powered by:     Yellow and Red

ಸರ್ಕಾರಿ ಶಾಲಾ ಮಕ್ಕಳು ಮತ್ತು ರೈತರಿಗೆ ಅನುಕೂಲವಾಗುವಂತೆ ಪ್ರಧಾನಮಂತ್ರಿಗಳಿಗೊಂದು ಪತ್ರ, ಸಿ ಪುಟ್ಟಸ್ವಾಮಿ.

ಗೌರವಾನ್ವಿತರೇ;         ಇಡೀ ರಾಷ್ಟ್ರದಲ್ಲಿ ಆರರಿಂದ ಹದಿನೇಳು ವರ್ಷದ  ಸರಿಸುಮಾರು 29,59,50,674 ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳು ಇದ್ದು ಶೇಕಡಾ ಐವತ್ತಕ್ಕೂ ಹೆಚ್ಚು ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ಬಳಲುತಿದ್ದಾರೆ. ಈ ಪೈಕಿ ಬಹುತೇಕ ಸರ್ಕಾರಿ ಶಾಲಾ ಮಕ್ಕಳಿದ್ದು ಅವರೆಲ್ಲರೂ ಬಡತನ ರೇಖೆಗಿಂತ ಕೆಳಗಿರುತ್ತಾರೆ.

ಹಾಗೇ ದೇಶದ ಬೆನ್ನೆಲುಬು ಎನಿಸಿಕೊಂಡ ಜೀವನಾಡಿ ರೈತರು ಸಹ ಅತೀವೃಷ್ಟಿ, ಅನಾವೃಷ್ಟಿ, ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ, ಮಾರುಕಟ್ಟೆ ಭದ್ರತೆ ಇಲ್ಲದಿದ್ದರೂ ಸಂಕಷ್ಟಗಳನ್ನು ಎದುರಿಸುತ್ತಾ, ಬೆಳೆ ಬೆಳೆದರೂ ಸಹ ಅಪಾರ ಕಷ್ಟ ನಷ್ಟಗಳಿಗೆ ಬಲಿಯಾಗುತ್ತಿದ್ದಾರೆ. ಆದಾಗ್ಯೂ ದೇಶದ ಆಹಾರ ಭದ್ರತೆಯನ್ನು ಸ್ವಾವಲಂಬನೆಯನ್ನಾಗಿಸಿ ತಾವು ಆರ್ಥಿಕ ಅಭದ್ರತೆಗೆ ಒಳಗಾಗಿದ್ದೂ ಲಕ್ಷಾಂತರ ರೈತರು ಆತ್ಮಹತ್ಯೆಗೆ ಬಲಿಯಾಗಿದ್ದಾರೆ.

ರೈತರು ಮತ್ತು ಹದಿಹರೆಯದ ಮಕ್ಕಳಿಗೂ ಅನುಕೂಲವಾಗುವಂತೆ ಹಾಲು,ಎಳನೀರು ಮತ್ತು ಆಯಾಯ ಋತುಮಾನಗಳಲ್ಲಿ ತೋಟಗಾರಿಕೆಯ ಉತ್ಪನ್ನಗಳಾದ ಹಣ್ಣು, ಹಣ್ಣಿನ ಮತ್ತು ಕಬ್ಬಿನ ರಸಗಳನ್ನು (ಸಂಸ್ಕರಿತ 100ml ಟೆಟ್ರಾ ಪ್ಯಾಕ್) ಹಾಗೂ ಮಧ್ಯಾಹ್ನದ ಬಿಸಿಯೂಟದಲ್ಲಿ "ಸಿರಿಧಾನ್ಯ"ಗಳಾದ ರಾಗಿ, ಆರ್ಕಾ, ನವಣೆ, ಸಾಮೆ, ಸಜ್ಜೆ, ಬರಗು, ಊದಲು, ಕೋರ್ಲೆ ಮತ್ತು ಬಿಳಿಜೋಳ ದ ಉಪಹಾರವನ್ನು ಶಾಲಾ ಮಕ್ಕಳಿಗೆ ನೀಡಿದರೆ ಮಕ್ಕಳು ಮತ್ತು ರೈತರು ಇಬ್ಬರಿಗೂ ಸರ್ಕಾರ ನೆರವಾದಂತಾಗುತ್ತದೆ.

 

ಮೇಲ್ಕಂಡ ಐತಿಹಾಸಿಕ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿದ್ದೇ ಆದರೇ ಪ್ರಸ್ತುತ ಹದಿಹರೆಯದ ಮಕ್ಕಳಲ್ಲಿನ ಪೌಷ್ಟಿಕಾಂಶದ ಕೊರತೆ ನಿವಾರಣೆ ಆಗಲಿದ್ದು, ಮಕ್ಕಳ ಆರೋಗ್ಯಕ್ಕೆ ಪ್ರಾಶಸ್ತ್ಯ ನೀಡಿದಂತಾಗಿ ಭವಿಷ್ಯದ ಪ್ರಜೆಗಳು ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಲಿದ್ದಾರೆ.

 

ದೇಶದಲ್ಲಿ ಪ್ರಸಕ್ತ ಉತ್ಪಾದನೆಗಳು;


ಆಹಾರ ಪದಾರ್ಥಗಳು: 277 ಲಕ್ಷ ಮೆಟ್ರಿಕ್ ಟನ್.


ತರಕಾರಿಗಳು ಹಣ್ಣು ಹಂಪಲುಗಳು: 305 ಲಕ್ಷ ಮೆಟ್ರಿಕ್ ಟನ್.


ಹಾಲು: 165 ಲಕ್ಷ ಮೆಟ್ರಿಕ್ ಟನ್  ಉತ್ಪಾದನೆಯಾಗುತ್ತಿವೆ.


ಈ ಮೇಲ್ಕಂಡ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಸಾಧ್ಯವಾಗಲಿದ್ದು ರೈತರಿಗೆ ಆರ್ಥಿಕವಾಗಿ ನೆರವಾಗುವ ಮೂಲಕ ಅವರ ಆದಾಯ ದ್ವಿಗುಣವಾಗಲಿದೆ.

 

ಮತ್ತು ಈ ಸಂಬಂಧಿತ ಉಪ ಉತ್ಪನ್ನಗಳನ್ನು ಉತ್ಪಾದಿಸಲು ಸಂಸ್ಕರಣ ಘಟಕಗಳನ್ನು ಪ್ರಮಾಣಕ್ಕನುಗುಣವಾಗಿ ಪ್ರಾರಂಭಿಸಿದ್ದೇ ಆದರೇ ಕೋಟ್ಯಂತರ ಉದ್ಯೋಗಗಳು ಸೃಷ್ಟಿಯಾಗಲಿವೆ,


ಮೇಲಿನ ದೇಶಿ ಉತ್ಪನ್ನಗಳನ್ನು ಪ್ರಪ್ರಥಮ ಬಾರಿಗೆ ಮಕ್ಕಳ ಬಾಯಿಗೆ ಪರಿಚಯಿಸಿದ್ದೇ ಆದರೆ ಈ ಉತ್ಪನ್ನಗಳ ಮೇಲೆ ಸಾರ್ವಜನಿಕರ ಒತ್ತಾಸೆಯು ಸಾಧ್ಯವಾಗಲಿದ್ದು ಪ್ರತಿನಿತ್ಯ ವಿದೇಶಗಳಿಗೆ ಹರಿದುಹೋಗುತ್ತಿರುವ ಏಳು ಸಾವಿರ ಕೋಟಿ ರೂಪಾಯಿಗಳ ರಾಸಾಯನಿಕ ಮಿಶ್ರಿತ ತಂಪು ಪಾನೀಯಗಳಿಗೆ ಪರ್ಯಾಯವಾಗಿ ಈ ದೇಶಿ ಉತ್ಪನ್ನಗಳು ವಿಜೃಂಭಿಸಲಿವೆ.


ಭಾವಿ ಪ್ರಜೆಗಳ ಆರೋಗ್ಯ ರಕ್ಷಣೆಗೆ ಮತ್ತು ರೈತರ ಆರ್ಥಿಕ ಸ್ವಾವಲಂಬನೆಗೆ ಬಹುದೊಡ್ಡ ಕೊಡುಗೆಯಾಗಬಲ್ಲ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರಜ್ಞಾವಂತ ಸಮುದಾಯ ಮಾಧ್ಯಮಗಳಾದಿಯಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಮತ್ತು ಹಳ್ಳಿ ಮೂಲದ ಟೆಕ್ಕಿಗಳು, ತಾಂತ್ರಿಕ ಪರಿಣಿತರು, ಸಾಮಾಜಿಕ ಪರಿಣಿತರು ತಂತಮ್ಮ ಸಾಮಾಜಿಕ ಜಾಲತಾಣದಲ್ಲಿ ಒತ್ತಾಸೆ ಮೂಡಿಸಬೇಕೆಂದು ಹಿರಿಯ ರೈತ ಮುಖಂಡರಾದ ಸಿ ಪುಟ್ಟಸ್ವಾಮಿ ಯವರು ಮನವಿ ಮಾಡಿರುತ್ತಾರೆ.


ಕರ್ನಾಟಕದಲ್ಲಿ 2012 ರ ಇಸವಿಯಲ್ಲಿ ಇದೇ ಸಿ ಪುಟ್ಟಸ್ವಾಮಿಯವರು ಮತ್ತು ಇತರರ ನೇತೃತ್ವದಲ್ಲಿ ರಾಜ್ಯದ ಅನೇಕ ಭಾಗದ ರೈತರು ಭಾಗವಹಿಸಿ ಕೈಗೊಂಡ ಹೋರಾಟದ ಫಲವಾಗಿ ಕ್ಷೀರ ಭಾಗ್ಯ ಸಾಧ್ಯವಾಗಿದ್ದು, ಎಲ್ಲಾ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ಮೇಲ್ಕಂಡ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕೋರುತ್ತೇವೆ.


ಹೀಗೊಂದು ವಾರ್ಷಿಕ ಲೆಕ್ಕಾಚಾರ;

ಭಾರತದಲ್ಲಿ ಆರರಿಂದ ಹದಿನಾರು ವರ್ಷಗಳ ಅಂದಾಜು ಮಕ್ಕಳ ಸಂಖ್ಯೆ 29,59,50,674. ಇದರಲ್ಲಿ ಹದಿನಾರು ಕೋಟಿ ಸರ್ಕಾರಿ ಶಾಲಾ ಮಕ್ಕಳಿದ್ದಾರೆ.


ದೇಶದಲ್ಲಿ ಹದಿನಾರು ವರ್ಷ ಕೆಳಗಿನ ಮಕ್ಕಳಿಗೆ 240 ದಿನ ಪ್ರತಿ ಮಕ್ಕಳಿಗೆ ಹಾಲು ನೀಡಿದರೆ ತಲಾ ಐದು ರೂಪಾಯಿಗಳಂತೆ ವಾರ್ಷಿಕ 1200 ರೂಗಳು.


ಬಾಳೆಹಣ್ಣು 30ದಿನ, ಸೀಬೆ, ಸಪೋಟ 20ದಿನ, ಮಾವಿನ ಹಣ್ಣಿನ ರಸ 35ದಿನ, ಕಬ್ಬಿನ ಹಾಲು 40ದಿನ, ಹಳದಿ ಹಣ್ಣುಗಳ ರಸ 25 ದಿನ, ದ್ರಾಕ್ಷಿ ಹಣ್ಣು 25ದಿನ, ಎಳನೀರು 35ದಿನ, ಪಪ್ಪಾಯಿ, ಕಲ್ಲಂಗಡಿ ಹಾಗೂ ಇತರೆ ಹಣ್ಣುಗಳು 30ದಿನ ಒಟ್ಟು 240 ದಿನಗಳು ಸಹ ಆಯಾಯ ಋತುಮಾನಗಳಲ್ಲಿ ಕೊಡಬಹುದು.


ಈ ಮೇಲಿನ ಹಣ್ಣುಗಳನ್ನು ಪ್ರಾದೇಶಿಕವಾರು ಲಭ್ಯ ಉತ್ಪತ್ತಿಗಳಲ್ಲಿ ಪ್ರತಿದಿನ ಯಾವುದಾದರೂ ಒಂದು ಹಣ್ಣು ಅಥವಾ ಹಣ್ಣಿನ ರಸವನ್ನು 100ರಿಂದ120 ಮಿಲಿಯ ಟೆಟ್ರಾ ಪ್ಯಾಕ್ ನಲ್ಲಿ ಕೊಟ್ಟರೆ ಪ್ರತಿ ಮಕ್ಕಳಿಗೆ ತಲಾ ಆರು ರೂಪಾಯಿಗಳಂತೆ 1440 ರೂಗಳು ತಗಲುತ್ತವೆ.


ಸುಮಾರು 16ರಿಂದ20 ಕೋಟಿ ಮಕ್ಕಳ ಪೌಷ್ಟಿಕಾಂಶ ಕೊರತೆ ನಿವಾರಣೆಗೆ ಕೇಂದ್ರ ಸರ್ಕಾರವೇ ಮುಂದಾದರೇ ಈ ಯೋಜನೆಯಿಂದ ಆರೋಗ್ಯ ಭಾರತ ನಮ್ಮದಾಗಲಿದೆ. ರಾಜ್ಯ ಸರ್ಕಾರವೂ ಭಾಗಿಯಾಗಬಹುದಾದ ಈ ಮಹತ್ತರ ಯೋಜನೆಯಿಂದ ದೇಶದ ರೈತಾಪಿ ವರ್ಗವನ್ನು ಪ್ರೋತ್ಸಾಹಿಸಿದಂತಾಗುತ್ತದೆ.


ಹದಿನಾರು ಕೋಟಿಗೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿದ್ದು ಒಟ್ಟು ಆರ್ಥಿಕ ವೆಚ್ಚ 48 ಸಾವಿರ ಕೋಟಿ ರೂಪಾಯಿಗಳಾಗುತ್ತದೆ.

ಶಾಶ್ವತವಾಗಿ ಸಂಸ್ಕರಣ ಘಟಕಗಳ ಸ್ಥಾಪನೆಗೆ CFTRI, DRDS, NHM, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಹಾಗೂ ಇನ್ನಿತರೆ ಸಂಸ್ಥೆಗಳ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವುದರ ಜೊತೆಗೆ ದೇಶದಾದ್ಯಂತ ಇರುವ ಬಂಡವಾಳಶಾಹಿ ಕಂಪನಿಗಳ ಪೈಕಿ ಮಾನವೀಯ ದೃಷ್ಟಿಯುಳ್ಳ ಕಂಪನಿಗಳಿಂದ ದೇಣಿಗೆ ಸಂಗ್ರಹಕ್ಕೂ ಪ್ರಯತ್ನಿಸಬಹುದಾಗಿದೆ.


ಪ್ರಸ್ತುತ ಭಾರತ ದೇಶದ ಪ್ರಜೆಗಳ ತಲೆಯ ಮೇಲೆ ಕೇವಲ ದಿನಕ್ಕೊಂದು ರೂಪಾಯಿ ಹೊರೆ ಬೀಳಲಿದೆ.


ಸಿ. ಪುಟ್ಟಸ್ವಾಮಿ

ಅರಳಾಳುಸಂದ್ರ ಚನ್ನಪಟ್ಟಣ ತಾಲ್ಲೂಕು.

(ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ)


ನಿರೂಪಣೆ ಮತ್ತು ಪೋಟೋಗಳು: ಗೋ ರಾ ಶ್ರೀನಿವಾಸ...


ಈ ಮೇಲಿನ ಪತ್ರವನ್ನು ಗೌರವಾನ್ವಿತ ಪ್ರಧಾನ ಮಂತ್ರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು(NRAA ನವದೆಹಲಿ) ಹಾಗೂ ಸಂಬಂಧಿಸಿದ ಎಲ್ಲಾ ಮಂತ್ರಿಗಳು ಮತ್ತು ಅಧಿಕಾರಿಗಳಿಗೆ ತಲುಪಿಸಲಾಗಿದೆ.


ಗೋ ರಾ ಶ್ರೀನಿವಾಸ...
ಮೊ: 9845856139.

ಪ್ರತಿಕ್ರಿಯೆಗಳು

 • Adarsha K C wrote:
  04 Aug, 2018 02:56 pm

  Very nice ......it can helps all students .....and farmers....

 • Shwetha wrote:
  04 Aug, 2018 03:05 pm

  Very great full work done .its help full to all students and farmer.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑