Tel: 7676775624 | Mail: info@yellowandred.in

Language: EN KAN

    Follow us :


ಸಂವಿಧಾನಕ್ಕೆ ಎಪ್ಪತ್ತು, ಒಪ್ಪತ್ತು ಊಟವಿಲ್ಲದವರ ಸಂಖ್ಯೆಯೂ...?

Posted date: 26 Nov, 2019

Powered by:     Yellow and Red

ಸಂವಿಧಾನಕ್ಕೆ ಎಪ್ಪತ್ತು, ಒಪ್ಪತ್ತು ಊಟವಿಲ್ಲದವರ ಸಂಖ್ಯೆಯೂ...?

ಚನ್ನಪಟ್ಟಣ: ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು* ಇದು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ ಭೀಮರಾವ್ ಅಂಬೇಡ್ಕರ್ ರವರ ದೃಢ ನಿರ್ಧಾರದ ಮಾತುಗಳು. ಸಂವಿಧಾನ ರಚನೆಯ ಕಲ್ಪನೆಯೇ ಒಂದು ಅದ್ಭುತ, ಕಂಡರಿಯದ, ಕೇಳರಿಯದ ನಮ್ಮಂತಹವರೂ ಕನಸು ಕಾಣಲಾಗದ ಒಂದು ಅತ್ಯದ್ಭುತ ಸಂಗತಿ ಎಂದರೆ ಅದು ಡಾ ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ನಮ್ಮ ಶ್ರೇಷ್ಠ ಸಂವಿಧಾನ.


ಭಾರತ ದೇಶದ ಅಂದಿನ ಎಲ್ಲಾ *ಧರ್ಮ ಮತ್ತು ಜಾತಿಯ ೩೮ ಕೋಟಿ ಜನಸಂಖ್ಯೆಯ ಭಾರತೀಯ ರ* ಬದುಕನ್ನು ಅಳೆದು ತೂಗಿ, ಸರಿಸುಮಾರು *೭೫,೦೦೦ ವರ್ಷಗಳ ಇತಿಹಾಸವನ್ನು ಅಭ್ಯಸಿಸಿ* ಅದನ್ನು ಮೂರು ಭಾಗಗಳಾಗಿ ವಿಂಗಡಿಸಿಕೊಂಡು ಸರ್ವರಿಗೂ ಸಮಪಾಲು ಮತ್ತು ಹಕ್ಕುಗಳು ದೊರಕುವಂತೆ ಮಾಡಿದ ಈ ಸಂವಿಧಾನಕ್ಕೆ ಇಂದಿಗೆ ೭೦ ವರ್ಷಗಳು.


*ಕ್ರಿ.ಪೂ ೩,೦೦೦ ದಿಂದ ಕ್ರಿ.ಶ ೯೮೫* ರವರೆಗೆ ಪ್ರಾಚೀನ ಇತಿಹಾಸದ ಕಾಲಮಾನದಲ್ಲಿ *ಸಿಂಧೂ ನಾಗರೀಕತೆ, ಮೌರ್ಯರು, ಗುಪ್ತರು, ಕುಶಾನರು, ಹರ್ಷವರ್ಧನರು, ರಾಷ್ಟ್ರಕೂಟರು, ಚೋಳರು, ಚಾಲುಕ್ಯರು, ಪಲ್ಲವರು, ಪಾಂಡನ್ಯರು.* *ಮಧ್ಯ ಕಾಲೀನ ಇತಿಹಾಸ ವು *ಕ್ರಿ.ಶ ೯೮೬ ರಿಂದ ಕ್ರಿ.ಶ ೧೭೫೬ ರೊಳಗೆ ಸುಲ್ತಾನರು, ಟರ್ಕಿಯನ್ನರು, ಪರ್ಷಿಯನ್ನರು, ಹೂಣರು, ತುಘಲಕರು, ಖಿಲ್ಜಿಗಳು, ಮೊಘಲರು ಮತ್ತು ಬಹುಮನಿಯವರು* ದೇಶವನ್ನು ಆಳಿದರೆ ಆಧುನಿಕ ಇತಿಹಾಸ ಅಂದರೆ *೧೭೫೭ ರಿಂದೀಚೆಗೆ ಫ್ರೆಂಚರು, ಪೋರ್ಚುಗೀಸರು, ಡಚ್ಚರು ಮತ್ತು ಬ್ರಿಟೀಷರು* ನಮ್ಮ ಭಾರತ ದೇಶವನ್ನು ಆಳುವುದರ ಜೊತೆಗೆ ಸಂಪತ್ತನ್ನು ದೋಚಿ ಹೋದರು. ನಂತರ ಸ್ವಾತಂತ್ರ್ಯ ಪಡೆದು ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನವನ್ನು ಅಳವಡಿಸಿಕೊಂಡು ಗಣರಾಜ್ಯವಾಯಿತು. ಇಂತಹ ಸಂವಿಧಾನದ ರಚನೆ ಸುಲಭದ ಮಾತಲ್ಲ. ಇಂತಹ ಸಂವಿಧಾನಕ್ಕೆ ಇಂದಿಗೆ ೭೦ ವರ್ಷ.


ಅಂದಿನ ಭಾರತೀಯರನ್ನಷ್ಟೇ ಅಲ್ಲದೆ *ಜಗತ್ತಿನ ಮೊದಲನೇ ಸಂವಿಧಾನ ಎಂದು ಕರೆಸಿಕೊಳ್ಳುವ ೧೩ ನೇ ಶತಮಾನದಲ್ಲಿ ಇಂಗ್ಲೆಂಡ್ ನ ಮ್ಯಾಗ್ನಕಾಟ್೯* ರವರ *ಎಲ್ಲಾ ಕಾಲದ ಶ್ರೇಷ್ಠ ಸಾಂವಿಧಾನಿಕ ದಾಖಲೆ, ನಿರಂಕುಶ ಪ್ರಭುವಿನ ಸ್ವೇಚ್ಛಚಾರದ ಎದುರು ವ್ಯಕ್ತಿ ಸ್ವಾತಂತ್ರ್ಯದ ಅಡಿಪಾಯ(೧೨೧೫)* *ಎಲ್ಲಾ ಮನುಷ್ಯರನ್ನು ಸಮಾನವಾಗಿ ಸೃಷ್ಟಿಸಲಾಗಿದೆ* ಎಂಬ *ಅಮೇರಿಕಾದ ಸಂವಿಧಾನ,(೧೭೭೬) *ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವ* ಸಾರುವ *ಫ್ರಾನ್ಸ್ ಸಂವಿಧಾನ(೧೭೯೯)*, *ಸಾಮರ್ಥ್ಯಕ್ಕೆ ಅನುಸಾರವಾಗಿ ದುಡಿಯಬೇಕು, ಅಗತ್ಯಕ್ಕೆ ಅನುಸಾರವಾಗಿ ಗಳಿಸಬೇಕು* ಎನ್ನುವ *ಸೋವಿಯತ್ ರಷ್ಯಾದ ಸಂವಿಧಾನ (೧೯೧೭)* ಎಲ್ಲವನ್ನೂ ಅಭ್ಯಸಿಸಿ ಡಾ ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಸಂವಿಧಾನಕ್ಕೆ ಇಂದಿಗೆ ೭೦ ವರ್ಷ.


*ಧರ್ಮ ಮನುಷ್ಯರನ್ನು ಸೃಷ್ಟಿಸಲಿಲ್ಲ, ಮನುಷ್ಯನೇ ಧರ್ಮವನ್ನು ಸೃಷ್ಟಿಸಿದ.* ಜಗತ್ತಿನ ಎಲ್ಲಾ ಧರ್ಮಗಳು ಆರಂಭಗೊಂಡಿದ್ದು ನೊಂದ ಜನರ ಕಣ್ಣೀರೊರೆಸಲು ಆದರಿಂದು ಧರ್ಮ ಎಂಬುದು ರಾಜಕೀಯದವರ ಮೇಲಾಟವಾಗಿದೆ. ಗುಲಾಮರ ಕಷ್ಟಗಳನ್ನು ಪರಿಹರಿಸಲು *ರೋಮ್ ನಲ್ಲಿ ಕ್ರೈಸ್ತ ಧರ್ಮದ ಉದಯ, ಲೂಟಿ, ದರೋಡೆ ಮತ್ತು ಹಿಂಸೆಗಳಿಂದ ನೊಂದ ಜನರ ಕಷ್ಟ ಆಲಿಸಲು ಮಧ್ಯ ಏಷ್ಯಾದಲ್ಲಿ ಜನಿಸಿದ ಇಸ್ಲಾಂ, ಬಲಿ, ಯಾಗ, ಯಜ್ಞ ಹಿಂಸೆಗಳಿಗೆ ತತ್ತರಿಸಿದ ಸಾಮಾನ್ಯರ ಕಷ್ಟ ಪರಿಹರಿಸಲು ಉದ್ಭವಿಸಿದ ಧರ್ಮಗಳೇ ಜೈನ, ಬೌದ್ಧ ಧರ್ಮಗಳು.* ನಂತರ ಇದೇ ಉದ್ದೇಶದಿಂದ ಜನಿಸಿದವೇ *ಲಿಂಗಾಯತ ಮತ್ತು ಸಿಖ್ ಧರ್ಮ*. ಆದ್ದರಿಂದಲೇ *ಧಮನಕ್ಕೊಳಗಾದ ಜನರ ದನಿಯೇ ಧರ್ಮ* ಎಂದು ಹೇಳಲಾಗಿದೆ. ಇವಿಷ್ಟೇ ಅಲ್ಲದೆ ಭಾರತದಲ್ಲಿ *ಚೈತನ್ಯ ಪಂಥ, ನಾಥ ಪಂತ, ಆರೂಢ, ಅವಧೂತ, ಶಾಕ್ತ, ಸಿದ್ಧ, ಸೂಫಿ* ಪಂಥಗಳು ಉದಯವಾದರೆ *ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶಕ್ತಿ ವಿಶಿಷ್ಟಾದ್ವೈತ, ಲೋಕಾಯತ, ಚಾರ್ವಾಕ, ಸಾಂಖ್ತ, ಅಹಮದಿಯರು, ಜ್ಯೂಡೋಯಿಸಂ ಮತ್ತು ಖಾಹಿಯಾ* ಮೊದಲಾದ ಪಂಥಗಳು, ಹಾಗೂ ಬುಡಕಟ್ಟು ಗಿರಿಜನರ ಪಂಗಡಗಳು ಇರುವ ನಮ್ಮ ಸಂವಿಧಾನಕ್ಕೆ ಇಂದಿಗೆ ೭೦ ವರ್ಷಗಳು.


ಇಂತಹ *ಸಂವಿಧಾನಕ್ಕೆ ಎಪ್ಪತ್ತು ವರ್ಷಗಳಾದರೂ ಸಹ ಕೋಟಿ ಕೋಟಿ ಮಂದಿಗೆ ಒಪ್ಪತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಯಲ್ಲಿ ನಾವಿದ್ದೇನೆ,* ಇದೇ ಕೆಸೆರರಚಾಟದ ಸನ್ನಿವೇಶ ಮುಂದುವರಿದರೇ ಎಪ್ಪತ್ತಲ್ಲ ನೂರಾ ಎಪ್ಪತ್ತು ವರ್ಷಗಳಾದರೂ ಬಡವರ ಬಡತನ ಮತ್ತಷ್ಟು ಹೆಚ್ಚಾಗುತ್ತದೆ, ಬಲ್ಲಿದ ಶ್ರೀಮಂತ ಕೊಬ್ಬುತ್ತಾನೆ, ಇಂದು ಒಪ್ಪತ್ತು ಊಟಕ್ಕೆ ಪರದಾಡುವ ಬಡವ ಶಾಶ್ವತವಾಗಿ ಊಟವಿಲ್ಲದೆ ಸಾಯಬೇಕಾದ ಸ್ಥಿತಿ ತಲುಪುತ್ತಾನೆ, ಇದ್ಯಾವುದು ಆಗಬಾರದೆಂದರೇ ಸಂವಿಧಾನವು ನಮಗೆ ಕೊಟ್ಟಿರುವ ಅಸ್ತ್ರಗಳನ್ನು ಉಪಯೋಗಿಸಿಯೇ ಗೆಲ್ಲಬೇಕಾಗಿದೆ.


ಆದರಿಂದು ರಾಜಕೀಯ ಕೆಸೆರೆರಚಾಟದಲ್ಲಿ ಧರ್ಮವನ್ನ, ಜಾತಿಯನ್ನ, ಎಳೆದು ತಂದುದಲ್ಲದೆ ನಿಗದಿಯಾದ ಸಮಯದಲ್ಲಿ *ಮೂಲ ಧಮನಿತರಿಗೆ ನೀಡಬೇಕಾದ ಸೌಲಭ್ಯಗಳನ್ನು* ನೀಡದೆ ನಾಯಕರೇ ನುಂಗಿ ನೀರು ಕುಡಿದು ಕಳೆದ *೭೦ ವರ್ಷಗಳಿಂದಲೂ ಬಡವರನ್ನು ಬಡವರಾಗಿಯೇ ಇರಿಸಿ,* *ಬಡವರ ಕೆಲ ನಾಯಕರನ್ನಷ್ಟೇ ಮುನ್ನಲೆಗೆ ತಂದು ಅವರೂ ಸಹ ಅವರದೇ ಸಮುದಾಯದ ಬಡ ಜನರನ್ನು ತಾವಷ್ಟೇ ಬೆಳೆದು ಕೇವಲ ಪ್ರತಿಭಟನೆಗೆ, ರಸ್ತೆಯಲ್ಲಿ ನಿಂತು ಘೋಷಣೆ ಕೂಗುವುದಕ್ಕೆ ಬಳಸಿ ಬಿಸಾಡುತ್ತಿರುವ ಇಂತಹ ದುರಾತ್ಮರ* ಕೈಯಲ್ಲಿ ನಮ್ಮ ಸಂವಿಧಾನ ಸಿಕ್ಕಿ ನರಳಾಡತೊಡಗಿದೆ. ಜಗತ್ತಿನ ಅತಿದೊಡ್ಡ, ಸರ್ವಶ್ರೇಷ್ಠ ಡಾ ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಈ ಮಹಾನ್ ಸಂವಿಧಾನವನ್ನು ರಕ್ಷಿಸಬೇಕಾಗಿದ್ದು ನಮ್ಮೆಲ್ಲರ ಕರ್ತವ್ಯ, ಅಲುಗಾಡುತ್ತಿರುವ ಹಾಗೂ ದುರಾತ್ಮ ನಾಯಕರ ದುರಾಸೆಗನುಣುಗವಾಗಿ ತಿದ್ದುಪಡಿ ಆಗುತ್ತಿರುವ ಸಂವಿಧಾನವನ್ನು ಉಳಿಸಿಕೊಳ್ಳಲು ಒಟ್ಟಾಗಿ ಹೋರಾಡೋಣಾ ಬನ್ನಿ ಭಾರತೀಯರೇ;


*ದಲಿತರಿಗೊಂದು ಕೊನೆಯ ಗುಟುಕು*


*ಡಾ ಅಂಬೇಡ್ಕರ್ ಕೇವಲ ದಲಿತರಿಗಷ್ಟೇ ಸೀಮಿತವಲ್ಲ, ಅವರು ಕೇವಲ ಭಾರತರತ್ನ ಅಲ್ಲಾ, ಅವರು ವಿಶ್ವರತ್ನ. ಅವರನ್ನು ಕೇವಲ ಜಾತಿಗಾಗಿ ಮೀಸಲಿಡಬೇಡಿ, ಅವರು ದಲಿತ ಜಾತಿಯನ್ನೇ ಬಿಟ್ಟು ಬೌದ್ಧ ಧರ್ಮವನ್ನು ಅಪ್ಪಿಕೊಂಡ ಮಹಾನ್ ಜ್ನಾನಿ, ಅವರು ಜಗತ್ತಿನ ಎಲ್ಲಾ ಧರ್ಮಗಳಿಗೂ, ಜಾತಿಗಳಿಗೂ ಸಹ ಅತ್ಯಗತ್ಯ ಶ್ರೇಷ್ಠ ವ್ಯಕ್ತಿ, ದಯಮಾಡಿ ಅವರನ್ನು ನಿಮ್ಮ ಜಾತಿ ಎಂಬ ಸಂಕೋಲೆಯಿಂದ ಬಿಡಿಸಿ ವಿಶ್ವಕ್ಕೆ ಪರಿಚಯಿಸುವ ಮೂಲಕ ವಿಶಾಲ ಹೃದಯದಿಂದ ನೋಡಿ.*


(ನ್ಯಾಯಮೂರ್ತಿ ಎಚ್ ಎನ್ ನಾಗಮೋಹನದಾಸ್ ರವರ ಸಂವಿಧಾನ ಓದು ಪುಸ್ತಕದಲ್ಲಿರುವ ಕೆಲ ಮಾಹಿತಿಯನ್ನು ಇಲ್ಲಿ ಎರವಲು ಪಡೆದಿದ್ದೇನೆ.)


*ಗೋ ರಾ ಶ್ರೀನಿವಾಸ...*

*ಮೊ:9845856139.*

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑