Tel: 7676775624 | Mail: info@yellowandred.in

Language: EN KAN

    Follow us :


ವ್ಯವಸಾಯದ ಹಂಗನ್ನು ತೊರೆದ ಯುವ ಸಮೂಹ. ಮಣ್ಣೆತ್ತು ಶಾಶ್ವತವಾಗದೆ ನಿಜೆತ್ತುಗಳಿಗೆ ಬದ್ದರಾಗೋಣಾ

Posted date: 09 Jul, 2021

Powered by:     Yellow and Red

ವ್ಯವಸಾಯದ ಹಂಗನ್ನು ತೊರೆದ ಯುವ ಸಮೂಹ. ಮಣ್ಣೆತ್ತು ಶಾಶ್ವತವಾಗದೆ ನಿಜೆತ್ತುಗಳಿಗೆ ಬದ್ದರಾಗೋಣಾ

ಮಣ್ಣೆತ್ತು ಅಮಾವಾಸ್ಯೆ ಇಂದಿನ ಯುವಸಮೂಹ ಒಂದು ಅವಲೋಕನ


ಇಂದು ಮಣ್ಣೆತ್ತು ಅಮಾವಾಸ್ಯೆ. ಈ ಮಣ್ಣೆತ್ತು ಎಂಬ ಅಮಾವಾಸ್ಯೆ ಅನಾದಿಕಾಲದಿಂದಲೂ ನಡೆಯುತ್ತಾ ಬಂದಿದೆ. ಮಹಾತ್ಮ ಗಾಂಧೀಜಿಯವರು ಹೇಳಿದಂತೆ ನಮ್ಮ ದೇಶ ರೈತಾಪಿ ದೇಶ. ರೈತನೇ ಈ ದೇಶದ ಬೆನ್ನೆಲುಬು. ಇನ್ನೊಂದು ಹೆಜ್ಜೆ ಮುಂದು ಹೋಗಿ ಸ್ವಾಮಿ ವಿವೇಕಾನಂದರು ಮತ್ತೊಂದು ಮಾತು ಹೇಳುತ್ತಾರೆ. ನಮ್ಮ ದೇಶದ ಶಕ್ತಿಯೇ ಯುವ ಸಮೂಹ. ಶೇಕಡಾ 60 ರಷ್ಟು ಯುವ ಸಮೂಹ ನಮ್ಮಲ್ಲಿದೆ. ನಾವು ಇಡೀ ವಿಶ್ವದಲ್ಲೇ ಹೆಚ್ಚು ಯುವಸಮೂಹ ಹೊಂದಿರುವ ದೇಶ ನಮ್ಮದು ಎಂದರು. ಹೌದು ನಾವು ರೈತಾಪಿಗಳು. ನಮ್ಮ ದೇಶದ ಹೆಮ್ಮೆ ಯುವಸಮೂಹ ಆದರೆ ಇದೇ ಯುವಸಮೂಹ ಈಗ ಎತ್ತ ಸಾಗುತ್ತಿದೆ !??


ಮಣ್ಣೆತ್ತು ಎಂದರೆ ಮಣ್ಣಿನಿಂದ ಎತ್ತುಗಳನ್ನು (ಉಳುವ ಜೋಡೆತ್ತುಗಳು)ತಯಾರಿಸಿ ಮುಂಗಾರು ಆರಂಭದ ಈ ದಿನ ಪೂಜಿಸುವುದಕ್ಕೆ ಮಣ್ಣೆತ್ತು ಅಮಾವಾಸ್ಯೆ ಎನ್ನುವುದು ಊವಾಚ. ಇದು ಪೂರ್ವದಿಂದಲೂ ನಡೆದು ಬಂದಿರುವುದರಿಂದ ಆಚರಿಸೋಣಾ. ಆದರೆ ನಮಗೇಕೆ ಬೇಕು ಈ ಮಣ್ಣೆತ್ತು !. ನಾವು ಮತ್ತು ನಮ್ಮ ದೇಶ ಒಕ್ಕಲುತನವನ್ನೇ ನಂಬಿದ ದೇಶ. ಒಕ್ಕಲಿಗರು ಎಂದರೆ ಈಗಲೂ ಕೆಳ ಮತ್ತು ಮೇಲ್ವರ್ಗದ ಜಾತಿಕರಿಗೆ ಕೇವಲ ಗೌಡರು ಎಂಬ ತಾತ್ಸಾರವಿದೆ. ಅದು ತಪ್ಪು ತಿಳುವಳಿಕೆ. ಗೌಡ ಎಂಬುದು ಜಾತಿಯಲ್ಲಾ. ಅದೊಂದು ಸೂಚಕ ಪದ. ಜಗತ್ತಿನಲ್ಲಿ ಯಾವ ಮನುಷ್ಯ ಭೂಮಿಯನ್ನು ಉತ್ತು ಬಿತ್ತುತ್ತಾನೋ ಆತ ಒಕ್ಕಲಿಗ. ಇಲ್ಲಿ ಜಾತಿ ಮತಗಳ ಪ್ರಶ್ನೆಯೇ ಇಲ್ಲ. ಅದಕ್ಕೆ ಹೇಳುವುದು ಒಕ್ಕಲಿಗ ಒಕ್ಕದಿರೆ ಜಗವೆಲ್ಲಾ ಬಿಕ್ಕುವುದು ಎಂದು.


ಇಂದಿನಿಂದ ಮುಂಗಾರು ಆರಂಭ. ಮುಂಜಾನೆದ್ದು ಜೋಡೆತ್ತುಗಳನ್ನು ಮೈತೊಳೆದು ಸಿಂಗರಿಸಿ, ಅವು ಓಡಾಡುವ ಬಾಗಿಲನಲ್ಲಿ, ರೈತ ತಾನು ತನ್ನ ಹೊಲದಲ್ಲಿ ಬಿತ್ತಬೇಕೆಂಬ ಧಾನ್ಯಗಳನ್ನು ಸೇರು ಅಥವಾ ಕೊಳಗದಲ್ಲಿ ಇಡುತ್ತಾನೆ. ಆ ಎತ್ತುಗಳು ಯಾವ ಧಾನ್ಯವನ್ನು ಒದೆಯುತ್ತವೋ ಆ ಧಾನ್ಯವನ್ನು ಧ್ಯಾನಿಸಿ, ತನ್ನ ಹೊಲಕ್ಕೆ ತೆಗೆದುಕೊಂಡು ಹೋಗಿ ಎತ್ತುಗಳನ್ನು (ತಾನೇ ಮಾಡಿದ ಮಣ್ಣೆತ್ತಿನ ಗೊಂಬೆಗಳ ಸಮೇತ) ಭೂತಾಯಿಯನ್ನು ಪೂಜಿಸಿ ಬಿತ್ತುತ್ತಾನೆ. ಇಂದು ಬಿತ್ತಿದ ಒಂದು ಕಾಳು ಸಹಸ್ರ ಕಾಳುಗಳಾಗಲಿ. ಮಳೆರಾಯ ಹದವಾಗಿ ಬಂದು ತೆನೆಗೂಡಿಸಲಿ ಎಂಬ ಧ್ಯೇಯೋದ್ದೇಶಗಳಿಂದ, ಜಗತ್ತಿಗೆ ಅನ್ನ ನೀಡುವಾತನ ಕೈ ಬಲಪಡಿಸಬೇಕೆಂಬುದೇ ಈ ಮಣ್ಣೆತ್ತು ಅಮಾವಾಸ್ಯೆಯ ಹಬ್ಬ.


ಇಂದು ಎಷ್ಟೋ ಮಂದಿ ಯುವ ರೈತರಿಗೆ ಇದರ ಅರಿವಿಲ್ಲದೆ, ಮನೆಯಲ್ಲಿರುವ ನಿಜವಾದ ಎತ್ತುಗಳನ್ನು ಬಿಟ್ಟು, ಕುಂಬಾರ ಮಾಡಿದ ಮಣ್ಣಿನ ಎತ್ತುಗಳನ್ನು ತಂದು ಪೂಜಿಸುತ್ತಾರೆ. ನಗರ ವಾಸಿಗಳಂತೂ ಇನ್ನೂ ಅಪಾಯವಾದ ಸಂಸ್ಕೃತಿಗೆ ಮಾರುಹೋಗಿ, ಮಣ್ಣಿಗೆ ಮಾರಕವಾದ, ಮಕ್ಕಳಿಗೆ ಆರೋಗ್ಯ ಹದಗೆಡುವಂತೆ ಮಾಡುವ, ಪಿಓಪಿ ಗಳಿಂದ, ಪ್ಲಾಸ್ಟಿಕ್ ಗಳಿಂದ ಮಾಡಿದ, ರಾಸಾಯನಿಕ ಬಣ್ಣ ಬಳಿದಿರುವ ಎತ್ತಿನ ಗೊಂಬೆಗಳನ್ನು ತಂದು ಪೂಜಿಸುವುದು ಮಣ್ಣಿನ ಗುಣಕ್ಕೆ ಅವಮಾನ ಮಾಡಿದಂತೆ. ಆದರೂ ಇವರೆಲ್ಲರೂ ಸುಸಂಸ್ಕೃತರು. ನಾನು ಮಾಡುತ್ತಿರುವುದೇ ಶ್ರೇಷ್ಠ ಎಂಬ ಮನಸ್ಥಿತಿ ಉಳ್ಳವರು ಇನ್ನಾದರು ಎಚ್ಚೆತ್ತುಕೊಳ್ಳಬೇಕಾಗಿದೆ.


ನಾವು ತಂತ್ರಜ್ಞಾನದ ಬಳಕೆಯಲ್ಲಿ ಎಷ್ಟೇ ಮುಂದುವರಿದರಿಬಹುದು. ಲಕ್ಷ ಕೋಟಿಗಳ ವ್ಯವಹಾರದಲ್ಲಿ ಮುಳುಗಿರಬಹುದು. ಹಲವಾರು ವಿಷಯಗಳಲ್ಲಿ ಪಾಂಡಿತ್ಯ ಸಾಧಿಸಿರಬಹುದು. ಆದರೆ ಇದನ್ನೆಲ್ಲಾ ಸಾಧಿಸಬೇಕೆಂದರೆ ಹೊಟ್ಟೆಗೆ ಅನ್ನ ಬೀಳಬೇಕು. ನೀ ಏನೇ ಸಾಧಿಸಬೇಕೆಂದರೂ ಹೊಟ್ಟೆ ತುಂಬಿದರೆ ಮಾತ್ರ ಸಾಧ್ಯ. ಆ ಹೊಟ್ಟೆ ತುಂಬಿಸುವ ಸಾಧನ ಯಾವುದೇ ತಂತ್ರಜ್ಞಾನದಿಂದ ಬರುವುದಿಲ್ಲ. ಮುಂದೊಂದು ದಿನ ಬರಬಹುದು ಎಂಬ ಊಹೆ ನಿನ್ನಲ್ಲಿದ್ದರೆ ತಪ್ಪಲ್ಲಾ, ಆದರೆ ಭೂಮಿಯ ಆಗರದಿಂದ ಬಂದ ಆಹಾರ ಅದಾಗಿರುವುದಿಲ್ಲವಾದ್ದರಿಂದ ಅದು ನಿನ್ನ ಆಯಸ್ಸನ್ನು ಕಿತ್ತುಕೊಳ್ಳುತ್ತದೆ ಎಂಬುದು ನೆನಪಿರಲಿ.


ಇಂದು ಯುವ ಸಮೂಹ ಎಂಬ ನಮ್ಮ ದೇಶದ ಅಸ್ತ್ರಗಳು, ಕೇವಲ ಮೋಜುಮಸ್ತಿಯಲ್ಲಿ ತೊಡಗಿವೆ. ಕಾನ್ವೆಂಟ್ ಸಂಸ್ಕೃತಿಯಿಂದಾಗಿ ನಮ್ಮ ಯೂನಿವರ್ಸಿಟಿಗಳು ಸಹ ಹಣ ಗಳಿಸುವ ತತ್ವಕ್ಕೆ ಒಡ್ಡಿಕೊಂಡಿರುವುದರಿಂದ, ಒಕ್ಕಲುತನದ ಸಂಸ್ಕಾರವೇ ಹಾಳಾಗಿಹೋಗಿದೆ. ಹತ್ತಾರು ಎಕರೆ ಜಮೀನು ಇರುವ ವ್ಯಕ್ತಿಗಳು ಅಕ್ಕಪಕ್ಕದವರನ್ನು ನೋಡಿ, ಪೇಟೆ ಹುಚ್ಚು ಹಿಡಿಸಿಕೊಂಡು, ಮಕ್ಕಳನ್ನು ಓದಿಸುವ ನೆಪವೊಡ್ಡಿ ಪೇಟೆ ಸೇರಿದ್ದಾರೆ. ಈಗಾಗಲೇ ರಾಸಾಯನಿಕ ಗೊಬ್ಬರ ತಿಂದ ಅವರ ಭೂಮಿಗಳು ಇಂದು ಪಾಳು ಭೂಮಿಯಾಗಷ್ಟೇ ಉಳಿದಿವೆ. ಇಂದಿನ ಕೊರೊನಾ ಸಮಯದಲ್ಲಿ ಆಕ್ಸಿಜನ್ ಕೊರತೆ ಏಕಾಯಿತು ? ಹೇಗಾಯಿತು ? ಎಂಬುದನ್ನು ಮನಗಾಣಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಅರಿಯಬೇಕಾಗಿದೆ.


ಸರ್ಕಾರಗಳು ಯೂನಿವರ್ಸಿಟಿಗೆ ಕೊಡುತ್ತಿರುವ ಮಹತ್ವವನ್ನು ಯೂನಿವರ್ಸಲ್ ಗೆ ಕೊಡಲಿ. ಕೃಷಿಗೆ ಸಂಬಂಧಿಸಿದ ಇಲಾಖೆಗಳಿಂದ ಇಂದು ಏನೂ ಆಗುತ್ತಿಲ್ಲ. ರೈತ ಬೆಳೆದದ್ದು ಮೂರು ಕಾಸಿಗೆ. ದಲ್ಲಾಳಿಗಳ ಮಧ್ಯಸ್ಥಿಕೆಯಲ್ಲಿ ವ್ಯಾಪಾರಿಗಳಿಂದ ಕೊಂಡುಕೊಳ್ಳಬೇಕಾಗಿದ್ದು ಹತ್ತು ಪಟ್ಟು ಬೆಲೆಗೆ. ರೈತನೇ ಬೆನ್ನೆಲುಬು ಎಂಬ ದೇಶದಲ್ಲಿ ರೈತನಿಗೆ ಅಧಿಕಾರ ಇಲ್ಲದಿರುವುದು ನಮ್ಮ ರೈತರ ದುರ್ದೈವ. ಇಂದಿನ ಯುವಪೀಳಿಗೆಯ ಮಂದಿ ಕುಡಿದು, ಸೇದಿ ಮೋಜು ಮಸ್ತಿಯಲ್ಲೇ ತೊಡಗಿದ್ದಾರೆ. ಹಲವರು ಎಕರೆಗಟ್ಟಲೆ ಜಮೀನಿದ್ದು ಬೆಂಗಳೂರಿನಂತಹ ನಗರಗಳಲ್ಲಿ ವಾಚ್ ಮನ್ ಕೆಲಸ ಮಾಡುತ್ತಿದ್ದಾರೆ. ವ್ಯವಸಾಯ ಎಂದರೆ ನೀ ಸಾಯ, ಮನೆಮಂದಿಯೆಲ್ಲಾ ಸಾಯ ಎಂಬ ನಾಣ್ಣುಡಿಯನ್ನು ಸುಳ್ಳು ಮಾಡಬೇಕಾದ ಕರ್ತವ್ಯ, ಅಧಿಕಾರಿಗಳು ಮತ್ತು ಸರ್ಕಾರದ್ದಾಗಬೇಕಿದೆ. ತಂತ್ರಜ್ಞಾನಕ್ಕೆ ಶಕ್ತಿಗಿಂತ ಯುಕ್ತಿ ಹೆಚ್ಚಿರಬೇಕು. ಆದರೆ ವ್ಯವಸಾಯಕ್ಕೆ ರಟ್ಟೆಯ ಶಕ್ತಿ ಹೆಚ್ಚಿರಬೇಕು. ತಂತ್ರಜ್ಞಾನವನ್ನು ಅಲ್ಪ ಉಪಯೋಗಿಸಿಕೊಂಡು ರೈತನನ್ನು, ಯುವ ಸಮೂಹವನ್ನು ಮೇಲೆತ್ತುವ ಕೆಲಸಕ್ಕೆ ಎಲ್ಲರೂ ಮುಂದಾಗೋಣಾ. ಈ ಮಣ್ಣೆತ್ತು ಅಮಾವಾಸ್ಯೆ ಯನ್ನು ನಿಜವಾದ ಎತ್ತುಗಳೊಂದಿಗೆ, ವ್ಯವಸಾಯ ಮಾಡುವ ಮೂಲಕ, ವೈಚಾರಿಕ ನೆಲೆಗಟ್ಟನ್ನು ಕ್ರಮಿಸಲು ಆಚರಿಸೋಣಾ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑