Tel: 7676775624 | Mail: info@yellowandred.in

Language: EN KAN

    Follow us :


ಶತಮಾನದ ಸೇತುವೆ ಮಳೆ ನೀರಿನಿಂದ ಕೊರೆತ. ಗ್ರಾಮಸ್ಥರ ಆತಂಕ

Posted date: 17 Nov, 2021

Powered by:     Yellow and Red

ಶತಮಾನದ ಸೇತುವೆ ಮಳೆ ನೀರಿನಿಂದ ಕೊರೆತ. ಗ್ರಾಮಸ್ಥರ ಆತಂಕ

ಚನ್ನಪಟ್ಟಣ:ನ:16/21. ಪ್ರತಿನಿತ್ಯ ಸಾವಿರಾರು ಮಂದಿ ಸಂಚರಿಸುವ ಶತಮಾನಕ್ಕೂ ಹೆಚ್ಚಿನ ಹಳೆಯ ಸೇತುವೆಯ ಬಳಿ ಭೂಕೊರೆತ ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಚನ್ನಪಟ್ಟಣ ಹಾಗೂ ಕುಣಿಗಲ್ ರಾಜ್ಯ ಹೆದ್ದಾರಿಯ ಮುಖ್ಯರಸ್ತೆಯಲ್ಲಿ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಇರುವ ಈ ಸೇತುವೆಯ ಒಂದು ಬದಿಯಲ್ಲಿ ಭೂ ಕೊರೆತ(ಕೊರಕಲು) ಉಂಟಾಗಿದ್ದು, ಸೇತುವೆಗೆ ಅಪಾಯ ಎದುರಾಗಿದೆ. ಬೇವೂರು ಹಾಗೂ ಮಾಕಳಿ ಮಾರ್ಗದ ಹಲವಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಎನ್ನಿಸಿದ್ದು, ಈ ರಸ್ತೆಯಲ್ಲಿರುವ ಶತಮಾನಕ್ಕೂ ಹಳೆಯ ಸೇತುವೆಗೆ ಕೆಲವರ ಬೇಜವಾಬ್ದಾರಿತನದಿಂದ ಕಂಟಕ ಎದುರಾಗಿದೆ.

ಕೆರೆ ಕೋಡಿ ನೀರು ಹರಿದುಹೋಗಲು ಇರುವ ಕಾಲುವೆಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಸೇತುವೆಯ ಒಂದು ಬದಿಯಲ್ಲಿ ಕೆಲದಿನಗಳಿಂದ ಭೂ ಕೊರೆತ ಉಂಟಾಗುತ್ತಿದೆ. ಈ ರಸ್ತೆಯ ಚರಂಡಿ ಹಾಗೂ ಮಳೆನೀರು ರಭಸವಾಗಿ ಹಳ್ಳಕ್ಕೆ ಹರಿಯುತ್ತಿರುವ ಕಾರಣದಿಂದ ಸೇತುವೆಯ ಒಂದು ಬದಿಯಲ್ಲಿ ಕಂದಕ ನಿರ್ಮಾಣವಾಗಿದೆ.

ಇದು ಹೀಗೆ ಮುಂದುವರೆದಲ್ಲಿ ಸೇತುವೆಗೆ ಅಪಾಯ ಕಟ್ಟಿಟ್ಟಬುತ್ತಿಯಾಗಿದ್ದು, ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಖಚಿತವಾಗಿದೆ.


*ಕಾರಣವೇನು:*  

ಲೋಕೋಪಯೋಗಿ ಇಲಾಖೆಗೆ ಸೇರುವ ಈ ರಸ್ತೆಯಲ್ಲಿ ಈ ಹಿಂದೆ ಚರಂಡಿ ಇರಲಿಲ್ಲ. ಗ್ರಾಮದ ಎಲ್ಲಾ ಚರಂಡಿಗಳ ನೀರು ಹಳ್ಳದ ಮೂಲಕ ಹದಿದುಹೋಗಿ ಕೋಡಿಯ ಕಾಲುವೆಗೆ ಸೇರುತಿತ್ತು. ಕೆಲತಿಂಗಳುಗಳ ಹಿಂದೆ ನಿವೇಶನ ತಮ್ಮದು ಎಂದು ಖಾಸಗಿ ವ್ಯಕ್ತಿಯೊರ್ವರು ಈ ಹಳ್ಳಕ್ಕೆ ಮಣ್ಣು ಭರ್ತಿ ಹೊಡೆದುಕೊಂಡು ಮುಚ್ಚಿದ್ದರು. ತದನಂತರ, ಮಳೆ ಹಾಗೂ ಚರಂಡಿ ನೀರು ಹರಿದುಹೋಗಲು ಸ್ಥಳವಿಲ್ಲದೇ ಸಾಕಷ್ಟು ಸಮಸ್ಯೆ ಉದ್ಭವಿಸಿತ್ತು. ತದನಂತರ, ಈ ರಸ್ತೆಯ ಒಂದು ಭಾಗದಲ್ಲಿ ಕೆಲದಿನದ ಹಿಂದೆ ಸಿಸಿ ಚರಂಡಿಯನ್ನು ನಿರ್ಮಿಸಿ ಸಮಸ್ಯೆಗೆ ಮುಕ್ತಿ ದೊರಕಿಸಲಾಗಿತ್ತು.

ಚರಂಡಿ ಮುಚ್ಚಿದ ಭೂಪ:

ಗ್ರಾಮದ ಚರಂಡಿ ಹಾಗೂ ಮಳೆನೀರು ಹೊಸ ಸಿಸಿ ಚರಂಡಿ ಮೂಲಕ ಸರಾಗವಾಗಿ ಹರಿದು ಕೋಡಿ ಕಾಲುವೆ ಸೇರುತಿತ್ತು. ಆದರೆ, ಕೆಲದಿನದ ಹಿಂದೆ ಚರಂಡಿ ಪಕ್ಕದ ನಿವೇಶನದಾರ ಚರಂಡಿಯನ್ನು ಕಾಲುವೆವರೆಗೂ ನಿರ್ಮಿಸಿಲ್ಲ. ಇದರಿಂದಾಗಿ ನನ್ನ ನಿವೇಶನಕ್ಕೆ ಹೊಡೆದಿರುವ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ ಎಂದು ಚರಂಡಿಯನ್ನೆ ಮಣ್ಣು ಹಾಕಿ ಮುಚ್ಚಿದ ಹಿನ್ನೆಲೆಯಲ್ಲಿ ಶತಮಾನದ ಹಳೆಯ ಸೇತುವೆಗೆ ಕಂಟಕ ಎದುರಾಗಿದೆ. ಸರ್ಕಾರಿ ಜಾಗವಾದ ಚರಂಡಿಯನ್ನು ಅತಿಕ್ರಮವಾಗಿ ಮುಚ್ಚಿದ ಪರಿಣಾಮ ಚರಂಡಿ ಹಾಗೂ ಮಳೆನೀರು ರಸ್ತೆಯಲ್ಲಿ ಹರಿದು ಸೇತುವೆಯ ಒಂದು ಬದಿಯಲ್ಲಿ ಕಾಲುವೆಗೆ ಬೀಳುತ್ತಿದೆ. ಹೆಚ್ಚಿನ ಮಳೆಯ ನೀರು ರಭಸವಾಗಿ ಹರಿದು ಸೇತುವೆಯ ಒಂದು ಬದಿ ಕೊರೆತ ಉಂಟಾಗುತ್ತಿದೆ. ಇದು ಮುಂದುವರೆದರೆ ಸೇತುವೆಗೆ ಅಪಾರ ಕಟ್ಟಿಟ್ಟಬುತ್ತಿಯಾಗಿದೆ.


*ಗ್ರಾಮಸ್ಥರ ಆಕ್ರೋಶ:*

ಈ ಸೇತುವೆ 1884 ರಲ್ಲಿ ನಿರ್ಮಿಸಲಾಗಿದೆ. ಹಳೆಯ ಸೇತುವೆಯಾಗಿದ್ದರೂ ಸಹ ಉತ್ತಮ ಗುಣಮಟ್ಟದಿಂದ ಯಾವುದೆ ತೊಂದರೆ ಇರಲಿಲ್ಲ. ಆದರೆ, ಕೆಲದಿನದ ಹಿಂದೆ ಈ ಸೇತುವೆಯ ಪಕ್ಕದ ಚರಂಡಿಯನ್ನು ರಸ್ತೆ ಪಕ್ಕದ ನಿವೇಶನದಾರ ಮುಚ್ಚಿಕೊಂಡು ಈ ಸೇತುವೆಗೆ ಅಪಾಯ ತಂದಿಟ್ಟಿದ್ದಾನೆ. ಸರ್ಕಾರಿ ಚರಂಡಿಯನ್ನು ಮುಚ್ಚಿ, ಸೇತುವೆಗೆ ಅಪಾಯ ತಂದಿಟ್ಟಿರುವನ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು. ಕೆಲದಿನದ ಹಿಂದೆ ಈ ಚರಂಡಿಯ ನೀರು ರಸ್ತೆಯ ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ಸಮಸ್ಯೆ ತಂದೊಡ್ಡಿತ್ತು. ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿರುವ ಚರಂಡಿ ಮುಚ್ಚಿರುವ ಕ್ರಮದ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ಗ್ರಾಪಂ ಅಧಿಕಾರಿಗಳು, ತಹಸೀಲ್ದಾರ್ ಹಾಗೂ ಪೊಲೀಸ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕೂಡಲೇ ಇದರತ್ತ ಗಮನಹರಿಸಬೇಕು. ಇಲ್ಲವಾದರೆ, 135 ವರ್ಷಕ್ಕೂ ಹಳೆಯ ಸೇತುವೆಗೆ ಏನಾದರೂ ಹೆಚ್ಚುಕಡಿಮೆಯಾದರೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ ಎಂದು ಗ್ರಾಮಸ್ಥರಾದ ಸೊಸೈಟಿ ರಾಜಣ್ಣ, ಉಮಾಶಂಕರ್, ಪುಟಾಣಿಗೌಡ, ವೆಂಕಟೇಶ್, ಮೆಡಿಕಲ್ ಕುಮಾರ್, ಟಿ.ಎಸ್ ಯೋಗೇಶ್, ದೀಪಾರಾಜು ಸೇರಿದಂತೆ ಹಲವರು ಎಚ್ಚರಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑