Tel: 7676775624 | Mail: info@yellowandred.in

Language: EN KAN

    Follow us :


ಹಲವಾರು ಅಡೆತಡೆಗಳ ನಡುವೆ ಎದ್ದು ನಿಲ್ಲುವ ಪ್ರಯತ್ನ , ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು

Posted date: 24 Dec, 2018

Powered by:     Yellow and Red

ಹಲವಾರು ಅಡೆತಡೆಗಳ ನಡುವೆ ಎದ್ದು ನಿಲ್ಲುವ ಪ್ರಯತ್ನ , ತಾಲ್ಲೂಕು ವೈದ್ಯಾಧಿಕಾರಿ ಡಾ ರಾಜು

ತಾಲ್ಲೂಕಿನಲ್ಲಿ ಹದಿನೈದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು ಅರವತ್ತೊಂದು ಉಪ ಆರೋಗ್ಯ ಕೇಂದ್ರಗಳಿವೆ, ಗ್ರಾಮೀಣ ಪ್ರದೇಶದ ರೋಗಿಗಳಿಗೆ ಸ್ಥಳಿಯವಾಗಿಯೇ ಚಿಕಿತ್ಸೆ ನೀಡಲಾಗುತ್ತಿದೆ, ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೇ ಇನ್ನೂ ಹೆಚ್ಚಿನ ರೀತಿಯಲ್ಲಿ ಚಿಕಿತ್ಸೆ ದೊರಕುವಂತೆ ಮಾಡಲು ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಲಾಗುವುದು ಎಂದು ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ ಟಿ ಹೆಚ್ ರಾಜು ರವರು ತಿಳಿಸಿದರು.


ಗಂಡಸರ ಸಂತಾನ ಹರಣ ಚಿಕಿತ್ಸೆಗೆ ಪತ್ನಿಯೇ ಅಡ್ಡಗಾಲು


ಪುರುಷರ ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ಪ್ರತಿ ತಿಂಗಳು ಸಹ ಏರ್ಪಾಡು ಮಾಡಲಾಗುತ್ತದೆ, ಕಳೆದ ತಿಂಗಳು ಜಿಲ್ಲೆಯಲ್ಲಿ ಹದಿಮೂರು ತಾಲ್ಲೂಕಿನಲ್ಲಿ ಮೂರು, ಈ ತಿಂಗಳು ಜಿಲ್ಲೆಯಲ್ಲಿ ಏಳು ಚಿಕಿತ್ಸೆಗಳಾದರೆ ತಾಲ್ಲೂಕಿನಲ್ಲಿ ಎರಡು ಶಸ್ತ್ರಚಿಕಿತ್ಸೆ ಆಗಿವೆ, ಬಹುತೇಕ ಎಲ್ಲರಲ್ಲಿಯೂ ಸಹ ಮೂಢ ನಂಬಿಕೆ, ಗಂಡಸರಿಗೆ ಚಿಕಿತ್ಸೆ ಮಾಡಿದರೆ ಮುಂದಿನ ಖಾಸಗಿ ಜೀವನದಲ್ಲಿ ತೊಂದರೆಯಾಗಬಹುದು ಎಂಬ ಹೆದರಿಕೆಯಿಂದ ಗಂಡಸರು ಮುಂದೆ ಬರುವುದಿಲ್ಲ, ನಾವು ಮನವೊಲಿಸಿ ಕರೆತಂದರೂ ಸಹ ಅವರ ಪತ್ನಿ ಬೇಡ ಸ್ವಾಮಿ ಅವರಿಗೇಕೆ ಮಾಡುತ್ತೀರಿ, ನಮಗೆ ಆಪರೇಷನ್ ಮಾಡಿ ಎರಡೂ ಒಂದೇ ಅಲ್ಲವೇ ಎಂದು ದಬಾಯಿಸಿ ಅವರೇ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ, ಹಾಗಾಗಿ ಗಂಡಸರಿಗೆ ಸಂತಾನ ಶಸ್ತ್ರಚಿಕಿತ್ಸೆಯು ಗಣನೀಯವಾಗಿ ಏರಿಕೆಯಾಗುತ್ತಿಲ್ಲ.


ಜಿಲ್ಲೆಗೊಬ್ಬರೇ ಸಂತಾನ ಶಸ್ತ್ರಚಿಕಿತ್ಸಕರು


ಗಂಡಸರ ಸಂತಾನ ಶಸ್ತ್ರಚಿಕಿತ್ಸೆ ಮಾಡುವಂತಹ ಪದವಿ ಮತ್ತು ಅನುಭವವಿರುವವರು ಒಬ್ಬರೇ ವೈದ್ಯರು, ಅವರೂ ಸಹ ಖಾಸಗಿ ವೈದ್ಯರಾದ ಡಾ ರಾಮಕೃಷ್ಣಯ್ಯ ನವರು, ಸರ್ಕಾರದ ಆದೇಶದ ಮೇರೆಗೆ ಅವರು ಶಸ್ತ್ರಚಿಕಿತ್ಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ, ಪ್ರತಿ ತಿಂಗಳು ಸಹ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗೆ ಬಂದು ಶಸ್ತ್ರಚಿಕಿತ್ಸೆ ಮಾಡುತ್ತಾರೆ.


ಪ್ರತಿ ಹದಿನೈದು ದಿನಕ್ಕೊಮ್ಮೆ ಕುಡಿಯುವ ನೀರಿನ ಪರೀಕ್ಷೆ?


ವೈದ್ಯಾಧಿಕಾರಿಗಳ ಆದೇಶದ ಮೇರೆಗೆ ಪ್ರತಿ ಗ್ರಾಮಗಳ ನೀರಿನ ದೊಡ್ಡ ಟ್ಯಾಂಕ್ ಗಳು, ತೊಂಬೆಗಳ ನೀರನ್ನು ನೇರವಾಗಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುವುದರ ಬಗ್ಗೆ ಅವರ ದಾಖಲೆಗಳಲ್ಲಿ ಕಾಣಬರುತ್ತದೆಯಾದರೂ ಸಹ ಯಾವ ಗ್ರಾಮದ ಪ್ರಮುಖರು ಈ ಬಗ್ಗೆ ನಮಗೆ ಗೊತ್ತಿಲ್ಲ, ನೋಡಿಲ್ಲ ಎಂಬ ಉತ್ತರವೇ ದೊರಕುತ್ತದೆ, ಹಾಗಾದರೇ ಇವರು ಯಾವಾಗ, ಎಷ್ಟು ಹೊತ್ತಿನಲ್ಲಿ, ಯಾರು ನೀರನ್ನು ಸಂಗ್ರಹಿಸುತ್ತಾರೆ, ದೊಡ್ಡ ಟ್ಯಾಂಕ್ ಮತ್ತು ತೊಂಬೆಗಳಲ್ಲಿ ನಿಜವಾಗಿಯೂ ಸ್ವಚತೆ ಇದೆಯೇ ? ಎಂಬುದನ್ನು ಆಯಾಯ ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯ, ಅಭಿವೃದ್ಧಿ ಅಧಿಕಾರಿ, ಗ್ರಾಮದ ಮುಖಂಡರ ಜೊತೆ ವೈದ್ಯಾಧಿಕಾರಿಗಳು ಮೂರು ತಿಂಗಳಿಗೊಮ್ಮೆಯಾದರೂ ಖುದ್ದು ಪರೀಕ್ಷೀಸಿದರೆ ಸತ್ಯಾಂಶ ಹೊರಬರಲಿದೆ. ಮತ್ತು ಕುಡಿಯುವ ನೀರಿನಿಂದಾಗುವ ತೊಂದರೆಗಳನ್ನು ತಳಮಟ್ಟದಲ್ಲಿಯೇ ತಡೆಗಟ್ಟಲು ಅನುಕೂಲವಾಗಲಿದೆ.


ಶಾಲಾ ಮಕ್ಕಳಿಗೆ ಆರೋಗ್ಯ ಮಾಹಿತಿ


ಎಲ್ಲಾ ಗ್ರಾಮ ಪಂಚಾಯತಿ ಮತ್ತು ನಗರ ವ್ಯಾಪ್ತಿಯ ಮಾಧ್ಯಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಹಂತಹಂತವಾಗಿ ಶುಚಿತ್ವ, ರೋಗ ಹರಡುವಿಕೆ, ರೋಗ ತಡೆಗಟ್ಟುವುದರ ಬಗ್ಗೆ ಉಪನ್ಯಾಸ ಏರ್ಪಡಿಸಿ, ಅದೇ ವಿಷಯದಲ್ಲಿ ಅವರಿಗೊಂದು ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಹುಮಾನ ಕೊಟ್ಟು ಅರಿವು ಮೂಡಿಸುವ ಸಲುವಾಗಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳ ತಂಡವೊಂದು ನಿರಂತರವಾಗಿ ಕೆಲಸ ಮಾಡುತ್ತಿದ್ದು ಮಕ್ಕಳಲ್ಲಿ ಹೆಚ್ಚಿನ ಜ್ಞಾನಾರ್ಜನೆಯಾಗಲು ಸಹಕಾರಿಯಾಗಿದೆ.


ಜನನಿ ಸುರಕ್ಷಾ ಮತ್ತು ಮಾತೃಪೂರ್ಣ ಯೋಜನೆ


ಜನನಿ ಸುರಕ್ಷಾ ಯೋಜನೆಯ ಗರ್ಭಿಣಿಯರಿಗೆ ಪ್ರೋತ್ಸಾಹ ಧನ ನೀಡುತ್ತಿದ್ದೇವೆ, ಕಡ್ಡಾಯವಾಗಿ ಅವರು ಸರ್ಕಾರಿ ಆಸ್ಪತ್ರೆಯಲ್ಲೇ ಹೆರಿಗೆ ಮಾಡಿಸಿಕೊಳ್ಳಬೇಕು, ಇನ್ನೂ ಮಾತೃಪೂರ್ಣ ಯೋಜನೆಯಲ್ಲಿ ಆಯಾಯ ಅಂಗನವಾಡಿ ವ್ಯಾಪ್ತಿಗೆ ಸಂಬಂಧಿಸಿದ ಗರ್ಭಿಣಿಯರಿಗೆ ಉಚಿತವಾಗಿ ಪ್ರತಿದಿನ ಮಧ್ಯಾಹ್ನ ಊಟ ನೀಡಲಾಗುತ್ತದೆಯಾದರೂ ಬಹುತೇಕ ಗರ್ಭಿಣಿಯರು ಅಂಗನವಾಡಿಗೆ ಹೋಗುವುದಿಲ್ಲ, ಆದರೂ ಕಾರ್ಯಕರ್ತೆಯರು ಪ್ರತಿನಿತ್ಯವೂ ಒಂದೇ ಲೆಕ್ಕ ತೋರಿಸುತ್ತಿರುವುದರ ಬಗ್ಗೆ ವೈದ್ಯಾಧಿಕಾರಿಗಳು ಗಮನಹರಿಸಬೇಕಾಗಿದೆ.




ವೈದ್ಯರ ಕೊರತೆ ಇಲ್ಲ, ಸಿಬ್ಬಂದಿ ಕೊರತೆ ಮಾಮೂಲು


ಹದಿನೈದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೊಬ್ಬರಂತೆ ವೈದ್ಯರಿದ್ದು, ಪ್ರತಿ ಮಂಗಳವಾರ ಅಂಗನವಾಡಿಗಳ ಭೇಟಿ ಇರುತ್ತದೆ, ಸಭೆ ಮತ್ತು ರಜೆ ಕಳೆದರೆ ಕನಿಷ್ಠ ಐದು ದಿನ ಕೇಂದ್ರದಲ್ಲಿ ಇರುತ್ತಾರೆ, ಒಂಭತ್ತು ಹಿರಿಯ ಮಹಿಳಾ ಆರೋಗ್ಯಾಧಿಕಾರಿಗಳಲ್ಲಿ ನಾಲ್ಕು ಹುದ್ದೆಗಳು, ಕಿರಿಯ ಪುರುಷ ಆರೋಗ್ಯಾಧಿಕಾರಿಗಳ ಹನ್ನೆರಡು ಹುದ್ದೆಗಳು, ಮಹಿಳೆಯರಲ್ಲಿ ಆರು ಹುದ್ದೆಗಳು ಖಾಲಿ ಇವೆ, ರಕ್ತ ಪರೀಕ್ಷಕರು, ಔಷಧ ವಿತರಕರು ಎಲ್ಲಾ ಕೇಂದ್ರಗಳಲ್ಲಿಯೂ ಲಭ್ಯವಿದ್ದಾರೆ.

ಆಶಾ ಕಾರ್ಯಕರ್ತೆಯರು ಒಂದುನೂರಾ ಎಂಭೈತ್ತೈದು ಮಂದಿ ಇದ್ದು ಅವರನ್ನು ತಾತ್ಕಾಲಿಕ ಸಿಬ್ಬಂದಿ ಎಂದು ಗುರುತಿಸಿಕೊಂಡಿರುವುದರಿಂದ ರೋಗಿಗಳಿಗೆ ಅನೇಕ ರೀತಿಯ ಉಪಯೋಗವಾಗುತ್ತಿದೆ.

ರಾಷ್ಟ್ರೀಯ ಭಿಮಾ ಯೋಜನೆಗೆಂದೇ ತಂಡಗಳಿದ್ದು ಆ ತಂಡದಲ್ಲಿ ಇಬ್ಬರು ವೈದ್ಯರು, ಇಬ್ಬರು ನಸ್೯ಗಳು ಇರುತ್ತಾರೆ, ಶಿಕ್ಷಣ ಆರೋಗ್ತಾಧಿಕಾರಿಗಳು ಇದ್ದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಆರೋಗ್ಯದ ನಿಗಾ ವಹಿಸುತ್ತಾರೆ ಎಂದರು.


ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಂಚಾಯತಿ


ಪ್ರತಿ ಆರೋಗ್ಯ ಕೇಂದ್ರಕ್ಕೂ ಸ್ಥಳೀಯ ಗ್ರಾಮ ಪಂಚಾಯತಿಗೂ ನಿಕಟ ಸಂಬಂಧ ಇರುತ್ತದೆಯಾದರೂ ವೈದ್ಯ ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದಿಂದಲೋ ಅಥವಾ ಅಭಿವೃದ್ಧಿ ಅಧಿಕಾರಿಗಳ (PDO) ಬೇಜಾವಾಬ್ದಾರಿಯಿಂದಲೋ ಹೊರಾಂಗಣವನ್ನು ಅಭಿವೃದ್ಧಿ ಪಡಿಸುತ್ತಿಲ್ಲ, ಆರೋಗ್ಯ ಕೇಂದ್ರಕ್ಕೆಂದೇ ಬರುವ ಅನುದಾನ ಮತ್ತು ನರೇಗಾ ಮೂಲಕ ಪ್ರತಿ ಆರೋಗ್ಯ ಕೇಂದ್ರಗಳನ್ನು ಆರೋಗ್ಯಪೂರ್ಣವಾಗಿಡಬಹುದು, ಹೊಂಗನೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಲ್ಲಿಯ ಪಿಡಿಓ ಅಭಿವೃದ್ಧಿ ಪಡಿಸಿರುವುದು ಬಿಟ್ಟರೆ ಮತ್ಯಾವ ಕೇಂದ್ರಗಳು ಅಭಿವೃದ್ಧಿ ಆಗಿಲ್ಲ, ಹೊಂಗನೂರು ಕೇಂದ್ರವನ್ನು ಮಾದರಿಯಾಗಿಟ್ಟುಕೊಂಡು ಇತ್ತೀಚೆಗೆ ಕೆಲವು ಆರೋಗ್ಯ ಕೇಂದ್ರಗಳನ್ನು ಹೊರಾಂಗಣವನ್ನು ಅಭಿವೃದ್ಧಿ ಪಡಿಸುತ್ತಿದ್ದರೂ ಸಹ ಅಂತಹ ಗುಣಮಟ್ಟ ಇಲ್ಲ ಎಂಬ ದೂರು ಸ್ಥಳೀಯರಲ್ಲಿದೆ.


ಹೊಂಗನೂರು ಪಿಡಿಓ ಮಾಡುವ ಕೆಲಸ ಬೇರೆ ಪಿಡಿಓಗಳಿಗೆ ಏಕಾಗುತ್ತಿಲ್ಲ


ತಾಲ್ಲೂಕಿನ ಹೊಂಗನೂರು ಆರೋಗ್ಯ ಕೇಂದ್ರದಲ್ಲಿ ಅಲ್ಲಿನ ಅಭಿವೃದ್ಧಿ ಅಧಿಕಾರಿ ಯತೀಶ ರವರು ಆಸಕ್ತಿ ವಹಿಸಿ ಆರೋಗ್ಯ ಕೇಂದ್ರ ಮತ್ತು ನರೇಗಾ ಯೋಜನೆಯಲ್ಲಿ ಸುಂದರ ಉದ್ಯಾನವನ ನಿರ್ಮಿಸಲು ಸಾಧ್ಯವಾಗುವುದಾದರೆ ಉಳಿದ ಮೂವತ್ತೊಂದು ಗ್ರಾಮಪಂಚಾಯಿತಿ ಗಳ ವ್ಯಾಪ್ತಿಯಲ್ಲಿ ಬರುವ ಆರೋಗ್ಯ ಕೇಂದ್ರಗಳಲ್ಲಿ ಉದ್ಯಾನವನ ನಿರ್ಮಿಸಲು ಅಲ್ಲಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಏಕೆ ಆಗುತ್ತಿಲ್ಲ ? ಇದರ ಬಗ್ಗೆ ಕಾರ್ಯನಿರ್ವಾಹಣ ಅಧಿಕಾರಿ ಮತ್ತು ವೈದ್ಯಾಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಿ ಕ್ರಮ ಕೈಗೊಂಡರೆ ಮುಖ್ಯಮಂತ್ರಿಗಳ ತವರೂರಿನ ಆರೋಗ್ಯ ಕೇಂದ್ರಗಳು ಮತ್ತಷ್ಟು ಆರೋಗ್ಯವಾಗುದರಲ್ಲಿ ಸಹಕಾರಿಯಾಗಲಿದೆ.


ವೈದ್ಯರಿದ್ದಾರೆ ಎಂಬುದಷ್ಟೇ ಸಮಾಧಾನ


ಎಲ್ಲಾ ಹದಿನೈದು ಆರೋಗ್ಯ ಕೇಂದ್ರಗಳಲ್ಲೂ ವೈದ್ಯರಿದ್ದಾರೆ ಎಂಬುದನ್ನು ಹೊರತುಪಡಿಸಿದರೆ ಅಭಿವೃದ್ಧಿ ವಿಷಯದಲ್ಲಿ ಶೂನ್ಯ ಎಂದೇ ಹೇಳಬಹುದು, ಶಿಥಿಲವಾದ ಮತ್ತು ಶಿಥಿಲವಾಗುತ್ತಿರುವ ಕಟ್ಟಡಗಳು, ಶುಚಿಯಿಲ್ಲದ ವಾತಾವರಣ, ಕೆಲವು ಕಡೆ ಹೆರಿಗೆ ವಾಡ್೯ಗಳ ಬೇಡಿಕೆ ಇದ್ದರೂ ಇದುವರೆಗೂ ಕ್ರಮ ಕೈಗೊಳ್ಳದಿರುವುದು, ಎಲ್ಲಾ ರೀತಿಯ ಔಷಧಗಳು ಅಲ್ಲಿಯೇ ದೊರೆಯುತ್ತಿದ್ದರೂ ಆಸ್ಪತ್ರೆಗಳ ಹತ್ತಿರದಲ್ಲೇ ಖಾಸಗಿ ಔಷಧ ಅಂಗಡಿಗಳ ಮೊರೆ ಹೋಗುತ್ತಿರುವುದರ ಮೂಲೋದ್ದೇಶ ಇವುಗಳ ಮೇಲೆ ವೈದ್ಯಾಧಿಕಾರಿಕಾರಿಗಳು ಕ್ಷ-ಕಿರಣ ಬೀರಬೇಕಾಗಿದೆ.


ಶಿಥಿಲವಾದ ಕಟ್ಟಡಗಳು ಮತ್ತು ವಸತಿ ನಿಲಯಗಳು


ಬಿ ವಿ ಹಳ್ಳಿ, ಬೇವೂರು, ಕೂರಣಗೆರೆ, ಮಾಕಳಿ, ಎಂಎನ್ ಹೊಸಹಳ್ಳಿ, ತಿಮ್ಮಸಂದ್ರ, ವೈಟಿ ಹಳ್ಳಿ, ಇಗ್ಗಲೂರು ಗ್ರಾಮಗಳಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ಎರಡು ರಿಪೇರಿಯಾಗಬೇಕಿದ್ದರೆ, ಉಳಿದ ಕೇಂದ್ರಗಳನ್ನು ಸಂಪೂರ್ಣವಾಗಿ ಕೆಡವಿ ಹೊಸದಾಗಿ ನಿರ್ಮಿಸಬೇಕಾಗಿದೆ. ಅಕ್ಕೂರು ಹೊಸಹಳ್ಳಿ ಮತ್ತು ಮುದುಗೆರೆ ಯಲ್ಲಿರುವ ವಸತಿ ನಿಲಯಗಳು ವಾಸ್ತವ್ಯಕ್ಕೆ ಸೂಕ್ತವಾಗಿಲ್ಲದಿರುವುದರಿಂದ ಕಟ್ಟಡವನ್ನು ಕೆಡವಲು ಮನವಿ ಸಲ್ಲಿಸಿದ್ದಾರೆ, ಆದರೆ ಅವುಗಳು ಯೋಗ್ಯವಾಗದಿರುವುದು ಯಾವುದೇ ಸಿಬ್ಬಂದಿ ಅಲ್ಲಿ ವಾಸವಾಗದಿರುವುದೇ ಕಾರಣ ಎಂಬುದನ್ನು ಸಂಬಂಧಿಸಿದವರು ಪರಿಗಣಿಸಬೇಕಾಗಿದೆ. ಇವುಗಳ ಬಗ್ಗೆ ಮನವಿ ಮಾಡಿದ್ದು ಏನು ಪ್ರಯೋಜನವಾಗದಿರುವುದು ಮುಖ್ಯಮಂತ್ರಿಗಳ ತವರಿಗೆ ಅಪಮಾನಕರವೇ ಸರಿ.

ಇನ್ನು ಉಪಕೇಂದ್ರಗಳ ದುರವಸ್ಥೆ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು, ತಾಲ್ಲೂಕು ವೈದ್ಯಾಧಿಕಾರಿ ಡಾ ಟಿ ಆರ್ ರಾಜುರವರು ಸಮರ್ಥರಿದ್ದು ಸಂಬಂಧಿಸಿದ ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿ ಸೂಕ್ತ ಕ್ರಮಕೈಗೊಂಡು ಗ್ರಾಮೀಣ ಪ್ರದೇಶದ ಬಡ ರೋಗಿಗಳ ಪ್ರಾಣ ಉಳಿಸಲು ಸಂಕಲ್ಪ ಮಾಡಬೇಕಾಗಿದೆ.


ರಾಜು ರವರ ಹಿತ ನುಡಿಗಳು


ವೈದ್ಯರಷ್ಟೇ ದೇವರಲ್ಲ, ರೋಗಿಗಳು ಸಹ ವೈದ್ಯರಾದ ನಮಗೆ ಅನ್ನದಾತರೂ ಹೌದು ನಮ್ಮ ವೃತ್ತಿ ಜೀವನದ ಅನುಭವಗಳ ಗಣಿಯೂ ಹೌದು, ಆದ್ದರಿಂದ ವೈದ್ಯರು ಮತ್ತು ಸಿಬ್ಬಂದಿಗಳು ತಾಳ್ಮೆಯಿಂದ ರೋಗಿಗಳನ್ನು ಉಪಚರಿಸಿ ರೋಗ ಗುಣಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಮತ್ತು ಬಹುತೇಕ ಎಲ್ಲಾ ಆರೋಗ್ಯ ಕೇಂದ್ರಗಳಲ್ಲೂ ವೈದ್ಯರು ಮತ್ತು ಸೂಕ್ತ ಚಿಕಿತ್ಸೆ ಲಭ್ಯವಿದ್ದು ಅದನ್ನು ‌ಎಲ್ಲಾ ರೋಗಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.


ಸಾಮಾನ್ಯ ಬಡವರ್ಗದ ರೋಗಿಗಳು ಏಕಾಏಕಿ ಯಾರದೋ ಮಾತು ಕೇಳಿ ಖಾಸಗಿ ಆಸ್ಪತ್ರೆಗೆ ತೆರಳಿ ಲಕ್ಷಾಂತರ ರೂ ಖರ್ಚು ಮಾಡುವುದರ ಬದಲಾಗಿ ಉಪ ಆರೋಗ್ಯ ಕೇಂದ್ರ, ತಾಲ್ಲೂಕು, ಜಿಲ್ಲಾ ಸರ್ಕಾರಿ ಆಸ್ಪತ್ರೆ ನಂತರ ಸಂಬಂಧಿಸಿದ ಉತ್ತಮ ಸರ್ಕಾರಿ ಆಸ್ಪತ್ರೆಗೆ ತೆರಳಿ ತಮ್ಮ ಆರೋಗ್ಯದ ಜೊತೆಗೆ ಹಣವನ್ನು ಉಳಿಸಿ ಕೊಳ್ಳಬಹುದು, ಈ ನಿಟ್ಟಿನಲ್ಲಿ ಬಡ ಮತ್ತು ಮಧ್ಯಮ ವರ್ಗದ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು1 comments

  • Giriraju wrote:
    24 Dec, 2018 11:23 pm

    Navu nodedendha e tara hospital lu eralella evga modalukentha segabatte important hagede Namma akka pakka da garamagalegele valleya esaru baruthede...valle doctor...

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑