Tel: 7676775624 | Mail: info@yellowandred.in

Language: EN KAN

    Follow us :


ಅಧಿಕಾರಿಗಳೇ ನಿಷ್ಠೆಯಿಂದ ಕಾನೂನಾತ್ಮಕ ಕೆಲಸ ಮಾಡಿ

Posted date: 04 Feb, 2019

Powered by:     Yellow and Red

ಅಧಿಕಾರಿಗಳೇ ನಿಷ್ಠೆಯಿಂದ ಕಾನೂನಾತ್ಮಕ ಕೆಲಸ ಮಾಡಿ

ದಂಡಾಧಿಕಾರಿ ಯೋಗಾನಂದ ರವರೇ

ಅಧಿಕಾರಿಗಳೇ ಚನ್ನಪಟ್ಟಣ ತಾಲ್ಲೂಕು ಮುಖ್ಯಮಂತ್ರಿಗಳ ಕ್ಷೇತ್ರವಾಗಿದ್ದು ಅಭಿವೃದ್ಧಿ ಕಾಣದೆ ಸೊರಗಿ ಹೋಗುತ್ತಿದೆ, ಮುಖ್ಯಮಂತ್ರಿ ಕ್ಷೇತ್ರ ಎಂದರೆ ಇಂದಿನ ಕಾಲಮಾನದಲ್ಲಿ ಶ್ರೀಮಂತ ಕ್ಷೇತ್ರ, ಅಡೆತಡೆಯಿಲ್ಲದೆ ಅಭಿವೃದ್ಧಿ ಮಾಡಿ ಮಾದರಿ ಕ್ಷೇತ್ರ ಆಗಬೇಕೆಂಬ ಕನಸು ಶಾಸಕರು/ಮುಖ್ಯಮಂತ್ರಿಗಳ ಅಭಿಲಾಷೆಯಾಗಿರುತ್ತದೆ, ಜೊತೆಗೆ ಅಧಿಕಾರಿಗಳು ಸಹ ನಾವಿರುವಾಗಲೇ ಅಭಿವೃದ್ಧಿ ಆಗಬೇಕೆಂಬ ಕನಸು ಹೊತ್ತು ಕೆಲಸ ಮಾಡಲು ಇಚ್ಚಿಸುತ್ತಾರೆ, ಆದರೆ ದೊಂಬರಾಟದ ಸ್ಥಳೀಯ ನಾಯಕರು ತಮ್ಮ ಪ್ರತಿಷ್ಠೆಯ ಸಲುವಾಗಿ ಅಭಿವೃದ್ಧಿ ಕೆಲಸಗಳಿಗೆ ತಡೆಯೊಡ್ಡುತ್ತಿರುವುದು ಸಾರ್ವಜನಿಕರಿಗೆ ಮುಖ್ಯಮಂತ್ರಿಗಳ ಮೇಲಿನ ಭರವಸೆಗಳು ಸುಳ್ಳು ಎಂಬ ಮನೋಭಾವ ಕಾಡುತ್ತಿದೆ.


ಸಾರ್ವಜನಿಕರ ತೆರಿಗೆ ಹಣ


ಅಧಿಕಾರಿಗಳೇ; ನೀವು ಸಂಬಳ ಪಡೆಯುತ್ತಿರುವುದು ಸಾರ್ವಜನಿಕರ ತೆರಿಗೆ ಹಣದಿಂದ ಯಾವ ರಾಜಕೀಯ ಪುಢಾರಿಯು ನಿಮಗೆ ಸಂಬಳ ಕೊಡುವುದಿಲ್ಲ, ಅಂಥಾದ್ದರಲ್ಲಿ ಯಾಕೆ ನೀವು ಅವರ ಮಾತಿಗೆ ಬೆಲೆ ಕೊಡುತ್ತೀರಿ, ನಿಮಗೆ ಈ ಕೆಲಸ ಮಾಡಿ, ಈ ಕೆಲಸ ಬೇಡ ಎನ್ನಲು ಅವನ್ಯಾರು ? ಅವರನ್ನು ಕೇಳಿ ಮಾಡಲು ನೀವೇನು ಸರ್ಕಾರಿ ನೌಕರರೋ ಅಥವಾ ಅವರ ಮನೆಯಾಳುಗಳೋ ? ಇಲ್ಲವಲ್ಲಾ, ನೀವುಗಳು ತಾಲ್ಲೂಕು ಮಟ್ಟದ ಅಧಿಕಾರಿಗಳು, ನಿಮಗೆ ಗೌರವಾದರಗಳಿವೆ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ ತಾಲ್ಲೂಕಿಗೆ ಮತ್ತು ತಮಗೆ ಹೆಸರು ಗಳಿಸಬೇಕೆ ವಿನಹ ಕೇವಲ ಬಾಯಿಮಾತಿನ ಜಬರ್ ದಸ್ತ್ ಗಿರಿಗೆ ಹೆದರಿ ಅಭಿವೃದ್ಧಿ ಕೆಲಸಗಳಿಗೆ ತಿಲಾಂಜಲಿ ಇಡುವುದು ಎಷ್ಟರಮಟ್ಟಿಗೆ ಸರಿ ಯೋಚಿಸಿ.


ಒಳ್ಳೆಯ ಹೆಸರಿದೆ ಉಳಿಸಿಕೊಳ್ಳಿ


ದಂಡಾಧಿಕಾರಿಗಳೇ ಇಡೀ ತಾಲ್ಲೂಕು ತಮ್ಮ ಹದ್ದುಬಸ್ತಿಗೆ ಬರುತ್ತದೆ, ನೀವು ಯಾವುದೇ ಬಡ್ತಿ ಪಡೆದು ದಂಡಾಧಿಕಾರಿ ಆದವರಲ್ಲ, ಕೆಎಎಸ್ ಮಾಡಿ ಕನಕಪುರದಲ್ಲಿ ಒಳ್ಳೆಯ ಹೆಸರುಗಳಿಸಿ ಚನ್ನಪಟ್ಟಣಕ್ಕೆ ಬಂದವರು, ತಾಲ್ಲೂಕಿನಲ್ಲಿ ಛಾಪು ಮೂಡಿಸುವ ತಾಕತ್ತು ನಿಮಗಿದೆ, ಯಾವುದೇ ಮಂತ್ರಿಯೂ ಸಹ ಲಿಖಿತ ರೂಪದಲ್ಲಿ ಕೊಡದೇ ಆ ಕೆಲಸ ಮಾಡಬೇಡಿ ಎಂದಾಕ್ಷಣ ಸುಮ್ಮನಾಗುವುದಿಲ್ಲ ಎಂಬ ಧೋರಣೆಯುಳ್ಳ ನೀವು ಸ್ಥಳೀಯ ನಾಯಕರ ಮಾತಿಗೆ ಬೆಲೆ ಕೊಟ್ಟು ಅಭಿವೃದ್ಧಿ ಕೆಲಸಗಳಿಗೆ ತಡಮಾಡುತ್ತಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ ? ಅವರೆಲ್ಲರ ಪ್ರಶ್ನೆಗಳಿಗೆ ನಿಮ್ಮ ಮುಂದಿನ ಕೆಲಸಗಳೇ ಉತ್ತರವಾಗಬೇಕಾಗಿದೆ,


ಒತ್ತುವರಿ ತೆರವುಗೊಳಿಸಿ


ರಾಜಕಾಲುವೆ, ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಕೆರೆಕಟ್ಟೆ, ಗೋಮಾಳ, ಗುಂಡುತೋಪು, ಅರಣ್ಯ, ನದಿದಂಡೆ* ಸೇರಿದಂತೆ ಅನೇಕ ಒತ್ತುವರಿದಾರರಿಗೆ ನಿಮ್ಮ ಹೇಳಿಕೆಯ ಪ್ರಕಾರವೇ ನೋಟೀಸ್ ಸಹ ಜಾರಿಮಾಡದೆ ಅಳತೆ ಮಾಡಿಸಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲೇಬೇಕಿದೆ, ಅವರಲ್ಲಿ ನಿರ್ವಸತಿಗರೇನಾದರೂ ಇದ್ದರೆ ಕಾನೂನು ಚೌಕಟ್ಟಿನಲ್ಲಿ ಅವರಿಗೆ ಬೇರೆಡೆ ಸ್ಥಳವಕಾಶ ನೀಡಿ, ಬಲಾಢ್ಯರಿದ್ದರೆ ಮೊಕದ್ದಮೆ ದಾಖಲಿಸಿ ಜೈಲಿಗಟ್ಟುವ ಕೆಲಸ ಮಾಡಿ.


ಮೊದಲು ರೈತ ನಂತರ ಅಧಿಕಾರಿ


ರೈತನ ಮಗ ಎಂದು ಹೆಮ್ಮೆಯಿಂದ ಎದೆ ತಟ್ಟಿ ಹೇಳಿಕೊಳ್ಳುತ್ತೀರಿ, ಆದರೆ ತಾಲ್ಲೂಕಿನಲ್ಲಿ ರೈತರ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ, ಸಾಗುವಳಿ ಚೀಟಿ ಬಲಾಢ್ಯರಿಗೆ ಸಿಕ್ಕಂತೆ ಬಡವರಿಗೆ ಸಿಗುತ್ತಿಲ್ಲ ? ಇಂದಿಗೂ ಸಹ ಪಹಣಿ ಮತ್ತು ಇನ್ನಿತರೆ ಸಣ್ಣಪುಟ್ಟ ಅರ್ಜಿಕೊಡಲು ಮತ್ತು ಪಡೆಯಲು ಗಂಟೆಗಟ್ಟಲೆ ಕಾಯುವ ಸ್ಥಿತಿ ರೈತರದ್ದಾಗಿದೆ! ಕಂದಾಯ ಕಟ್ಟಿಸಿಕೊಳ್ಳಲು ತಾಲ್ಲೂಕು ಕಛೇರಿಯಲ್ಲಿ ನಿಗದಿತ ಒಂದು ಕೊಠಡಿ ಇಲ್ಲ, ಗ್ರಾಮಲೆಕ್ಕಾಧಿಕಾರಿಗಳನ್ನು ಹುಡುಕಿಕೊಂಡು ಹೋಗಿ ಕಟ್ಟಬೇಕಾಗಿದೆ, ಹಾಗಾದರೆ ಕಂದಾಯ ವಸೂಲಿ ಆಗುವುದಾದರೂ ಹೇಗೆ?


ಎಲ್ಲಾ ದಾಖಲೆ ಪಹಣಿಯಲ್ಲೇ ಇರಲಿ


ಸ್ವಾಮಿ ತಹಶಿಲ್ದಾರ್ ರವರೇ ರೈತರು ಬ್ಯಾಂಕ್ ಗೆ ಹೋದರೆ ಹಲವಾರು ದಾಖಲೆಗಳನ್ನು ನೀಡಬೇಕಾಗಿದೆ, ಅದರ ಬದಲು ರೈತನ ಪಹಣಿಯಲ್ಲಿ ಸರ್ವೇ ನಂಬರ್, ಆತನ ಪೋಟೋ, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆಯ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ ಆತ ಒಂದೇ ದಾಖಲೆಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡಿ ಮುಕ್ತಿ ಹೊಂದಲು ಸಾಧ್ಯವಾಗುತ್ತದೆ, ರೈತನ ಮಗನಾದ ನಂತರ ನೀವು ಅಧಿಕಾರಿಯಾಗಿದ್ದೀರಿ, ದಯಮಾಡಿ ರೈತರ ಋಣ ತೀರಿಸಲೋಸುಗ ಈ ಕೆಲಸ ಮಾಡಿ.


ಅನುಭವಿ ಇಓ ಸಾಹೇಬರೇ


ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳೇ ದಯಮಾಡಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಗಮನ ಕೊಡಿ, ನೀವು ಗ್ರಾಮಲೆಕ್ಕಾಧಿಕಾರಿಯಿಂದ ಕೆಲಸ ಮಾಡಿ ಬಂದವರು, ತಮಗೆ ಎಲ್ಲಿ ಸಮಸ್ಯೆ ಇದೆ ಎಂದು ಖಂಡಿತವಾಗಿಯೂ ಅರ್ಥವಾಗುತ್ತೆ, ನಿಮ್ಮ ಅನುಭವವನ್ನು ಇಂದಿನ ಅಧಿಕಾರಿಗಳಿಗೆ ಧಾರೆ ಎರೆಯಿರಿ, ಬಹುತೇಕ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಪಂಚಾಯತಿಯಲ್ಲಿ ಬರುವ ಪ್ರಮುಖ ಗ್ರಾಮಕ್ಕೆ ಮಾತ್ರ ಸೀಮಿತವಾದರೆ, ಕೆಲವು ಬಲಿಷ್ಠ ಪಂಚಾಯತಿ ಸದಸ್ಯರಿರುವ ಗ್ರಾಮಗಳು ಅಭಿವೃದ್ಧಿ ಆಗುತ್ತಿವೆ.


ಅನುಕೂಲಸಿಂಧ ಪಿಡಿಓ ಗಳು


ಉದಾಹರಣೆಗೆ ಹೊಂಗನೂರು ಪಿಡಿಓ ಆ ಗ್ರಾಮಕ್ಕೆ ಕೊಟ್ಟ ಮಾನ್ಯತೆ ಇನ್ನುಳಿದ ಗ್ರಾಮಗಳಿಗೆ ಕೊಡಲಿಲ್ಲ, ನೀಲಸಂದ್ರ ಗ್ರಾಮಪಂಚಾಯಿತಿಯ ನೀಲಕಂಠನಹಳ್ಳಿ ಗ್ರಾಮದ ಸದಸ್ಯ ತನ್ನೂರಿಗೆ ಮಾಡಿಸಿಕೊಂಡ ಅಭಿವೃದ್ಧಿ ಕೆಲಸ ನಿಜಕ್ಕೂ ಶ್ಲಾಘನೀಯ, ಹೊಂಗನೂರು ಪಂಚಾಯತಿಯ ಗೋವಿಂದೇಗೌಡನದೊಡ್ಡಿ, ಚನ್ನಂಕೇಗೌಡನದೊಡ್ಡಿ ಮತ್ತು ನೀಲಸಂದ್ರ ಗ್ರಾಮಪಂಚಾಯಿತಿಯ ನೀಲಕಂಠನಹಳ್ಳಿ ಗ್ರಾಮಕ್ಕೂ ಕೂಗಳತೆಯ ಅಂತರವಿದೆ, ಅಭಿವೃದ್ಧಿಯಲ್ಲಿ ಇಷ್ಟೊಂದು ತಾರತಮ್ಯ ಹೇಗೆ ? ತಾಲ್ಲೂಕಿನಾದ್ಯಂತ ಇಂತಹ ಅನೇಕ ಪೀಡಿತ ಗ್ರಾಮಗಳಿದ್ದು ಇದನ್ನು ಕೇವಲ ವರದಿಯಲ್ಲಷ್ಟೇ ಗಮನಿಸದೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ತಮ್ಮದೇ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಿ.


ಪೌರಾಯುಕ್ತರೇ ಅಲ್ಲಿ ಸಲ್ಲುವವರು ಇಲ್ಲೇಕೆ ಸಲ್ಲುವುದಿಲ್ಲ


ಪೌರಾಯುಕ್ತರೇ ಇತಿಹಾಸ ಪ್ರಸಿದ್ಧ ಬೊಂಬೆಗಳ ನಾಡು, ಪೌರಾಣಿಕ ಹಿನ್ನೆಲೆಯ ಚಂದದ ಪಟ್ಟಣ ಚನ್ನಪಟ್ಟಣವನ್ನು ಸದ್ಯ ಕಸದ ಕೊಂಪೆಯಾಗಿ, ಯುಜಿಡಿ ಇಲ್ಲದ ನಗರವನ್ನಾಗಿ ಮಾರ್ಪಾಡು ಮಾಡಿದ್ದೀರಿ !

ನಿಮ್ಮ ಮಾತಿನ ಮೂಲಕವೇ ಹೇಳುವುದಾದರೆ ಇಡೀ ದೇಶದಲ್ಲಿಯೇ ಸ್ವಚ್ಚತೆಗೆ ಹೆಸರುವಾಸಿಯಾದ ಮೈಸೂರಿನಲ್ಲಿ ಕೆಲಸ ನಿರ್ವಹಿಸಿ ಬಂದಿದ್ದೀರಿ, ಅಲ್ಲಿ ಸಲ್ಲುವ ನೀವು ಇಲ್ಲೇಕೆ ಸಲ್ಲುತ್ತಿಲ್ಲ !?

ಯಾರ ಒತ್ತಡ ನಿಮಗಿದೆ ? ಅಧಿಕಾರಿಗಳು ಸ್ಪಂದಿಸುತ್ತಿಲ್ಲವೇ ? ನಗರಸಭೆಯ ಸದಸ್ಯರು ಸ್ಪಂದಿಸುತ್ತಿಲ್ಲವೇ ? ಅಥವಾ ಸ್ಥಳೀಯ ರಾಜಕಾರಣಿಗಳ ಭಯ ಇದೆಯೇ ?

ಸಾರ್ವಜನಿಕರು ಬೇಸತ್ತು ಮುಂದೊಂದು ದಿನ ಮುತ್ತಿಗೆ ಹಾಕುವ ಮುನ್ನ ಎಚ್ಚೆತ್ತುಕೊಳ್ಳಿ, ಕೆಲವು ಅಡೆತಡೆಗಳನ್ನು ನೀವೊಬ್ಬರೇ ನಿರ್ವಹಿಸಲು ಸಾಧ್ಯವಿಲ್ಲ ನಿಜ, ಹಾಗೆಂದ ಮಾತ್ರಕ್ಕೆ ಅಭಿವೃದ್ಧಿ ಕುಂಠಿತಗೊಳಿಸಲು ಸಾಧ್ಯವೇ !


ಸಮಸ್ಯೆಗಳ ಸರಮಾಲೆ


ಇ ಖಾತೆಗಳು, ಒಳಚರಂಡಿಗಳ ಅವ್ಯವಸ್ಥೆ, ಕಳಪೆ ಕಾಮಗಾರಿಗಳು, ಒತ್ತುವರಿಯಾಗಿರುವ ಪ್ರದೇಶಗಳಿಗೆ ಸರ್ವೇ ಮಾಡಿಸದೇ ಅಭಿವೃದ್ಧಿ, ಎಲ್ಲೆಂದರಲ್ಲಿ ಸುರಿದ ಕಸದಿಂದ ಗಬ್ಬೆದ್ದು ನಾರುತ್ತಿರುವ ನಗರ, ಪ್ಲಾಸ್ಟಿಕ್ ಮತ್ತು ಬ್ಯಾನರ್ ಗಳಿಂದ ತುಂಬಿರುವುದು ಅಬ್ಬಾ ಒಂದೇ ಎರಡೇ ಇವುಗಳಿಗೆಲ್ಲಾ ಯಾವಾಗ ಮುಕ್ತಿ ಕೊಡುತ್ತೀರೋ ನಗರಸಭೆಯನ್ನು ಹುಟ್ಟುಹಾಕಿದ ಆ ಮಹಾತ್ಮನೇ ಬಲ್ಲ.


ಉಪನಿರೀಕ್ಷಕರೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಿ


ಡಿವೈಎಸ್ಪಿ ಸಾಹೇಬರೇ, ವೃತ್ತ ನಿರೀಕ್ಷಕರೇ ಮತ್ತು ಸಂಚಾರಿ ನಿರೀಕ್ಷಕರೇ ಸಬೂಬು ಹೇಳದೆ ನಗರದ ಸಂಚಾರದಟ್ಟಣೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ದಮನ ಮಾಡಿ ಮುಖ್ಯಮಂತ್ರಿಗಳ ಕ್ಷೇತ್ರವಾದ ಚನ್ನಪಟ್ಟಣವನ್ನು ಅಪರಾಧ ಮುಕ್ತ ತಾಲ್ಲೂಕನ್ನಾಗಿ ಮಾಡಲು ಒಟ್ಟಾಗಿ ಶ್ರಮಿಸಿ.

ನಗರದಲ್ಲಿ ಇಂದಿಗೂ ಗಾಂಜಾ, ಅಫೀಮು ಮಾರಾಟವಾಗುತ್ತಿದೆ ಇದರಿಂದ ನಮ್ಮ ಮಕ್ಕಳು ಹಾಳಾಗುತ್ತಿದ್ದಾರೆ ಎಂದು ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ, ಆದರೆ ಅದು ನಡೆಯುತ್ತಿರುವ ಸ್ಥಳ ಹೇಳುತ್ತಾರಾದರೂ ರೂವಾರಿಗಳಾರೆಂದು ಗೊತ್ತಿಲ್ಲ, ಇದರ ಬಗ್ಗೆ ಹಲವು ಪತ್ರಕರ್ತ ಮಿತ್ರರು ತಮ್ಮ ಬಳಿ ಹೇಳಿದ್ದಾರೆ ಆದರೆ ಫಲಿತಾಂಶ ಮಾತ್ರ ಶೂನ್ಯ !?

ಜೂಜಾಟವಂತೂ ಪ್ರತಿನಿತ್ಯವೂ ನಡೆಯುತ್ತಿದೆಯಾದರೂ ಶಾಶ್ವತ ಕ್ರಮಕೈಗೊಳ್ಳಲೇ ಇಲ್ಲ.


ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲಿ


ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ದೌರ್ಜನ್ಯ ಪ್ರಕರಣಗಳು ಇಂದಿಗೂ ಇತ್ಯರ್ಥವಾಗದೇ ಉಳಿದುಹೋಗಿವೆ. ರೌಡಿಗಳು ಈಗಲೂ ಅವರ ದರ್ಪತೋರಿಸುತ್ತಲೇ ಇದ್ದಾರೆ, ಟ್ರಾಫಿಕ್ ಸಮಸ್ಯೆಯಂತೂ ದಿನೇದಿನೇ ಹೆಚ್ಚಾಗುತ್ತಲೇ ಇದೆ, ಕೆಲವು ದುಷ್ಕರ್ಮಿ ಯುವಕರು ಟ್ರಾಫಿಕ್ ಪೋಲಿಸರನ್ನು ಲೆಕ್ಕಿಸದೇ ಮುನ್ನುಗ್ಗುತ್ತಿರುವುದು, ಸೈಲೆನ್ಸರ್ ಪೈಪ್ ನ ಫಿಲ್ಟರ್ ತೆಗೆದು ಹೆಚ್ಚು ಶಬ್ದ ಹೊರಡಿಸುವುದು, ವ್ಹೀಲಿಂಗ್ ಮಾಡುವುದು ಸರ್ವೇಸಾಮಾನ್ಯವಾಗಿದೆ, ನ್ಯಾಯಕ್ಕಾಗಿ ಬಂದ ಸಂತ್ರಸ್ತರಿಗೆ ಕೆಲವು ರಾಜಕೀಯ ಮುಖಂಡರ ಒತ್ತಡದಿಂದ ನ್ಯಾಯ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ, ಯಾವುದೇ ಒತ್ತಡಕ್ಕೆ ಮಣಿಯದೇ ಪ್ರಜಾಪ್ರಭುತ್ವದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವತ್ತ ಗಮನಹರಿಸಿ.


ಬಿಇಓ ಸಾಹೇಬರೇ ಕಾನೂನನ್ನು ಪಾಲಿಸಿ


ಶಿಕ್ಷಣ ಕ್ಷೇತ್ರದಲ್ಲಿ ಬಹಳ ಅಧ್ವಾನವಾಗಿದ್ದು ಖಾಸಗಿ ಶಾಲೆಗಳು ಪೋಷಕರಿಗೆ ಕಿರುಕುಳ ನೀಡುತ್ತಿರುವುದು ನಿಮ್ಮ ದಾಖಲೆಗಳಿಂದಲೇ ತಿಳಿಯುತ್ತದೆ, ಅವರು ತಮಗೆ ದಾಖಲೆ ಒದಗಿಸುವುದೇ ಒಂದಾದರೆ ಶಾಲೆಯಲ್ಲಿ ಪೋಷಕರಿಗೆ ನೀಡುವ ದಾಖಲೆಯೇ ಬೇರೆಯದ್ದಾಗಿರುತ್ತದೆ, ಹಲವಾರು ಪೋಷಕರು ತಮಗೆ ಲಿಖಿತವಾಗಿ ದೂರುಗಳನ್ನು ಸಲ್ಲಿಸಿದ್ದಾರೆ, ಆದರ್ಶ, ನವೋದಯ, ಮೊರಾರ್ಜಿ, ಅಂಬೇಡ್ಕರ್, ಚನ್ನಮ್ಮ ವಸತಿ ಶಾಲೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಖಾಸಗಿ ಶಾಲೆಯವರು ವಿತರಿಸದೇ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯ ಎಸಗುತ್ತಿರುವುದು ಖಂಡನಾರ್ಹ, ಇದು ತಮಗೆ ಗೊತ್ತಿದ್ದೂ ಸೂಕ್ತ ಕ್ರಮ ತೆಗೆದುಕೊಳ್ಳದಿರುವುದು ಯಾರ ಹಿತಕ್ಕಾಗಿ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಿ ಅಥವಾ ಕಾನೂನಾತ್ಮಕ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ನ್ಯಾಯ ಒದಗಿಸಿಕೊಡಿ.


ಅಧಿಕಾರಿಗಳು ಮತ್ತು ಜನನಾಯಕರು


ತಾಲ್ಲೂಕಿನ ಅಧಿಕಾರಿಗಳೇ ಸಮಸ್ಯೆಗಳ ಪರಿಹಾರಕ್ಕೆ ಪಕ್ಷ ಭೇದವಿಲ್ಲದ ಎಲ್ಲರ ಸಲಹೆ ಸೂಚನೆ ಪಡೆಯುವುದು ತಪ್ಪಲ್ಲ. ಆದರೆ ರಾಜಕೀಯ ಲಾಭಕ್ಕೆ ಯಾವುದೇ ಒಂದು ಪಕ್ಷದವರ ಮೂಗಿನ ನೇರಕ್ಕೆ ಕುಣಿದು ನಾಗರಿಕರಿಗೆ ಅನ್ಯಾಯ ಮಾಡಬೇಡಿ. ಕಾನೂನು ವ್ಯಾಪ್ತಿಯಲ್ಲೆ ಎಲ್ಲಾ ಜನರಿಗೂ ಅನುಕೂಲ ಮಾಡಿಕೊಡುವ ಅವಕಾಶ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿರುತ್ತದೆ. ಅದನ್ನು ಪರಿಣಾಮಕಾರಿಯಾಗಿ ಬಳಸಿ ತಾಲ್ಲೂಕಿನ ಅಭಿವೃದ್ಧಿಗೆ ಎಲ್ಲರೂ ಶಕ್ತಿಮೀರಿ ಶ್ರಮಿಸಬೇಕು. ತಾಲ್ಲೂಕಿನ ಜನನಾಯಕರು ತಮ್ಮ ಚಿಲ್ಲರೆ ಪಕ್ಷರಾಜಕಾರಣ, ಸ್ವಾರ್ಥ, ಒಣಪ್ರತಿಷ್ಠೆ ಬಿಟ್ಟು ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಕಡೆ ಗಮನಹರಿಸಬೇಕಿದೆ. ರೈತರು, ಬಡವರು, ಕೂಲಿಕಾರರ ಸಂಕಟಗಳಿಗೆ ಸ್ಪಂದಿಸುವ ವ್ಯವಸ್ಥೆ ರೂಪುಗೊಳ್ಳಲು ಎಲ್ಲರೂ ಶ್ರಮಿಸೋಣ.


ಮಂಡ್ಯ ಮೂಲದ ಯುವ ಅಧಿಕಾರಿಗಳು


ಇಓ ಹೊರತುಪಡಿಸಿ ಮಿಕ್ಕೆಲ್ಲಾ ಅಧಿಕಾರಿಗಳು ಯುವ ಅಧಿಕಾರಿಗಳು ಮತ್ತು ಒರಟುಭಾಷೆಗೆ ಹೆಸರುವಾಸಿಯಾದ ಮಂಡ್ಯ ಮೂಲದ ಅಧಿಕಾರಿಗಳಾಗಿದ್ದು, ಇಓ ರವರ ಅನುಭವ ಮತ್ತು ಯುವ ಅಧಿಕಾರಿಗಳ ಖದರ್ ನ್ನು ಮುಖ್ಯಮಂತ್ರಿಗಳ ಸ್ವಕ್ಷೇತ್ರವಾದ ಚನ್ನಪಟ್ಟಣದಲ್ಲಿ ಯಾವ ಮುಖಂಡನ ಮಾತಿಗೂ ಸೊಪ್ಪು ಹಾಕದೇ ಅಭಿವೃದ್ಧಿ ಕೆಲಸಗಳನ್ನು ಮಾಡಿ ಹೆಸರುಗಳಿಸಲೆಂದು ಸಾರ್ವಜನಿಕರ ಪರವಾಗಿ ನಮ್ಮ ಪತ್ರಿಕಾ ಬಳಗವೂ ಆಶಿಸುತ್ತದೆ.



ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑