Tel: 7676775624 | Mail: info@yellowandred.in

Language: EN KAN

    Follow us :


ಮಾಗಡಿ ತಾಲೂಕಿನಲ್ಲಿ ಡಿಸಿಎಂ ರೌಂಡ್ಸ್;‌ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಅಡಿಗಲ್ಲು

Posted date: 27 Nov, 2020

Powered by:     Yellow and Red

ಮಾಗಡಿ ತಾಲೂಕಿನಲ್ಲಿ ಡಿಸಿಎಂ ರೌಂಡ್ಸ್;‌ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಅಡಿಗಲ್ಲು

ರಾಮನಗರ:ನ/26/20/ಗುರುವಾರ. ರಾಮನಗರ: ಜಿಲ್ಲಾ ಉಸುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಗುರುವಾರದಂದು ಜಿಲ್ಲೆಯ ವಿವಿಧೆಡೆ ಸುಮಾರು 16.78 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ಮಾಡುವ  ಕಾರ್ಯಕ್ರಮಗಳಲ್ಲಿ ಭಾಗಿಯಾದರು.


 ಅವರು ಎಲ್ಲ ಕಾರ್ಯಕ್ರಮಗಳಲ್ಲೂ ಚುರುಕಾಗಿ ಪಾಲ್ಗೊಂಡರಲ್ಲದೆ, ಅಡಿಗಲ್ಲು ಹಾಕಿದ ಎಲ್ಲ ಕಾಮಗಾರಿಗಳು ನಿಗದಿತ ವೇಳೆಗೆ ಮುಗಿದು, ಅವುಗಳ ಫಲ ಜನರಿಗೆ ಸಿಗುವಂತಾಗಬೇಕು. ಕಾಮಗಾರಿಯ ವಿವರಗಳನ್ನು ಕಾಲಕಾಲಕ್ಕೆ ತಮಗೆ ತಿಳಿಸುತ್ತಿರಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.


*ಕೈಗಾರಿಕಾ ತರಬೇತಿ ಘಟಕಕ್ಕೆ ಅಡಿಗಲ್ಲು:*


ಬೆಳಗ್ಗೆಯೇ ಬೆಂಗಳೂರಿನಿಂದ ಮಾಗಡಿ ತಾಲ್ಲೂಕಿನ ಮೇಲನಹಳ್ಳಿಗೆ ಭೇಟಿ ನೀಡಿದ ಅವರು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಹಮ್ಮಿಕೊಂಡಿದ್ದ ಕೈಗಾರಿಕಾ ತರಬೇತಿ ಘಟಕ 4.15 ಕೋಟಿ ಮೊತ್ತದ ಯೋಜನೆಗೆ ಭೂಮಿಪೂಜೆ ನೆರೆವೇರಿಸಿದರು. ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗವನ್ನು ನಿವಾರಿಸಬಲ್ಲ ಹಾಗೂ ಗ್ರಾಮೀಣ ಯುವಜನರಲ್ಲಿ ಕುಶಲತೆಯನ್ನು ಹೆಚ್ಚಿಸಬಲ್ಲ ಈ ಘಟಕದ ಕಾಮಗಾರಿ ಕಾಲಮಿತಿಯಲ್ಲಿ ಪೂರ್ಣಗೊಂಡು ಕಾರ್ಯಾರಂಭ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.


*ನಿವೇಶನಗಳ ಹಕ್ಕು ಪತ್ರ:*


ಕಂದಾಯ ಇಲಾಖೆ ವತಿಯಿಂದ ಮಾಗಡಿ ತಾಲ್ಲೂಕಿನ ಜೇನುಕಲ್ಲುಪಾಳ್ಯ ಗ್ರಾಮದಲ್ಲಿ 16 ಫಲಾನುಭವಿಗಳಿಗೆ ನಿವೇಶನಗಳ ಹಕ್ಕು ಪತ್ರ ನೀಡಲಾಯಿತು. ಗೋಮಾಳದಲ್ಲಿ ಮನೆ‌ ಕಟ್ಟಿಕೊಂಡಿದ್ದವರಿಗೆ ಈ ಹಕ್ಕು ಪತ್ರಗಳನ್ನು ನೀಡಿದ ಡಿಸಿಎಂ, ನಿಮ್ಮ ನಿಮ್ಮ ಸ್ವಂತ ಮನೆಗಳಲ್ಲಿ ನೆಮ್ಮದಿಯಾಗಿರಿ ಎಂದು ಹಕ್ಕುಪತ್ರ ಪಡೆದವರಿಗೆ ಹಾರೈಸಿದರು. ಹಾಗೆಯೇ, ಹೇಳಿಗೇಹಳ್ಳಿ ಕಾಲೋನಿಯಲ್ಲಿ 40 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರು.


ಚಕ್ರಬಾವಿ ಮತ್ತಿತರೆ 12 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ 3.99 ಕೋಟಿ ರೂ.ಗಳ ಕಾಮಗಾರಿ ಮುಗಿದಿದ್ದು ಅದಷ್ಟು ಬೇಗ ಕುಡಿಯುವ ನೀರು ಸರಬರಾಜು ಮಾಡಬೇಕೆಂದು  ಡಿಸಿಎಂ ಅವರು ಅಧಿಕಾರಿಗಳಿಗೆ ಸೂಚಿಸಿದರು.


*ಪಶು ಆಸ್ಪತ್ರೆಗೆ ಅಡಿಗಲ್ಲು:*


ಅಗಲಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಕಟ್ಟೆ ಗ್ರಾಮದಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಡಿಸಿಎಂ ಭೂಮಿ ಪೂಜೆ ನೆರೆವೇರಿಸಿದರು. ಜಾನುವಾರುಗಳಿಗೆ ಈ ಭಾಗದಲ್ಲಿ ಆಸ್ಪತ್ರೆ ಇಲ್ಲದ ಕಾರಣಕ್ಕೆ ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಸುಮಾರು 34 ಲಕ್ಷ ರೂ. ವೆಚ್ಚದಲ್ಲಿ ಪಶು ಆಸ್ಪತ್ರೆ ನಿರ್ಮಿಸಲಾಗುತ್ತಿದೆ.


*ರಸ್ತೆ ನಿರ್ಮಾಣಕ್ಕೆ ಚಾಲನೆ:*


ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರ ಹುಟ್ಟೂರು, ಸಂಕೀಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ  ಚಿಕ್ಕಕಲ್ಯಾ ಗ್ರಾಮದಲ್ಲಿ 2.5 ಕೋಟಿ ವೆಚ್ಚದ ರಸ್ತೆ‌ ನಿರ್ಮಾಣಕ್ಕೆ ಅವರು ಶಂಕುಸ್ಥಾಪನೆ ನೆರೆವೇರಿಸಿದರು. ಈ ಸಂದರ್ಭದಲ್ಲಿ ಅತೀವ ಸಂತಸ ವ್ಯಕ್ತಪಡಿಸಿದ ಅವರು, ನಾನು ಹುಟ್ಟಿದ ಊರಿನಲ್ಲಿ ರಸ್ತೆ ನಿರ್ಮಾಣಕ್ಕೆ ನನ್ನಿಂದಲೇ ಚಾಲನೆ ಸಿಕ್ಕಿರುವುದು ತುಂಬಾ ಸಂತಸ ಉಂಟು ಮಾಡಿದೆ ಎಂದರು. ಈ ಯೋಜನೆಗೆ 2.55 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.


*ಆರೋಗ್ಯ ಕೇಂದ್ರ ಉದ್ಘಾಟನೆ:*


ತಿಪ್ಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪಸಂದ್ರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉಪ ಮುಖ್ಯಮಂತ್ರಿಗಳು ಉದ್ಘಾಟಿಸಿದರು. ಹಾಗೆಯೇ, ಕುದೂರಿನಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮತ್ತೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮರೂರಿನಲ್ಲಿ 1.80 ಲಕ್ಷ ರೂ. ವೆಚ್ಚದಲ್ಲಿ ಕಟ್ಟಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಅವರು ಲೋಕಾರ್ಪಣೆ ಮಾಡಿದರು.


ಇದರ ಜತೆಗೆ ಶ್ರೀರಂಗ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಅವರು ಪರಿಶೀಲಿಸಿದರಲ್ಲದೆ, ಐ.ಜಿ.ಗುಡ್ಡ ಡ್ಯಾಮ್ ವೀಕ್ಷಣೆ ಮಾಡಿದರು. ಇಲ್ಲಿಂದ 11 ಗ್ರಾಮಗಳಿಗೆ ‌ನೀರು ಸರಬರಾಜು ಮಾಡುವುದನ್ನು ತಕ್ಷಣ ಆರಂಭಿಸುವಂತೆ ಅವರು ಸೂಚಿಸಿದರಲ್ಲದೆ, ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅವುಗಳನ್ನು ಸರಿಮಾಡಿಕೊಳ್ಳಬೇಕು, ಕೂಡಲೇ ಅದನ್ನು ಸ್ವಚ್ಛ ಮಾಡಿಸಬೇಕು ಎಂದು ಸೂಚಿಸಿದರು.


ಮಾಗಡಿ ಶಾಸಕ ಮಂಜುನಾಥ್‌, ಜಿಲ್ಲಾಧಿಕಾರಿ ಅರ್ಚನಾ, ಉಪ ವಿಭಾಗಾಧಿಕಾರಿ ಡಾ.ದ್ರಾಕ್ಷಾಯಿಣಿ,  ರಾಮನಗರ ಜಿಪಂ ಅಧ್ಯಕ್ಷ ಅಶೋಕ,  ಬಿಜೆಪಿ‌ ಜಿಲ್ಲಾಧ್ಯಕ್ಷ ದೇವರಾಜ ಅವರು ಡಿಸಿಎಂ ಜತೆಯಲ್ಲಿದ್ದರು.


*ಸೋಲೂರು ಐಬಿಯಲ್ಲಿ ಸಭೆ*


ಮಾಗಡಿ ಹಾಗೂ ಕುಣಿಗಲ್ ತಾಲ್ಲೂಕಿನ 83 ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ಶ್ರೀರಂಗ ಕುಡಿಯುವ‌ ನೀರು ಯೋಜನೆಯ ಪ್ರಗತಿ ಸಂಬಂಧ ಸೋಲೂರು ಐಬಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಡಿಸಿಎಂ ಅವರು ಭೂಸ್ವಾಧೀನ ವಿಷಯದಲ್ಲಿ ಆಗುತ್ತಿರುವ ವಿಳಂಬವನ್ನು ತಕ್ಷಣ ತಪ್ಪಿಸಬೇಕು. ತ್ವರಿತವಾಗಿ ಭೂಸ್ವಾಧೀನ ಮಾಡಿಕೊಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.


ಬಳಿಕ ‌ಸುದ್ದಿಗಾರರ ಮಾತನಾಡಿದ ಡಿಸಿಎಂ, ರಾಮನಗರದ ಎಲ್ಲ ತಾಲ್ಲೂಕು ಸೇರಿದಂತೆ ನಾಡಪ್ರಭು ಕೆಂಪೇಗೌಡರು ಆಳಿದ ಮಾಗಡಿ ತಾಲ್ಲೂಕಿನಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗುವುದು. ಇಡೀ ತಾಲ್ಲೂಕಿನಲ್ಲಿ ಈಗಾಗಲೇ ವಿವಿಧ ಕಾರಣಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳು ಹಾಗೂ ಹೊಸದಾಗಿ ಜಾರಿಯಾಗಬೇಕಾದ ಯೋಜನೆಗಳ ಬಗ್ಗೆ ಗಮನ ನೀಡಲಾಗುವುದು. ಈ ಬಗ್ಗೆ ಶಾಸಕ ಮಂಜುನಾಥ್‌ ಅವರ ಜತೆಗೂಡಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗುವುದು. ತಾಲ್ಲೂಕಿಗೆ ಬರಬೇಕಾದ ಎಲ್ಲ ಅನುದಾನವನ್ನು ಒದಗಿಸಲಾಗುವುದು ಎಂದು ಹೇಳಿದರು.


ಶ್ರೀರಂಗ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ನಿಗದಿತ ಕಾಲದೊಳಗೆ ಮುಗಿಸಲಾಗುವುದು. ಜತೆಗೆ, ತಾಲ್ಲೂಕಿಗೆ ವಿವಿಧ ಮೂಲಗಳಿಂದ ನೀರು ತರಲಾಗುತ್ತಿದೆ. ಕೃಷಿ ಹಾಗೂ ಕುಡಿಯುವ ನೀರಿಗೆ ಅಭಾವ ಆಗದಂತೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಮನೆಮನೆಗೂ ನೀರು ಒದಗಿಸುವ ಯೋಜನೆ ಸಾಕಾರವಾಗುತ್ತಿದೆ. ಇದೇ ವೇಳೆ ತಾಲ್ಲೂಕಿನ ಎಲ್ಲ ಕಂದಾಯ ಜಮೀನುಗಳನ್ನು ಪೋಡಿಮುಕ್ತಗೊಳಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದ ಅವರು ಟಯೋಟಾ ಕಿರ್ಲೋಸ್ಕರ್‌ ಸಂಸ್ಥೆಯ ಸಹಯೋಗದಲ್ಲಿ ಐಟಿಐ ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಲಾಗುವುದು ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.


ಇನ್ನು, ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಹುಟ್ಟೂರು ವೀರಾಪುರ ಹಾಗೂ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಹುಟ್ಟೂರು ಬಾನಂದೂರುಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಅವುಗಳು ಕಾರಣಾಂತರದಿಂದ ಕೊಂಚ ತಡವಾಗಿದೆ. ಅತಿ ಶೀಘ್ರದಲ್ಲೇ ಎರಡೂ ಕಡೆಯ ಯೋಜನೆಗಳಿಗೆ ಚಾಲನೆ ನೀಡಲಾಗುವುದು. ಇದೇ ವೇಳೆ ಸಂಸ್ಕೃತ ವಿಶ್ವವಿದ್ಯಾಲಯವು ತಾಲ್ಲೂಕಿಗೆ ಬರುತ್ತಿದ್ದು, ಆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑